ಲಾಹೋರ್: ನೆರೆಯ ಅಫ್ಘಾನಿಸ್ತಾನದಲ್ಲಿನ ಶಂಕಿತ ಭಯೋತ್ಪಾದಕರ ಮೇಲೆ ಪಾಕಿಸ್ತಾನವು ಮಂಗಳವಾರ ತಡರಾತ್ರಿ ನಡೆಸಿದ ವಾಯುದಾಳಿಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ತಾಲಿಬಾನ್ ಸರಕಾರವು ಇದನ್ನು ಏಕಪಕ್ಷೀಯ ವೈಮಾನಿಕ ದಾಳಿಯೆಂದು ಖಂಡಿಸಿದೆ ಮತ್ತು ಪ್ರತೀಕಾರದ ಎಚ್ಚರಿಕೆ ನೀಡಿದೆ.
ದಾಳಿಯು ಪಾಕಿಸ್ತಾನಿ ತಾಲಿಬಾನ್ ಅಥವಾ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಗಳನ್ನು ಗುರಿಯಾಗಿಸಿಕೊಂಡಿತ್ತು ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಪಕ್ಟಿಕಾ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ನಡೆಸಲಾಯಿತು ಎಂದು ಅಧಿಕಾರಿಗಳು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.
ದಾಳಿಯಲ್ಲಿ 7 ಹಳ್ಳಿಗಳನ್ನು ಗುರಿ ಮಾಡಲಾಗಿತ್ತು. ಅವುಗಳಲ್ಲಿ ಒಂದು ಸಂಪೂರ್ಣವಾಗಿ ನಾಶವಾಗಿದೆ. ನಮ್ಮ ತರಬೇತಿ ಪರಿಕರಗಳನ್ನು ಸಂಪೂರ್ಣ ಹಾಳುಗೆಡುವುಲಾಗಿದೆ. ಹಾಗೆಯೇ ಕೆಲವು ಭಯೋತ್ಪಾದಕರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಮಾಧ್ಯಮ ವರದಿ ಮಾಡಿವೆ.
ತಾಲಿಬಾನ್‌ನ ರಕ್ಷಣಾ ಸಚಿವಾಲಯವು ಪಾಕಿಸ್ತಾನದ ವೈಮಾನಿಕ ದಾಳಿಯನ್ನು ಖಂಡಿಸಿದೆ. ಪಾಕ್ ನಮ್ಮ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ ಮತ್ತು ಈ ದಾಳಿಯ ಬಲಿಪಶುಗಳಲ್ಲಿ ಹೆಚ್ಚಿನವರು ವಜೀರಿಸ್ತಾನ್ ಪ್ರದೇಶದ ನಿರಾಶ್ರಿತರು ಎಂದು ಹೇಳಿದೆ.
ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನವು ಇದನ್ನು ಎಲ್ಲಾ ಅಂತರರಾಷ್ಟ್ರೀಯ ನಿಯಮಗಳನ್ನು ಗಾಳಿಗೆ ತೂರಿದ ಕ್ರೂರ ಕೃತ್ಯವೆಂದು ಪರಿಗಣಿಸಿದೆ ಮತ್ತು ಇದನ್ನು ಬಲವಾಗಿ ಖಂಡಿಸಿದೆ ಎಂದು ಆಫ್ಘಾನಿಸ್ತಾನದ ಸಚಿವಾಲಯ ಹೇಳಿದೆ.
ಪಾಕಿಸ್ತಾನಿ ತಾಲಿಬಾನ್ ಅಥವಾ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ತನ್ನ ದೇಶದ ಮೇಲೆ ಅಫ್ಘಾನ್ ನೆಲದಿಂದ ದಾಳಿ ನಡೆಸುತ್ತದೆ ಎಂದು ಪಾಕ್ ಹೇಳುತ್ತಿರುತ್ತದೆ. ಇದನ್ನು ಅಫ್ಘಾನ್ ನಿರಾಕರಿಸಿದೆ.
ವೈಮಾನಿಕ ದಾಳಿಯನ್ನು “ಹೇಡಿಗಳ ಕೃತ್ಯ” ಎಂದು ಕರೆದ ಸಚಿವಾಲಯ, ಪಾಕಿಸ್ತಾನದ ಈ “ಏಕಪಕ್ಷೀಯ ವೈಮಾನಿಕ ದಾಳಿ” ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಮತ್ತು ತನ್ನ ಭೂಪ್ರದೇಶ ಮತ್ತು ಭೂಪ್ರದೇಶದ ರಕ್ಷಣೆಯಿಂದ ಬೇರ್ಪಡಿಸಲಾಗದು ಎಂದು ಹೇಳಿದೆ.
ಅಫ್ಘಾನಿಸ್ತಾನದ ಪಾಕಿಸ್ತಾನದ ವಿಶೇಷ ಪ್ರತಿನಿಧಿ ಮೊಹಮ್ಮದ್ ಸಾದಿಕ್ ಅವರು ಕಾಬೂಲ್‌ನಲ್ಲಿ ತಾಲಿಬಾನ್ ನಾಯಕತ್ವವನ್ನು ಭೇಟಿಯಾಗಿ ಬಾಂಧವ್ಯವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದ ಕೆಲ ಸಮಯಗಳ ನಂತರ ಈ ದಾಳಿ ಸಂಭವಿಸಿದೆ.
ಭೇಟಿಯ ಸಮಯದಲ್ಲಿ, ಸಾದಿಕ್ ಅಫ್ಘಾನಿಸ್ತಾನದ ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಅವರನ್ನು ಭೇಟಿಯಾದರು. ಅವರ ಚಿಕ್ಕಪ್ಪ ಖಲೀಲ್ ಹಕ್ಕಾನಿ ಇತ್ತೀಚೆಗೆ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದರು ಎಂದು ಇಸ್ಲಾಮಿಕ್ ಸ್ಟೇಟ್ ಗುಂಪಿನ ಪ್ರಾದೇಶಿಕ ಅಂಗಸಂಸ್ಥೆಯು ಹೇಳಿಕೊಂಡಿದೆ. ಖಲೀಲ್ ಹಕ್ಕಾನಿ ಅವರು ಅಫ್ಘಾನ್ ನಲ್ಲಿ ನಿರಾಶ್ರಿತರು ಮತ್ತು ವಾಪಸಾತಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು.
2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಿತು ಮತ್ತು ದೇಶದಲ್ಲಿ ತಾಲಿಬಾನ್ ಸ್ವಾಧೀನಪಡಿಸಿಕೊಂಡಿರುವುದು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಗೆ ಮತ್ತಷ್ಟು ಸ್ಥೈರ್ಯ ಬಂದಿದೆ. ಇದರ ನಾಯಕರು ಮತ್ತು ಹೋರಾಟಗಾರರು ಅಫ್ಘಾನಿಸ್ತಾನದಲ್ಲಿ ಅಡಗಿಕೊಂಡಿದ್ದಾರೆ ಎಂದು ಪಾಕ್ ಆರೋಪಿಸುತ್ತಿದೆ.
ಕಾಬೂಲ್‌ನಲ್ಲಿ ಅಫ್ಘಾನಿಸ್ತಾನ ಸರ್ಕಾರವು ಆಯೋಜಿಸಿದ್ದ ತಿಂಗಳುಗಳ ಮಾತುಕತೆ ವಿಫಲವಾದ ನಂತರ ಪಾಕ್ ಸರ್ಕಾರದೊಂದಿಗೆ ಏಕಪಕ್ಷೀಯವಾಗಿ ಕದನ ವಿರಾಮವನ್ನು ಕೊನೆಗೊಳಿಸಿ, ನವೆಂಬರ್ 2022 ರಿಂದ ಟಿಟಿಪಿಯು ಪಾಕಿಸ್ತಾನಿ ಸೈನಿಕರು ಮತ್ತು ಪೊಲೀಸರ ಮೇಲೆ ದಾಳಿಯನ್ನು ಹೆಚ್ಚಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ, ಈ ಗುಂಪು ದೇಶದೊಳಗಿನ ದಾಳಿಗಳಲ್ಲಿ ಡಜನ್ ಗಟ್ಟಲೆ ಸೈನಿಕರನ್ನು ಕೊಂದುಹಾಕಿದೆ.
ಮಾರ್ಚ್‌ನಲ್ಲಿ, ಟಿಟಿಪಿಯ ಪಾಕಿಸ್ತಾನಿ ಪಡೆಗಳ ಮೇಲಿನ ಮಾರಣಾಂತಿಕ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನಿ ವಾಯುಪಡೆಯ ಜೆಟ್‌ಗಳು ಅಫ್ಘಾನಿಸ್ತಾನದ ಖೋಸ್ಟ್ ಮತ್ತು ಪಕ್ಟಿಕಾ ಗಡಿ ಪ್ರದೇಶಗಳಲ್ಲಿ ಇದರ ವಿರುದ್ಧ ವೈಮಾನಿಕ ದಾಳಿ ನಡೆಸಿತು. ಇದರ ಪರಿಣಾಮವಾಗಿ ಲೆಫ್ಟಿನೆಂಟ್ ಕರ್ನಲ್ ಮತ್ತು ಕ್ಯಾಪ್ಟನ್ ಸೇರಿದಂತೆ ಏಳು ಸೈನಿಕರು ಕೊಲ್ಲಲ್ಪಟ್ಟರು. ಈ ದಾಳಿಯ ಹೊಣೆಯನ್ನು ಟಿಟಿಪಿಯ ಹಫೀಜ್ ಗುಲ್ ಬಹದ್ದೂರ್ ಗುಂಪು ಹೊತ್ತುಕೊಂಡಿತ್ತು.
25 ವರ್ಷಗಳಿಂದ ಹಿಮಾಚಲ ವೃದ್ಧಾಶ್ರಮದಲ್ಲಿ ವಾಸ; ಕನ್ನಡಿಗ ಐಪಿಎಸ್ ಅಧಿಕಾರಿಯಿಂದ ಕುಟುಂಬ ಸೇರಿದ ಸಾಕಮ್ಮ


