ಇದುವರೆಗೆ ಸುಮಾರು 20 ಮಕ್ಕಳ ಸಾವಿಗೆ ಕಾರಣವಾಗಿರುವ ‘ಕೋಲ್ಡ್ರಿಫ್ ಕೆಮ್ಮಿನ ಸಿರಪ್’ ತಯಾರಿಸಿದ ತಮಿಳುನಾಡಿನ ಔಷಧ ಕಂಪೆನಿ ಶ್ರೇಸನ್ ಫಾರ್ಮಾಸ್ಯುಟಿಕಲ್ಸ್‌ನ ಮಾಲಕ ರಂಗನಾಥನ್ ಗೋವಿಂದನ್ ಅವರನ್ನು ಮಧ್ಯಪ್ರದೇಶದ ವಿಶೇಷ ತನಿಖಾ ತಂಡ (ಎಸ್‌ಐಟಿ) ಬುಧವಾರ (ಅ.8) ತಡರಾತ್ರಿ ಚೆನ್ನೈನಿಂದ ಬಂಧಿಸಿದೆ.
ರಂಗನಾಥನ್ ಅವರನ್ನು ಚೆನ್ನೈ ನಗರದ ಕೋಡಂಬಾಕಂನಲ್ಲಿರುವ ಮನೆಯಿಂದ ವಶಕ್ಕೆ ಪಡೆದ ಎಸ್‌ಐಟಿ ತಂಡ, ನಂತರ ಪ್ರಾಥಮಿಕ ವಿಚಾರಣೆಗಾಗಿ ಕಾಂಚೀಪುರಂ ಜಿಲ್ಲೆಯ ಸುಂಗುವರ್ಚತ್ರಂ ಪೊಲೀಸ್ ಠಾಣೆಗೆ ಕರೆದೊಯ್ದಿದೆ. ಸ್ಥಳೀಯ ಅಶೋಕ್ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಎಸ್ಐಟಿಗೆ ಸಾಥ್ ನೀಡಿದ್ದಾರೆ ಎಂದು ವರದಿಯಾಗಿದೆ.
ಶ್ರೇಸನ್ ಫಾರ್ಮಾಸ್ಯುಟಿಕಲ್ಸ್ ಪೂರೈಕೆ ಮಾಡಿದ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ಗಳನ್ನು ಸೇವಿಸಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 1 ರಿಂದ 7 ವರ್ಷದೊಳಗಿನ ಮಕ್ಕಳು ಸಾವಿಗೀಡಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಹೆಚ್ಚು ಮಕ್ಕಳ ಸಾವು ಸಂಭವಿಸಿದೆ. ಈ ಹಿನ್ನೆಲೆ, ಅಲ್ಲಿನ ಸರ್ಕಾರ ತನಿಖೆಗೆ ಎಸ್‌ಐಟಿ ರಚಿಸಿದೆ.
ಅಕ್ಟೋಬರ್ 2ರಂದು, ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶಕರು ನೀಡಿದ ವರದಿಯು ಶ್ರೇಸನ್ ಫಾರ್ಮಾಸ್ಯುಟಿಕಲ್ಸ್ ಘಟಕದಲ್ಲಿ ತಯಾರಿಸಲಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನ ಮಾದರಿಗಳು ಪ್ರಮಾಣಿತ ಗುಣಮಟ್ಟ (Not of Standard Quality-NSQ)ಹೊಂದಿಲ್ಲ ಎಂದಿತ್ತು.
ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಲಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನಲ್ಲಿ ಶೇಕಡ 48.6ರಷ್ಟು ಡೈಥಿಲೀನ್ ಗ್ಲೈಕೋಲ್ ಇದ್ದು, ಇದು ತೀವ್ರ ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ವರದಿ ಹೇಳಿತ್ತು.
ಬಂಧಿತ ರಂಗನಾಥನ್ ಅವರನ್ನು ಹೆಚ್ಚಿನ ಕಸ್ಟಡಿಯಲ್ ವಿಚಾರಣೆಗಾಗಿ ಮಧ್ಯಪ್ರದೇಶಕ್ಕೆ ವರ್ಗಾಯಿಸಲು ಟ್ರಾನ್ಸಿಟ್ ವಾರಂಟ್‌ನ ಪ್ರಕ್ರಿಯೆ ನಡೆಯುತ್ತಿದೆ.
ರಂಗನಾಥನ್ ಅವರ ಬಂಧನದ ನಂತರ, ಎಸ್‌ಐಟಿ ಸ್ಥಳೀಯ ಅಧಿಕಾರಿಗಳೊಂದಿಗೆ ಸೇರಿ ಕಾಂಚೀಪುರಂನ ಸುಂಗುವರ್ಚತ್ರಂನಲ್ಲಿ ಬಾಡಿಗೆಗೆ ಪಡೆದಿರುವ 4,500 ಚದರ ಅಡಿ ಆವರಣದಲ್ಲಿ ನೆಲೆಗೊಂಡಿರುವ ಶ್ರೇಸನ್ ಫಾರ್ಮಾದ ಉತ್ಪಾದನಾ ಘಟಕದಲ್ಲಿ ಪರಿಶೀಲನೆ ನಡೆಸಿದೆ.
ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು, ಉತ್ಪಾದನಾ ಶಿಷ್ಟಾಚಾರಗಳ ಹಲವಾರು ಉಲ್ಲಂಘನೆಗಳನ್ನು ಕಂಡುಕೊಂಡ ನಂತರ, ಘಟಕವನ್ನು ಸೀಲ್ ಮಾಡಿದ್ದಾರೆ.
ವರದಿಗಳ ಪ್ರಕಾರ, ಶ್ರೇಸನ್ ಫಾರ್ಮಾ ಕೆಮ್ಮಿನ ಸಿರಪ್ ತಯಾರಿಕೆಗೆ ಬೇಕಾದ ಉನ್ನತ ಗುಣಮಟ್ಟದ (ಫಾರ್ಮಾ-ಗ್ರೇಡ್) ಪ್ರೊಪಿಲೀನ್ ಗ್ಲೈಕಾಲ್ ಎಂಬ ಪದಾರ್ಥವನ್ನು ಖರೀದಿಸದೆ, ಬದಲಿಗೆ ಡಿಇಜಿ (ಡೈಥಿಲೀನ್ ಗ್ಲೈಕಾಲ್) ಎಂಬ ಹಾನಿಕಾರಕ ಕಲ್ಮಶವನ್ನು ಒಳಗೊಂಡಿರುವ ಕೆಳದರ್ಜೆಯ ವಸ್ತುವನ್ನು ಬಳಸಿದೆ.
ಕಂಪನಿಯ ಆವರಣದಿಂದ ವಶಪಡಿಸಿಕೊಂಡ ಮಾದರಿಗಳಲ್ಲಿ ವಿಷಕಾರಿ ವಸ್ತು ಇರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಕಾನೂನು ವಿಧಿವಿಧಾನಗಳು ಪೂರ್ಣಗೊಂಡ ನಂತರ, ತನಿಖೆಯನ್ನು ಮುಂದುವರಿಸಲು ಮಧ್ಯಪ್ರದೇಶದ ಎಸ್‌ಐಟಿ ರಂಗನಾಥನ್ ಅವರನ್ನು ಕರೆದೊಯ್ಯುವ ಸಾಧ್ಯತೆ ಇದೆ.
ಸಿಜೆಐ ಮೇಲೆ ದಾಳಿ: ಆರೋಪಿ ವಕೀಲನ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಅನುಮತಿ ಕೋರಿ ಪತ್ರ


