ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಮ್ಮಿಶ್ರ ಸರ್ಕಾರ ಪತನಕ್ಕೆ ತಾವು ಮತ್ತು ಅಮಿತ್ ಶಾ ನೇರ ಹೊಣೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ನೀಡಿದೆ.
ಈ ಕುರಿತು “ಅಪರೇಷನ್ ಕಮಲ’ ಎಂಬ ಸಂವಿಧಾನ ವಿರೋಧಿ ಸಂಚಿನ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆಗೈದಿರುವ ಬಿಜೆಪಿ ನಾಯಕರ ಕೃತ್ಯವನ್ನು ಸನ್ಮಾನ್ಯ ರಾಜ್ಯಪಾಲರಿಗೆ ಮನವರಿಕೆ ಮಾಡಿ ಮನವಿ ಕೊಟ್ಟೆವು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್, ಎಂ.ಬಿ ಪಾಟೀಲ್, ವಿ.ಎಸ್ ಉಗ್ರಪ್ಪ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಸನ್ಮಾನ್ಯ ರಾಜ್ಯಪಾಲರನ್ನು ಪಕ್ಷದ ನಾಯಕರ ಜೊತೆ ಭೇಟಿ ಮಾಡಿ, “ಅಪರೇಷನ್ ಕಮಲ” ದಲ್ಲಿ ಭಾಗಿಯಾಗಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಮೇಲೆ ಕ್ರಮ ಕೈಗೊಳ್ಳಲು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದೆವು ಎಂದು ಸಿದ್ದರಾಮಯ್ಯನವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.


