Homeಸಿನಿಮಾಕ್ರೀಡೆಟೆನ್ನಿಸ್ ಬಾಲ್ ಕ್ರಿಕೆಟ್ ನೋವು ನಲಿವಿನ ಸುತ್ತ

ಟೆನ್ನಿಸ್ ಬಾಲ್ ಕ್ರಿಕೆಟ್ ನೋವು ನಲಿವಿನ ಸುತ್ತ

- Advertisement -
- Advertisement -

ಕ್ರಿಕೆಟ್ ಜಗತ್ತು ಯುವ ಆಟಗಾರರ ಅದ್ಭುತ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ. ಇದರಲ್ಲಿ ಲೆದರ್ ಬಾಲ್ ಕ್ರಿಕೆಟ್ ಹಾಗೂ ಟೆನ್ನಿಸ್ ಬಾಲ್ ಕ್ರಿಕೆಟ್ ಎಂಬ ಎರಡು ಸ್ವರೂಪದ ಕ್ರಿಕೆಟ್ ಇದೆ. ಮೊದಲನೆಯದು ಅಂತಾರಾಷ್ಟ್ರೀಯ ಮದವರೆಗೂ ಮಾನ್ಯತೆಯನ್ನು ಪಡೆದಿದ್ದರೆ, ಎರಡನೆಯದು ಅಸಂಘಟಿತ ಸ್ವರೂಪದ್ದಾಗಿದೆ. ಲೆದರ್ ಬಾಲ್ ಕ್ರಿಕೆಟ್‌ಗೆ ಜಿಲ್ಲಾಮಟ್ಟ, ರಾಜ್ಯಮಟ್ಟ, ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ಪಡೆದ ಸಂಸ್ಥೆಗಳಿವೆ. ಆದರೆ ಟೆನ್ನಿಸ್ ಬಾಲ್ ಕ್ರಿಕೆಟ್ ಗ್ರಾಮೀಣ ಮಟ್ಟದಿಂದ, ರಾಜ್ಯಮಟ್ಟದವರೆಗೆ ಇದ್ದರೂ ಕೂಡ ಅದಕ್ಕೆ ಯಾವ ಅಧಿಕೃತ ಸಂಸ್ಥೆಯೂ ಇಲ್ಲ. ಒಂದಷ್ಟು ಜನ ಕ್ರಿಕೆಟ್ ಆಡುವವರು ಒಂದು ಕಡೆ ಸೇರಿ ತಂಡವನ್ನು ಕಟ್ಟಿಕೊಳ್ಳುತ್ತಾರೆ. ಖಾಸಗಿಯಾಗಿ ನಡೆಯುವ ಪಂದ್ಯಗಳಿಗೆ ಪ್ರವೇಶಶುಲ್ಕವನ್ನು ಕಟ್ಟಿ ಭಾಗವಹಿಸುತ್ತಾರೆ. ಅಲ್ಲಿಯ ಯಾವ ಅತ್ಯುತ್ತಮ ಪ್ರದರ್ಶನಕ್ಕೂ ಬೆಲೆಯಿಲ್ಲ. ನಾನು ಎರಡೂ ಸ್ವರೂಪದ ಕ್ರಿಕೆಟನ್ನು ಆಡಿದ್ದೇನೆ. ತೀರ ಸಮೀಪದಿಂದ ಈ ಜಗತ್ತನ್ನು ನೋಡಿದ್ದೇನೆ. ನಾನು ಇಲ್ಲಿ ಕೇವಲ ಟೆನ್ನಿಸ್ ಬಾಲ್ ಕ್ರಿಕೆಟಿನ ಅನುಭವದ ಹಿನ್ನೆಲೆಯಲ್ಲಿ, ಪ್ರಾತಿನಿಧಿಕವಾಗಿ ಮೂರು ಘಟನೆಗಳ ಮೂಲಕ ಅದರ ರೋಚಕತೆಯನ್ನು ಹಂಚಿಕೊಳ್ಳುತ್ತೇನೆ ಮತ್ತು ಯುವ ಆಟಗಾರರ ಆರ್ಥಿಕ ಪರಿಸ್ಥಿತಿಯ ಕರಾಳ ಮುಖವನ್ನು ಬಿಚ್ಚಿಡಲು ಬಯಸುತ್ತೇನೆ.

ತೊಂಭತ್ತರ ದಶಕ. ಬೆಂಗಳೂರಿನ ಮಿಲ್ಕ್ ಕಾಲೋನಿ ಮೈದಾನ. ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟಿನಲ್ಲಿ ಹೆಸರು ಮಾಡಿದ್ದ ಎರಡು ಸಮಬಲದ ತಂಡಗಳು ಮುಖಾಮುಖಿಯಾಗಿದ್ದವು. ಚಮಕ್ ತಂಡಕ್ಕೆ ಕೊನೆಯ ಎಸೆತದಲ್ಲಿ ಆರು ರನ್ನುಗಳ ಅವಶ್ಯಕತೆ ಇತ್ತು. ಒಂದೇ ಸಮನೆ ಬೀಳುತ್ತಿದ್ದ ಮಳೆಯ ತುಂತುರು ಹನಿಗಳು ಮೈದಾನವನ್ನು ತೇವಗೊಳಿಸಿದ್ದವು. ಟೆನ್ನಿಸ್ ಬಾಲ್ ಚೆಂಡು ಒದ್ದೆಯಾಗುತ್ತಿತ್ತು. ಚೆಂಡನ್ನು ಬೌಂಡರಿಯ ಹೊರಗೆ ಅಟ್ಟುವುದು ಅಷ್ಟು ಸುಲಭವಾಗಿರಲಿಲ್ಲ. ಸ್ಟ್ರೈಕರ್ ವಿಭಾಗದಲ್ಲಿ ಆಲ್‌ರೌಂಡರ್ ಜಾನಿ ಚೆಂಡನ್ನು ಬೌಂಡರಿಯಾಚೆ ಅಟ್ಟಲೇಬೇಕೆಂದು ತಯಾರಾಗಿ ನಿಂತಿದ್ದನು. ನಾನ್ ಸ್ಟ್ರೈಕರ್ ವಿಭಾಗದಲ್ಲಿ ನೀಳಕಾಯದ ಕೃಷ್ಣ ಸಿಕ್ಸರ್ ಹೊಡೆಯುವಂತೆ ಜಾನಿಗೆ ಹುರಿದುಂಬಿಸುತ್ತಿದ್ದ. ಗುರುಬ್ರಹ್ಮ ತಂಡದ ನಾಯಕ ಹಾಗೂ ಚೆಂಡಿಗೆ ಒಳ ಮತ್ತು ಹೊರ ತಿರುವನ್ನು ಕೊಡಬಲ್ಲ ಹೆಸರಾಂತ ಬೌಲರ್ ಬಸವರಾಜ ಅನ್ವರಿ ಬೌಲಿಂಗ್ ವಿಭಾಗದಲ್ಲಿ ಈ ಅಂತಿಮ ಎಸೆತಕ್ಕೆ ಸಿದ್ಧವಾಗಿ ರೋಮಾಂಚನಕ್ಕೆ ಸಾಕ್ಷಿಯಾಗುವಂತೆ ಕಾದಿದ್ದ. ಆತ ಕೊನೆಯ ಎಸೆತ ಹಾಕುವ ಮೊದಲು ಪಕ್ಕದಲ್ಲೇ ನಿಂತಿದ್ದ ನಾನ್ ಸ್ಟ್ರೈಕರ್ ಕೃಷ್ಣನನ್ನು ನೋಡಿ ನಕ್ಕನು. ಮಳೆ ಬರುತ್ತಿದ್ದರಿಂದ ವಿಜಯಲಕ್ಷ್ಮಿ ತನ್ನ ಕಡೆ ಒಲಿಯುವುದು ನಿಶ್ಚಿತವೆಂಬ ಲೆಕ್ಕಾಚಾರದಲ್ಲಿದ್ದಂತೆ ಕಾಣುತ್ತಿತ್ತು. ಆ ವಾತಾವರಣದಲ್ಲಿ ಸಿಕ್ಸರ್ ಹೊಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಆತ ಹಾಕಿದ ಚೆಂಡನ್ನು ಮಿಡ್ ವಿಕೆಟ್ ಮೇಲೆ ಹೊಡೆದು ಜಾನಿ ಗೆಲುವಿನ ನಗೆ ಬೀರಿದನು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಕ್ರೀಡಾಂಗಣ. ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ತೀವ್ರ ಸೆಣೆಸಾಟದ ರೋಮಾಂಚನಕಾರಿ ಪಂದ್ಯಗಳಿಗೆ ಸಾಕ್ಷಿಯಾಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಸೂರತ್ಕಲ್ ತಂಡ ಮತ್ತು ಬೆಂಗಳೂರಿನ ಚಮಕ್ ತಂಡದ ನಡುವೆ ಫೈನಲ್ ಪಂದ್ಯ ನಡೆಯಬೇಕಿತ್ತು. ಒಂದು ಲಕ್ಷ ಮೊದಲ ಬಹುಮಾನ. ಎರಡನೇ ಬಹುಮಾನ ಐವತ್ತು ಸಾವಿರ. ಅದಾಗಲೇ ಆ ಪಂದ್ಯಾವಳಿಯ ಲೀಗ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸೂರತ್ಕಲ್ ತಂಡದ ಸೂರಜ್ ಸತತ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ವಿರೋಧಿ ತಂಡಗಳಿಗೆ ನಡುಕ ಹುಟ್ಟುವಂತೆ ಮಾಡಿದ್ದನು. ಪ್ರೇಕ್ಷಕರ ಮಧ್ಯದಿಂದ “ಸೂರಜ್, ಸೂರಜ್ ಎಂಬ ಉದ್ಘಾರ ಕೇಳಿಬರುತ್ತಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರಿನ ಚಮಕ್ ತಂಡ 39 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು ದುಸ್ಥಿತಿಯಲ್ಲಿತ್ತು. ನಾನು ಮೊದಲ ಬಾರಿಗೆ ಕೊನೆಯ ಬ್ಯಾಟ್ಸ್‌ಮನ್ನಾಗಿ ಮೈದಾನದ ಒಳಗೆ ಇಳಿದಿದ್ದೆ. ಆರಂಭಿಕ ಆಟಗಾರನಾಗಿ ಆಡುತ್ತಿದ್ದ ನನ್ನನ್ನು ಸೆಮಿಫೈನಲ್ ಪಂದ್ಯದಲ್ಲಿ ಆಡಿಸಿರಲಿಲ್ಲ.

ತಂಡವನ್ನು ಮುನ್ನಡೆಸುತ್ತಿದ್ದ ಮಹೇಶ್ ಫೈನಲಿನಲ್ಲಿ ಒಂಭತ್ತನೇ ವಿಕೆಟ್ ಬಿದ್ದ ತಕ್ಷಣ ಕೊನೆಯ ಬ್ಯಾಟ್ಸಮನ್ ಆಗಿ ಆಡಲು ನನಗೆ ಹೇಳಿದ. ಆ ಸವಾಲನ್ನು ಸ್ವೀಕರಿಸಿ ದರ್ಶನ್ ಜೊತೆಗೂಡಿ ಕೊನೆಯ 8 ಎಸೆತಗಳಲ್ಲಿ 13 ರನ್‌ಗಳನ್ನು ಕಲೆ ಹಾಕಿ ನಿಗದಿತ 10 ಓವರ್‌ಗಳಲ್ಲಿ 52 ರನ್ ಗಳಿಸಿದೆವು. ಸೂರತ್ಕಲ್ ತಂಡದ ಬ್ಯಾಟಿಂಗ್ ಪ್ರಾರಂಭವಾಯಿತು. ಸೂರಜ್ ಆರಂಭಿಕ ಬ್ಯಾಟ್ಸಮನ್ ಆಗಿ ಕಣಕ್ಕಿಳಿದನು. ಅವನಿಗೆ ರನ್ ಕೊಡದೇ ಕಟ್ಟಿ ಹಾಕುವ ಯೋಜನೆಯನ್ನು ಹಾಕಿಕೊಂಡೆವು. ಅಚ್ಯುತನ ಮೊದಲ ಎಸೆತವನ್ನು ಸೂರಜ್ ಗೂಟರಕ್ಷಕನಿಗೆ ಹೋಗಲು ಬಿಟ್ಟನು. ಸಾಮಾನ್ಯವಾಗಿ ಚುಟುಕು ಟೆನ್ನಿಸ್ ಬಾಲ್ ಕ್ರಿಕೆಟಿನಲ್ಲಿ ಹೀಗೆ ಚೆಂಡನ್ನು ವಿಕೆಟ್‌ಕೀಪರಿಗೆ ಹೋಗಲು ಬಿಡುವುದಿಲ್ಲ. ಸೂರಜ್‌ಗೆ ಯಾವ ಕ್ಷಣದಲ್ಲೂ ಚೆಂಡನ್ನು ಬೌಂಡರಿ ಆಚೆ ಬಾರಿಸುವ ಆತ್ಮವಿಶ್ವಾಸವಿದ್ದಿದ್ದರಿಂದ ಹೀಗೆ ಬಿಟ್ಟಿದ್ದನು. ಮುಂದಿನ ಎಸೆತವನ್ನು ಬೌಲರ್‌ನ ತಲೆಯ ಮೇಲೆ ಸಿಕ್ಸರಿಗೆ ಅಟ್ಟಿದನು.

ಪ್ರಾರಂಭಿಕ ಹಂತದಲ್ಲಿ ಹೊಸ ಟೆನ್ನಿಸ್ ಬಾಲನ್ನು ಬೌಂಡರಿ ಆಚೆ ಅಟ್ಟುವುದು ಅಷ್ಟು ಸುಲಭವಲ್ಲ. ಅಪಾಯದ ಮುನ್ಸೂಚನೆ ಕಾಣಲು ಪ್ರಾರಂಭವಾಯಿತು. ಚಮಕ್ ತಂಡದ ನಾಯಕ ಮಹೇಶ್ ಅಚ್ಯುತನ ಬಳಿ ಬಂದು “ನೋಡು ಅವನಿಗೆ ಬ್ಯಾಟ್ ಹಿಡಿಯುವುದಕ್ಕೆ ಬರುವುದಿಲ್ಲ. ಅವನಿಂದ ಸಿಕ್ಸರ್ ಹೊಡೆಸಿಕೊಳ್ಳುತ್ತಿದ್ದೀಯಾ?” ಎಂದು ಕಿಚ್ಚು ಬರುವಂತೆ ಬೈದನು. ಅಚ್ಯುತನಿಗೆ ಅವಮಾನವಾಗಿ ತನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ಮುಂದಿನ ಎಸೆತವನ್ನು ಎಸೆದನು. ಆ ಎಸೆತವನ್ನೂ ಕೂಡ ಬಾರಿಸುವ ಆತುರದಲ್ಲಿ ಸೂರಜ್ ಅಲ್ಲೇ ಎತ್ತರಕ್ಕೆ ಚೆಂಡನ್ನು ಹೊಡೆದ. ಗಾಳಿಯಲ್ಲಿದ್ದ ಚೆಂಡು ಕೆಳಕ್ಕೆ ಬೀಳುವ ಮೊದಲು ಅಚ್ಯುತ ಕ್ಯಾಚ್ ಹಿಡಿದುಕೊಂಡನು. ಹೀಗೆ ಸೂರಜ್‌ನ ವಿಕೆಟ್ ಬಿದ್ದ ಮೇಲೆ ಸೂರತ್ಕಲ್ ತಂಡದ ಆಟಗಾರರು ತರಗೆಲೆಗಳಂತೆ ಒಬ್ಬರಾದ ಮೇಲೆ ಒಬ್ಬರು ವಿಕೆಟ್ ಒಪ್ಪಿಸಿಹೋದರು. ಚಮಕ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಚಿಕ್ಕಮಗಳೂರು ಮೈದಾನ. ಶ್ರೀ ತಂಡದ ಕುಮಾರ ಸ್ಟ್ರೈಕರ್ ವಿಭಾಗದಲ್ಲಿ ನಿಂತಿದ್ದನು. ಕೊನೆಯ ಓವರ್‌ನಲ್ಲಿ 21 ರನ್ನುಗಳ ಅವಶ್ಯಕತೆ ಇತ್ತು. ಈತನಿಗೆ ಪಂದ್ಯದ ಮೂರು ದಿನಗಳ ಹಿಂದೆ ಕೆ.ಎಸ್.ಸಿ.ಎ ಲೀಗ್ ಪಂದ್ಯವಾಡುತ್ತಿದ್ದಾಗ ಲೆದರ್ ಬಾಲ್‌ನಿಂದ ಬೆರಳಿಗೆ ಬಲವಾದ ಪೆಟ್ಟುಬಿದ್ದಿತ್ತು. ಆದರೂ ಟೆನ್ನಿಸ್ ಬಾಲ್ ಕ್ರಿಕೆಟ್ ಆಡಲು ಬಂದಿದ್ದನು. ಈತನಿಗೆ ಬ್ಯಾಟ್ ಹಿಡಿಯಲು ಕೂಡ ಕಷ್ಟವಾಗುತ್ತಿತ್ತು. ಆದರೂ ತಂಡವನ್ನು ಗೆಲ್ಲಿಸಲು ಪ್ರಯತ್ನಿಸಲೇಬೇಕಾಗಿತ್ತು. ಬೌಲರಿಗೆ ಅತಿಯಾದ ವಿಶ್ವಾಸವಿತ್ತು. ಮುರಿದ ಬೆರಳ ಕೈಯಲ್ಲಿ ಬ್ಯಾಟ್ ಹಿಡಿದಿರುವ ಕುಮಾರನಿಗೆ 21 ರನ್ ಹೊಡೆಯುವುದು ಕಷ್ಟದ ಮಾತಾಗಿತ್ತು. ಆತ ’ತಕೋ ಹೊಡಿ’ ಎಂದು ಮೊದಲ ಮೂರು ಎಸೆತಗಳನ್ನು ತೀರ ಅಸಡ್ಡೆಯಿಂದ ಹಾಕಿದನು. ಕುಮಾರ್ ಆ ಮೂರನ್ನು ಸಿಕ್ಸರಿಗೆ ಅಟ್ಟಿದನು. ನಿದ್ದೆಯಿಂದ ಎಚ್ಚೆತ್ತವನಂತೆ ಪಂದ್ಯದ ಗಂಭೀರತೆಯನ್ನು ಅರಿತ ಬೌಲರ್ ಇನ್ನೂ ವೇಗವಾಗಿ, ಜೋರಾಗಿ ಬೌಲ್ ಮಾಡಲು ಶುರು ಮಾಡಿದನು. ನಾಲ್ಕನೇ ಎಸೆತ ರನ್ನುರಹಿತವಾಯಿತು. ಐದನೇ ಎಸೆತವನ್ನು ಬೌಂಡರಿ ದಾಟಿಸುವ ಮೂಲಕ ಕುಮಾರ್ ಟೆನ್ನಿಸ್ ಬಾಲ್ ಕ್ರಿಕೆಟ್‌ನ ಹೀರೋ ಆದನು.

ಮೇಲಿನ ಮೂರು ಪಂದ್ಯಗಳ ಘಟನೆಗಳು ಪ್ರೇಕ್ಷಕರನ್ನು ಮೈನವಿರೇಳಿಸುವಂತಹವು. ಮೊದಲ ಎರಡು ಪಂದ್ಯಗಳ ಘಟನೆಗಳಲ್ಲಿ ಆಟಗಾರನಾಗಿ ನಾನು ನೇರವಾಗಿ ಭಾಗಿಯಾಗಿದ್ದೆ. ಮೂರನೇ ಘಟನೆ ನಡೆಯುತ್ತಿದ್ದಾಗ, ಆ ಟೂರ್ನಮೆಂಟಿನ ಭಾಗವಾಗಿ ಮೈದಾನದಲ್ಲಿದ್ದು ಆ ಘಟನೆಗೆ ಸಾಕ್ಷಿಯಾಗಿದ್ದೆ. ಇಂತಹ ನೂರಾರು ಘಟನೆಗಳು ಟೆನ್ನಿಸ್ ಬಾಲ್ ಕ್ರಿಕೆಟಿನಲ್ಲಿ ಸಂಭವಿಸಿವೆ. ಎಂಟು, ಹತ್ತು, ಹನ್ನೆರಡು, ಓವರ್‌ಗಳ ಚುಟುಕು ಕ್ರಿಕೆಟ್ ಪಂದ್ಯಗಳಲ್ಲಿ ಒಂದೊಂದು ಎಸೆತವೂ ರೋಮಾಂಚನಕ್ಕೆ ಎಡೆಮಾಡಿಕೊಡುತ್ತದೆ. ನೂರಾರು ಕನಸುಗಳನ್ನು ಕಟ್ಟಿಕೊಂಡಿರುವ ಯುವ ಆಟಗಾರರ ಅದ್ಭುತ ಪ್ರಪಂಚ ಇದು. ಇಲ್ಲಿ ಅನೇಕ ಯುವ ಕ್ರಿಕೆಟ್ ಆಟಗಾರರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಭವಿಷ್ಯವನ್ನು ರೂಪಿಸಿಕೊಳ್ಳುವ ತವಕದಲ್ಲಿರುತ್ತಾರೆ.

ಟೆನ್ನಿಸ್ ಬಾಲ್ ಕ್ರಿಕೆಟ್‌ಅನ್ನು ತುಂಬ ಹತ್ತಿರದಿಂದ ಬಲ್ಲ ಒಬ್ಬ ವ್ಯಕ್ತಿಯು ಒಂದು ತಂಡವನ್ನಾಗಿ ಕಟ್ಟಿ ಟೂರ್ನಮೆಂಟ್ ಆಡಿಸಲು ಬಂಡವಾಳವನ್ನು ಹಾಕುತ್ತಾನೆ. ಅವನನ್ನು ತಂಡದ ಮ್ಯಾನೇಜರ್ ಎಂದು ಕರೆಯಲಾಗುತ್ತದೆ. ಚೆನ್ನಾಗಿ ಆಡುವ ಆಟಗಾರರನ್ನು ಒಂದು ಕಡೆ ಕಲೆಹಾಕಿ ಒಂದು ತಂಡವನ್ನಾಗಿಸುತ್ತಾನೆ. ರಾಜ್ಯದ ಬೇರೆಬೇರೆ ಸ್ಥಳಗಳಲ್ಲಿ ನಡೆಯುವ ಟೂರ್ನಮೆಂಟ್‌ಗಳಿಗೆ ಈ ಆಟಗಾರರನ್ನು ಕರೆದುಕೊಂಡು ಹೋಗುತ್ತಾನೆ. ಆಟಗಾರರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಾನೆ. ಮಂಗಳೂರು, ಉಡುಪಿ, ಕುಂದಾಪುರ, ಚಿಕ್ಕಮಗಳೂರು, ಹಾಸನ, ಮೈಸೂರು-ಹೀಗೆ ರಾಜ್ಯದ ಎಲ್ಲಾ ಕಡೆಗಳಲ್ಲೂ ಪಂದ್ಯಾವಳಿಗಳು ಆಯೋಜನೆಯಾಗಿರುತ್ತವೆ.

ಒಂದು ಪಂದ್ಯಾವಳಿಯ ಮೊದಲ ಬಹುಮಾನ ಒಂದು, ಎರಡು, ಮೂರು ಲಕ್ಷದವರೆಗೂ ಇರುತ್ತದೆ. ಬಹುಪಾಲು ಪಂದ್ಯಾವಳಿಗಳನ್ನು ಆಯೋಜಕರು ವಾರದ ಕೊನೆಗೆ ಅಂದರೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಆಯೋಜನೆ ಮಾಡಿರುತ್ತಾರೆ. ಪಂದ್ಯಾವಳಿ ದೂರದ ಮಂಗಳೂರು ಅಥವಾ ಉಡುಪಿಯಲ್ಲಿದ್ದರೆ ಬೆಂಗಳೂರಿನಿಂದ ಹೊರಡುವ ತಂಡಕ್ಕೆ ಶನಿವಾರ ಮದ್ಯಾಹ್ನದ ಮೇಲೆ ಪಂದ್ಯವನ್ನು ಹಾಕಿಕೊಡಲಾಗಿರುತ್ತದೆ. ಒಂದಷ್ಟು ವಿಶ್ರಾಂತಿ ಪಡೆದುಕೊಳ್ಳುವ ತಂಡಗಳು ಹೊನಲು-ಬೆಳಕಿನಲ್ಲೂ ಆಡುವುದರಿಂದ ಈ ರೀತಿ ವ್ಯವಸ್ಥೆ ಮಾಡಿಕೊಡಲಾಗಿರುತ್ತದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಮೂರು ದಿನಗಳಲ್ಲಿ ಮುಗಿಯುವ ಪಂದ್ಯಾವಳಿಗಳು ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿರುತ್ತವೆ.

ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವ ಟೆನ್ನಿಸ್ ಬಾಲ್ ಕ್ರಿಕೆಟಿನ ಆಟಗಾರರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಅಸಾಮಾನ್ಯ ಪ್ರತಿಭಾವಂತರಿಗೆ ಒಂದು ಟೂರ್ನಮೆಂಟಿಗೆ ಒಂದು ಸಾವಿರದಂತೆ ಮ್ಯಾನೇಜರ್ ಕೊಡುತ್ತಾನೆ. ಉಳಿದಂತೆ ಭವಿಷ್ಯದ ಹುಡುಕಾಟದಲ್ಲಿರುವ ಇವರಲ್ಲಿ ಅನೇಕರು ದಿನಗೂಲಿ ನೌಕರರಾಗಿ ದುಡಿಯುತ್ತಿರುತ್ತಾರೆ. ಕೆಲವರು ಆಟೋ ಡ್ರೈವರುಗಳಾಗಿ, ಪೇಂಟರುಗಳಾಗಿ, ಎಲೆಕ್ಟ್ರಿಷಿಯನ್ನರುಗಳಾಗಿ ದುಡಿಮೆ ಮಾಡುತ್ತಾ ವಾರದ ಕೊನೆಯಲ್ಲಿ ನಡೆಯುವ ಇಂತಹ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಬಕಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಇವರಿಗೆ ಪ್ರಥಮ ಅಥವಾ ದ್ವಿತೀಯಾ ಬಹುಮಾನ ಗೆದ್ದಾಗ ಮಾತ್ರ ಅದರಲ್ಲಿ ಅಲ್ಪ ಭಾಗವನ್ನು ಕೊಡಲಾಗುತ್ತದೆ.

ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದವರಲ್ಲಿ, ಸುನಿಲ್ ಗವಾಸ್ಕರ್, ಡಿ ಗಣೇಶ್, ಕೇದರ್ ಜಾದವ್, ಟಿ. ನಟರಾಜನ್‌ರಂತಹ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಅದೃಷ್ಟದ ಕದ ತೆಗೆದಾಗ ಅಂತರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಬಡಕುಟುಂಬದ ಬಹುಪಾಲು ಯುವಕರು ಲೆದರ್ ಬಾಲ್ ಕ್ರಿಕೆಟ್ ಆಡಲು ಕಿಟ್ಟನ್ನು ಕೊಳ್ಳಲಾಗದೇ, ಅಕಾಡೆಮಿ ಶುಲ್ಕ ಕಟ್ಟಲು ಸಾಧ್ಯವಾಗದೇ ಕೇವಲ ಕನಸುಗಳನ್ನು ಕಾಣುತ್ತಾ ಜೀವನ ಸವೆಸಿಬಿಡುತ್ತಾರೆ. ಭಾರತದ ಮಾಜಿ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರಾ ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರರ ವಿಶೇಷ ಸಾಧನೆಯ ವಿಡಿಯೋಗಳನ್ನು ಹಂಚಿಕೊಳ್ಳುವುದರ ಮೂಲಕ ಅವರ ಪ್ರತಿಭೆ ಅನಾವರಣಗೊಳ್ಳುವಂತೆ ಮಾಡುತ್ತಿದ್ದಾರೆ. ಹೀಗಾದರೂ ಆಯ್ಕೆಗಾರರ ಕಣ್ಣು ಆ ವಿಡಿಯೋಗಳ ಮೇಲೆ ಬಿದ್ದರೆ ಕೆಲವು ಆಟಗಾರರ ಭವಿಷ್ಯವಾದರೂ ಉಜ್ವಲವಾಗಬಹುದೇನೋ?

ಕರ್ನಾಟಕದಲ್ಲೂ ಕೂಡ ಅನೇಕ ಪ್ರತಿಭಾವಂತ ಆಟಗಾರರು ಎಲೆಮರೆಕಾಯಿಯಂತೆ ಇದ್ದಾರೆ. ವರ್ತಮಾನದಲ್ಲಿ ಸಾಗರ್ ಭಂಡಾರಿ, ಸ್ವಸ್ತಿಕ್ ನಾಗರಾಜ್, ಅಕ್ಷಯ್, ರಾಜ ಸಾಲಿಗ್ರಾಮ, ಪ್ರದೀಪ್‌ರಂತಹ ಅನೇಕರು ಇದ್ದರೆ, ಹಿಂದೆ ಭಗವಾನ್, ಮಹೇಶ್, ರಾಜೀವ, ಪುರುಷಿ, ಇಮ್ರಾನ್, ಸೂರಜ್, ಟಬು, ಶಂಕರರಂತಹ ಘಟಾನುಘಟಿ ಆಟಗಾರರು ತಮ್ಮ ಛಾಪನ್ನು ಮೂಡಿಸಿಹೋಗಿದ್ದಾರೆ. ಆದರೆ ಇವರಲ್ಲಿ ಹೆಚ್ಚು ಮಂದಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ತಮ್ಮ ಜೀವನವನ್ನು ತಳ್ಳುತ್ತಿದ್ದಾರೆ.

ಶ್ರೀಮಂತರು ತಮ್ಮ ಮಕ್ಕಳನ್ನು ’ಕ್ರಿಕೆಟ್ ಅಕಾಡೆಮಿ’ಗಳಿಗೆ ಸೇರಿಸುತ್ತಾರೆ. ಅವರಿಗೆ ಯಾವುದೇ ತೊಂದರೆಯಾಗದಂತೆ ಪ್ರತಿದಿನ ಜೊತೆಯಲ್ಲಿ ಕರೆದುಕೊಂಡುಹೋಗಿ ಬರುತ್ತಾರೆ. ಅವರಿಗೆ ಕಷ್ಟ, ಸಮಸ್ಯೆ, ತೊಂದರೆ ಎನ್ನುವುದೇ ಗೊತ್ತಿಲ್ಲ. ಭಾರತ ಕ್ರಿಕಟ್ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಂತಹ ರಾಜ್ಯ ಕ್ರಿಕೆಟ್ ಸಂಸ್ಥೆಗಳು ’ಟ್ಯಾಲೆಂಟ್ ಹಂಟ್’ ಎಂಬ ಹೆಸರಿನಲ್ಲಿ ಇಂತಹ ಶ್ರೀಮಂತ ಮಕ್ಕಳ ಪ್ರತಿಭಾನ್ವೇಷಣೆಗೆ ಮನ್ನಣೆ ಕೊಡುತ್ತಿರುವುದು ಕ್ರಿಕೆಟ್ ಜಗತ್ತಿನ ದುರಂತವಾಗಿದೆ. ಇದಕ್ಕೆ ಪರ್ಯಾಯವಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿರುವ ಗ್ರಾಮೀಣ ಭಾಗದ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಬೇಕಿದೆ. ಅವರಿಗೆ ಉತ್ತಮ ತರಬೇತಿ ಕೊಟ್ಟು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸಬೇಕಿದೆ. ಕ್ರಿಕೆಟ್ ಶ್ರೀಮಂತರ ಆಟ ಎನ್ನುವ ಸ್ಥಾಪಿತ ಸತ್ಯವನ್ನು ಸುಳ್ಳು ಮಾಡಬೇಕಿದೆ. ಇನ್ನಾದರೂ ಬಿ.ಸಿ.ಸಿ ಹಾಗೂ ಕೆ.ಎಸ್.ಸಿ.ಎ.ಯಂತಹ ಸಂಸ್ಥೆಗಳು ಈ ಕಡೆ ಗಮನ ಹರಿಸಬೇಕೆನ್ನುವುದು ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿರುವ ಸಾವಿರಾರು ಪ್ರತಿಭೆಗಳ ಆಶಯವಾಗಿದೆ.

ಡಾ. ರಿಯಾಜ಼್ ಪಾಷ

ಡಾ. ರಿಯಾಜ್ ಪಾಷಾ
ರಿಯಾಜ್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್‌ಡಿ ಪದವಿ ಪಡೆದಿದ್ದಾರೆ


ಇದನ್ನೂ ಓದಿ: ಟಿ-20 ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಲಿರುವ ರಾಹುಲ್ ದ್ರಾವಿಡ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...