ಅಲ್-ಖಾದಿರ್ ಟ್ರಸ್ಟ್‌ಗೆ ಸಂಬಂಧಿಸಿದ 190 ಮಿಲಿಯನ್ ಪೌಂಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ತಪ್ಪಿತಸ್ಥರು ಎಂದು ಪಾಕಿಸ್ತಾನದ ನ್ಯಾಯಾಲಯ ಶುಕ್ರವಾರ (ಜ.17) ಘೋಷಿಸಿದ್ದು, ಅವರಿಗೆ ಕ್ರಮವಾಗಿ 14 ಮತ್ತು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಜೈಲು ಶಿಕ್ಷೆಯ ಜೊತೆಗೆ, ಇಮ್ರಾನ್ ಖಾನ್ ಅವರಿಗೆ 10 ಲಕ್ಷ ರೂಪಾಯಿ ಮತ್ತು ಬುಶ್ರಾ ಬೀಬಿ ಅವರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಖಾನ್‌ಗೆ ಆರು ತಿಂಗಳು ಮತ್ತು ಬೀಬಿಗೆ ಮೂರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಇಮ್ರಾನ್ ಖಾನ್ ದಂಪತಿ ಸ್ಥಾಪಿಸಿದ ಅಲ್-ಖಾದಿರ್ ವಿಶ್ವವಿದ್ಯಾಲಯದ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.
ಇಮ್ರಾನ್ ಖಾನ್ ಈಗಾಗಲೇ ಜೈಲಿನಲ್ಲಿದ್ದು, ಬುಶ್ರಾ ಬೀಬಿಯನ್ನು ನ್ಯಾಯಾಲಯದಿಂದ ಬಂಧಿಸಲಾಗಿದೆ ಎಂದು ವರದಿಗಳು ಹೇಳಿವೆ.
ಕಳೆದ ಜನವರಿ 13ನೇ ತಾರೀಕು ಸೇರಿದಂತೆ ಮೂರು ಬಾರಿ ವಿವಿಧ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ತೀರ್ಪನ್ನು ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ಇಂದು (ಜ.17) ಪ್ರಕಟಿಸಿದ್ದಾರೆ.
ಅಡಿಲಾ ಜೈಲಿನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.
“ಇಂದಿನ ತೀರ್ಪು ನ್ಯಾಯಾಂಗದ ಖ್ಯಾತಿಗೆ ಕಳಂಕ ತಂದಿದೆ. ಈ ಪ್ರಕರಣದಲ್ಲಿ ನನಗೆ ಲಾಭವೂ ಆಗಿಲ್ಲ, ಸರ್ಕಾರಕ್ಕೆ ನಷ್ಟವೂ ಆಗಿಲ್ಲ. ನನಗೆ ಯಾವುದೇ ಪರಿಹಾರ ಬೇಡ ಮತ್ತು ಎಲ್ಲಾ ಪ್ರಕರಣಗಳನ್ನು ಎದುರಿಸುತ್ತೇನೆ. ಸರ್ವಾಧಿಕಾರಿಯೊಬ್ಬರು ಇದನ್ನೆಲ್ಲ ಮಾಡುತ್ತಿದ್ದಾರೆ” ಎಂದು ಇಮ್ರಾನ್ ಖಾನ್ ಹೇಳಿರುವುದಾಗಿ ಅವರ ಪಕ್ಷ ತಿಳಿಸಿದೆ.
ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೊ(ಎನ್‌ಎಬಿ) 2023ರ ಡಿಸೆಂಬರ್‌ನಲ್ಲಿ ಇಮ್ರಾನ್ ಖಾನ್ (72), ಬುಶ್ರಾ ಬೀಬಿ (50) ಮತ್ತು ಇತರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿತ್ತು. ದೇಶದ ಖಜಾನೆಗೆ ಇಮ್ರಾನ್ ಖಾನ್ ದಂಪತಿ 190 ಮಿಲಿಯನ್ ಪೌಂಡ್‌ಗಳಷ್ಟು (ಪಾಕಿಸ್ತಾನ ರೂಪಾಯಿಯಲ್ಲಿ 50 ಶತಕೋಟಿ) ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಒಬ್ಬ ಉದ್ಯಮಿ ಸೇರಿ ಪ್ರಕರಣದ ಇತರೆ ಆರೋಪಿಗಳು ದೇಶದಿಂದ ಹೊರಗಿರುವ ಕಾರಣ ಖಾನ್ ಮತ್ತು ಬೀಬಿ ವಿರುದ್ಧ ಮಾತ್ರ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ವ್ಯವಹಾರವೊಂದರ ಇತ್ಯರ್ಥದ ಬಳಿಕ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಂದ 50 ಶತಕೋಟಿ ರೂಪಾಯಿಯನ್ನು ಬ್ರಿಟನ್‌ನ ರಾಷ್ಟ್ರೀಯ ಅಪರಾಧ ಸಂಸ್ಥೆಯು ಪಾಕಿಸ್ತಾನಕ್ಕೆ ಹಿಂದಿರುಗಿಸಿತ್ತು. ಆ ಹಣವನ್ನು ಇಮ್ರಾನ್ ಖಾನ್ ದಂಪತಿ, ಮತ್ತಿತರರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುವುದು ಆರೋಪ.
ರಾಷ್ಟ್ರೀಯ ಖಜಾನೆಗೆ ಸೇರಬೇಕಿದ್ದ ಈ ಹಣವನ್ನು ಬೀಬಿ ಮತ್ತು ಖಾನ್‌ಗೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸಹಾಯ ಮಾಡಿದ ಉದ್ಯಮಿಯ ವೈಯಕ್ತಿಕ ಲಾಭಕ್ಕಾಗಿ ತಿರುಗಿಸಿದ್ದರು ಎಂದು ದೂರಲಾಗಿದೆ.
ಅಲ್-ಖಾದಿರ್ ಟ್ರಸ್ಟ್‌ನ ಟ್ರಸ್ಟಿಯಾಗಿರುವ ಬುಶ್ರಾ ಬೀಬಿ, ಈ ಇತ್ಯರ್ಥದಿಂದ ಲಾಭ ಪಡೆದ ಆರೋಪವನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಝೇಲಂನಲ್ಲಿರುವ ಅಲ್-ಖಾದಿರ್ ವಿಶ್ವವಿದ್ಯಾಲಯಕ್ಕಾಗಿ 458 ಕನಾಲ್ ((57 ಎಕರೆ) ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದು ಸೇರಿದೆ.
ಇಮ್ರಾನ್ ಖಾನ್ ಮತ್ತು ಅವರ ಪಕ್ಷದ ಇತರ ಹಲವಾರು ನಾಯಕರ ಜೈಲು ಶಿಕ್ಷೆಯಿಂದಾಗಿ ದೇಶದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯನ್ನು ಪರಿಹರಿಸಲು ಸರ್ಕಾರ ಮತ್ತು ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನಡುವೆ ನಡೆಯುತ್ತಿರುವ ಮಾತುಕತೆಯ ಮಧ್ಯೆ ನ್ಯಾಯಾಲಯದ ತೀರ್ಪು ಹೊರ ಬಿದ್ದಿದೆ.
ಇಲ್ಲಿಯವರೆಗೆ ಮೂರು ಸುತ್ತಿನ ಮಾತುಕತೆಗಳು ನಡೆದಿದ್ದು, ಪಿಟಿಐ ತನ್ನ ಬೇಡಿಕೆಗಳ ಪಟ್ಟಿಯನ್ನು ಸರ್ಕಾರಕ್ಕೆ ಲಿಖಿತವಾಗಿ ಮಂಡಿಸಿದೆ.
2022ರಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡ ನಂತರ ಖಾನ್ ಅವರು ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರು ಆಗಸ್ಟ್ 2023 ರಿಂದ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ : ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ: ಶಂಕಿತನ ಬಂಧಿಸಿದ ಮುಂಬೈ ಪೊಲೀಸರು


