ಜೂನ್ 13 ರಂದು ಇಸ್ರೇಲ್ ತನ್ನ ದಾಳಿಯನ್ನು ಪ್ರಾರಂಭಿಸಿದ ನಂತರ ದೇಶದಲ್ಲಿ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 3000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ ಎಂದು ಶನಿವಾರ ಅಜ್‌ಜಝೀರಾ ವರದಿ ಮಾಡಿದೆ. ಇಸ್ರೇಲ್‌ನ “ಆಕ್ರಮಣ” ಕ್ಕೆ ಅಮೆರಿಕ ಸೇರಿಕೊಂಡರೆ ಅದು “ಎಲ್ಲರಿಗೂ ತುಂಬಾ ಅಪಾಯಕಾರಿ” ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ. 9 ದಿನಗಳ ಇಸ್ರೇಲ್
ಇರಾನ್‌ನ ಆರೋಗ್ಯ ಸಚಿವಾಲಯದ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಹೊಸೈನ್ ಕೆರ್ಮನ್‌ಪೋರ್, ದೇಶದ ಮೇಲೆ ಇಸ್ರೇಲಿ ನಡೆಸಿದ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆಯ ಬಗ್ಗೆ ಮಾಹಿತಿ ನಿಡಿದ್ದಾರೆ.
ಹೊಸೈನ್ ಸಾಮಾಜಿಕ ಮಾಧ್ಯಮದಲ್ಲಿ ನೀಡಿದ ಹೇಳಿಕೆಯಲ್ಲಿ, ಒಂಬತ್ತು ದಿನಗಳ ದಾಳಿಯಲ್ಲಿ 54 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 400 ಕ್ಕೂ ಹೆಚ್ಚು ಇರಾನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು 3,056 ಇತರರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ನಾಗರಿಕರು ಹೆಚ್ಚಿನ ಸಾವುನೋವುಗಳಿಗೆ ಒಳಪಟ್ಟಿದ್ದಾರೆ ಎಂದು ಹೊಸೈನ್ ಹೇಳಿದ್ದಾರೆ.
“ಗಾಯಗೊಂಡವರಲ್ಲಿ 2,220 ಜನರಿಗೆ ಆರೋಗ್ಯ ಸಚಿವಾಲಯದ ಆಸ್ಪತ್ರೆಗಳಿಂದ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಆದರೆ 232 ಜನರಿಗೆ ದಾಳಿಯ ಸ್ಥಳದಲ್ಲಿ ಹೊರರೋಗಿ ಆರೈಕೆ ನೀಡಲಾಗಿದೆ. ಈ ಅವಧಿಯಲ್ಲಿ, ದೇಶಾದ್ಯಂತ ನಮ್ಮ ಸಮರ್ಪಿತ ವೈದ್ಯಕೀಯ ತಂಡಗಳು ಗಾಯಾಳುಗಳಿಗೆ 457 ಶಸ್ತ್ರಚಿಕಿತ್ಸೆಗಳನ್ನು ಮಾಡಿವೆ.” ಎಂದು ಅವರು ಹೇಳಿದ್ದಾರೆ.
ಈ ನಡುವೆ, ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ನಿರ್ಮಿಸುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅಮೆರಿಕದ ಗುಪ್ತಚರ ಇಲಾಖೆಯ ಹೇಳಿಕೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧಿಸಿದ್ದಾರೆ. ಈ ಹೇಳಿಕೆ ತಪ್ಪು ಎಂದು ಟ್ರಂಪ್ ತಮ್ಮ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರನ್ನು ಬಹಿರಂಗವಾಗಿ ಖಂಡಿಸಿದ್ದಾರೆ.
ಮತ್ತೊಂದೆಡೆ, ಟೆಹ್ರಾನ್‌ನ ಪರಮಾಣು ಕಾರ್ಯಕ್ರಮವನ್ನು ನಾಶ ಮಾಡುವವರೆಗೆ ಇರಾನ್ ಮೇಲಿನ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಶುಕ್ರವಾರ ಪ್ರತಿಜ್ಞೆ ಮಾಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಈ ಹೇಳಿಕೆ ನೀಡಲಾಗಿದೆ ಎಂದು ವರದಿ ಹೇಳಿದೆ.
“ನಮ್ಮ ಮನೆಗಳು, ನಮ್ಮ ಕುಟುಂಬಗಳು ಮತ್ತು ನಮ್ಮ ಮಕ್ಕಳಿಗೆ ಬೆದರಿಕೆಯಿದ್ದರೂ, ನಾವು ದಾಳಿ ನಿಲ್ಲಿಸುವುದಿಲ್ಲ. ಇರಾನ್‌ನ ಪರಮಾಣು ಬೆದರಿಕೆಯನ್ನು ನಾಶ ಮಾಡುವವರೆಗೆ, ಅದರ ಯುದ್ಧ ಯಂತ್ರವನ್ನು ನಿಶ್ಯಸ್ತ್ರಗೊಳಿಸುವವರೆಗೆ, ನಮ್ಮ ಜನರು ಮತ್ತು ನಿಮ್ಮ ಜನರು ಸುರಕ್ಷಿತವಾಗಿರುವರೆಗೆ ದಾಳಿ ನಿಲ್ಲಿಸುವುದಿಲ್ಲ” ಎಂದು ಇಸ್ರೇಲಿ ವಿಶ್ವಸಂಸ್ಥೆಯ ರಾಯಭಾರಿ ಡ್ಯಾನಿ ಡ್ಯಾನನ್ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಇರಾನಿನ ರಾಯಭಾರಿ ಅಮೀರ್ ಸಯೀದ್ ಇರಾವನಿ, ಇಸ್ರೇಲಿ ದಾಳಿಗಳನ್ನು ನಿಲ್ಲಿಸಲು ಭದ್ರತಾ ಮಂಡಳಿಯು ಕ್ರಮ ಕೈಗೊಳ್ಳಬೇಕೆಂದು ಈ ವೇಳೆ ಒತ್ತಾಯಿಸಿದ್ದಾರೆ. “ಈ ದಾಳಿಯನ್ನು ಇಸ್ರೇಲ್ ಎಷ್ಟು ದಿನಗಳವರೆಗೆ ಮುಂದುವರಿಸುತ್ತದೆ ಎಂದು ಸ್ಪಷ್ಟವಾಗಿ ಘೋಷಿಸಿದೆ. ಅಮೆರಿಕ ಈ ಯುದ್ಧಕ್ಕೆ ಸೇರುವ ಸಾಧ್ಯತೆಯಿದೆ ಎಂಬ ವಿಶ್ವಾಸಾರ್ಹ ವರದಿಯ ಬಗ್ಗೆ ನಮಗೆ ಎಚ್ಚರಿಕೆ ಬಂದಿದೆ” ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಅಮೆರಿಕ ಭಾಗಿಯಾಗುತ್ತದೆಯೇ ಅಥವಾ ಇಲ್ಲವೆ ಎಂಬುವುದನ್ನು ಎರಡು ವಾರಗಳಲ್ಲಿ ನಿರ್ಧರಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ ಎಂದು ಅವರ ಕಚೇರಿ ಹೇಳಿತ್ತು.
ಇರಾನ್ ಮೇಲೆ ಇಸ್ರೇಲಿ ಮಿಲಿಟರಿ ನಡೆಸುತ್ತಿರುವ ದಾಳಿಗೆ ಅಮೆರಿಕ ಸೇರಿಕೊಳ್ಳಲಿದೆ ಎಂಬ ಊಹಾಪೋಹಗಳ ನಡುವೆ ಈ ಹೇಳಿಕೆಗಳು ಬಂದಿವೆ. ವಾಷಿಂಗ್ಟನ್ ಇಸ್ರೇಲ್‌ನ ಮಿತ್ರ ರಾಷ್ಟ್ರವಾಗಿದ್ದು, ದೇಶದ ಭದ್ರತೆಯ ಖಾತರಿದಾರನಾಗಿ ಕಾರ್ಯನಿರ್ವಹಿಸುತ್ತದೆ. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸದಂತೆ ನೋಡಿಕೊಳ್ಳುವುದು ಟ್ರಂಪ್ ಅವರ ಆದ್ಯತೆಯಾಗಿತ್ತು ಎಂದು ಶ್ವೇತಭವನ ತಿಳಿಸಿದೆ.
ಇಸ್ರೇಲ್ ದಾಳಿಗಳು ನಿಂತ ನಂತರವೇ ರಾಜತಾಂತ್ರಿಕತೆಯನ್ನು ಪರಿಗಣಿಸಲು ಸಿದ್ಧ: ಇರಾನ್
ಇಸ್ರೇಲ್ ಆಕ್ರಮಣಶೀಲತೆ ನಿಲ್ಲಿಸಿದ ನಂತರವೇ ಸಂಘರ್ಷವನ್ನು ಕೊನೆಗೊಳಿಸಲು ರಾಜತಾಂತ್ರಿಕತೆಯನ್ನು ಪರಿಗಣಿಸಲು ಸಿದ್ಧ ಎಂದು ಇರಾನ್ ಹೇಳಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಶುಕ್ರವಾರ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ಯುರೋಪಿಯನ್ ವಿದೇಶಾಂಗ ಸಚಿವರೊಂದಿಗೆ ತಮ್ಮ ದೇಶದ ಪರಮಾಣು ಕಾರ್ಯಕ್ರಮದ ಕುರಿತು ಮಾತನಾಡಿದ ನಂತರ ಈ ಹೇಳಿಕೆ ನೀಡಿದ್ದಾರೆ.
“ಆಕ್ರಮಣಶೀಲತೆಯನ್ನು ನಿಲ್ಲಿಸಿದ ನಂತರ ಮತ್ತು ಆಕ್ರಮಣಕಾರನನ್ನು ಮಾಡಿದ ಅಪರಾಧಗಳಿಗೆ ಹೊಣೆಗಾರರನ್ನಾಗಿ ಮಾಡಿದ ನಂತರ ಇರಾನ್ ಮತ್ತೊಮ್ಮೆ ರಾಜತಾಂತ್ರಿಕತೆಯನ್ನು ಪರಿಗಣಿಸಲು ಸಿದ್ಧವಾಗಿದೆ” ಎಂದು ಅರಾಘ್ಚಿ ವರದಿಗಾರರಿಗೆ ತಿಳಿಸಿದ್ದಾರೆ.
“[ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಜರ್ಮನಿ ಮತ್ತು ಯುರೋಪಿಯನ್ ಒಕ್ಕೂಟ] ಜೊತೆ ಚರ್ಚೆಯ ಮುಂದುವರಿಕೆಯನ್ನು ನಾವು ಬೆಂಬಲಿಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಮತ್ತೆ ಭೇಟಿಯಾಗಲು ನಮ್ಮ ಸಿದ್ಧತೆಯನ್ನು ವ್ಯಕ್ತಪಡಿಸುತ್ತೇವೆ.” ಎಂದು ಅವರು ಹೇಳಿದ್ದಾರೆ. ಇಸ್ರೇಲ್ ಮತ್ತು ಇರಾನ್ ಗುಂಡಿನ ಚಕಮಕಿ ಮುಂದುವರಿದಂತೆ ಈ ಬೆಳವಣಿಗೆಗಳು ಸಂಭವಿಸಿದವು.
ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಸುತ್ತಿನ ಸಂಘರ್ಷ ಜೂನ್ 13 ರಂದು ಪ್ರಾರಂಭವಾಯಿತು. ಇಸ್ರೇಲ್ ಸೇನೆಯು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ಉದ್ದೇಶದಿಂದ ಇರಾನ್‌ನಲ್ಲಿ ಪರಮಾಣು ಗುರಿಗಳೆಂದು ಹೇಳಿಕೊಂಡ ಸ್ಥಳಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ಮಾಡಿತು. ಇದಕ್ಕೆ ಪ್ರತಿಯಾಗಿ ಇರಾನ್ ಸೇನೆಯು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ನಿರಂತರ ದಾಳಿಗಳು ಈ ಪ್ರದೇಶದಲ್ಲಿ ವ್ಯಾಪಕ ಸಂಘರ್ಷದ ಆತಂಕಗಳಿಗೆ ಕಾರಣವಾಗಿವೆ. 9 ದಿನಗಳ ಇಸ್ರೇಲ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗಾಝಾ, ಇರಾನ್ ವಿಷಯದಲ್ಲಿ ಭಾರತದ ಮೌನವು ಕಳವಳಕಾರಿಯಾಗಿದೆ: ಸೋನಿಯಾ ಗಾಂಧಿ
ಗಾಝಾ, ಇರಾನ್ ವಿಷಯದಲ್ಲಿ ಭಾರತದ ಮೌನವು ಕಳವಳಕಾರಿಯಾಗಿದೆ: ಸೋನಿಯಾ ಗಾಂಧಿ

