ಬೆಂಗಳೂರು ‘ನಮ್ಮ ಮೆಟ್ರೋ’ ರೈಲು ಪ್ರಯಾಣಿಕರ ದರ ಗರಿಷ್ಠ 50%ರಷ್ಟು ಏರಿಕೆಯಾಗಿದ್ದು ಸರ್ಕಾರಗಳ ವಿರುದ್ಧ ಸಾರ್ವಜನಿಕರು ಸೇರಿದಂತೆ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು ಎಂಟು ವರ್ಷಗಳ ನಂತರ ದರ ನಿಗದಿ ಸಮಿತಿಯ (ಎಫ್‌ಎಫ್‌ಸಿ) ಶಿಫಾರಸುಗಳ ಆಧಾರದ ಮೇಲೆ ನಮ್ಮ ಮೆಟ್ರೋವನ್ನು ನಿರ್ವಹಿಸುವ ಬಿಎಂಆರ್‌ಸಿಎಲ್ ದರಗಳನ್ನು ಪರಿಷ್ಕರಿಸಿದೆ. ದರ ಪರಿಷ್ಕರಣೆಯ ನಂತರ 60 ರೂ.ಗಳ ಹಿಂದಿನ ದರವೂ ಈಗ 90 ರೂ.ಗೆ ತಲುಪಿದೆ. ಹಿಂಗೆ ಸಹಿಸ್ಕೊಂಡರೆ
ಬೆಂಗಳೂರು ನಮ್ಮ ಮೆಟ್ರೋ ರೈಲು ಸೇವೆಯು ಕೇಂದ್ರ ಮತ್ತು ಕರ್ನಾಟಕ ಸರ್ಕಾರದ ಜಂಟಿ ಉದ್ಯಮವಾಗಿದ್ದು, “ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್” (BMRCL) ಇದನ್ನು ನಿರ್ವಹಿಸುತ್ತದೆ. ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ, ದರ ನಿಗದಿ ಸಮಿತಿ (FFC) ಯ ಶಿಫಾರಸುಗಳ ಆಧಾರದ ಮೇಲೆ BMRCL ಮಂಡಳಿಯು ಪರಿಷ್ಕೃತ ದರ ರಚನೆಯನ್ನು ಅನುಮೋದಿಸಿದೆ.
ಫೆಬ್ರವರಿ 9, 2025 ರಿಂದ, ಗರಿಷ್ಠ ದರವನ್ನು ₹60 ರಿಂದ ₹90ಕ್ಕೆ ಹೆಚ್ಚಿಸಲಾಗಿದೆ. ಈ ದರ ಹೆಚ್ಚಳವು ಬಿಎಂಆರ್‌ಸಿಎಲ್‌ಗೆ ಹೆಚ್ಚುವರಿ ಆದಾಯವನ್ನು ಗಳಿಸುವ ನಿರೀಕ್ಷೆಯಿದ್ದು, ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ನಡುವೆ, ಮೆಟ್ರೋ ದರ ಏರಿಕೆ ವಿರುದ್ಧ ಹೋರಾಟಗಾರರು ಸೇರಿದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಉಭಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಾಮಾಜಿಕ ಹೋರಾಟಗಾರ ನಾಗೇಗೌಡ ಕೀಲಾರ ಅವರು, “ಮೆಟ್ರೊ ದರ ಏರಿಕೆ ವಿರುದ್ಧ ಬೆಂಗಳೂರು ನಾಗರಿಕರು ಬೆಂಗಳೂರು ನಗರಾಬಿವೃದ್ಧಿ ಸಚಿವ ಡಿಕೆ ಶಿವಕುಮಾರ್, ಬೆಂಗಳೂರಿನ 4 ಜನ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಡಾ.ಮಂಜುನಾಥ್ ಮತ್ತು ಶೋಭ, ಜೊತೆಗೆ ಬೆಂಗಳೂರಿನ 28 MLA ಗಳನ್ನು ಹೊಣೆ ಮಾಡಬೇಕು” ಎಂದು ಹೇಳಿದ್ದಾರೆ.
“ಇವರುಗಳ ಕೈಯಲ್ಲಿ ದರ ಏರಿಕೆ ನಿಲ್ಲಿಸಲು ಆಗಲಿಲ್ಲ ಅಂದರೆ ರಾಜೀನಾಮೆ ನೀಡುವಂತೆ ಒತ್ತಾಯಿಸುವುದರ ಜೊತೆಗೆ ಇನ್ನೆರಡು ದಿನಗಳಲ್ಲಿ ರಾಜೀನಾಮೆ ಕೊಡಿಸಬೇಕು. ಅದರಲ್ಲೂ ನಾಲ್ಕು ಜನ ಸಂಸದರು ರಾಜೀನಾಮೆ ಪತ್ರವನ್ನು ತಕ್ಶಣವೇ ಲೋಕಸಬಾ ಸ್ಪಿಕರ್‌ಗೆ ಕಳಿಸಬೇಕು. ಸಂಘಟಿತರಾಗಿ ಬೆಂಗಳೂರಿನ ನಾಗರಿಕರಿಗೆ ಇಷ್ಟು ಮಾಡಿಸಲು ಆಗಲಿಲ್ಲ ಅಂದರೆ ಈ ಜನ್ಮದಲ್ಲಿ ಇವರ ಬೆಲೆ ಏರಿಕೆ ಲೂಟಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
“ನಮ್ಮ ಹಕ್ಕೋತ್ತಾಯ ಈಗ ಇರುವ ಟಿಕೆಟ್ ಬೆಲೆಯನ್ನು ಮುಂದುವರೆಸಿ ಅನ್ನುವುದು ಆಗಿರಬೇಕು. 5-10% ದರ ಏರಿಕೆಗೂ ಒಪ್ಪಬಾರದು. ದರ ಏರಿಕೆ ಅನಿವಾರ್ಯ ಇಲ್ಲ ಮೆಟ್ರೊ ನಷ್ಟ ಅನುಭವಿಸುತ್ತೆ ಅಂದರೆ ಆ ನಷ್ಟವನ್ನು ಒಕ್ಕೂಟ ಸರ್ಕಾರ ಬರಿಸಲಿ” ಕೀಲಾರ ನಾಗೇಗೌಡ ಅವರು ಹೇಳಿದ್ದಾರೆ.
ಪತ್ರಕರ್ತೆ ಮಮತಾ ಎಂ. ಅವರು, “ಮೆಟ್ರೋ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇಶದಲ್ಲೇ ಅತಿ ಹೆಚ್ಚು ದರ ಪಾವತಿ ಮಾಡಬೇಕಾದ ಸ್ಥಿತಿ. ಆದರೆ, ಆಶ್ಚರ್ಯದ ವಿಷಯವೆಂದರೆ ಈ ಬಗ್ಗೆ ಎಲ್ಲೂ ಪ್ರತಿಭಟನೆ, ಆಕ್ಷೇಪದ ದನಿ ಇಲ್ಲದಿರುವುದು. ಕೆಎಸ್‌ಆರ್‌ಟಿಸಿಯಲ್ಲಿ ಹತ್ತು, ಹದಿನೈದು ಪರ್ಸೆಂಟ್ ಟಿಕೆಟ್ ದರ ಏರಿಕೆಯಾದಾಗ ಕೇಳಿಬರುವ ಆಕ್ಷೇಪ ಕೂಡ ಇಲ್ಲಿ ಕಾಣಿಸುತ್ತಿಲ್ಲ. ಇದು ನಗರ ಪ್ರದೇಶಗಳ ಸಮಸ್ಯೆಯೇ? ಅಥವಾ ಜನರ ಬಳಿ ಹಣ ಇಷ್ಟೊಂದು ಹೆಚ್ಚಿದೆಯೇ?…. ಪ್ರತಿಭಟಿಸುವ ಕ್ಷಿಣ ದನಿ ಕೂಡ ಸಾರ್ವಜನಿಕರಿಂದ ಇಲ್ಲವಲ್ಲ…ವಿರೋಧದ ದನಿಗಳು ಕಡಿಮೆಯಾದಷ್ಟು ಬಂಡವಾಳಶಾಹಿಗಳು, ಸರ್ಕಾರಗಳ ದರ್ಪ ಹೆಚ್ಚಾಗುತ್ತದೆ ಎಂಬುದನ್ನು ನಮ್ಮ ಸಮಾಜ ಎಂದಿಗೂ ಮರೆಯಬಾರದು” ಎಂದು ಅವರು ಹೇಳಿದ್ದಾರೆ.
“ಬೀದಿಗಿಳಿದು ಹೋರಾಡಲು ಆಗದಿದ್ದರೇ ಕನಿಷ್ಟ ಸಾಮಾಜಿಕ ಜಾಲತಾಣಗಳಲ್ಲಿಯಾದರೂ ಈ ಬಗ್ಗೆ ವಿರೋಧ ಕೇಳಿಬರಲಿ. ಸರ್ಕಾರ ಯಾವುದಾದರೂ ಆಗಿರಲಿ ನಮ್ಮ ಮೇಲಾಗುವ ದೌರ್ಜನ್ಯಗಳನ್ನು ಒಕ್ಕೂರಲಿನಿಂದ ಪ್ರತಿಭಟಿಸಬೇಕಿರುವುದು ನಮ್ಮ ಕರ್ತವ್ಯ” ಎಂದು ಮಮತಾ ಅವರು ಹೇಳಿದ್ದಾರೆ.
ಸಾಮಾಜಿಕ ಹೋರಾಟಗಾರ ರಾಜಶೇಖರ್ ಅಕ್ಕಿ ಅವರು, “ನನ್ನ ಮನೆಯು ಕಚೇರಿಯಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದೆ. ಈಗ ಮೆಟ್ರೊ ಬಳಿಸಿದರೆ 92 ರೂ. ಆಗುತ್ತೆ, ಸ್ಕೂಟರ್ ಬಳಸಿದರೆ ಗರಿಷ್ಟ 50 ರೂ. ʼಏಯ್ ಜನರೇ, ಮೆಟ್ರೋ ಬಿಡಿ. ಸ್ಕೂಟರ್, ಕಾರ್ ಬಳಸಿ,ʼ ಎಂದು ಸರಕಾರ ನಮಗೆ ಹೇಳ್ತಿದೆ. ಇದನ್ನು ಹಿಂಗೆ ಸಹಿಸ್ಕೊಂಡರೆ, ನಾವು ಸತ್ತ ಜನ ಎಂದು ಪ್ರೂವ್ ಮಾಡದ್ಹಂಗೆ.” ಎಂದು ಹೇಳಿದ್ದಾರೆ.
ಪತ್ರಕರ್ತ ಮುತ್ತರಾಜು ಅವರು, “ದೇಶದಲ್ಲಿಯೇ ದುಬಾರಿ ಯಾವ ಕಾರಣಕ್ಕೆ? ಜನಸಾಮಾನ್ಯರಿಂದ ಸುಲಿಯುವ ಸರ್ಕಾರ ಜನವಿರೋಧಿ ಸರ್ಕಾರವೇ ಆಗಿರುತ್ತದೆ. ಈ ಜನ ವಿರೋಧಿ ಸರ್ಕಾರ ಕೂಡಲೇ ಮೆಟ್ರೊ ದರ ಹೆಚ್ಚಳವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸೋಣ.. ಇದರ ವಿರುದ್ದ ಪ್ರತಿಭಟಿಸೋಣ” ಎಂದು ಹೇಳಿದ್ದಾರೆ.
ವರುಣ್ ಅವರು, “ಮೆಟ್ರೋ ದರ ಹೇರಿಕೆ ಮಾಡಿದ್ದು ಯಾರು? ಮೊದಲಿಗೆ ನಮ್ಮ ಮೆಟ್ರೋ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಪ್ರಾಜೆಕ್ಟ್. ಇದಕ್ಕೆ M.D. (Managing Director) ಅವರನ್ನು ನೇಮಕ ಮಾಡೋದು ರಾಜ್ಯ ಸರ್ಕಾರ ಮತ್ತು MD ರಿಪೋರ್ಟ್ ಮಾಡಿಕೊಳ್ಳಬೇಕಿರೋದು ರಾಜ್ಯದ ಮುಖ್ಯಮಂತ್ರಿ ಅವರಿಗೆ. ಕೆಲ ತಿಂಗಳ ಹಿಂದೆ ರಾಜ್ಯ ಸರ್ಕಾರ ಟಿಕೆಟ್ ದರ ಏರಿಸಬೇಕು ಅಂತ ಕೇಂದ್ರದ ಅಧೀನದಲ್ಲಿರುವ ಮೆಟ್ರೋ ಸಮಿತಿಗೆ ಶಿಫಾರಸ್ಸು ಮಾಡಿದೆ. ಅದಕ್ಕೆ ಈಗ ಕೇಂದ್ರ ಒಪ್ಪಿ ಸಮಿತಿಗೆ ಕಳುಹಿಸಿದೆ ಮತ್ತು ಸಮಿತಿ ಹೊಸ ದರವನ್ನು ಜಾರಿಗೆ ತಂದಿದೆ. ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸೋದು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಈ ಜನ ವಿರೋಧಿ ಹೊಸ ದರದ ವಿರುದ್ಧ ಮಾತಾಡಿ.” ಎಂದು ಹೇಳಿದ್ದಾರೆ.
“ಹೋರಾಟಗಾರ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಅವರು, “ಸಾರ್ವಜನಿಕ ಸೇವೆಗಳನ್ನು ಹೆಚ್ಚು ಹೆಚ್ಚು ಬಳಸಿ ಅಂಥ ಪುಕ್ಸಟ್ಟೆ ಭಾಷಣ ಹೊಡೆಯುವ ಅಯೋಗ್ಯರು ಈ ರೀತಿ ದರ ಏರಿಸಿದರೆ ಬಡವರ ಓಡಾಡೋದು ಹೇಗೆ..? ರಾಜ್ಯ ಸರ್ಕಾರನೋ, ಕೇಂದ್ರ ಸರ್ಕಾರನೋ ಯಾವಾನಾದರೂ ಆಗಲಿ ದರ ಇಳಿಸಲೇಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂಓದಿ: ಎಎಪಿ-ಕಾಂಗ್ರೆಸ್ ಪರಸ್ಪರ ಕಿತ್ತಾಟ ಮುಂದುವರಿಸುವುದಾದರೆ ಇಂಡಿಯಾ ಒಕ್ಕೂಟದ ಅಗತ್ಯವೇನಿದೆ? ಶಿವಸೇನೆ (ಯುಬಿಟಿ) ಕಿಡಿ
ಎಎಪಿ-ಕಾಂಗ್ರೆಸ್ ಪರಸ್ಪರ ಕಿತ್ತಾಟ ಮುಂದುವರಿಸುವುದಾದರೆ ಇಂಡಿಯಾ ಒಕ್ಕೂಟದ ಅಗತ್ಯವೇನಿದೆ? ಶಿವಸೇನೆ (ಯುಬಿಟಿ) ಕಿಡಿ


