ಭಾರೀ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬಹುದಾದ ನಿಬಂಧನೆಗಳನ್ನು ಹೊಂದಿರುವ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಸಭೆ ನಡೆಯುವ ಸ್ಥಳಗಳಲ್ಲಿ ಜನಸಂದಣಿಯನ್ನು ನಿರ್ವಹಿಸುವುದು) ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದೆ.
ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿ ದುರಂತದಿಂದ ಎಚ್ಚೆತ್ತ ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಮಸೂದೆಯನ್ನು ರೂಪಿಸಿದೆ.
ಪ್ರಸ್ತಾವಿತ ಕಾನೂನು ಪ್ರತಿಭಟನೆಗಳನ್ನು ಮೊಟಕುಗೊಳಿಸಬಹುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರಬಹುದು ಎಂದು ವಿರೋಧ ಪಕ್ಷದ ಶಾಸಕರು ಕಳವಳ ವ್ಯಕ್ತಪಡಿಸಿದ ನಂತರ ಮಸೂದೆಯನ್ನು ಸದನ ಸಮಿತಿಗೆ ಕಳುಹಿಸಲು ಸರ್ಕಾರ ಒಪ್ಪಿಕೊಂಡಿದೆ.
ಮಸೂದೆ ಮಂಡಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, “ಚಿನ್ನಸ್ವಾಮಿ ಕ್ರೀಡಾಂಗಣದ ದುರಂತವು ನಮಗೆ ‘ಎಚ್ಚರಿಕೆಯ ಕರೆ ಗಂಟೆಯಾಗಿದೆ’. ಪ್ರಸ್ತಾವಿತ ಮಸೂದೆ ಪ್ರಕಾರ ಮುಂದೆ ಇಂತಹ ದುರಂತಗಳು ಸಂಭವಿಸಿದರೆ ಕಾರ್ಯಕ್ರಮ ಆಯೋಜಕರು ಹೊಣೆಗಾರಾಗುತ್ತಾರೆ ಎಂದರು.
ಮಸೂದೆಯು ಕನಿಷ್ಠ 7,000 ಜನರು ಸೇರುವ ಯಾವುದೇ ಕಾರ್ಯಕ್ರಮಕ್ಕೆ ಪೊಲೀಸ್ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುತ್ತದೆ. ಆಯೋಜಕರು ಉದ್ದೇಶಿತ ಕಾರ್ಯಕ್ರಮಕ್ಕೆ 10 ದಿನಗಳ ಮೊದಲು ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ಕಾರ್ಯಕ್ರಮ ಸಂಘಟಕರು 1 ಕೋಟಿ ರೂಪಾಯಿಗಳ ಪರಿಹಾರ ಬಾಂಡ್ ಸಲ್ಲಿಸಬೇಕು ಎಂದು ವರದಿಗಳು ಹೇಳಿವೆ.
ಅನುಮತಿಯಿಲ್ಲದೆ ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರೂಪಾಯಿ ದಂಡ ವಿಧಿಸಲಾಗುತ್ತದೆ. ಯಾವುದೇ ಘಟನೆಯಲ್ಲಿ ಗಾಯಗಳಾದರೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಸಾವು ನೋವುಗಳಿಗೆ 10 ವರ್ಷ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದು. ಕಾರ್ಯಕ್ರಮದಲ್ಲಿ ಗಲಭೆ ಉಂಟುಮಾಡಿದರೆ ಅಥವಾ ಶಾಂತಿ ಕದಡಿದರೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಲಾಗುತ್ತದೆ ಎಂದು ವರದಿಗಳು ವಿವರಿಸಿವೆ.
ಖಾಸಗಿ ಜಾಗದಲ್ಲಿ ನಡೆಸುವ ಮದುವೆಗಳಂತಹ ಕೌಟುಂಬಿಕ ಕಾರ್ಯಕ್ರಮಗಳಿಗೆ ಮಸೂದೆಯ ನಿಬಂಧನೆಗಳ ಅಡಿಯಲ್ಲಿ ವಿನಾಯಿತಿ ಇದೆ.
“ಇತ್ತೀಚೆಗೆ, ಯಾವುದೇ ಕಾನೂನು ಚೌಕಟ್ಟು ಇಲ್ಲದೆ ಜನದಟ್ಟಣೆಯ ಕಾರ್ಯಕ್ರಮಗಳು ನಡೆಯುವುದನ್ನು ನಾವು ನೋಡುತ್ತಿದ್ದೇವೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಮಯದಲ್ಲಿ ರೈತರ ಮೇಲೆ ಲಾಠಿ ಪ್ರಹಾರ ಮಾಡಲಾಯಿತು. ಅಂತಹ ಸಂದರ್ಭಗಳಿಗೆ ಕಾರಣವೇನು? ನಿಯಮಗಳು ಇತ್ತೇ? ಅನುಮತಿ ಪಡೆಯಲಾಗಿದೆಯೇ? ಅಂತಹ ಹಲವಾರು ಪ್ರಶ್ನೆಗಳಿವೆ. ಪ್ರತಿಭಟಿಸುವುದು ಒಂದು ಹಕ್ಕು. ಆದರೆ ಅದು ಸಾರ್ವಜನಿಕ ಜೀವನವನ್ನು ಅನಾನುಕೂಲಗೊಳಿಸಬಾರದು” ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ಮಸೂದೆಯನ್ನು ‘ಅಂತ್ಯಂತ ಕಠಿಣ’ ಎಂದು ಹೇಳಿವೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಮಸೂದೆಯು ಪೊಲೀಸರಿಗೆ ‘ಆಯುಧ’ವಾಗಬಾರದು ಎಂದು ಹೇಳಿದರು. ಎಲ್ಲಾ ರಾಜಕೀಯ ಪಕ್ಷಗಳು ಕಾರ್ಯಕ್ರಮಗಳನ್ನು ನಡೆಸುತ್ತವೆ. ಏನಾದರೂ ತಪ್ಪಾದಲ್ಲಿ, ಆ ಪಕ್ಷದ ಗತಿಯೇನು? ಇದರ ಬಗ್ಗೆ ಯೋಚಿಸಬೇಕು ಎಂದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಈ ಮಸೂದೆಯು ಪ್ರತಿಭಟನೆಗಳನ್ನು ಕೊಲ್ಲುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದು ಬ್ರಿಟಿಷ್ ಯುಗದ ಕಾನೂನಿಗಿಂತ ಹೆಚ್ಚು ಕ್ರೂರವಾಗಿದೆ ಎಂದ ಯತ್ನಾಳ್, ಒಂದು ಸಮುದಾಯವು ದಿನಕ್ಕೆ ಐದು ಬಾರಿ ಕೂಗಲು ಯಾವುದೇ ಅನುಮತಿಯ ಅಗತ್ಯವಿಲ್ಲ. ಗಣೇಶ ಹಬ್ಬದ ಸಮಯದಲ್ಲಿ ಧ್ವನಿವರ್ಧಕ ಬಳಸುವ ವಿಷಯಕ್ಕೆ ಬಂದಾಗ ಸಮಸ್ಯೆ ಸೃಷ್ಟಿಯಾಗುತ್ತದೆ. ಈ ಮಸೂದೆಯು ಒಂದು ಧರ್ಮದ ಕಾರ್ಯಕ್ರಮಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟನೆಗಳನ್ನು ಮೊಟಕುಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೆಲವೊಮ್ಮೆ ಪ್ರತಿಭಟನೆಗಳನ್ನು ರಾತ್ರೋರಾತ್ರಿ ಆಯೋಜಿಸಲಾಗುತ್ತದೆ. ಹೀಗಿರುವಾಗ 10 ದಿನಗಳ ಮೊದಲೇ ಅನುಮತಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ? ಈ ಮೂಲಕ ಸ್ಥಳೀಯ ಪೊಲೀಸ್ ಠಾಣೆಗಳು ಪ್ರತಿಭಟನೆಗಳನ್ನು ಹತ್ತಿಕ್ಕುತ್ತದೆ ಎಂದು ಸುನಿಲ್ ಕುಮಾರ್ ಹೇಳಿದರು. ಜಾತ್ರೆಗಳು ಮತ್ತು ಹಬ್ಬಗಳ ಕಥೆಯೇನು? ಒಂದು ದೇವಾಲಯವು 1 ಕೋಟಿ ರೂ.ಗಳ ಬಾಂಡ್ ಹೇಗೆ ನೀಡುತ್ತದೆ? ಸರ್ಕಾರಿ ಕಾರ್ಯಕ್ರಮದಲ್ಲಿ ಏನಾದರೂ ತಪ್ಪಾದಲ್ಲಿ ಯಾರು ಹೊಣೆಗಾರರಾಗುತ್ತಾರೆ? ಎಂದು ಪ್ರಶ್ನಿಸಿದರು.
ಮೈಲಾಪುರ ಜಾತ್ರೆಯು ಒಂದು ಲಕ್ಷ ಜನರನ್ನು ಆಕರ್ಷಿಸುತ್ತದೆ ಎಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಹೇಳಿದರು. ನಮ್ಮಲ್ಲಿ 50,000-60,000 ಜನರು ಒಂದು ವಾರದವರೆಗೆ ಉಳಿಯುವ ಅಬ್ಬೆತುಮ್ಕೂರು ಜಾತ್ರೆ ಇದೆ. ಇದು ಬ್ರಿಟಿಷ್ ಕಾನೂನಿನಂತಿದೆ ಎಂದು ಅವರು ಹೇಳಿದರು.
ಧಾರ್ಮಿಕ ಕಾರ್ಯಕ್ರಮದ ಸಮಯದಲ್ಲಿ ‘ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಸಮಸ್ಯೆಗಳನ್ನು ಸೃಷ್ಟಿಸಿದರೆ’ ದೇವಾಲಯವನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ? ಎಂದು ಬಿಜೆಪಿಯ ಉಮಾನಾಥ್ ಕೋಟ್ಯಾನ್ ಸರ್ಕಾರವನ್ನು ಪ್ರಶ್ನಿಸಿದರು.
ಈ ವೇಳೆ, 10 ದಿನಗಳ ಷರತ್ತನ್ನು ಐದಕ್ಕೆ ಇಳಿಸಲಾಗುವುದು ಎಂದು ಘೋಷಿಸುವ ಮೂಲಕ ಗೃಹ ಸಚಿವ ಪರಮೇಶ್ವರ್ ಕಳವಳಗಳನ್ನು ಕಡಿಮೆ ಮಾಡಲು ಯತ್ನಿಸಿದರು. ಧಾರ್ಮಿಕ ಕಾರ್ಯಕ್ರಮಗಳಿಗೆ ಪರಿಹಾರ ಬಾಂಡ್ ಅನ್ನು ಕೂಡ ಅರ್ಧಕ್ಕೆ ಇಳಿಸುತ್ತೇವೆ ಎಂದು ಹೇಳಿದರು. ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಲಾಗುವುದು ಎಂದರು.
ವಿರೋಧ ಪಕ್ಷಕ್ಕೆ ಇದು ಮನವರಿಕೆಯಾಗಿಲ್ಲ. ವಾಣಿಜ್ಯ ಮತ್ತು ವಾಣಿಜ್ಯೇತರ ಕಾರ್ಯಕ್ರಮಗಳ ನಡುವೆ ವ್ಯತ್ಯಾಸವನ್ನು ಗುರುತಿಸಬೇಕು ಎಂದು ಆರ್. ಅಶೋಕ್ ಹೇಳಿದರು. ಕೊನೆಗೆ, ವಿರೋಧ ಪಕ್ಷದ ಬೇಡಿಕೆಗೆ ಮಣಿದ ಗೃಹ ಸಚಿವ ಪರಮೇಶ್ವರ್ ಮಸೂದೆಯನ್ನು ಸದನ ಸಮಿತಿಗೆ ಕಳುಹಿಸಲು ಒಪ್ಪಿಕೊಂಡರು.


