ನಿರೀಕ್ಷೆಯಂತೆ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ವಿಚಾರ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ. ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೆದ್ ಬೆನ್ನಲ್ಲೇ, ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ಕೂಡ ಮಸೂದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
“ಮಸೂದೆಯು ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ. ಧಾರ್ಮಿಕ ಆಚರಣೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲು ಅವಕಾಶ ನೀಡಲಿದೆ” ಎಂದು ಇಬ್ಬರೂ ನಾಯಕರು ಆರೋಪಿಸಿದ್ದಾರೆ.
ಇಬ್ಬರೂ ನಾಯಕರೂ ವಕೀಲ ಅನಸ್ ತನ್ವೀರ್ ಮೂಲಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ವಿವಾದಿತ ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಂಗೀಕಾರಗೊಂಡಿದೆ. ರಾಷ್ಟ್ರಪತಿ ಅಂಕಿತ ಬೀಳಲು ಬಾಕಿಯಿದೆ.
ಮಸೂದೆಯನ್ನು ಪರಿಶೀಲಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸದಸ್ಯ ಜಾವೆದ್, “ಮಸೂದೆಯ ತಿದ್ದುಪಡಿಗಳು ಸಂವಿಧಾನದ 14, 25, 26, 29 ಮತ್ತು 300ಎ ವಿಧಿಗಳನ್ನು ಉಲ್ಲಂಘಿಸುತ್ತವೆ. ಈ ವಿಧಿಗಳು ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಆಸ್ತಿಗೆ ಸಂಬಂಧಿಸಿವೆ. ಮಸೂದೆಯು ಧಾರ್ಮಿಕ ಆಚರಣೆಯ ಅವಧಿಯನ್ನು ಆಧರಿಸಿದ ಅನಿಯಂತ್ರಿತ ನಿರ್ಬಂಧಗಳನ್ನು ಹೇರುತ್ತದೆ. ಇದು ಇತ್ತೀಚೆಗೆ ಮತಾಂತರಗೊಂಡವರು ವಕ್ಫ್ ಅಡಿಯಲ್ಲಿ ಆಸ್ತಿ ಅರ್ಪಿಸುವುದನ್ನು ತಡೆಯುತ್ತದೆ. ಈ ನೀತಿಯು ಇಸ್ಲಾಮಿಕ್ ಕಾನೂನಿಗೆ ವಿರುದ್ದವಾಗಿದೆ” ಎಂದು ವಾದಿಸಿದ್ದಾರೆ.
“ತಿದ್ದುಪಡಿ ಮಸೂದೆಯು ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರಿಸಲು ಅವಕಾಶ ನೀಡುತ್ತದೆ. ಇದು ಸಮರ್ಥನೀಯವಲ್ಲ. ಹಿಂದೂ, ಸಿಖ್ ಸೇರಿದಂತೆ ಇತರ ಯಾವುದೇ ಧರ್ಮಗಳ ಧಾರ್ಮಿಕ ಟ್ರಸ್ಟ್‌ಗಳಲ್ಲಿ ಇಂತಹ ನಿಯಮಗಳಿಲ್ಲ” ಎಂದು ಜಾವೆದ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜಾವೆದ್, “ಇನ್ನೂ ಹಲವು ಮಂದಿ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ದ ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಹಲವು ಪಕ್ಷಗಳು ಅರ್ಜಿ ಸಲ್ಲಿಸಲಿವೆ. ಸಂಸತ್ತಿನಲ್ಲಿ, ವಿರೋಧ ಪಕ್ಷದ ಪ್ರತಿಯೊಬ್ಬರೂ ಇದು ಸಂವಿಧಾನಬಾಹಿರ ಎಂದು ಹೇಳಿದ್ದಾರೆ. ನೀವು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಹೇಗೆ ಸಾಧ್ಯ? ನಿಮಗೆ ಬಹುಮತ ಇದ್ದ ಮಾತ್ರಕ್ಕೆ ನೀವು ಬಯಸಿದ್ದನ್ನು ಅಂಗೀಕರಿಸಬಹುದು ಎಂದಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೂಡ ಈ ಮಸೂದೆಯನ್ನು ಮುಸ್ಲಿಂ ಸಮುದಾಯದ ಹಕ್ಕುಗಳ ‘ಲಜ್ಜೆಗೆಟ್ಟ ಉಲ್ಲಂಘನೆ’ ಎಂದು ಕರೆದಿದ್ದಾರೆ.
ಸಂಸತ್ತಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಅವರು ಮಸೂದೆಯ ಪ್ರತಿಯನ್ನು ಹರಿದು, ತಮ್ಮ ಕೃತ್ಯವನ್ನು ದಕ್ಷಿಣ ಆಫ್ರಿಕಾದ ಮಹಾತ್ಮ ಗಾಂಧಿಯವರ ನಾಗರಿಕ ಅಸಹಕಾರಕ್ಕೆ ಹೋಲಿಸಿದ್ದಾರೆ. “ಗಾಂಧಿಯಂತೆ, ನಾನು ಕೂಡ ಈ ಕಾನೂನನ್ನು ಹರಿದು ಹಾಕುತ್ತಿದ್ದೇನೆ. ಇದು ಸಂವಿಧಾನಬಾಹಿರ. ಬಿಜೆಪಿ ದೇವಾಲಯಗಳು ಮತ್ತು ಮಸೀದಿಗಳ ಹೆಸರಿನಲ್ಲಿ ಈ ದೇಶದಲ್ಲಿ ವಿಭಜನೆಯನ್ನು ಸೃಷ್ಟಿಸಲು ಬಯಸುತ್ತಿದೆ” ಎಂದು ಹೇಳಿದ್ದಾರೆ.
ಚರ್ಚೆಯ ಸಮಯದಲ್ಲಿ, ತಾನು ಪ್ರಸ್ತಾಪಿಸಿದ 10 ತಿದ್ದುಪಡಿಗಳನ್ನು ಪರಿಗಣಿಸುವಂತೆ ಓವೈಸಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಮಸೂದೆಯು ಮುಸ್ಲಿಂ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಚ್-ರಾಜ್‌ಬೋಂಗ್ಶಿ ಸಮುದಾಯದ 28 ಸಾವಿರ ಪ್ರಕರಣ ವಾಪಾಸ್: ಅಸ್ಸಾಂ ಸರ್ಕಾರ ನಿರ್ಧಾರ


