ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಕುರಿತು ತೀರ್ಮಾನ ತೆಗೆದುಕೊಳ್ಳಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗೆ ಗಡುವು ನಿಗದಿಪಡಿಸಿದ ಏಪ್ರಿಲ್ 8ರ ತೀರ್ಪಿನ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್‌ಗೆ 14 ನಿರ್ಣಾಯಕ ಪ್ರಶ್ನೆಗಳನ್ನು ಕೇಳಿದ್ದಾರೆ.
ಅಪರೂಪಕ್ಕೆ ಬಳಸಲಾಗುವ ಸಂವಿಧಾನದ ವಿಧಿ 143 (1) ರ ಅಡಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸುತ್ತಾ, ರಾಷ್ಟ್ರಪತಿ ಮುರ್ಮು ಅವರು ಪ್ರಸ್ತುತ ಸಂದರ್ಭಗಳಲ್ಲಿ, ಈ ಕೆಳಗಿನ ಕಾನೂನಿನ ಪ್ರಶ್ನೆಗಳು ಉದ್ಭವಿಸಿವೆ ಎಂದು ತೋರುತ್ತದೆ ಮತ್ತು ಅವುಗಳ ಸ್ವರೂಪ ಸಾರ್ವಜನಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಅದರ ಬಗ್ಗೆ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ಪಡೆಯುವುದು ಸೂಕ್ತವಾಗಿದೆ ಎಂದು ಹೇಳಿದ್ದಾರೆ.
ಸಂವಿಧಾನದ 143 (1) ನೇ ವಿಧಿಯು ರಾಷ್ಟ್ರಪತಿ ಸುಪ್ರೀಂ ಕೋರ್ಟ್‌ನೊಂದಿಗೆ ಸಮಾಲೋಚನೆ ನಡೆಸುವ ಅಧಿಕಾರದ ಬಗ್ಗೆ ಹೇಳುತ್ತದೆ.
“ಯಾವುದೇ ಸಮಯದಲ್ಲಿ ಕಾನೂನು ಅಥವಾ ವಾಸ್ತವದ ಪ್ರಶ್ನೆ ಉದ್ಭವಿಸಿದೆ ಅಥವಾ ಉದ್ಭವಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರಪತಿಗಳಿಗೆ ಕಂಡುಬಂದರೆ, ಅದು ಅಂತಹ ಸ್ವರೂಪದ್ದಾಗಿದ್ದು ಮತ್ತು ಸಾರ್ವಜನಿಕ ಪ್ರಾಮುಖ್ಯತೆಯನ್ನು ಹೊಂದಿದ್ದು, ಅದರ ಬಗ್ಗೆ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ಪಡೆಯುವುದು ಸೂಕ್ತವಾಗಿದ್ದರೆ, ರಾಷ್ಟ್ರಪತಿ ಆ ಪ್ರಶ್ನೆಯನ್ನು ಪರಿಗಣನೆಗೆ ನ್ಯಾಯಾಲಯಕ್ಕೆ ಉಲ್ಲೇಖಿಸಬಹುದು. ನ್ಯಾಯಾಲಯವು ಸೂಕ್ತವೆಂದು ಭಾವಿಸುವ ವಿಷಯದ ಬಗ್ಗೆ ತನ್ನ ಅಭಿಪ್ರಾಯವನ್ನು ರಾಷ್ಟ್ರಪತಿಗೆ ವರದಿ ಮಾಡಬಹುದು” ಎಂದು ನಿಬಂಧನೆ ಹೇಳುತ್ತದೆ.
ರಾಷ್ಟ್ರಪತಿ ಸುಪ್ರೀಂ ಕೋರ್ಟ್‌ಗೆ ಕೇಳಿರುವ ಪ್ರಶ್ನೆಗಳು ಹೀಗಿವೆ :
- ಭಾರತ ಸಂವಿಧಾನದ 200ನೇ ವಿಧಿಯಡಿಯಲ್ಲಿ ರಾಜ್ಯಪಾಲರಿಗೆ ಮಸೂದೆಯನ್ನು ಮಂಡಿಸಿದಾಗ ಅವರ ಮುಂದೆ ಇರುವ ಸಾಂವಿಧಾನಿಕ ಆಯ್ಕೆಗಳೇನು?
- ಭಾರತ ಸಂವಿಧಾನದ 200ನೇ ವಿಧಿಯಡಿ ಮಸೂದೆ ಕುರಿತು ತೀರ್ಮಾನ ತೆಗೆದುಕೊಳ್ಳಲು ರಾಜ್ಯಪಾಲರು ತಮ್ಮ ಮುಂದಿರುವ ಆಯ್ಕೆಗಳನ್ನು ಚಲಾಯಿಸುವಾಗ ಮಂತ್ರಿ ಮಂಡಲದ ನೀಡುವ ನೆರವು ಮತ್ತು ಸಲಹೆಗೆ ಬದ್ಧರಾಗಿದ್ದಾರೆಯೇ?
- ಭಾರತ ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಸಾಂವಿಧಾನಿಕ ವಿವೇಚನೆಯನ್ನು ಚಲಾಯಿಸುವುದು ನ್ಯಾಯಸಮ್ಮತವೇ?
- ಭಾರತದ ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರ ಕ್ರಮಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಪರಿಶೀಲನೆಗೆ ಭಾರತದ ಸಂವಿಧಾನದ 361ನೇ ವಿಧಿಯು ಸಂಪೂರ್ಣ ನಿರ್ಬಂಧವೇ?
- ಸಂವಿಧಾನಾತ್ಮಕವಾಗಿ ನಿಗದಿಪಡಿಸಿದ ಸಮಯ ಮಿತಿ ಮತ್ತು ವಿಧಾನದಲ್ಲಿ ರಾಜ್ಯಪಾಲರು ಮಸೂದೆಗಳ ಕುರಿತು ನಿರ್ಣಯ ತೆಗೆದುಕೊಳ್ಳದಿದ್ದರೆ, ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಅಧಿಕಾರಗಳನ್ನು ಚಲಾಯಿಸಲು ನ್ಯಾಯಾಂಗ ಆದೇಶಗಳ ಮೂಲಕ ಸಮಯ ಮಿತಿಗಳನ್ನು ವಿಧಿಸಬಹುದೇ ಮತ್ತು ಚಲಾಯಿಸುವ ವಿಧಾನವನ್ನು ಸೂಚಿಸಬಹುದೇ?
- ಭಾರತದ ಸಂವಿಧಾನದ 201 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ಸಾಂವಿಧಾನಿಕ ವಿವೇಚನೆಯನ್ನು ಚಲಾಯಿಸುವುದು ನ್ಯಾಯಸಮ್ಮತವೇ?
- ಸಂವಿಧಾನಾತ್ಮಕವಾಗಿ ನಿಗದಿಪಡಿಸಿದ ಸಮಯ ಮಿತಿ ಮತ್ತು ವಿಧಾನದಲ್ಲಿ ರಾಷ್ಟ್ರಪತಿ ಮಸೂದೆಗಳ ಕುರಿತು ನಿರ್ಣಯ ತೆಗೆದುಕೊಳ್ಳದಿದ್ದರೆ, ಸಂವಿಧಾನದ 201 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿ ಅಧಿಕಾರಗಳನ್ನು ಚಲಾಯಿಸಲು ನ್ಯಾಯಾಂಗ ಆದೇಶಗಳ ಮೂಲಕ ಸಮಯ ಮಿತಿಗಳನ್ನು ವಿಧಿಸಬಹುದೇ ಮತ್ತು ಚಲಾಯಿಸುವ ವಿಧಾನವನ್ನು ಸೂಚಿಸಬಹುದೇ?
- ರಾಷ್ಟ್ರಪತಿಗಳ ಅಧಿಕಾರಗಳನ್ನು ನಿಯಂತ್ರಿಸುವ ಸಾಂವಿಧಾನಿಕ ನಿಯಮಗಳಡಿ ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸಿದಾಗ, ರಾಷ್ಟ್ರಪತಿಗಳು ಭಾರತದ ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನ ಸಲಹೆಯನ್ನು ಪಡೆಯಬೇಕೇ ಅಥವಾ ಬೇರೆ ರೀತಿಯಲ್ಲಿ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕೇ?
- ಭಾರತ ಸಂವಿಧಾನದ 200ನೇ ವಿಧಿ ಮತ್ತು 201ನೇ ವಿಧಿಯಡಿಯಲ್ಲಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ತೆಗೆದುಕೊಳ್ಳುವ ನಿರ್ಧಾರಗಳು ಕಾನೂನು ಜಾರಿಗೆ ಬರುವ ಮೊದಲು ಒಂದು ಹಂತದಲ್ಲಿ ನ್ಯಾಯಸಮ್ಮತವೇ? ಮಸೂದೆ ಕಾನೂನಾಗುವ ಮೊದಲು ಅದರ ವಿಷಯಗಳ ಬಗ್ಗೆ ನ್ಯಾಯಾಲಯಗಳು ಯಾವುದೇ ರೀತಿಯಲ್ಲಿ ನ್ಯಾಯಾಂಗ ತೀರ್ಪು ನೀಡಲು ಅನುಮತಿ ಇದೆಯೇ?
- ಭಾರತದ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಸಾಂವಿಧಾನಿಕ ಅಧಿಕಾರಗಳ ಚಲಾವಣೆ ಮತ್ತು ರಾಷ್ಟ್ರಪತಿ/ರಾಜ್ಯಪಾಲರ ಆದೇಶಗಳನ್ನು ಯಾವುದೇ ರೀತಿಯಲ್ಲಿ ಬದಲಿಸಬಹುದೇ?
- ಸಂವಿಧಾನದ 145(3) ನೇ ವಿಧಿಯ ನಿಬಂಧನೆಯನ್ನು ಗಮನದಲ್ಲಿಟ್ಟುಕೊಂಡು, ಈ ನ್ಯಾಯಾಲಯದ ಯಾವುದೇ ಪೀಠವು ಮುಂದೆ ವಿಚಾರಣೆಯಲ್ಲಿರುವ ವಿಷಯವು ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಕಾನೂನಿನ ಗಣನೀಯ ಪ್ರಶ್ನೆಗಳನ್ನು ಒಳಗೊಂಡಿರುವ ಸ್ವರೂಪದ್ದಾಗಿದೆಯೇ ಎಂದು ನಿರ್ಧರಿಸುವುದು ಮತ್ತು ಅದನ್ನು ಕನಿಷ್ಠ ಐದು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸುವುದು ಕಡ್ಡಾಯವಲ್ಲವೇ?
- ಭಾರತದ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನ ಅಧಿಕಾರಗಳು ಕಾರ್ಯವಿಧಾನ ಕಾನೂನು ಅಥವಾ ಭಾರತದ ಸಂವಿಧಾನದ 142 ನೇ ವಿಧಿಯ ವಿಷಯಗಳಿಗೆ ಸೀಮಿತವಾಗಿವೆಯೇ? ಸಂವಿಧಾನದ ಅಥವಾ ಜಾರಿಯಲ್ಲಿರುವ ಕಾನೂನಿನ ಅಸ್ತಿತ್ವದಲ್ಲಿರುವ ಸಬ್ಸ್ಟಾಂಟಿವ್ ಅಥವಾ ಕಾರ್ಯವಿಧಾನದ ನಿಬಂಧನೆಗಳಿಗೆ ವಿರುದ್ಧವಾದ ಅಥವಾ ಅಸಮಂಜಸವಾದ ನಿರ್ದೇಶನಗಳನ್ನು/ಆದೇಶಗಳನ್ನು ಹೊರಡಿಸುವವರೆಗೆ ವಿಸ್ತರಿಸಲಾಗಿದೆಯೇ?
- ಭಾರತದ ಸಂವಿಧಾನದ 131 ನೇ ವಿಧಿಯ ಅಡಿಯಲ್ಲಿ ಮೊಕದ್ದಮೆ ಹೂಡುವುದನ್ನು ಹೊರತುಪಡಿಸಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿವಾದಗಳನ್ನು ಪರಿಹರಿಸಲು ಸುಪ್ರೀಂ ಕೋರ್ಟ್‌ನ ಯಾವುದೇ ಇತರ ನ್ಯಾಯವ್ಯಾಪ್ತಿಯನ್ನು ಸಂವಿಧಾನವು ನಿಷೇಧಿಸುತ್ತದೆಯೇ?
- ರಾಜ್ಯ ಶಾಸಕಾಂಗವು ಮಾಡಿದ ಕಾನೂನು, ಭಾರತದ ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ನೀಡಲಾದ ರಾಜ್ಯಪಾಲರ ಒಪ್ಪಿಗೆಯಿಲ್ಲದೆ ಜಾರಿಯಲ್ಲಿರುವ ಕಾನೂನೇ?
ರಾಷ್ಟ್ರಪತಿ ಮುಂದಿಟ್ಟಿರುವ 14 ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಐವರು ನ್ಯಾಯಾಧೀಶರ ಸಂವಿಧಾನ ಪೀಠವನ್ನು ರಚಿಸಬಹುದು ಎಂದು ವರದಿಯಾಗಿದೆ. ಆದಾಗ್ಯೂ, ಅಂತಹ ಪೀಠ ರಚನೆಯು ನ್ಯಾಯಾಲಯಕ್ಕೆ ಕಡ್ಡಾಯವಲ್ಲ.
ಏಪ್ರಿಲ್ 8 ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಮೇಲೆ ಕುರಿತು ರಾಜ್ಯಪಾಲರು ತೀರ್ಮಾನ ತೆಗೆದುಕೊಳ್ಳಲು ಒಂದು ಕಾಲಮಿತಿಯನ್ನು ನಿಗದಿಪಡಿಸಿದೆ. ರಾಜ್ಯಪಾಲರು ತಮಗೆ ಮಂಡಿಸಲಾದ ಯಾವುದೇ ಮಸೂದೆಗೆ ಸಂಬಂಧಿಸಿದಂತೆ ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ತಮ್ಮ ವಿವೇಚನೆಯಂತೆ ಮುಂದುವರಿಯುವಂತಿಲ್ಲ, ಮಂತ್ರಿ ಮಂಡಲ ನೀಡುವ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದೆ.
ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿದ ಮಸೂದೆಗಳ ಕುರಿತು ಅವರು ತೀರ್ಮಾನ ತೆಗೆದುಕೊಳ್ಳದಿದ್ದರೆ, ಸರ್ಕಾರ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದಿದೆ.
ರಾಜ್ಯಪಾಲರ ವೈಯಕ್ತಿಕ ಅಸಮಾಧಾನ, ರಾಜಕೀಯ ಲಾಭ ಅಥವಾ ಯಾವುದೇ ಇತರ ಬಾಹ್ಯ ಅಥವಾ ಅಪ್ರಸ್ತುತ ವಿಷಯಗಳಿಗಾಗಿ ಮಸೂದೆಯ ಕುರಿತು ತೀರ್ಮಾನ ತೆಗೆದುಕೊಳ್ಳದೆ ಸುಮ್ಮನಿರುವುದನ್ನು ಸಂವಿಧಾನ ಅನುಮತಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠ ಸ್ಪಷ್ಟವಾಗಿ ಹೇಳಿದೆ.
ಬಿಹಾರ: ತಳ ಸಮುದಾಯಗಳ ‘ಭಯದಿಂದ’ ಮೋದಿ ಜಾತಿ ಜನಗಣತಿ ಘೋಷಣೆ; ರಾಹುಲ್ ಗಾಂಧಿ


