ಖನಿಜ ಸಮೃದ್ದ ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಚಿನ ವಿರುದ್ದ ಅಲ್ಲಿನ ಜನರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಶನಿವಾರ (ಜ.17) ಗ್ರೀನ್‌ಲ್ಯಾಂಡ್ ರಾಜಧಾನಿ ನೂಕ್‌ನಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಬೀದಿಗಳಿದ ಸಾವಿರಾರು ಜನರು, ‘ಗ್ರೀನ್‌ಲ್ಯಾಂಡ್ ಮಾರಾಟಕ್ಕಿಲ್ಲ” ಎಂಬ ಘೋಷಣೆಗಳನ್ನು ಕೂಗುವ ಮೂಲಕ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ. ಇದು ಗ್ರೀನ್‌ಲ್ಯಾಂಡ್ ಇತಿಹಾಸದಲ್ಲೇ ನಡೆದ ಅತಿದೊಡ್ಡ ಪ್ರತಿಭಟನೆ ಎಂದು ಹೇಳಲಾಗುತ್ತಿದೆ.
ಗ್ರೀನ್‌ಲ್ಯಾಂಡ್‌ನ ಪ್ರಧಾನ ಮಂತ್ರಿ ಜೆನ್ಸ್-ಫ್ರೆಡೆರಿಕ್ ನೀಲ್ಸನ್ ಅವರೇ ಸ್ವತಃ ಈ ಪ್ರತಿಭಟನೆಯಲ್ಲಿ ಭಾಗವಹಿಸಿ, ತಮ್ಮ ದೇಶದ ಸ್ವಾಯತ್ತತೆಯನ್ನು ರಕ್ಷಿಸುವ ಭರವಸೆ ನೀಡಿದ್ದಾರೆ.
ಗ್ರೀನ್‌ಲ್ಯಾಂಡ್‌ನ ರಾಜಧಾನಿ ನೂಕ್ ನಗರದ ಜನಸಂಖ್ಯೆ ಸುಮಾರು 20,000 ಆಗಿದ್ದು, ಪ್ರತಿಭಟನೆಯಲ್ಲಿ ಅದರ ನಾಲ್ಕನೇ ಒಂದು ಭಾಗದಷ್ಟು ಜನರು (ಸುಮಾರು 5,000ಕ್ಕೂ ಹೆಚ್ಚು ಜನರು) ಭಾಗವಹಿಸಿದ್ದರು. ಚಳಿ ಮತ್ತು ಮಳೆಯನ್ನೂ ಲೆಕ್ಕಿಸದೆ ಜನರು ಸಾಂಪ್ರದಾಯಿಕ ಇನ್ಯೂಟ್ ಗೀತೆಗಳನ್ನು ಹಾಡುತ್ತಾ ಮೆರವಣಿಗೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನಾಕಾರರು “Make America Go Away” (ಅಮೆರಿಕಾವನ್ನು ದೂರವಿಡಿ) ಎಂದು ಬರೆದ ಕೆಂಪು ಟೋಪಿಗಳನ್ನು ಧರಿಸಿದ್ದರು. ಅಷ್ಟೇ ಅಲ್ಲದೆ, “Yankee Go Home” ಮತ್ತು “Kalaallit Nunaat” (ಗ್ರೀನ್‌ಲ್ಯಾಂಡ್‌ನ ಸ್ಥಳೀಯ ಹೆಸರು) ಎಂಬ ಘೋಷಣೆಗಳು ಮೊಳಗಿವೆ ಎಂದು ವರದಿ ಉಲ್ಲೇಖಿಸಿದೆ.
ಗ್ರೀನ್‌ಲ್ಯಾಂಡ್‌ಗೆ ಬೆಂಬಲ ಸೂಚಿಸಿ ಡೆನ್ಮಾರ್ಕ್‌ನ ರಾಜಧಾನಿ ಕೋಪನ್‌ಹೆಗನ್‌ನಲ್ಲಿ ಮತ್ತು ಡೆನ್ಮಾರ್ಕ್‌ಗೆ ಸೇರಿದ ಇತರ ಸ್ಥಳಗಳಲ್ಲಿ ಜನರು ಮೆರವಣಿಗೆ ಮತ್ತು ರ‍್ಯಾಲಿ ನಡೆಸಿದ್ದಾರೆ. ಕೆನಡಾದಲ್ಲಿರುವ ‘ನುನಾವುಟ್’ ಎಂಬ ಇನ್ಯೂಟ್ ಜನರು (ಗ್ರೀನ್‌ಲ್ಯಾಂಡ್‌ನ ಸ್ಥಳೀಯರಂತೆಯೇ ಇರುವ ಜನಾಂಗ) ಆಡಳಿತ ನಡೆಸುವ ಪ್ರದೇಶದ ರಾಜಧಾನಿಯಲ್ಲಿಯೂ ಸಹ ಗ್ರೀನ್‌ಲ್ಯಾಂಡ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಯುರೋಪ್ ರಾಷ್ಟ್ರಗಳ ಬೆಂಬಲ
ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಫ್ರಾನ್ಸ್, ಜರ್ಮನಿ, ಬ್ರಿಟನ್, ಸ್ವೀಡನ್ ಮತ್ತು ನಾರ್ವೆ ಸೇರಿದಂತೆ ಹಲವು ದೇಶಗಳು ಗ್ರೀನ್‌ಲ್ಯಾಂಡ್‌ನ ಭದ್ರತೆಗಾಗಿ ‘ಆಪರೇಷನ್ ಆರ್ಕ್ಟಿಕ್ ಎಂಡ್ಯೂರೆನ್ಸ್’ ಎಂಬ ಮಿಲಿಟರಿ ಅಭ್ಯಾಸದ ಭಾಗವಾಗಿ ತಮ್ಮ ಸೈನಿಕರನ್ನು ಅಲ್ಲಿಗೆ ಕಳುಹಿಸಿವೆ.
ಪ್ರತಿಭಟನೆಗಳ ನಡುವೆಯೇ, ಗ್ರೀನ್‌ಲ್ಯಾಂಡ್ ಹಸ್ತಾಂತರಕ್ಕೆ ಒಪ್ಪದ ಯುರೋಪಿಯನ್ ರಾಷ್ಟ್ರಗಳ ಮೇಲೆ ಟ್ರಂಪ್ ಅವರು ಫೆಬ್ರವರಿ 1 ರಿಂದ ಶೇ. 10 ರಷ್ಟು ಮತ್ತು ಜೂನ್ 1 ರಿಂದ ಶೇ. 25 ರಷ್ಟು ಆಮದು ಸುಂಕ ಹೇರುವುದಾಗಿ ಘೋಷಿಸಿದ್ದಾರೆ.
ಸಮೀಕ್ಷೆಗಳ ಪ್ರಕಾರ ಗ್ರೀನ್‌ಲ್ಯಾಂಡ್‌ನ ಶೇ. 85 ರಷ್ಟು ಜನರು ಅಮೆರಿಕಾದ ಭಾಗವಾಗಲು ಇಷ್ಟಪಡುತ್ತಿಲ್ಲ. “ನಮ್ಮ ದೇಶವು ಒಂದು ಆಟಿಕೆಯಲ್ಲ, ಇದು ನಮ್ಮ ಮನೆ” ಎಂಬುದು ಅಲ್ಲಿನ ನಾಗರಿಕರ ಒಮ್ಮತದ ಅಭಿಪ್ರಾಯವಾಗಿದೆ.
ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರು ಟ್ರಂಪ್ ಅವರ ಈ ನಡೆಯನ್ನು “ಅಪಾಯಕಾರಿ ಆಟ” ಎಂದು ಕರೆದಿದ್ದು, ಇದು ನ್ಯಾಟೋ ಒಕ್ಕೂಟದ ಅಸ್ತಿತ್ವಕ್ಕೆ ಧಕ್ಕೆ ತರಬಹುದು ಎಂದು ಎಚ್ಚರಿಸಿದ್ದಾರೆ.
ಟ್ರಂಪ್ ಸಂಚಿನ ವಿರುದ್ದದ ಗ್ರೀನ್‌ಲ್ಯಾಂಡ್ ಜನರ ಪ್ರತಿಭಟನೆಯು ಕೇವಲ ಒಂದು ದೇಶದ ವಿಷಯವಾಗಿ ಉಳಿಯದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಜಾಪ್ರಭುತ್ವ ಮತ್ತು ಸ್ವಾಯತ್ತತೆಯ ಹೋರಾಟವಾಗಿ ಬದಲಾಗಿದೆ.


