ಸಂಘರ್ಷ ಪೀಡಿತ ಇರಾನ್‌ನಿಂದ ಅರ್ಮೇನಿಯಾಗೆ ಸ್ಥಳಾಂತರಿಸಲ್ಪಟ್ಟಿದ್ದ 110 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ಗುರುವಾರ (ಜೂ.19) ಮುಂಜಾನೆ ದೆಹಲಿಯಲ್ಲಿ ಬಂದಿಳಿದಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ, ಟೆಹ್ರಾನ್‌ನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ನಗರದಿಂದ ಹೊರಗೆ ಸ್ಥಳಾಂತರಿಸಲಾಗಿತ್ತು. ಅವರಲ್ಲಿ 110 ಮಂದಿ ಗಡಿಯನ್ನು ದಾಟಿ ಅರ್ಮೇನಿಯಾಗೆ ತೆರಳಿದ್ದರು. ಮಂಗಳವಾರ ಭಾರತೀಯ ರಾಯಭಾರ ಕಚೇರಿಯು ‘ಆಪರೇಷನ್ ಸಿಂಧು’ ಅಡಿಯಲ್ಲಿ ಮಾಡಿದ ವ್ಯವಸ್ಥೆಗಳ ಮೂಲಕ ಅವರು ಭಾರತಕ್ಕೆ ಮರಳಿದ್ದಾರೆ.
ಹೆಚ್ಚಿನ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ.
“ನಮ್ಮಲ್ಲಿ ವಿಮಾನಗಳು ಸಿದ್ಧವಾಗಿವೆ. ಇಂದು ನಾವು ಮತ್ತೊಂದು ವಿಮಾನವನ್ನು ಕಳುಹಿಸುತ್ತೇವೆ. ನಾವು ತುರ್ಕಮೆನಿಸ್ತಾನದಿಂದ ಇನ್ನೂ ಕೆಲವು ಜನರನ್ನು ಸ್ಥಳಾಂತರಿಸುತ್ತಿದ್ದೇವೆ. ಸ್ಥಳಾಂತಗೊಳ್ಳಲು ಬಯಸುವ ಜನರು ಯಾವುದೇ ಮನವಿಗಾಗಿ ನಮ್ಮ 24 ಗಂಟೆಗಳು ಕಾರ್ಯಾಚರಿಸುವ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಪರಿಸ್ಥಿತಿ ಬಿಗಡಾಯಿಸಿದರೆ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ನಾವು ಹೆಚ್ಚಿನ ವಿಮಾನಗಳನ್ನು ಕಳುಹಿಸುತ್ತೇವೆ” ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವರೂ ಆಗಿರುವ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತುರ್ಕಮೆನಿಸ್ತಾನ್ ಮತ್ತು ಅರ್ಮೇನಿಯಾ ಸರ್ಕಾರಗಳು ನೀಡಿದ ಬೆಂಬಲಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ.
ದೆಹಲಿಗೆ ಬಂದಿಳಿದವರಲ್ಲಿ ಒಬ್ಬರಾದ ಕಾಶ್ಮೀರದ ವಿದ್ಯಾರ್ಥಿನಿ ವರ್ತಾ, “ಇರಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಮೊದಲ ವ್ಯಕ್ತಿಗಳು ನಾವು. ಅಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ನಾವು ಭಯಭೀತರಾಗಿದ್ದೆವು. ನಮ್ಮನ್ನು ಇಲ್ಲಿಗೆ ಕರೆತರಲು ಅತ್ಯಂತ ತ್ವರಿತವಾಗಿ ಕೆಲಸ ಮಾಡಿದ ಭಾರತ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ಹೇಳಿದ್ದಾರೆ.
ಅರ್ಮೇನಿಯನ್ ಅಧಿಕಾರಿಗಳು ಕೂಡ ತುಂಬಾ ಸಹಾಯಕ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.
ಜೂನ್ 13ರಂದು ಪ್ರಾರಂಭಗೊಂಡ ಇರಾನ್ ಮತ್ತು ಇಸ್ರೇಲ್ ಸಂಘರ್ಷ ಮುಂದುವರಿದಿದೆ. ಇತ್ತೀಚಿನ ವರದಿಗಳ ಪ್ರಕಾರ, ಟೆಹ್ರಾನ್‌ನಲ್ಲಿರುವ ಇರಾನ್‌ನ ಆಂತರಿಕ ಭದ್ರತಾ ಪ್ರಧಾನ ಕಚೇರಿಯನ್ನು ನಾಶಪಡಿಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಇರಾನ್ ಕೂಡ ಇಸ್ರೇಲ್ ಕಡೆಗೆ ಹೆಚ್ಚಿನ ಕ್ಷಿಪಣಿಗಳು ಹಾರಿಬಿಟ್ಟಿವೆ ಎಂದು ವರದಿಯಾಗಿದೆ.
ಎರಡೂ ದೇಶಗಳ ಸಂಘರ್ಷದಲ್ಲಿ ಅಮೆರಿಕದ ಮಿಲಿಟರಿ ಹಸ್ತಕ್ಷೇಪದ ಆಯ್ಕೆಗಳ ಬಗ್ಗೆ ಇನ್ನೂ ಯೋಚಿಸುತ್ತಿದ್ದೇವೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದಕ್ಕೂ ಮೊದಲು ಹೇಳಿಕೆ ನೀಡಿರುವ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ, “ಇರಾನ್ ತನ್ನ ಮೇಲೆ ಹೇರಲ್ಪಟ್ಟ ಯುದ್ದವನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ಮೇಲಿನ ಯಾವುದೇ ದಾಳಿಯು ಸರಿಪಡಿಸಲಾಗದ ಪರಿಣಾಮಗಳನ್ನು ಉಂಟು ಮಾಡಬಹುದು” ಎಂದು ಅಮೆರಿಕಕ್ಕೆ ಎಚ್ಚರಿಸಿದ್ದಾರೆ.
ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 240 ದಾಟಿದೆ. ಇದರಲ್ಲಿ 70 ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಇಸ್ರೇಲ್ ಮೇಲಿನ ಇರಾನ್ ದಾಳಿಯಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್‌ನಲ್ಲಿರುವ ಭಾರತೀಯ ಕಾರ್ಮಿಕ ಕುಟುಂಬಗಳಿಗೆ ನಿದ್ದೆಯಿಲ್ಲದ ರಾತ್ರಿಗಳು


