ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಬಳಿಯ ಹುಲ್ಲುಗಾವಲುಗಳ ಎತ್ತರದ ಪ್ರದೇಶದಲ್ಲಿ ಭಯದ ನೆರಳಿನಲ್ಲಿ ಅಚಲ ಧೈರ್ಯದ ಸಂಕೇತವಾಗಿ ಇಬ್ಬರು ಅಪ್ರಾಪ್ತ ಬಾಲಕಿಯರು ಪ್ರವಾಸಿಗರನ್ನು ರಕ್ಷಿಸಿದ ವೀರಗಾಥೆ ವರದಿಯಾಗಿದೆ. ಒಂದು ಸಣ್ಣ ಮಣ್ಣಿನ ಮನೆಯಲ್ಲಿ ವಾಸಿಸುತ್ತಿರುವ ಮತ್ತು ಭಯಾನಕತೆ ಪರಿಸ್ಥಿತಿಯಲ್ಲಿ ಓಡಿಹೋಗಲು ನಿರಾಕರಿಸಿದ ಇಬ್ಬರು ಹದಿಹರೆಯದ ಸಹೋದರಿಯರ ಕಥೆಯಿದು.
ಗುಜ್ಜರ್-ಬಕೇರ್‌ವಾಲ್ ಸಮುದಾಯದ ಹೆಣ್ಣುಮಕ್ಕಳಾದ ರುಬೀನಾ (14) ಮತ್ತು ಮುಮ್ತಾಜಾ (16) ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿ ಅನಿರೀಕ್ಷಿತ ರಕ್ಷಕರಾದರು, ಈ ಘಟನೆಯಲ್ಲಿ ಭಯೋತ್ಪಾದಕರು 26 ಜನರನ್ನು ಕೊಂದಿದ್ದರು.
ದಾಳಿಯ ನಂತರ ಪ್ರದೇಶವು ಭಯಭೀತವಾಗಿ ಪ್ರವಾಸಿಗರು ಭಯದಿಂದ ಚದುರಿಹೋದಾಗ, ಸಹೋದರಿಯರು ಓಡಿಹೋಗಲು ನಿರ್ಧರಿಸಲಿಲ್ಲ. ಕಾಲು ಮುರಿದಿದ್ದರೂ, ಮುಮ್ತಾಜಾ ಒಬ್ಬ ಪ್ರವಾಸಿಗರ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಒಟ್ಟಾಗಿ, ಸಹೋದರಿಯರು ಚೆನ್ನೈಯ ದಂಪತಿಯನ್ನು ರಕ್ಷಿಸಿದರು ಮತ್ತು ಕಲ್ಲಿನ ಭೂಪ್ರದೇಶದ ಮೂಲಕ ಹೋಗಲು ಅನೇಕರಿಗೆ ಮಾರ್ಗದರ್ಶನ ಮಾಡಿದರು, ಅನೇಕ ಪ್ರವಾಸಿಗರಿಗೆ ಅವರ ಸಾಧಾರಣ ಮಣ್ಣಿನಿಂದ ಕಟ್ಟಿದ ಮನೆಯಲ್ಲಿ ಆಶ್ರಯ, ನೀರು ಮತ್ತು ಭರವಸೆಯನ್ನು ನೀಡಿದರು.
“ಆ ಕ್ಷಣದಲ್ಲಿ ನಾವು ನಮ್ಮ ಬಗ್ಗೆ ಯೋಚಿಸಲಿಲ್ಲ,” ಎಂದು ‘ಕಾಶ್ಮೀರದ ಮೊಲದ ಹುಡುಗಿ’ ಎಂದು ಕರೆಯಲ್ಪಡುವ ರುಬೀನಾ, ತನ್ನ ಮುದ್ದಿನ ಮೊಲದ ಜೊತೆ ಪ್ರವಾಸಿಗರು ಫೋಟೊ ತೆಗೆದುಕೊಳ್ಳಲು ಸ್ವಲ್ಪ ಹಣ ಪಡೆದು ನೀಡುತ್ತಿದ್ದಳು.
“ನಾವು ಪ್ರವಾಸಿಗರ ಬಗ್ಗೆ ಮಾತ್ರ ಯೋಚಿಸಿದೆವು. ಅವರಿಗೆ ನಡೆಯಲು ಸಾಧ್ಯವಾಗಲಿಲ್ಲ; ಅವರು ಭಯಭೀತರಾಗಿದ್ದರು. ಅವರು ಕೇಳಿದ್ದು ಸಹಾಯ ಮಾತ್ರ” ಎಂದು ಅವರು ಹೇಳಿದರು.
“ನಮ್ಮ ಮಣ್ಣಿನ ಮನೆಯಲ್ಲಿ ನಾವು ಅವರಿಗೆ ನೀರು ಕೊಟ್ಟೆವು” ಎಂದು ರುಬೀನಾ ಹೇಳಿದರು. “ನಾವು ಮೂರು ಬಾರಿ ಹಿಂತಿರುಗಿದೆವು. ಪ್ರತಿ ಬಾರಿಯೂ ಹೆಚ್ಚು ಜನರು ಓಡುತ್ತಿರುವುದನ್ನು, ಹೆಚ್ಚು ಜನರಿಗೆ ಸಹಾಯದ ಅಗತ್ಯವಿರುವುದನ್ನು ನಾವು ನೋಡಿದ್ದೇವೆ.” ಎಂದರು.
ಈಗ ಬೈಸರನ್ ಇಕೋ ಪಾರ್ಕ್‌ನಲ್ಲಿ ಮಾರ್ಗದರ್ಶಿ ಮತ್ತು ಸಹಾಯಕರಾಗಿ ಕೆಲಸ ಮಾಡುತ್ತಿರುವ ರುಬೀನಾ, ದಾಳಿ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ಚೆನ್ನೈನ ದಂಪತಿಗಳೊಂದಿಗೆ ಬಂದಿದ್ದರು.
ಏಪ್ರಿಲ್ 22ರಂದು ‘ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲ್ಪಡುವ ಸುಂದರವಾದ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ವಿದೇಶಿ ಪ್ರಜೆಗಳು ಸೇರಿದಂತೆ 26 ಜನರನ್ನು ಗುಂಡಿಕ್ಕಿ ಕೊಂದಾಗ ಭಯಾನಕತೆ ಮತ್ತು ಭೀತಿ ಉಂಟಾಯಿತು.
ದಾಳಿಯ ಬಳಿಕ ಸಹೋದರಿಯರು ತಮ್ಮ ಒಂದು ಬಡ ಮಣ್ಣಿನ ಮನೆಯಲ್ಲಿ ಆಶ್ರಯ ನೀಡಿ ಹಲವರ ಪ್ರಾಣ ಉಳಿಯಲು ಕಾರಣರಾದವರು. ಅವರಿಗೆ ರಕ್ಷಣೆ, ನೀರು, ಕ್ಷೇಮವಾಗಿ ಸ್ಥಳದಿಂದ ಪಾರಾಗಲು ಸಹಾಯ ನೀಡಿದರು. ಅವರಿಗೆ ಗಾಯಗಳಾದರೂ ಪ್ರಾಣದ ಹಂಗು ತೊರೆದು ಮತ್ತೆ ಮತ್ತೆ ದಾಳಿಗೊಳಗಾದ ಸ್ಥಳಕ್ಕೆ ಹೋಗಿ ಪ್ರವಾಸಿಗರನ್ನು ಕರೆತಂದು ಆಶ್ರಯ ನೀಡಿದರು. ಅವರ ಬಡ ಮಣ್ಣಿನ ಮನೆ ಮಾನವೀಯತೆಯ ಹೆಗ್ಗುರುತಾಯಿತು.
ಇಂತಹ ಹತ್ತು ಹಲವು ಪ್ರಸಂಗಗಳು ಮಾನವೀಯತೆಯ ಬಗೆಗೆ ನಂಬಿಕೆ ಬೆಳೆಸಲಿ. ನಮ್ಮಲ್ಲಿ ಕಾಶ್ಮೀರಿಗಳ ಬಗ್ಗೆ ಪ್ರೇಮ ಬೆಳೆಸಲಿ ಎಂದು ಈ ಸಹೋದರಿಯರ ಸಹಾಯದಿಂದ ಪಾರಾಗಿ ಬಂದ ಚೈನ್ನೈ ಪ್ರವಾಸಿ ದಂಪತಿ ಹೇಳಿದ್ದಾರೆ.


