GST

ದೇಶದ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುವ ಪೆಟ್ರೋಲ್ ಡೀಸೆಲ್ ಬೆಲೆ ಹಲವೆಡೆ ಲೀಟರ್‌ಗೆ 100 ರೂ ದಾಟಿದೆ. ಇದರಿಂದ ಸಹಜವಾಗಿ ಇತರ ಜೀವನಾವಶ್ಯಕ ವಸ್ತುಗಳ ಬೆಲೆ ಏರಿದ್ದು ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಈ ದರ ಎಚ್ಚಳಕ್ಕೆ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವೇ ನೇರ ಕಾರಣ ಎಂದು ಹಲವರು ಆರೋಪಿಸಿದರೆ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಿಂದಿನ ಯುಪಿಎ ಸರ್ಕಾರ ಆಯಿಲ್ ಬಾಂಡ್‌ಗಳನ್ನು ನೀಡಿದ್ದೆ ಈಗ ದರ ಎಚ್ಚಳ ಕಾರಣ ಎಂದು ಸಮಜಾಯಿಸಿ ನೀಡಿದ್ದಾರೆ. ಇನ್ನು ಕೆಲವರು ಪೆಟ್ರೋಲ್-ಡೀಸೆಲ್ ಬೆಲೆಯನ್ನು GST ವ್ಯಾಪ್ತಿಗೆ ತರಬೇಕೆಂದು ಒತ್ತಾಯಿಸಿದರೆ, ರಾಜ್ಯಗಳು ಈ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿವೆ. ಈ ಕುರಿತ ಸಮಗ್ರ ವಿಶ್ಲೇಷಣೆ ಇಲ್ಲಿದೆ.

ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಬೆಲೆ ಲೀಟರ್‌ಗೆ 101.03 ರೂಗಳು. ಇಂದಿನ ಕಚ್ಛಾ ತೈಲದ ಅಂತರಾಷ್ಟ್ರೀಯ ಬೆಲೆ ಒಂದು ಬ್ಯಾರೆಲ್ 75.56 ಡಾಲರ್. ಅಂದರೆ 5,603 ರೂಗಳು.  (ಒಂದು ಬ್ಯಾರೆಲ್ ಅಂದ್ರೆ 159 ಲೀಟರ್‌ಗಳು. ಇದರಲ್ಲಿ ನೂರಾರು ವಸ್ತುಗಳನ್ನು ತಯಾರಿಸಬಹುದು. ಮುಖ್ಯವಾಗಿ ಒಂದು ಬ್ಯಾರೆಲ್‌ ಕಚ್ಛಾ ತೈಲದಲ್ಲಿ ಸುಮಾರು 80 ಲೀಟರ್ ಪೆಟ್ರೋಲ್, 40 ಲೀಟರ್ ಡೀಸೆಲ್ ಮತ್ತು 15 ಲೀಟರ್ ಸೀಮೆಎಣ್ಣೆ ತಯಾರಾಗುತ್ತದೆ)

ಒಂದು ಲೀಟರ್ ಪೆಟ್ರೋಲ್‌ನ ಬೆಲೆ ನಿಗಧಿ ಹೇಗಾಗುತ್ತದೆ?

ಪೆಟ್ರೋಲ್‌ನ ಮೂಲಬೆಲೆ: 32.63 ರೂ, ಕೇಂದ್ರದ ಅಬಕಾರಿ ತೆರಿಗೆ: 33.40 ರೂ, ರಾಜ್ಯದ ವ್ಯಾಟ್ : 26 ರೂ, ಸಂಸ್ಕರಣೆ ಮತ್ತು ಡೀಲರ್ ಕಮಿಷನ್: 8 ರೂ ಸೇರಿ ಒಂದು ಲೀಟರ್ ಪೆಟ್ರೋಲ್ ಬೆಲೆ: 101.03 ರೂ.. ಆಗುತ್ತದೆ.

GST

2014 ರಿಂದ 2021ರ ವರೆಗೆ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಆದರೆ ಅದೇ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿದ್ದ ತೆರಿಗೆ ಅಧಿಕವಾಗಿದೆ.

2014 ರಲ್ಲಿ ಕೇಂದ್ರ ಸರ್ಕಾರ ಒಂದು ಲೀಟರ್ ಪೆಟ್ರೋಲ್ ಮೇಲೆ 9 ರೂ ತೆರಿಗೆ ವಿಧಿಸುತ್ತಿತ್ತು. ಈಗ ಏಳು ವರ್ಷದಲ್ಲಿ ಅದು 34 ರೂಗೆ ತಲುಪಿದೆ. ಅಂದರೆ 25 ರೂ ಹೆಚ್ಚಿಸಿದೆ. ರಾಜ್ಯ ಸರ್ಕಾರವೂ ಸಹ ಗಣನೀಯವಾಗಿ ತೆರಿಗೆ ವಿಧಿಸಿದೆ. 2014 ರಲ್ಲಿ 12 ರೂ ವ್ಯಾಟ್ ವಿಧಿಸುತ್ತಿದ್ದ  ರಾಜ್ಯಗಳು ಸದ್ಯಕ್ಕೆ 26 ರೂ ವ್ಯಾಟ್ ವಿಧಿಸುತ್ತಿವೆ. ಅಂದರೆ ಸರಾಸರಿ 14 ರೂ ಏರಿಕೆ ಮಾಡಿವೆ.

ಮುಂಚೆ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಇಳಿಕೆಯಾದರೆ ಇಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆಯಾಗಿ ಅದರೆ ಅನುಕೂಲ ಗ್ರಾಹಕರಿಗೆ ಸಿಗುತ್ತಿತ್ತು. ಆದರೆ ಈಗ ಅದರ ಅನುಕೂಲ ಕೇಂದ್ರ ಸರ್ಕಾರಕ್ಕೆ ಮಾತ್ರ ತಲುಪುತ್ತಿದೆ. ಏಕೆಂದರೆ ಕೇಂದ್ರ ಸರ್ಕಾರ ಸತತವಾಗಿ ಅಬಕಾರಿ ತೆರಿಗೆ ಏರಿಸುತ್ತಲೇ ಇದೆ.

ಪೆಟ್ರೋಲ್ ಡಿಸೇಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪುತ್ತಿಲ್ಲವೇಕೆ?

ಒಂದು ವೇಳೆ ಪೆಟ್ರೋಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಮೂಲ ಬೆಲೆ 32.63 ರೂ + ಜಿಎಸ್‌ಟಿ 09 ರೂ (28%) + ಡೀಲರ್ ಕಮಿಷನ್, ಸಂಸ್ಕರಣಾ ವೆಚ್ಚ 08 ರೂ ಸೇರಿದರೆ 50 ರೂಗಳಿಗೆ ಒಂದು ಲೀಟರ್ ಪೆಟ್ರೋಲ್ ಗ್ರಾಹಕರಿಗೆ ಸಿಗುತ್ತದೆ. ಆದರೆ ಅಲ್ಲಿಗೆ ರಾಜ್ಯಗಳಿಗೆ ಬರುತ್ತಿರುವ ಗಣನೀಯ ಆದಾಯ ನಿಂತು ಹೋಗುತ್ತದೆ. ಅಕ್ಷರಶಹಃ ಅವು ತೀವ್ರ ಹಣಕಾಸಿನ ಮುಗ್ಗಟ್ಟು ಎದುರಿಸುತ್ತವೆ. ಅದರ ಬದಲಿಗೆ ಕೇಂದ್ರ ಸರ್ಕಾರ ತೆರಿಗೆ ಮನ್ನ ಮಾಡಿದರೆ 65 ರೂಗೆ ಒಂದು ಲೀಟರ್ ಪೆಟ್ರೋಲ್ ದೊರೆಯುತ್ತದೆ ಎಂಬುದು ರಾಜ್ಯಗಳ ವಾದ.

2014 ರಿಂದ 2020ರವರೆಗೆ ಪೆಟ್ರೋಲ್ ಮೇಲಿನ ಅಬಕಾರಿ ಶುಂಕದಿಂದ ಕೇಂದ್ರ ಸರ್ಕಾರ 11 ಲಕ್ಷ ಕೋಟಿ ರೂ ಸಂಗ್ರಹಿಸಿದೆ. ಅದರಲ್ಲಿ ಸೆಸ್‌ ರೂಪದಲ್ಲಿ 7 ಲಕ್ಷ ಕೋಟಿ ರೂ ಸಂಗ್ರಹಿಸಿದೆ. ಈ ಸೆಸ್‌ ಅನ್ನು ಕೇಂದ್ರವು ರಾಜ್ಯಗಳೊಂದಿಗೆ ಹಂಚಿಕೊಳ್ಳದೆ ತಾನೇ ಇಟ್ಟುಕೊಳ್ಳುತ್ತದೆ. ಇದೇ ಆರು ವರ್ಷದಲ್ಲಿ ಎಲ್ಲಾ ರಾಜ್ಯಗಳು ಸೇರಿ ಪೆಟ್ರೋಲ್ ಮೇಲಿನ ವ್ಯಾಟ್‌ ಆಗಿ ಒಟ್ಟು 7.8 ಲಕ್ಷ ಕೋಟಿ ಸಂಗ್ರಹ ಮಾಡಿವೆ. ಅಂದರೆ ಕೇಂದ್ರವೊಂದೆ ಎಲ್ಲಾ ರಾಜ್ಯಗಳಿಗಿಂತ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದೆ.

2014 ರಲ್ಲಿ 1ಲೀ. ಪೆಟ್ರೋಲ್ ಮೇಲೆ 9.48 ರೂ ತೆರಿಗೆ ಸಂಗ್ರಹಿಸುತ್ತಿದ್ದ ಕೇಂದ್ರ ಸರ್ಕಾರ 6.45 ರೂ ಅನ್ನು ತಾನು ಇಟ್ಟುಕೊಂಡು, 3.03ರೂ ಅನ್ನು ರಾಜ್ಯಗಳಿಗೆ ನೀಡುತ್ತಿತ್ತು. ಅನುಪಾತ 68:32 ಇತ್ತು..

ಆದರೆ 2021 ರಲ್ಲಿ 1ಲೀ. ಪೆಟ್ರೋಲ್ ಮೇಲೆ 33.33 ರೂ ತೆರಿಗೆ ಸಂಗ್ರಹಿಸುತ್ತಿರುವ ಕೇಂದ್ರ 32.9 ರೂ ಅನ್ನು ತಾನು ಇಟ್ಟುಕೊಂಡು, ಕೇವಲ 0.57 ರೂ ಅನ್ನು ರಾಜ್ಯಗಳಿಗೆ ನೀಡುತ್ತಿದೆ. ಅನುಪಾತ 98:02 ಆಗಿದೆ.. ಅಂದರೆ ನಿಧಾನವಾಗಿ ಅದು ರಾಜ್ಯಗಳೊಂದಿಗೆ ತಾನು ಹಂಚಿಕೊಳ್ಳುತ್ತಿದ್ದ ತೆರಿಗೆ ಪಾಲನ್ನು ನಿಲ್ಲಿಸಿಬಿಟ್ಟಿದೆ!

ಕರ್ನಾಟಕದ ಕತೆ

2020-21 ನೇ ಸಾಲಿನಲ್ಲಿ 11,000 ಕೋಟಿ ಜಿಎಸ್‌ಟಿ ಬಾಕಿಯನ್ನು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿಲ್ಲ. 15 ಆರ್ಥಿಕ ಕಮಿಷನ್ 5,365 ಕೋಟಿ ರೂ ಪರಿಹಾರ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೇಳಿತ್ತು. ಆದರೆ ಕೇಂದ್ರ ಕೊಡಲಿಲ್ಲ.. ರಾಜ್ಯದ ಪಾಲಿನ ನೆರೆ ಪರಿಹಾರವಾಗಿ ರಾಜ್ಯ ಸರ್ಕಾರ ಕೇಳಿದ್ದು 35,000 ಕೋಟಿ.. ಆದರೆ ಕೇಂದ್ರ ಕೊಟ್ಟಿದ್ದು 1,800 ಕೋಟಿ ಮಾತ್ರ.. ಕೇಂದ್ರ ಸರ್ಕಾರ ಸೆಸ್ ರೂಪದಲ್ಲಿ ಸಂಗ್ರಹಿಸುವ ತೆರಿಗೆಯನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವುದಿಲ್ಲ..

ಕೇಂದ್ರಕ್ಕೆ ಹಲವಾರು ಮೂಲಗಳಿಂದ ಸಂಪತ್ತು ಹರಿದುಬರುತ್ತದೆ. ಕಸ್ಟಮ್ ಡ್ಯೂಟಿ, ಕಾರ್ಪೊರೇಟ್ ಟ್ಯಾಕ್ಸ್, ಜಿಎಸ್‌ಟಿ, ಸೆಸ್ ಮೂಲಕ ಹಣ ಬರುತ್ತೆ.. ಆದರೆ ರಾಜ್ಯಗಳು ಪೆಟ್ರೋಲ್ ಡೀಸೆಲ್ ಮತ್ತು ಲಿಕ್ಕರ್ ಮೇಲೆ ಮಾತ್ರ ತೆರಿಗೆ ಹಾಕಬಹುದು ಬಿಟ್ಟರೆ ಬೇರೆ ಮಾರ್ಗಗಳಿಲ್ಲ. ಈಗಾಗಲೇ ರಾಜ್ಯಗಳು ತಮ್ಮ ಬೊಕ್ಕಸ ಖಾಲಿ ಮಾಡಿಕೊಂಡು ಸಾಲ ಮಾಡುವ ಪರಿಸ್ಥಿತಿಗೆ ತಲುಪಿವೆ. ಕೇಂದ್ರದತ್ತ ನೋಡುತ್ತಿವೆ.. ಹಾಗಾಗಿ ಪೆಟ್ರೋಲ್ ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರುವುದು ರಾಜ್ಯಗಳ ಪಾಲಿಗೆ ಮರಣ ಶಾಸನ ಬರೆದಂತೆ ಎನ್ನುವುದು ಅವರ ಅಭಿಪ್ರಾಯ.

ಮೋದಿ ಸರ್ಕಾರ 2019-20ರಲ್ಲಿ ಸಂಗ್ರಹಿಸಿದ ಅಬಕಾರಿ ಸುಂಕ 2.39 ಲಕ್ಷ ಕೋಟಿ ರೂಗಳು. ಅದೇ ರೀತಿ 2020-21ರಲ್ಲಿ ಸಂಗ್ರಹಿಸಿದ ಅಬಕಾರಿ ಸುಂಕ 3.89 ಲಕ್ಷ ಕೋಟಿ ರೂ.ಗಳು. ಅಂದರೆ 62 ಶೇಕಡಾ ಬೆಳವಣಿಗೆಯಾಗಿದೆ. ಅದರಲ್ಲಿ ಬಹುಪಾಲು ತೆರಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಎಂದು ಅಂದಾಜಿಸಲಾಗಿದೆ. 2020ರ ಮಾರ್ಚ್‌ನಿಂದ 2021ರ ಜೂನ್‌ವರೆಗೆ ಆರ್ಥಿಕ ಕುಸಿತ, ಕೊರೊನಾ ಲಾಕ್‌ಡೌನ್ ಇತ್ಯಾದಿ ಕಾರಣಕ್ಕೆ ಜನರು ಸಂಕಷ್ಟದಲ್ಲಿರುವಾಗಲು ಕೇಂದ್ರ ಸರ್ಕಾರ ಇಷ್ಟು ದೊಡ್ಡ ಮೊತ್ತ ತೆರಿಗೆ ಸಂಗ್ರಹಿಸಿದ್ದು ಏಕೆ?

ಇದೇ ಅವಧಿಯಲ್ಲಿ ಪೆಟ್ರೋಲಿಯಂ ಸಚಿವಾಲಯದ ಮಾಹಿತಿಯ ಪ್ರಕಾರ, ಎಲ್ಲಾ ರಾಜ್ಯಗಳು 2019-20ರಲ್ಲಿ 2 ಲಕ್ಷ ಕೋಟಿ ರೂ ಮತ್ತು 2020-21ರ ಏಪ್ರಿಲ್-ಡಿಸೆಂಬರ್ ತಿಂಗಳಲ್ಲಿ 1.35 ಲಕ್ಷ ಕೋಟಿ ರೂ.ಗಳನ್ನು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್‌ನಿಂದ ಸಂಗ್ರಹಿಸಿವೆ.

GST
Photo Courtesy: The Print

ಕೇಂದ್ರ ಸರ್ಕಾರ ಸೆಸ್ ಹೆಸರಲ್ಲಿ ಕಲೆಕ್ಟ್ ಮಾಡುವ ತೆರಿಗೆಯನ್ನು ಹಂಚಿಕೊಳ್ಳುವುದಿಲ್ಲ.. ಮೋದಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ನಿರಂತರವಾಗಿ ಕುಸಿಯುತ್ತಿದೆ. ಆದರೆ ಆರಂಭದ 4 ವರ್ಷದಲ್ಲಿ ಮೋದಿ ಸರ್ಕಾರ ಒಂದು ಲೀಟರ್ ಪೆಟ್ರೋಲ್ ಮೇಲೆ 13 ರೂ ಹೆಚ್ಚು ತೆರಿಗೆ ವಿಧಿಸಿತು. ಅದರಲ್ಲಿ 8 ರೂ ಸೆಸ್ ಆಗಿತ್ತು. ಆರಂಭದ ನಾಲ್ಕು ವರ್ಷದಲ್ಲಿ 5.5 ಲಕ್ಷ ಕೋಟಿ ರೂ ಹಣವನ್ನು ಸೆಸ್ ಹೆಸರಲ್ಲಿ ಕೇಂದ್ರ ಸಂಗ್ರಹಿಸಿದೆ. ಅದನ್ನು ರಾಜ್ಯಗಳೊಂದಿಗೆ ಹಂಚಿಕೊಂಡಿಲ್ಲ. ಈ ಎಲ್ಲಾ ಕಾರಣಗಳಿಂದ ರಾಜ್ಯಗಳು ತಮ್ಮ ಆಧಾಯದ ಮೂಲವಾಗಿ ಉಳಿದಿರುವ ಪೆಟ್ರೋಲ್ ಡೀಸೆಲ್ ಅನ್ನು ಜಿಎಸ್‌ಟಿ  ವ್ಯಾಪ್ತಿಗೆ ತರಬಾರದೆಂದು ಒತ್ತಾಯಿಸುತ್ತಿವೆ.

“ಜಿಎಸ್‌ಟಿ ಜಾರಿಯಾದಾಗಿನಿಂದ ರಾಜ್ಯಗಳು ಆರ್ಥಿಕತೆಯ ಮೇಲೆ ಹಿಡಿತ ಕಳೆದುಕೊಂಡಿವೆ. ಆದಾಯವಿಲ್ಲದೆ ಎಲ್ಲಾ ರಾಜ್ಯಗಳು ಸಾಲ ಮಾಡುವತ್ತ ಮತ್ತು ಬೇರೆ ಬೇರೆ ತೆರಿಗೆ ವಿಧಿಸಲು ಮುಂದಾಗುತ್ತಿವೆ. ಇಂತಹ ಸಂದರ್ಭದಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ರಾಜ್ಯಗಳು ಆದಾಯವಿಲ್ಲದೆ ಚಿಂತಾಜನಕ ಸ್ಥಿತಿ ತಲುಪುತ್ತವೆ. ನಮ್ಮ ಅಧಿಕಾರ ಮತ್ತು ನಮ್ಮ ತೆರಿಗೆಗಳನ್ನೆಲ್ಲ ದೆಹಲಿಗೆ ಬಿಟ್ಟುಕೊಟ್ಟುಬಿಟ್ಟರೆ ನಾವು ಭಿಕ್ಷೆ ಬೇಡುವ ಪರಿಸ್ಥಿತಿಗೆ ಬೀಳುತ್ತೇವೆ. ಹಾಗಾಗಿ ಜಿಎಸ್‌ಟಿ ವ್ಯಾಪ್ತಿಗೆ ತರಬಾರದು. ಬದಲಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಸರ್ಕಾರ ಒಂದೂ ರೂ ಸಹ ತೆರಿಗೆ ವಿಧಿಸಬಾರದು” ಎನ್ನುತ್ತಾರೆ ಕನ್ನಡ ಗ್ರಾಹಕ ಒಕ್ಕೂಟದ ಕಾರ್ಯಕರ್ತರಾದ ಅರುಣ್ ಜಾವಗಲ್.

ಹಿಂದಿನ ಯುಪಿಎ ಸರ್ಕಾರ ಮತ್ತು ಆಯಿಲ್ ಬಾಂಡ್‌ಗಳು ಕಾರಣ: ಕೇಂದ್ರ ಸರ್ಕಾರ 

ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಮಾತನಾಡಿ “ಇಷ್ಟು ವರ್ಷದ ಬೆಲೆ ಏರಿಕೆಗೆ ಕಾರಣ ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಅವರ ಆಯಿಲ್ ಬಾಂಡ್‌ಗಳ ಬಡ್ಡಿ ಮತ್ತು ಅದನ್ನು ನಮ್ಮ ಸರ್ಕಾರ ತೀರಿಸುತ್ತಿದೆ ಎಂದಿದ್ದರು.

ಮನಮೋಹನ್‌ ಸಿಂಗ್‌ರವರು ಪ್ರಧಾನಿಯಾಗಿದ್ದ ಯುಪಿಎ 1 ರ ಕಾಲದಲ್ಲಿ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆದ ಬೆಲೆ ಅತಿ ದುಬಾರಿಯಾಗಿತ್ತು. ಅಂದರೆ ಒಂದು ಬ್ಯಾರೆಲ್‌ಗೆ 120 ಡಾಲ್‌ರ್‌ಗಿಂತ ಅಧಿಕವಾಗಿತ್ತು. ಹಾಗಾಗಿ ಅದರ ಹೊರೆ ಜನರಿಗೆ ಬೀಳದಂತೆ ತಡೆಯಲು ಸಬ್ಸಿಡಿ ದರದಲ್ಲಿ ಪೆಟ್ರೋಲ್ ಮಾರಬೇಕು ಮತ್ತು ಅದಕ್ಕೆ ಬದಲಾಗಿ ಧೀರ್ಘಾವಧಿಯ ಆಯಿಲ್‌ ಬಾಂಡ್‌ಗಳನ್ನು ಪೆಟ್ರೋಲಿಯಂ ಕಂಪನಿಗಳಿಗೆ ನೀಡಿತ್ತು ಅದರ ಮೇಲಿನ ಬಡ್ಡಿ ಕಟ್ಟುವುದಾಗಿ ಒಪ್ಪಿಕೊಂಡಿತ್ತು. ಅದರ ಒಟ್ಟು ಮೊತ್ತ 1,44,186 ಕೋಟಿ ರೂಗಳಾಗಿದ್ದು ಆ ಬಾಂಡ್‌ಗಳು mature ಆಗಲು ಇದ್ದ ಅವಧಿ 15 – 20 ವರ್ಷ ಆಗಿತ್ತು. ಹಾಗೆಯೇ ಅವುಗಳ ಮೇಲಿನ ಬಡ್ಡಿಯಾಗಿ ಯುಪಿಎ 2 ರ ಸಮಯದಲ್ಲಿ 53,163 ಕೋಟಿ ರೂಗಳನ್ನು ಮನಮೋಹನ್‌ ಸಿಂಗ್ ಸರ್ಕಾರ ಪಾವತಿಸಿತ್ತು. ಅದೇ ರೀತಿ 2015ರಲ್ಲಿ mature ಆದ ಮೂರು ಆಯಿಲ್‌ ಬಾಂಡ್‌ಗಳ ಮೊತ್ತವಾದ 9,762 ಕೋಟಿ ರೂಗಳನ್ನು ಈಗಾಗಲೇ ಪಾವತಿಸಲಾಗಿದೆ.

ಎನ್‌ಡಿಎ ನೇತೃತ್ವದ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ 7 ವರ್ಷಗಳಲ್ಲಿ ಆಯಿಲ್ ಬಾಂಡ್‌ಗಳ ಮೇಲಿನ ಬಡ್ಡಿಯಾಗಿ ಒಟ್ಟು 70,214 ಕೋಟಿ ರೂಗಳನ್ನು ಮತ್ತು  2014-15 ರಿಂದ 2018-19 ರ ಅವಧಿಗೆ mature ಆದ ಎರಡು ಆಯಿಲ್ ಬಾಂಡ್‌ಗಳ ಮೊತ್ತವಾದ 3,500 ರೂಗಳನ್ನು ಪಾವತಿಸಲಾಗಿದೆ. ಅಂದರೆ ಅದು ಒಟ್ಟು 73,714 ಕೋಟಿ ರೂ ಹೊರೆ ಹೊತ್ತುಕೊಂಡಿದೆ.

ಬಾಕಿ ಉಳಿದಿರುವ ಒಟ್ಟು 12 ಆಯಿಲ್ ಬಾಂಡ್‌ಗಳ ಒಟ್ಟು ಮೊತ್ತ 1,30,923 ಕೋಟಿ ರೂಗಳಾಗಿವೆ. ಅವುಗಳ ಮೇಲೆ ಕಟ್ಟಬೇಕಾದ ಬಡ್ಡಿ ಅಂದಾಜು 40,000 ಕೋಟಿ ರೂಗಳಾಗಿವೆ. ಅವರೆಡನ್ನೂ ಸೇರಿಸಿದರೆ ಆಯಿಲ್‌ ಬಾಂಡ್‌ಗಳಿಂದ ನರೇಂದ್ರ ಮೋದಿ ಸರ್ಕಾರಕ್ಕೆ ಒಟ್ಟು 1,70,923 ಹೊರೆಯಾಗಲಿದೆ. ಅದನ್ನು ತೀರಿಸಲು ಮೋದಿ ಸರ್ಕಾರಕ್ಕೆ ಇನ್ನು 5 ವರ್ಷಗಳ ಸಮಯವಿದೆ.

ಆದರೆ ಈಗಾಗಲೇ ಹೇಳಿದಂತೆ ನರೇಂದ್ರ ಮೋದಿ ಸರ್ಕಾರ ಕೇವಲ 6 ವರ್ಷದ ಆಡಳಿತದಲ್ಲಿ ಸುಮಾರು 11 ಲಕ್ಷ ಕೋಟಿ ರೂಪಾಯಿ ಅಬಕಾರಿ ಸುಂಕ ಸಂಗ್ರಹಿಸಿದೆ! 2020-21ರ ಒಂದೇ ವರ್ಷದಲ್ಲಿ ಅದು ಪೆಟ್ರೋಲ್ ಡೀಸೆಲ್ ಮೇಲೆ 2.94 ಲಕ್ಷ ಕೋಟಿ ಅಬಕಾರಿ ಶುಲ್ಕ ವಿಧಿಸಿದೆ. ಇದಕ್ಕೆ ಹೋಲಿಸಿದರೆ ಆಯಿಲ್ ಬಾಂಡ್‌ಗಳ ಮೇಲೆ ಈಗಾಗಲೇ ಪಾವತಿಸಿರುವ 73,714 ರೂ ಮತ್ತು ಪಾವತಿಸಬೇಕಿರುವ 1.7 ಲಕ್ಷ ಕೋಟಿ ದೊಡ್ಡ ಮೊತ್ತವೇ ಅಲ್ಲ.. ಹಾಗಾಗಿ ಅದರ ಹೆಸರಿನಲ್ಲಿ ಜನರ ಮೇಲೆ ದುಬಾರಿ ತೆರಿಗೆ ವಿಧಿಸುವುದು ಜನರ ಹಿತದೃಷ್ಟಿಯಿಂದ ಅಪಾಯಕಾರಿಯಾಗಲಿದೆ.

  • ಮುತ್ತುರಾಜು
  • (ಮೂಲಗಳು: ದಿ ಪ್ರಿಂಟ್, ಹಲವು ಸಾಮಾಜಿಕ ಕಾರ್ಯಕರ್ತರ ಅಧ್ಯಯನಶೀಲ ಬರಹಗಳು)

ಇದನ್ನೂ ಓದಿ: ಪೆಟ್ರೋಲ್-ಡಿಸೇಲ್ GST ವ್ಯಾಪ್ತಿಗೆ ಚರ್ಚೆ: ಬಿಜೆಪಿ-ಕಾಂಗ್ರೆಸ್ ವಿರುದ್ಧ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮುತ್ತುರಾಜು
+ posts

LEAVE A REPLY

Please enter your comment!
Please enter your name here