ಸಂಸತ್ತಿನ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದೂ (ಡಿ.2) ಕೂಡ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆಗೆ ಪಟ್ಟು ಹಿಡಿದು ಪ್ರತಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದೆ. ಪರಿಣಾಮ ಉಭಯ ಸದನಗಳ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆಯಾಗಿದೆ.
ಬೆಳಿಗ್ಗೆ 11 ಗಂಟೆಗೆ ಲೋಕಸಭೆ ಕಲಾಪ ಆರಂಭಗೊಂಡಾಗ ಎಸ್‌ಐಆರ್ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಸದನದ ಬಾವಿಗಿಳಿದು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ ಹೆಚ್ಚಾದಾಗ ಸ್ಪೀಕರ್ ಓಂ ಬಿರ್ಲಾ ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು. ಸಂಸದೀಯ ವ್ಯವಹಾರಗ: ಸಚಿವ ಕಿರಣ್ ರಿಜಿಜು ಪ್ರತಿಪಕ್ಷ ನಾಯ ಜೊತೆ ಸಭೆ ಮಾತುಕತೆ ನಡೆಸುವಂತೆ ಸೂಚಿಸಿದರು.
12 ಗಂಟೆಗೆ ಸದನ ಮತ್ತೆ ಸೇರಿದಾಗ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಹಾಗಾಗಿ, ಸ್ಪೀಕರ್ ಕಲಾಪವನ್ನು ಅಪರಾಹ್ನ 2 ಗಂಟೆಗೆ ಮುಂದೂಡಿಕೆ ಮಾಡಿದರು. ರಾಜ್ಯಸಭೆಯಲ್ಲೂ ಇದೇ ಬೆಳವಣಿಗೆ ನಡೆದಿದೆ.
ಸಂಚಾರಿ ಸಾಥಿ ಆ್ಯಪ್ ಕುರಿತು ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್
ಎಸ್‌ಐಆರ್ ಕುರಿತು ಚರ್ಚೆಗೆ ನಿನ್ನೆ ಅಧಿವೇಶನ ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ಸಂಸದರು ನಿಲುವಳಿ ಸೂಚನೆ ಮಂಡಿಸಿದ್ದರು. ಇಂದು ಸಂಚಾರಿ ಸಾಥ್ ಆ್ಯಪ್ ಕುರಿತು ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಿದೆ.
ಮೊಬೈಲ್ ಫೋನ್‌ಗಳಲ್ಲಿ ಕಡ್ಡಾಯವಾಗಿ ಸಂಚಾರಿ ಸಾಥಿ ಆ್ಯಪ್ ಇನ್‌ಸ್ಟಾಲ್ ಮಾಡುವಂತೆ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನದ ಬಗ್ಗೆ ಚರ್ಚೆಗೆ ಆಗ್ರಹಿಸಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯೆ ರೇಣುಕಾ ಚೌಧರಿ ನಿಲುವಳಿ ಸೂಚನೆ ಮಂಡಿಸಿದ್ದಾರೆ.


