ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಗೆ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ತ್ರಿಭಾಷೆ ಕಡ್ಡಾಯಗೊಳಿಸಿರುವುದು ವಿವಿಧ ರಾಜ್ಯಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ನೀತಿಯ ವಿರುದ್ದ ತೊಡೆ ತಟ್ಟಿ ಹೋರಾಟಕ್ಕೆ ಇಳಿದಿರುವ ತಮಿಳುನಾಡಿನ ಜೊತೆ ತೆಲಂಗಾಣ ಮತ್ತು ಪಂಜಾಬ್ ರಾಜ್ಯಗಳು ಕೈ ಜೋಡಿಸಿವೆ.
ಪಂಜಾಬ್ ಸರ್ಕಾರ ಫೆಬ್ರವರಿ 26ರ ಬುಧವಾರದಂದು, ರಾಜ್ಯದಾದ್ಯಂತ ಎಲ್ಲಾ ಶಾಲೆಗಳಲ್ಲಿ ಪಂಜಾಬಿ ಭಾಷೆಯನ್ನು ಕಡ್ಡಾಯ ಮುಖ್ಯ ವಿಷಯವನ್ನಾಗಿ ಮಾಡಿ ಅಧಿಸೂಚನೆಯನ್ನು ಹೊರಡಿಸಿದೆ. ಶಾಲೆಗಳ ಶೈಕ್ಷಣಿಕ ಮಂಡಳಿಯ ಸಂಯೋಜನೆಯನ್ನು ಲೆಕ್ಕಿಸದೆ, ಪಂಜಾಬಿಯನ್ನು ಮುಖ್ಯ ವಿಷಯವಾಗಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಶಿಕ್ಷಣ ಪ್ರಮಾಣಪತ್ರಗಳನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಇದಕ್ಕೂ ಮುನ್ನ, ತೆಲಂಗಾಣ ಸರ್ಕಾರ ಕೂಡ ರಾಜ್ಯದ ಎಲ್ಲಾ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ತೆಲುಗು ಭಾಷೆಯನ್ನು ಕಡ್ಡಾಯ ವಿಷಯವನ್ನಾಗಿ ಘೋಷಿಸಿದೆ. ಶೈಕ್ಷಣಿಕ ಮಂಡಳಿಗಳು ಯಾವುದೇ ಇರಲಿ ತೆಲುಗು ಭಾಷೆ ಮುಖ್ಯ ವಿಷಯವಾಗಬೇಕು ಎಂದಿದೆ.
ಮಕ್ಕಳ ಮೇಲೆ ಹಿಂದಿ ಹೇರಲು ಮೂರು ಭಾಷೆಗಳು ಕೇವಲ ಒಂದು ನೆಪ ಎಂದು ಆರೋಪಿಸಿ ತಮಿಳುನಾಡು ಈ ನೀತಿಯನ್ನು ವಿರೋಧಿಸಿದೆ.
ಪಂಜಾಬ್ ರಾಜ್ಯ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ , ಪಂಜಾಬಿ ಭಾಷೆಯನ್ನು ಕಡೆಗಣಿಸಿದ್ದಕ್ಕಾಗಿ ಸಿಬಿಎಸ್‌ಇಯ ಹೊಸ ಪರೀಕ್ಷಾ ಮಾದರಿಯನ್ನು ಟೀಕಿಸಿದ್ದಾರೆ. ಪಂಜಾಬಿ ಭಾಷೆಯನ್ನು ಅನೇಕ ರಾಜ್ಯಗಳಲ್ಲಿ ಮಾತನಾಡುತ್ತಾರೆ ಮತ್ತು ಓದುತ್ತಾರೆ. ಇದು ಪಂಜಾಬ್‌ನ ಗಡಿಗಳನ್ನು ಮೀರಿ ಅದರ ಮಹತ್ವವನ್ನು ವಿಸ್ತರಿಸಿಕೊಂಡಿದೆ ಎಂದು ಬೈನ್ಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಪಂಜಾಬಿ ಕೇವಲ ಒಂದು ಭಾಷೆಯಲ್ಲ; ಇದು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ, ಇದನ್ನು ದೇಶದಾದ್ಯಂತ ಲಕ್ಷಾಂತರ ಜನರು ಮಾತನಾಡುತ್ತಾರೆ ಮತ್ತು ಪಾಲಿಸುತ್ತಾರೆ” ಎಂದು ಬೈನ್ಸ್ ಹೇಳಿದ್ದಾರೆ. ಕೇಂದ್ರದ ನೀತಿಯು ಪಂಜಾಬಿಯನ್ನು ಶಿಕ್ಷಣ ಕ್ಷೇತ್ರದಿಂದ ಅಳಿಸಿ ಹಾಕುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.
ಕರಡು ಶಿಕ್ಷಣ ನೀತಿಯಲ್ಲಿ ಪಂಜಾಬಿ ಭಾಷೆಯನ್ನು ಕಡೆಗಣಿಸಿದ್ದಕ್ಕಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಸಚಿವ ಬೈನ್ಸ್, ರಾಜ್ಯಕ್ಕೆ ಅನ್ಯಾಯ ಎಸಗಿದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
ಇದು ಆಯ್ಕೆಯ ವಿಷಯವಲ್ಲ, ಬದಲಾಗಿ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯ ಎಂಬುವುದನ್ನು ಸಿಬಿಎಸ್‌ಇ ಅರ್ಥಮಾಡಿಕೊಳ್ಳಬೇಕು. ಕೇಂದ್ರದ ನೀತಿಯು ರಾಜ್ಯಗಳು, ಒಕ್ಕೂಟ ವ್ಯವಸ್ಥೆ ಮತ್ತು ರಾಷ್ಟ್ರದ ಭಾಷಾ ವೈವಿಧ್ಯತೆಯ ಮೇಲಿನ ನೇರ ದಾಳಿಯಾಗಿದೆ” ಎಂದಿದ್ದಾರೆ.
“ನಮ್ಮ ರಾಷ್ಟ್ರದ ಮೇಲೆ ಏಕ ಸಿದ್ದಾಂತವನ್ನು ಹೇರುವ ಪ್ರಯತ್ನವನ್ನು ನಾವು ಸಹಿಸಲು ಸಾಧ್ಯವಿಲ್ಲ. ಸಿಬಿಎಸ್‌ಇ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕು. ಪಂಜಾಬಿ ಸೇರಿದಂತೆ ಎಲ್ಲಾ ಭಾಷೆಗಳಿಗೆ ಅವುಗಳಿಗೆ ಅರ್ಹವಾದ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಹೇಳಿದ್ದಾರೆ.
ಪಂಜಾಬಿ ಭಾಷೆಯನ್ನು ರಾಜ್ಯದ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಉಳಿಸಿಕೊಳ್ಳುವ ಸರ್ಕಾರದ ದೃಢ ನಿಲುವನ್ನು ಒತ್ತಿ ಹೇಳಿದ ಬೈನ್ಸ್, 2008ರ ಪಂಜಾಬಿ ಕಲಿಕೆ ಮತ್ತು ಇತರ ಭಾಷೆಗಳ ಕಾಯ್ದೆಯನ್ನು ಪಾಲಿಸಲು ವಿಫಲವಾದ ಕಾರಣ ಮೊಹಾಲಿಯ ಖಾಸಗಿ ಶಾಲೆ ಅಮಿಟಿ ಇಂಟರ್ನ್ಯಾಷನಲ್‌ಗೆ ರಾಜ್ಯ ಸರ್ಕಾರ 50,000 ರೂ. ದಂಡ ವಿಧಿಸಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಶಿಕ್ಷಣ ಅಧಿಕಾರಿ (ಮಾಧ್ಯಮಿಕ) ಅವರ ವರದಿಯ ಪ್ರಕಾರ, ಶಾಲೆಯು ಪಂಜಾಬಿಯನ್ನು ಕಡ್ಡಾಯ ವಿಷಯವಾಗಿ ಕಲಿಸುವುದನ್ನು ಕಡ್ಡಾಯಗೊಳಿಸುವ ಕಾಯ್ದೆಯನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಈ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಜಲಂಧರ್ ಮೂಲದ ಎರಡು ಶಾಲೆಗಳಿಗೂ ದಂಡ ವಿಧಿಸಲಾಗಿದೆ. ಪಂಜಾಬ್ ತನ್ನದೇ ಆದ ಶಿಕ್ಷಣ ನೀತಿಯನ್ನು ತರಲಿದೆ. ಇದಕ್ಕಾಗಿ ಶೀಘ್ರದಲ್ಲೇ ತಜ್ಞರ ಸಮಿತಿಯನ್ನು ರಚಿಸಲಾಗುವುದು ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಹೇಳಿದ್ದಾರೆ.
‘ಹೇರಿಕೆ ಸಹಬಾಳ್ವೆಯಲ್ಲ, ಸಮಸ್ಯೆ..’; ಭಾಷಾ ವಿವಾದದ ಕುರಿತು ಡಿಎಂಕೆ ಸಂಸದೆ ಕನಿಮೋಳಿ ಪ್ರತಿಕ್ರಿಯೆ


