ಕೋಮುವಾದಿಗಳು ಎಷ್ಟೇ ವಿಷಯ ತಿರುಚುವ ಕೆಲಸ ಮಾಡಿದರೂ ಬಾಬಾ ಬುಡನ್ ಗಿರಿಯ ಜಾತ್ಯತೀತ ಹಿನ್ನೆಲೆಯನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಅಲ್ಲಿನ ಸೌಹಾರ್ಧ ಪರಂಪರೆಯನ್ನು ಬದಿಗೆ ಸರಿಸಿ, ವೈದಿಕ ಆಚರಣೆಗೆ ಅನುಮತಿ ನೀಡುವ ಮೂಲಕ ಹಿಂದುತ್ವ ರಾಜಕೀಯದಿಂದ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿಗರಿಗೆ ಕಾಂಗ್ರೆಸ್ ಸರ್ಕಾರವೇ ಬೆಂಬಲ ನೀಡುತ್ತಿರುವುದು ಸರಿಯಲ್ಲ ಎಂದು ‘ಎದ್ದೇಳು ಕರ್ನಾಟಕ’ ಮುಖಂಡರಾದ ಕೆ.ಎಲ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಜಾತ್ಯಾತೀತ ತತ್ವಗಳಿಗೆ ತಿಲಾಂಜಲಿ ಇಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ನಾಳೆ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ‘ನಾನುಗೌರಿ.ಕಾಮ್’ಗೆ ತಿಳಿಸಿದರು.
“ಬಾಬಾ ಬುಡನ್ ಗಿರಿಯಲ್ಲಿ ವೈದಿಕ ಆಚರಣೆ ನಡೆಸಲು ಜಿಲ್ಲಾಡಳಿತ ಮುಂದಾಗಿದ್ದರ ವಿರುದ್ದ ಎದ್ದೇಳು ಕರ್ನಾಟಕದಿಂದ ಪ್ರತಿಭಟನೆ ನಡೆಸಲಾಗುವುದು” ಎಂದರು.
ಈ ಕುರಿತು ಮಾಹಿತಿ ಹಂಚಿಕೊಂಡ ಹಿರಿಯ ಹೋರಾಟಗಾರರಾದ ಕೆ.ಎಲ್ ಅಶೋಕ್, “ಕಾಂಗ್ರೆಸ್ ಸರ್ಕಾರ ಜಾತ್ಯಾತೀತ ತತ್ವಗಳಿಗೆ ತಿಲಾಂಜಲಿ ಇಡುವ ಪ್ರಯತ್ನ ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ಕೃತ್ಯ. ಕರ್ನಾಟಕದ ಜನತೆ ಇದನ್ನು ಸಹಿಸಲು ಸಾಧ್ಯವಿಲ್ಲ. ಬಾಬಾಬುಡನ್ ಗಿರಿ ಸೌಹಾರ್ದ ತಾಣ ಇದನ್ನು ಹಾಗೆಯೇ ಉಳಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.


