ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಸರ್ಕಾರದ ನಗದು ವರ್ಗಾವಣೆ ಯೋಜನೆಯ ಅನುಭವವನ್ನು ಭಾರತದೊಂದಿಗೆ ಹಂಚಿಕೊಳ್ಳುವ ಪ್ರಸ್ತಾಪವನ್ನು ತಿರಸ್ಕರಿಸಿರುವ ಭಾರತವು, ನಮ್ಮ ಕೋವಿಡ್ ಪ್ಯಾಕೇಜ್ ನಿಮ್ಮ ಜಿಡಿಪಿಗಿಂತ ಡೊಡ್ಡದಿದೆ ಎಂದು ಹೇಳಿದೆ.
ಭಾರತದಲ್ಲಿ ಲಾಕ್‌ಡೌನ್ ಸಮಯದಲ್ಲಿ ಜನರು ಬಡತನದಲ್ಲಿ ಹೇಗೆ ಹೋರಾಡುತ್ತಿದ್ದಾರೆ ಎಂಬ ವರದಿಗಳ ನಂತರ ಇಮ್ರಾನ್ ಖಾನ್ ಸರಣಿ ಟ್ವೀಟ್ ಮಾಡಿದ್ದರು. ಪಾಕಿಸ್ತಾನ ತನ್ನ ಯಶಸ್ವಿ ನಗದು ವರ್ಗಾವಣೆ ಕಾರ್ಯಕ್ರಮವನ್ನು ಜಾರಿಗೆ ತಂದ ಅನುಭವವನ್ನು ಹಂಚಿಕೊಳ್ಳಲು ಮುಂದಾದ ಕೆಲವೇ ಗಂಟೆಗಳಲ್ಲಿ ಭಾರತದ ವಿದೇಶಾಂಗ ಸಚಿವಾಲಯ ಅದನ್ನು ನಿರಾಕರಿಸಿದೆ.
“ಪಾಕಿಸ್ತಾನವು ತನ್ನ ಸ್ವಂತ ಜನರಿಗೆ ಹಣ ನೀಡುವ ಬದಲು ದೇಶದ ಹೊರಗಿನ ಬ್ಯಾಂಕ್ ಖಾತೆಗಳಿಗೆ ನಗದು ವರ್ಗಾವಣೆ ಮಾಡುವಲ್ಲಿ ಹೆಸರುವಾಸಿಯಾಗಿದೆ. ಸ್ಪಷ್ಟವಾಗಿ ಇಮ್ರಾನ್ ಖಾನ್ ಅವರಿಗೆ ಹೊಸ ಸಲಹೆಗಾರರು ಮತ್ತು ಉತ್ತಮ ಮಾಹಿತಿಯ ಅಗತ್ಯವಿದೆ” ಎಂದು ಭಾರತೀಯ ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ ಆನ್‌ಲೈನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
“ಅವರ ಸಾಲದ ಸಮಸ್ಯೆ (ಜಿಡಿಪಿಯ ಸುಮಾರು 90 ಪ್ರತಿಶತ) ಮತ್ತು ಸಾಲ ಪುನರ್ರಚನೆಗಾಗಿ ಅವರು ಎಷ್ಟು ಒತ್ತಡ ಹೇರಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಭಾರತವು ಪಾಕಿಸ್ತಾನದ ವಾರ್ಷಿಕ ಜಿಡಿಪಿಗಿಂತ ಅತಿ ಹೆಚ್ಚಿನ ಉತ್ತೇಜಕ ಪ್ಯಾಕೇಜ್ ಘೋಷಿಸಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಉತ್ತಮ ಎಂದು ಅವರು ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ದುಷ್ಪರಿಣಾಮವನ್ನು ಎದುರಿಸಲು ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಪ್ರಮುಖ ಕ್ಷೇತ್ರಗಳಿಗೆ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಿಸಿದ್ದರು.
ಬಡವರ ಮೇಲೆ ಕೋವಿಡ್ -19 ನ ಹೊಡೆತವನ್ನು ಎದುರಿಸಲು ತಮ್ಮ ಸರ್ಕಾರವು ಒಂಬತ್ತು ವಾರಗಳಲ್ಲಿ 12 ಸಾವಿರ ಕೋಟಿ ರೂಗಳನ್ನು ಒಂದು ಕೋಟಿಗೂ ಹೆಚ್ಚು ಕುಟುಂಬಗಳಿಗೆ “ಪಾರದರ್ಶಕ ರೀತಿಯಲ್ಲಿ” ಯಶಸ್ವಿಯಾಗಿ ವರ್ಗಾಯಿಸಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಸಹಾಯವನ್ನು ನೀಡಲು ಮತ್ತು ನಮ್ಮ ಯಶಸ್ವಿ ನಗದು ವರ್ಗಾವಣೆ ಕಾರ್ಯಕ್ರಮವನ್ನು ಹಂಚಿಕೊಳ್ಳಲು ನಾನು ಸಿದ್ಧನಿದ್ದೇನೆ. ಅದರ ವ್ಯಾಪ್ತಿ ಮತ್ತು ಪಾರದರ್ಶಕತೆಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘಿಸಲಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಹೇಳಿದ್ದರು.
ಮತ್ತಷ್ಟು ಸುದ್ದಿಗಳು
ಕೊರೊನಾ ಕಲಿಸಿಕೊಟ್ಟ ಇನ್ನೂ ಒಂದ ಪಾಠ ಏನಪಾ ಅಂದರಾ……
ಉತ್ತರಪ್ರದೇಶ: ತುತ್ತು ಅನ್ನಕ್ಕಾಗಿ ತಾಯಿ-ಹೆಂಡತಿಯ ಮಾಂಗಲ್ಯ ಮಾರಿದ ವಲಸೆ ಕಾರ್ಮಿಕ; ಇದು ಇವನೊಬ್ಬನ ಕಥೆಯಲ್ಲ!


