ಅಪಾಯಕಾರಿ ಪ್ರಯಾಣ ಮತ್ತು ಗಡಿ ದಾಟಲು ಪ್ರಯತ್ನಿಸುತ್ತಿರುವವರ ಸಾವಿನ ಸರಣಿಯ ಹೊರತಾಗಿಯೂ, ಅಕ್ರಮವಾಗಿ ಯುಎಸ್‌ಗೆ ಪ್ರವೇಶಿಸಲು ಯತ್ನಿಸುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ 1 ಲಕ್ಷದಷ್ಟು ಭಾರತೀಯರು ಅಕ್ರಮ ಪ್ರವೇಶಿಕ್ಕೆ ಯತ್ನಿಸಿ ಬಂಧನಕ್ಕೊಳಗಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಯುಎಸ್ ಆರ್ಥಿಕ ವರ್ಷ-2024ರಲ್ಲಿ ಅಂದರೆ, ಅಕ್ಟೋಬರ್ 1,2023 ರಿಂದ ಸೆಪ್ಟೆಂಬರ್ 30, 2024 ರವರೆಗೆ 29 ಲಕ್ಷ ಅಕ್ರಮ ವಲಸಿಗರು ಮೆಕ್ಸಿಕೋ ಮತ್ತು ಕೆನಡಾ ಮೂಲಕ ದೇಶ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಇವರಲ್ಲಿ ಭಾರತೀಯರ ಸಂಖ್ಯೆ 90,415 ಎಂದು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಯುಎಸ್-ಸಿಬಿಪಿ) ಡೇಟಾ ತೋರಿಸಿದೆ.
ಒಟ್ಟು 90,415 ಭಾರತೀಯ ಅಕ್ರಮ ವಲಸಿಗರಲ್ಲಿ ಶೇ. 50ರಷ್ಟು ಜನರು ಗುಜರಾತ್ ಮೂಲದವರು ಎಂದು ಅಕ್ರಮ ವಲಸೆಯನ್ನು ಪತ್ತೆ ಹಚ್ಚುವ ಭಾರತೀಯ ಏಜೆನ್ಸಿಗಳ ಮೂಲಗಳು ತಿಳಿಸಿದೆ. ಪ್ರತಿ ಗಂಟೆಗೆ 10 ಭಾರತೀಯರನ್ನು ಬಂಧಿಸಲಾಗಿದೆ ಎಂದೂ ಕೂಡ ಹೇಳಬಹುದು. ಉತ್ತರದಲ್ಲಿ ಕೆನಡಾದೊಂದಿಗಿನ ಯುಎಸ್ ಗಡಿಯಲ್ಲಿ 43,764 ಜನರನ್ನು ಒಂದು ವರ್ಷದ ಅವಧಿಯಲ್ಲಿ ಬಂಧಿಸಲಾಗಿದೆ. ಇದು ಇಲ್ಲಿಯವರೆಗೆ ಈ ಗಡಿಯಲ್ಲಿ ಅತಿ ಹೆಚ್ಚು ಭಾರತೀಯರನ್ನು ಸೆರೆಹಿಡಿದಿರುವುದಾಗಿದೆ.
ಯುಎಸ್-ಸಿಬಿಪಿ ಡೇಟಾವು ಕಳೆದ ವರ್ಷಕ್ಕೆ ಹೋಲಿಸಿದರೆ ಯುಎಸ್‌ಗೆ ಪ್ರವೇಶಿಸುವಾಗ ಸಿಕ್ಕಿಬಿದ್ದ ಒಟ್ಟು ಅಕ್ರಮ ವಲಸಿಗರು ಮತ್ತು ಭಾರತೀಯರ ಸಂಖ್ಯೆಯಲ್ಲಿ ಕುಸಿತವನ್ನು ತೋರಿಸಿದೆ. ಅಲ್ಲದೆ, ಮೆಕ್ಸಿಕೋ ಮೂಲಕ ಪ್ರವೇಶಿಸುವ ಭಾರತೀಯ ವಲಸಿಗರ ಸಂಖ್ಯೆಯೂ ಕಡಿಮೆಯಾಗಿರುವುದನ್ನು ಹೇಳಿದೆ.
2023ರ ಆರ್ಥಿಕ ವರ್ಷದಲ್ಲಿ ಯುಎಸ್‌ಗೆ ಪ್ರವೇಶಿಸುವಾಗ ಸಿಕ್ಕಿಬಿದ್ದ ಒಟ್ಟಾರೆ ಅಕ್ರಮ ವಲಸಿಗರ ಸಂಖ್ಯೆ 32 ಲಕ್ಷ ಇತ್ತು ಅದು 2024ರಲ್ಲಿ 29 ಲಕ್ಷಕ್ಕೆ ಕುಸಿದಿದೆ. 2023ರಲ್ಲಿ ಬಂಧಿತರಾದ ಒಟ್ಟು ಭಾರತೀಯರ ಸಂಖ್ಯೆ 96,917 ಇತ್ತು. ಅದು 2024ಕ್ಕೆ 94,415ಕ್ಕೆ ಇಳಿದಿದೆ. ಮೆಕ್ಸಿಕೋ ಗಡಿಯ ಸಿಕ್ಕಿಬಿದ್ದ ಭಾರತೀಯರ ಸಂಖ್ಯೆ 41,770 ಆಗಿತ್ತು. 2024ರ ಆರ್ಥಿಕ ವರ್ಷದಲ್ಲಿ ಅದು 25,616ಕ್ಕೆ ಕಡಿಮೆಯಾಗಿದೆ.
ಎರಡು ಪ್ರಮುಖ ಕಾರಣಗಳಿಂದಾಗಿ ಜನರು ಮೆಕ್ಸಿಕೋ ಮೂಲಕ ಕತ್ತೆಗಳನ್ನು ಬಳಸಿ ಯುಎಸ್ ಪ್ರವೇಶಿಸುವುದನ್ನು ನಿಲ್ಲಿಸಿದ್ದಾರೆ. ಒಂದು ಮೆಕ್ಸಿಕೋಗೆ ತೆರಳುವ ಮೊದಲು ಅವರನ್ನು ದುಬೈ ಅಥವಾ ಟರ್ಕಿಯಲ್ಲಿ ತಡೆಯಲಾಗುತ್ತಿದೆ. ಯುಎಸ್ ಏಜೆನ್ಸಿಗಳು ಕಳೆದ ಕೆಲವು ವರ್ಷಗಳಿಂದ ಇಲ್ಲಿ ತೀವ್ರ ನಿಗಾ ವಹಿಸುತ್ತಿವೆ.
ಮೂಲವೊಂದು ಹೇಳುವಂತೆ, “ಗುಜರಾತಿಗಳು ಕೂಡ ಮೆಕ್ಸಿಕೋಕ್ಕಿಂತ ಕೆನಡಾವನ್ನು ಆಯ್ಕೆ ಮಾಡಲು ಪ್ರಾರಂಭಿಸಿದ್ದಾರೆ. ಏಕೆಂದರೆ, ಇಲ್ಲಿ ಸುಲಭವಾಗಿ ಟ್ಯಾಕ್ಸಿಯನ್ನು ಬಾಡಿಗೆಗೆ ತೆಗೆದುಕೊಂಡು ಯುಎಸ್‌ಗೆ ದಾಟಬಹುದು. ಇತ್ತೀಚೆಗೆ, ಯುಎಸ್ ಅಧಿಕಾರಿಗಳು ಈ ಗಡಿಯಲ್ಲಿ ನಿಗಾವನ್ನು ಬಿಗಿಗೊಳಿಸಿದ್ದಾರೆ. ಅಕ್ರಮ ವಲಸಿಗರನ್ನು ಕೆನಡಾಕ್ಕೆ ವಾಪಸ್ ಕಳುಹಿಸುತ್ತಿದ್ದಾರೆ ಆದರೂ, ಅಕ್ರಮ ವಲಸಿಗರು ಅದೇ ಮಾರ್ಗದಲ್ಲಿ ಸ್ವಲ್ಪ ಸಮಯದ ನಂತರ ಮತ್ತೆ ಪ್ರವೇಶಿಸಲು ಪ್ರಯತ್ನಿಸುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ವಿವರಿಸಿದೆ.
ಇದನ್ನೂ ಓದಿ : ಅಮಿತ್ ಶಾ ವಿದೇಶ ಪ್ರಯಾಣದ ಸೂಕ್ಷ್ಮ ಮಾಹಿತಿಗೆ $1 ಮಿಲಿಯನ್ ಬಹುಮಾನ – ನಿಷೇಧಿತ ‘ಸಿಖ್ಸ್ ಫಾರ್ ಜಸ್ಟಿಸ್’ ಸಂಘಟನೆ ಘೋಷಣೆ


