ಗುಜರಾತಿ ಮಾರವಾಡಿಗಳ ಕೈಯ್ಯಲ್ಲಿ ನಮ್ಮ ರೈತರ ಭೂಮಿಯಿದೆ, ರೈತರು ಬೀದಿಯಲ್ಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ಮಂಗಳವಾರ ಹೇಳಿದರು. ಈ ಹಿಂದೆ ವಿಪಕ್ಷದಲ್ಲಿದ್ದಾಗ ರೈತರ ಹೋರಾಟಗಳಲ್ಲಿ ಭಾಗವಹಿಸಿದ್ದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಆಕ್ರೊಶ ವ್ಯಕ್ತಪಡಿಸಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ‘ಸಂಯುಕ್ತ ಹೋರಾಟ-ಕರ್ನಾಟಕ’ ಆಯೋಜಿಸಿದ್ದ ಜನಾಗ್ರಹ ಸಮಾವೇಶದ ನಿರ್ಣಯವನ್ನು ಮಂಡಿಸಿದ ನಾಗೇಂದ್ರ ಅವರು, ಹೊಸಪೇಟೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಮಾವೇಶ ಪ್ರಾರಂಭ ಆದ ಹೊತ್ತಿನಲ್ಲೆ, ಇಲ್ಲಿ ಕೂಡಾ ಸಮಾವೇಶ ನಡೆಯುತ್ತಿದೆ. ಆದರೆ ಇದು ನೈತಿಕತೆಯುಳ್ಳ ಸಮಾವೇಶ ಎಂದು ಹೇಳಿದರು.
ಚೆನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ 1000ಕ್ಕೂ ಹೆಚ್ಚು ದಿನದಿಂದ ನಡೆಯುತ್ತಿದೆ, ಈ ಹೋರಾಟ ನಮ್ಮ ಎಲ್ಲರ ಅಂತಃಕರಣ ತಟ್ಟಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.
ಎಪ್ರಿಲ್ 26 2023ರಂದು ಡಿಕೆ ಶಿವಕುಮಾರ್ ಅವರು ಏನು ಹೇಳಿದ್ದೀರಿ ಮತ್ತು ಈಗ ಏನು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದ ನಾಗೇಂದ್ರ ಅವರು, ಸಿದ್ದರಾಮಯ್ಯ ಅವರಿಗೂ ನಾವು ಇದೇ ಪ್ರಶ್ನೆ ಕೇಳುತ್ತಿದ್ದೇವೆ ಹೇಳಿದರು. ವಿಪಕ್ಷದಲ್ಲಿ ಇರುವ ಈಗಿನ ಸಚಿವರಾದಿಯಾಗಿ ಎಲ್ಲರೂ ನಮ್ಮ ಜೊತೆ ಬಂದು ಬೀದಿಯಲ್ಲಿ ಕೂತಿದ್ದಿರಿ. ಆದರೆ ಈಗ ರೈತರಿಂದ ಭೂಮಿ ಕಿತ್ತುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದೀರಿ ಎಂದು ಹೇಳಿದರು.
ಕೊಮುವಾದಿಗಳನ್ನು ನಾವು ಹಿಂದೆ, ಮುಂದೆ ಮತ್ತು ಎಂದೆಂದಿಗೂ ವಿರೋಧಿಸುತ್ತೇವೆ. ಆದರೆ ನಾವು ಕಾಂಗ್ರೆಸ್ ಪರ ಅಲ್ಲ. ನಿಜವಾದ ಚಳವಳಿಗಾರರು ಮಾರಾಟ ಆಗಲ್ಲ. ನಾವು ಜನರ ಸದುದ್ದೇಶಕ್ಕೆ ಈ ಸಮಾವೇಶ ಮಾಡುತ್ತಿದ್ದೇವೆ. 42 ಸಂಘಟನೆಗಳ ನಾಯಕರು ಇಲ್ಲಿದ್ದೇವೆ ಎಂದು ಅವರು ಹೇಳಿದರು.
ಕಾರ್ಮಿಕ ಸಂಘಟನೆ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸುಡುವಂತ ಹೋರಾಟವನ್ನು ತಮ್ಮ ಕೆಲಸದ ಸ್ಥಳದಲ್ಲಿ ರಾಜ್ಯದಾದ್ಯಂತ ಕಾರ್ಮಿಕರು ಇಂದು ಮಾಡುತ್ತಿದ್ದಾರೆ ಎಂದು ನೆನಪಿಸಿದರು.
“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತದ್ದು ಮತ್ತು ತರುವಂತಹದ್ದು ರಾಜ್ಯಕ್ಕೆ ಆಗ ಅಗತ್ಯವಿತ್ತು. ಅದಾಗ್ಯೂ, ಕಾಂಗ್ರೆಸ್ ಸರ್ಕಾರಕ್ಕೆ ನಾವು ಬೇಷರತ್ ಬೆಂಬಲ ನೀಡಿದ್ದಲ್ಲ. ಜನಪರವಾಗಿ ಕಾನೂನುಗಳನ್ನು ತರಬೇಕು ಎಂಬ ಷರತ್ತಿನೊಂದಿಗೆ ನಾವು ಬೆಂಬಲ ನೀಡಿದ್ದೆವು” ಎಂದು ಹೇಳಿದರು.
“ರೈತರು ತಾವು ಉತ್ಪಾದನೆ ಮಾಡುವ ಬೆಳೆಗೆ ಸಿಗುವ ಬೆಲೆ ಮಾರಾಟವಾರದ ಬೆಲೆಯ 30ರಿಂದ 50%ಕ್ಕಿಂತಲೂ ಕಡಿಮೆ. ಕಾರ್ಮಿಕರ ವೇತನದ ಪಾಲು 1981-82 ದಲ್ಲಿ ಲಾಭದಲ್ಲಿ ಬರುವ ಪ್ರತಿ 100 ರೂ.ಗಳಲ್ಲಿ 30 ರಿಂದ 32 ರೂ.ಗಳು ಸಿಗುತ್ತಿತ್ತು. ಆದರೆ 2022-23 ರಲ್ಲಿ ಇದು 17 ರೂ. ಆಗಿದೆ. ಅದಾಗ್ಯೂ, ಮಾಲಿಕರಿಗೆ ಈ ಲಾಭದಲ್ಲಿ 50 ರೂ. ಸಿಗುತ್ತಿದೆ” ಎಂದು ಅವರು ಗಮನಸೆಳೆದರು.
”ನಮ್ಮ ಸರ್ಕಾರ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಗುತ್ತಿಗೆ ಆಧಾರದ ಕೆಲಸಗಳಲ್ಲಿ ಕೂಡಾ ಮೀಸಲಾತಿ ನೀಡುತ್ತಿದೆ ಎನ್ನುವ ಸರ್ಕಾರ ಅದೇ ಅಧಿಸೂಚನೆಯಲ್ಲಿ ಈ ಕಾರ್ಮಿಕರಿಗೆ ಪರ್ಮನೆಂಟ್ ಉದ್ಯೋಗ ಕೇಳುವ ಹಕ್ಕು ಇಲ್ಲ ಎಂದು ಹೇಳುತ್ತದೆ. ನಿಮ್ಮ ನವ ಉದಾರೀಕರಣ ನೀತಿಗಳಾದ, ಬಡವರಿಂದ ಕಿತ್ತು ಶ್ರೀಮಂತರಿಗೆ ನೀಡುವ ನೀತಿಯನ್ನು ನಾವು ಒಪ್ಪುವುದಿಲ್ಲ” ಎಂದು ಅವರು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ವೆಂಕಟಾಚಲಯ್ಯ ಮಾತನಾಡಿ, ಕೋಮುವಾದಿಗಳು ಮನೆಗೆ ಹೋಗಬೇಕು ಎಂದು ಜನರು ನಿರ್ಧಾರ ತೆಗೆದುಕೊಂಡಿದ್ದರು. ಆದರೆ ರಾಜ್ಯದ ಈಗಿನ ಸ್ಥಿತಿ ನೋಡಿದರೆ ಈಗ ಬಿಜೆಪಿಗೂ ಕಾಂಗ್ರೆಸ್‌ಗೂ ಏನು ವ್ಯತ್ಯಾಸ ಇದೆ? ಎಂದು ಪ್ರಶ್ನಿಸಿದರು. “ರೈತ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ರಾಜ್ಯ ಕಾಂಗ್ರೆಸ್ ಕೇಂದ್ರದ ಬಿಜೆಪಿ ಗಿಂತ 3 ಪಟ್ಟು ಹೆಚ್ಚು ಭೂಮಿಯನ್ನು ಕಿತ್ತುಕೊಳ್ಳುತ್ತಿವೆ. ಇದಕ್ಕೆ ಕಾರಣ ಡಿಕೆ ಶಿವಕುಮಾರ್, ಉಳಿದವರು ಇದ್ದರೂ ಡಿಕೆ ಶಿವಕುಮಾರ್ ಪಾಲು ಹೆಚ್ಚಿದೆ” ಎಂದು ಅವರು ಆರೋಪಿಸಿದರು.
“ಒಂದು ಕುಟುಂಬಕ್ಕೆ 58 ಎಕರೆ ಭೂಮಿ ಇರಬೇಕು ಎಂಬ ಕಾನೂನಿತ್ತು. ಆದರೆ ಅದಕ್ಕೆ ತಿದ್ದುಪಡಿ ತಂದಿದ್ದು ದೇವೇಗೌಡರರು. ನೈಸ್ ಕಂಪನಿ ಬಳಿ ಅಧೀಕೃತ ಮತ್ತು ಅನಧೀಕೃತವಾಗಿ ಲಕ್ಷ ಎಕರೆಗಿಂತಲೂ ಹೆಚ್ಚಿನ ಭೂಮಿಯಿದೆ. ರೈತರ ಭೂಮಿಯನ್ನು ಕಿತ್ತು ಎಲ್ಲಾ ರಿಯಲ್ ಎಸ್ಟೇಟ್ ಏಜೆಂಟ್‌ಗಳಿಗೆ, ಮಠಾಧೀಶರಿಗೆ, ವಿದೇಶಿ ಕಂಪನಿಗಳಿಗೆ ನೀಡಲಾಗುತ್ತಿದೆ. ನಾವು ಯಾರು ಅಭಿವೃದ್ಧಿಯ ವಿರೋಧಿಗಳು ಅಲ್ಲ. ಆದರೆ ಈ ಅಭಿವೃದ್ಧಿ ಯಾರಿಗಾಗಿ ಮಾಡುತ್ತಿದ್ದಾರೆ ಎಂದು ಗಮನಿಸಬೇಕಾಗುತ್ತದೆ. ಬೆಂಗಳೂರು ಸುತ್ತಮುತ್ತಲಿನ ರೈತರು ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ.” ಎಂದು ಅವರು ಹೇಳಿದರು.
ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳಾದ ಹಿನ್ನಲೆ ಪಕ್ಷವು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೃಹತ್ ಸಾಧನಾ ಸಮಾವೇಶವನ್ನು ಮಂಗಳವಾರ ಆಯೋಜಿಸಿದೆ. ಈ ಸಮಾವೇಶದ ನೈತಿಕತೆಯನ್ನು ಪ್ರಶ್ನಿಸಿ ಸಂಯುಕ್ತ ಹೋರಾಟ – ಕರ್ನಾಟಕ ಜನ ಚಳವಳಿಗಳಿಂದ ಜನಾಗ್ರಹ ಸಮಾವೇಶವನ್ನು ನಡೆಸಿದೆ. ‘ಸಂಯುಕ್ತ ಹೋರಾಟ-ಕರ್ನಾಟಕ’ ರಾಜ್ಯದ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿದೆ. ಗುಜರಾತಿ ಮಾರವಾಡಿಗಳ ಕೈಯ್ಯಲ್ಲಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಭೂ ದಾಹಕ್ಕೆ ಸಿದ್ದರಾಮಯ್ಯ ಸರ್ಕಾರ ಕೂಡಾ ಹೊರತಾಗಿಲ್ಲ: ಕಣ್ಣೀರು ಸುರಿಸಿದ ರೈತ ಕಾರಹಳ್ಳಿ ಶ್ರೀನಿವಾಸ್
ಭೂ ದಾಹಕ್ಕೆ ಸಿದ್ದರಾಮಯ್ಯ ಸರ್ಕಾರ ಕೂಡಾ ಹೊರತಾಗಿಲ್ಲ: ಕಣ್ಣೀರು ಸುರಿಸಿದ ರೈತ ಕಾರಹಳ್ಳಿ ಶ್ರೀನಿವಾಸ್

