ಕರ್ನಾಟಕದ 15ನೇ ವಿಧಾನಸಭೆಯ 10ನೇ ವಿಧಾನಸಭಾ ಅಧಿವೇಶನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸದನದಲ್ಲಿ ಕುಮಾರವ್ಯಾಸನ ಪದ್ಯ ಓದಿ, ಭಾಮಿನಿ ಷಟ್ಪದಿ ಪಾಠ ಮಾಡಿದ ವಿಶೇಷ ಘಟನೆ ನಡೆಯಿತು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರ್ಕಾರ ಮಾಡಿದ ಆಯಿಲ್ ಬಾಂಡ್‌ಗಳೇ ಕಾರಣ ಎಂಬ ಬಿಜೆಪಿಯ ಆರೋಪಕ್ಕೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟ ಸಿದ್ದರಾಮಯ್ಯನವರು ಮೋದಿ ಸರ್ಕಾರ ಅಬಕಾರಿ ಶುಂಕ ಹೆಚ್ಚಾಗಿರುವುದೇ ಬೆಲೆ ಏರಿಕೆಗೆ ಕಾರಣ ಹೊರತು ಆಯಿಲ್ ಬಾಂಡ್‌ಗಳಲ್ಲ, ಅವುಗಳ ಬೆಲೆ ಕೇವಲ 1.7 ಲಕ್ಷ ಕೋಟಿ ಅಷ್ಟೇ ಎಂದು ಮನವರಿಕೆ ಮಾಡಿಕೊಟ್ಟರು. ಅಲ್ಲದೇ ತಮಿಳುನಾಡು ಬೆಲೆ ಇಳಿಸಿರುವ ಹೊತ್ತಲ್ಲಿ ಕರ್ನಾಟಕವೂ ಬೆಲೆ ಇಳಿಸಬೇಕೆಂದು ಒತ್ತಾಯಿಸಿದರು.
ನಂತರ ಕುಮಾರವ್ಯಾಸ ರಚಿತ ಮಹಾಭಾರತದ ಪದ್ಯವೊಂದನ್ನು ಓದಿದರು.
ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ
ಪರಿವಾರ ಹದ್ದಿನ ನೆರವಿ, ಬಡವರ ಭಿನ್ನಪವನಿನ್ಯಾರು ಕೇಳುವರು
ಉರಿ ಉರಿವುತ್ತಿದೆ, ದೇಶ ನಾವಿನ್ನನಿರಲು
ಬಾರದೆನ್ನುತ ಜನ ಬೇಸರದ ಬೇಗೆಯಲ್ಲಿರದಲೆ ಭೂಪಾಲ ಕೇಳೆಂದ.
ಭಾಮಿನಿ ಷಟ್ಪದಿ ಗೊತ್ತಲ್ಲ ನಿಮಗೆ.. ಲಘು ಗುರುಗಳು ಇರುತ್ತವೆ.
ಒಂದು ವಾಕ್ಯದಲ್ಲಿ 1,2,4,5 ನೇಯದರಲ್ಲಿ 13 ಲಘು ಗುರುಗಳಿರುತ್ತವೆ
3ನೇಯದು ಮತ್ತು 6ನೇಯದರಲ್ಲಿ 23 ಲಘು ಗುರುಗಳಿರುತ್ತವೆ ಭಾಮಿನಿ ಷಟ್ಪದಿಯಲ್ಲಿ..
ಕೊನೆಯ ಅಕ್ಷರ ಲಘುವಾದರೂ ಅದನ್ನು ಧೀರ್ಘವಾಗಿ ಉಚ್ಛರಿಸಬೇಕು, ಅದನ್ನು ಗುರು ಎಂದು ಪರಿಗಣಿಸಬೇಕು.
ಕುಮಾರವ್ಯಾಸನ ಸಭಾಪರ್ವದಲ್ಲಿ ಬರುತ್ತಕ್ಕಂತ ಪ್ರಸಂಗ ಇದು. ನಾರದ ಮಹರ್ಷಿ ಧರ್ಮರಾಯರಿಗೆ ಹೇಳಿದ ಮಾತುಗಳು. ಬಹುಶಃ ಅವತ್ತು ಕುಮಾರವ್ಯಾಸ ಈ ಥರ ಪರಿಸ್ಥಿತಿ ಈ ದೇಶದಲ್ಲಿ ಬರುಬಹುದು ಎಂದು ಈ ಪದ್ಯ ಬರೆದಿರಬಹುದು. ಆಗ ಆತ ರಾಜರಿಗೆ, ಧರ್ಮರಾಯನಿಗೆ ಹೇಳಿದ್ದ ಮಾತಿದು. ಈ ಥರ ರಾಜನೀತಿ ಇರಬೇಕಪ್ಪ, ಈ ಥರ ನಡೆದುಕೊಳ್ಳಬೇಕು, ಜನರಿಗೆ ರಕ್ಷಣೆ ಕೊಡಬೇಕು ಎಂದು ಅವತ್ತು ನಾರದ ಮುನಿಗಳು ಧರ್ಮರಾಯನಿಗೆ ಹೇಳಿದ ಮಾತುಗಳು ಇಂದಿಗೂ ಅನ್ವಯಿಸುತ್ತವೆ ಎಂದು ಪಾಠ ಮಾಡಿದರು. ಇಡೀ ಸದನ ನಿಶ್ಯಬ್ದವಾಗಿ ಆಲಿಸಿದ್ದಲ್ಲದೆ ಕೊನೆಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ವಿಡಿಯೋ ನೋಡಿ
ಇದನ್ನೂ ಓದಿ: Explainer: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಆಯಿಲ್ ಬಾಂಡ್‌ಗಳು ಕಾರಣವೇ? GST ವ್ಯಾಪ್ತಿಗೆ ತರಲು ರಾಜ್ಯಗಳ ವಿರೋಧವೇಕೆ?


