“ಸರ್ಕಾರ ಬಿದ್ದೋಗುತ್ತೆ ಅಂತ ಸೋತ ಗಿರಾಕಿಗಳು ಹೇಳುತ್ತಿದ್ದಾರೆ. ಆದರೆ, ನಮ್ಮ ಸರ್ಕಾರ ಐದು ವರ್ಷ ಬಂಡೆ ರೀತಿ ಭದ್ರವಾಗಿರುತ್ತೆ. 2028ರಲ್ಲೂ ನಾವೇ ಗೆದ್ದು ಅಧಿಕಾರಕ್ಕೆ ಬರ್ತೀವಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, “ನೀರಾವರಿಗೆ ನಮ್ಮ ಈ ಸರ್ಕಾರ 25 ಸಾವಿರ ಕೋಟಿ ರೂಪಾಯಿ ಕೊಟ್ಟಿದೆ. ಬೇರೆ ಯಾವ ಸರ್ಕಾರವಾದರೂ ಈ ಮಟ್ಟದ ಅನುದಾನ ಕೊಟ್ಟಿತ್ತಾ? ಎಂದು ಪ್ರಶ್ನಿಸಿದರು.
ಸೋತ ಗಿರಾಕಿಗಳು ಸರ್ಕಾರ ಬಿದ್ದೋಗುತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೂ ಸರಿ ಇಲ್ಲ ಎಂದು ಬುರುಡೆ ಬಿಡುತ್ತಿದ್ದಾರೆ. ನಾನು ಮತ್ತು ಶಿವಕುಮಾರ್ ಇಬ್ಬರೂ ಒಟ್ಟಾಗಿ, ಗಟ್ಟಿಯಾಗಿದ್ದೀವಿ. ನಮ್ಮ ಸರ್ಕಾರವೂ ಐದು ವರ್ಷ ಗ್ಯಾರಂಟಿಯಾಗಿ ಗಟ್ಟಿಯಾಗಿ ಇರುತ್ತದೆ. 2028 ರಲ್ಲೂ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಅಭಿವೃದ್ಧಿಗೆ ಹಣ ಇಲ್ಲ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬುರುಡೆ ಬಿಡುತ್ತಿರುವ ಬಿಜೆಪಿಯವರು, ದಿವಾಳಿ ಆಗಿದ್ದರೆ 25 ಸಾವಿರ ಕೋಟಿ ರೂಪಾಯಿ ಎಲ್ಲಿಂದ ಬಂತು ಎಂದು ನಾಡಿನ ಜನರಿಗೆ ಉತ್ತರಿಸಬೇಕು ಎಂದರು.
ಕೃಷಿ ಪ್ರಗತಿಗಾಗಿ ವರ್ಷಕ್ಕೆ 19 ಸಾವಿರ ಕೋಟಿ ಪಂಪ್ ಸೆಟ್ ಸಬ್ಸಿಡಿಯನ್ನು ರೈತರಿಗೆ ಕೊಟ್ಟಿದ್ದೇವೆ ಎಂದ ಸಿಎಂ, 92 ವರ್ಷಗಳ ಬಳಿಕ ಜೂನ್ ತಿಂಗಳಲ್ಲೇ ಭರ್ತಿ ಆಗಿರುವ ಕೆಅರ್‌ಎಸ್‌ನಲ್ಲಿ ಸ್ಮಾರಕ ನಿರ್ಮಿಸಿ ಎಂದು ಕಾವೇರಿ ನಿಗಮದ ಎಂ.ಡಿಗೆ ಸೂಚನೆ ನೀಡಿದರು.
ಕೆಆರ್‌ಎಸ್‌ನ ಒಟ್ಟು 124 ಅಡಿ ಸಾಮರ್ಥ್ಯದಲ್ಲಿ 120.90 ಅಡಿ ಭರ್ತಿ ಆಗಿದೆ. ಅಣೆಕಟ್ಟೆಗೆ 49 ಟಿಎಂಸಿ ನೀರಿನ ಸಾಮರ್ಥ್ಯವಿದೆ. 193 ವರ್ಷಗಳಲ್ಲಿ 76 ಬಾರಿ ಭರ್ತಿಯಾಗಿದೆ. 2023-24ರಲ್ಲಿ ಬರಗಾಲವಿತ್ತು. ಈ ಕಾರಣಕ್ಕೇ ‘ಸಿದ್ದರಾಮಯ್ಯ ಕಾಲ್ಗುಣ ಚೆನ್ನಾಗಿಲ್ಲ, ಕಾಂಗ್ರೆಸ್ ಸರ್ಕಾರದ ಸರಿಯಿಲ್ಲ” ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಈಗ ಕಳೆದು ಎರಡು ವರ್ಷಗಳಿಂದ ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿ ಆಗುತ್ತಿದೆ. ವಿರೋಧ ಪಕ್ಷಗಳು ಮೂಡಾತ್ಮರು ಈಗ ಏನು ಹೇಳ್ತಾರೆ ಎಂದು ಸಿಎಂ ಅಣಕಿಸಿದರು.
ನಾವು ಈ ಬಾರಿ ಕಾವೇರಿ ಅಭಿವೃದ್ಧಿ ನಿಗಮಕ್ಕೆ 3,000 ಕೋಟಿ ಹಣ ರೂಪಾಯಿ ಕೊಟ್ಟಿದ್ದೇವೆ. ಈಗ ಟೀಕಿಸುತ್ತಿರುವವರು ಅಧಿಕಾರದಲ್ಲಿದ್ದಾಗ ಕಾವೇರಿ ನಿಗಮಕ್ಕೆ ಹಣ ಕೊಟ್ಟಿರಲಿಲ್ಲ ಎಂದು ಎಂದರು.
ಸುಳ್ಳು ಹೇಳುವ ಚಾಳಿಯಲ್ಲಿರುವ ಬಿಜೆಪಿಗೆ ರಾಜ್ಯದ ಜನ ಪೂರ್ಣ ಅಧಿಕಾರವನ್ನೇ ಕೊಟ್ಟಿಲ್ಲ. ಆಪರೇಷನ್ ಕಮಲ ಮಾಡಿ ಎರಡು ಬಾರಿ ಅಧಿಕಾರಕ್ಕೆ ಬಂದರು. ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕಿಕೊಂಡೇ ಅಧಿಕಾರಕ್ಕೆ ಬರಬೇಕು. ಸ್ವಂತ ಶಕ್ತಿಯಿಂದ ಸಾಧ್ಯವೇ ಇಲ್ಲ ಎಂದು ಕಾಲೆಳೆದರು.
ನಾನು ಸುಳ್ಳು ಹೇಳಿದ್ರೆ ಜನರಿಗೆ ಗೊತ್ತಾಗಲ್ವಾ? ಹಾಗಾಗಿ, ಬಿಜೆಪಿ, ಜೆಡಿಎಸ್‌ನವರು ಜನರನ್ನು ದಡ್ಡರೆಂದು ಭಾವಿಸಬಾರದು. ಜನರಿಗೆ ಸುಳ್ಳು ಹೇಳಿ ಹೋಗಬಾರದು ಎಂದರು.
ನಾವು ಅಧಿಕಾರದಲ್ಲಿದ್ದಾಗ ಯಾವಾಗಲಾದರೂ ರೈತರಿಗೆ ಬೀಜ, ಗೊಬ್ಬರಕ್ಕೆ ತೊಂದರೆ ಮಾಡಿದ್ದೇವಾ? ಬೀಜ ಕೇಳಿದವರಿಗೆ ಗೋಲಿಬಾರ್ ಮಾಡಿದ್ದೇವಾ ಎಂದು ಪ್ರಶ್ನಿಸಿದರು.
ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ ಸಿಎಂ, ಡಿಸಿಎಂ
ಕೆಆರ್‌ಎಸ್. ಜಲಾಶಯಕ್ಕೆ ಬಾಗಿನ ಅರ್ಪಿಸಲು ಸೋಮವಾರ ಬೆಂಗಳೂರಿನಿಂದ ಸಿಎಂ, ಡಿಸಿಎಂ ಒಟ್ಟಿಗೆ ಒಂದೇ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಕೈ ಕೈ ಹಿಡಿದುಕೊಂಡು ನಾವಿಬ್ಬರೂ ಒಟ್ಟಿಗೆ ಇದ್ದೇವೆ ಎಂಬ ಸ್ಪಷ್ಟ ಸಂದೇಶ ರವಾನಿಸಿದರು.
ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ನಿರ್ಧಾರ: ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ