ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ‘ಹೊರ ರಾಜ್ಯಗಳಿಗೆ ವಿದ್ಯಾರ್ಥಿಗಳ ಭೇಟಿ’ ಯೋಜನೆಯ ಅನ್ವಯ ಪ್ರವಾಸಕ್ಕೆ ‘ಹಿಂದಿ ಭಾಷೆ’ ಬಲ್ಲ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಎಂಬ ಶಿಕ್ಷಣ ಇಲಾಖೆ ಷರತ್ತಿಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಕನ್ನಡಕ್ಕೆ ಬಗೆದಿರುವ ಘೋರ ದ್ರೋಹ ಎಂದು ಕಿಡಿಕಾರಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕರು, ಪದವಿಪೂರ್ವ ಕಾಲೇಜುಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಹಿಂದಿ ಬಲ್ಲ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ ಎಂಬ ವಿಷಯದ ಕುರಿತು ವಿವಾದ ಏರ್ಪಟ್ಟಿದೆ.

ಈ ಕುರಿತು ಪ್ರತಿಕ್ರಿಯಿಸಿದರು ಮಾಜಿ ಸಿಎಂ, “ಒಂದು ಭಾರತ, ಒಂದು ಭಾಷೆ’ಯ ಹುನ್ನಾರ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು; ಶಾಲಾ ಮಕ್ಕಳ ಪ್ರವಾಸದಲ್ಲಿಯೂ ಕನ್ನಡ ವಿದ್ಯಾರ್ಥಿಗಳನ್ನು ಕಡೆಗಣಿಸಿ ಕನ್ನಡವನ್ನು ಹತ್ತಿಕ್ಕುವ ಹೀನಕೃತ್ಯ ಎಸಗುತ್ತಿವೆ. ಇದು ಅಕ್ಷಮ್ಯ ಮತ್ತು ಖಂಡನೀಯ” ಎಂದು ಟ್ವೀಟ್ ಮಾಡಿದ್ದಾರೆ.
ಈ ಆಘಾತಕಾರಿ ಸುದ್ದಿ ನನಗೆ ತೀವ್ರ ಕಳವಳ ಉಂಟು ಮಾಡಿದೆ. ಹಿಂದಿ ಮಾತನಾಡುವ ವಿದ್ಯಾರ್ಥಿಗಳನ್ನು ಮಾತ್ರ ಪ್ರವಾಸಕ್ಕೆ ಆಯ್ಕೆ ಮಾಡುವಂತೆ ಬೆಂಗಳೂರು ಡಿಡಿಪಿಐ ಆದೇಶ ನೀಡಿರುವುದು ಕನ್ನಡಕ್ಕೆ ಬಗೆದಿರುವ ಘೋರ ದ್ರೋಹ. ಇಂಥ ಕರಾಳ ಆದೇಶಕ್ಕೆ ರಾಜ್ಯ ಬಿಜೆಪಿ ಸರಕಾರ ಮತ್ತು ಶಿಕ್ಷಣ ಸಚಿವರೇ ನೇರ ಹೊಣೆ. ಸರಕಾರಕ್ಕೆ ಗೊತ್ತಿಲ್ಲದೆಯೇ ಇಂಥ ಆದೇಶ ಬರಲು ಸಾಧ್ಯವೇ? ತಿಳಿಗೇಡಿ ಆಡಳಿತಕ್ಕೆ ಹಿಡಿದ ಕನ್ನಡಿ ಇದು ಎಂದು ಎಚ್‌ಡಿಕೆ ಹೇಳಿದ್ದಾರೆ.
'ಒಂದು ಭಾರತ, ಒಂದು ಭಾಷೆ'ಯ ಹುನ್ನಾರ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು; ಶಾಲಾ ಮಕ್ಕಳ ಪ್ರವಾಸದಲ್ಲಿಯೂ ಕನ್ನಡ ವಿದ್ಯಾರ್ಥಿಗಳನ್ನು ಕಡೆಗಣಿಸಿ ಕನ್ನಡವನ್ನು ಹತ್ತಿಕ್ಕುವ ಹೀನಕೃತ್ಯ ಎಸಗುತ್ತಿವೆ. ಇದು ಅಕ್ಷಮ್ಯ ಮತ್ತು ಖಂಡನೀಯ.1/7
— H D Kumaraswamy (@hd_kumaraswamy) June 15, 2022
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರಗಳು ಅಧಿಕಾರಕ್ಕೆ ಬಂದ ಮೇಲೆ ಕನ್ನಡ ಮತ್ತು ಕರ್ನಾಟಕದ ಮೇಲೆ ದಬ್ಬಾಳಿಕೆ ಹೆಚ್ಚುತ್ತಲೇ ಇದೆ. ಕನ್ನಡವನ್ನೇ ಮೂಲೋತ್ಪಾಟನೆ ಮಾಡಿ, ಕನ್ನಡ ಅಸ್ಮಿತೆಯನ್ನೇ ಕಣ್ಮರೆಗೊಳಿಸುವ ಕಿರಾತಕ ಹುನ್ನಾರ ಇದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ, ಕರ್ನಾಟಕ ಎರಡೂ ಕಟುಕರ ಕೈಯ್ಯಲ್ಲೇ ಸಿಕ್ಕಿಬಿದ್ದಿವೆ. ಹಿಂದಿ ಪೋಷಿತ ಆ ಕಬಂಧ ಸಂಕೋಲೆಗಳಿಂದ ನಮ್ಮ ಕನ್ನಡ, ಕರ್ನಾಟಕವನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ. ಕೂಡಲೇ ಇಂಥ ದ್ರೋಹದ ಆದೇಶ ನೀಡಿದ ಅಧಿಕಾರಿಯನ್ನು ಕಿತ್ತೊಗೆಯಬೇಕು ಮತ್ತು ಆ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಪ್ರವಾಸಕ್ಕೆ ಕನ್ನಡ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
“ಈ ಬಗ್ಗೆ ನಮ್ಮ ಸಂಸದರ ಅಭಿಪ್ರಾಯ ಕೇಳಬೇಕು. ಅವರು ಹಿಂದಿ ಹೇರಿಕೆ ಬಗ್ಗೆ ಮಾತನಾಡುವುದೇ ಇಲ್ಲ. ನಾನು ಈಗಾಗಲೇ ಈ ಯೋಜನೆಯ ನಿಯಮದ ಬಗ್ಗೆ ವಿರೋಧ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಾಗಿದೆ. ಆಜಾದಿ ಕಾ ಅಮೃತ ಮಹೋತ್ಸವ್ ಅಂತ ಯಾಕೆ ಕರೆಯುತ್ತೀರಿ, ಕನ್ನಡದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಎಂದು ಕರೆಯಿರಿ ಎಂದು ಹೇಳಿದ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮಾತ್ರ ಹಾಗೆ ಬಳಸುತ್ತಿದ್ದಾರೆ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಒಕ್ಕೂಟ ಸರ್ಕಾರದ ಯೋಜನೆ: ‘ಹಿಂದಿ’ ಮಾತನಾಡುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ ಭಾಗ್ಯ!


