ಭಾರತದಿಂದ ಹತ್ತಿ ಮತ್ತು ಸಕ್ಕರೆಯನ್ನು ಆಮದು ಮಾಡಿಕೊಳ್ಳುವ ಆರ್ಥಿಕ ಸಮನ್ವಯ ಸಮಿತಿಯ (ಇಸಿಸಿ) ಪ್ರಸ್ತಾವನೆಯನ್ನು ಪಾಕಿಸ್ತಾನದ ಕ್ಯಾಬಿನೆಟ್ ಗುರುವಾರ ತಿರಸ್ಕರಿಸಿದ್ದು, ಭಾರತದೊಂದಿಗೆ ಯಾವುದೇ ವ್ಯಾಪಾರವಿಲ್ಲ ಎಂದು ಇಂದು ಕ್ಯಾಬಿನೆಟ್ ಸ್ಪಷ್ಟವಾಗಿ ಹೇಳಿದೆ.
ಪಾಕಿಸ್ತಾನದ ಹೊಸ ಹಣಕಾಸು ಸಚಿವ ಹಮ್ಮದ್ ಅಝರ್ ಅವರು ಅಧ್ಯಕ್ಷತೆ ವಹಿಸಿದ್ದ ಇಸಿಸಿ ಸಭೆಯಲ್ಲಿ ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದಿನ ಮೇಲಿನ ಎರಡು ವರ್ಷಗಳ ಹಳೆಯ ನಿಷೇಧವನ್ನು ತೆಗೆದುಹಾಕುವುದಾಗಿ ಬುಧವಾರ ಘೋಷಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ, ಇಮ್ರಾನ್ ಖಾನ್ ಅವರ ಆಪ್ತ ಸಹಾಯಕಿ ಮತ್ತು ಮಾನವ ಹಕ್ಕುಗಳ ಸಚಿವೆ ಶಿರೀನ್ ಮಜಾರಿ ಅವರು, ಎಲ್ಲಾ ಇಸಿಸಿ ನಿರ್ಧಾರಗಳನ್ನು ಕ್ಯಾಬಿನೆಟ್ ಅನುಮೋದಿಸಬೇಕಾಗಿದೆ ಮತ್ತು ಆಗ ಮಾತ್ರ ಅವುಗಳನ್ನು ಸರ್ಕಾರದ ಅನುಮೋದನೆ ಎಂದು ಹೇಳಬಹುದು ಎಂದು ಹೇಳಿದ್ದರು.
ಇದನ್ನೂ ಓದಿ: ಸಿಂಗೂರು, ನಂದಿಗ್ರಾಮ ಚಳವಳಿಯ ಮುಂಚೂಣಿಯಲ್ಲಿದ್ದ SUCI ಈ ಚುನಾವಣೆಯಲ್ಲೇನು ಮಾಡುತ್ತಿದೆ?
“ಇಸಿಸಿಯ ಎಲ್ಲಾ ನಿರ್ಧಾರಗಳನ್ನು ಕ್ಯಾಬಿನೆಟ್ ಅನುಮೋದಿಸಬೇಕಾಗಿದೆ. ಆಗ ಮಾತ್ರ ಅವುಗಳನ್ನು ಸರ್ಕಾರದಿಂದ ಅನುಮೋದಿಸಲಾಗಿದೆ ಎಂದು ಹೇಳಬಹುದು. ಆದ್ದರಿಂದ ಇಂದು ಕ್ಯಾಬಿನೆಟ್‌ನಲ್ಲಿ ಭಾರತದೊಂದಿಗೆ ವ್ಯಾಪಾರ ಸೇರಿದಂತೆ ಇಸಿಸಿ ನಿರ್ಧಾರಗಳ ಬಗ್ಗೆ ಚರ್ಚೆ ನಡೆಯಲಿದೆ. ನಂತರ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಮಾಧ್ಯಮಗಳು ಈ ಬಗ್ಗೆ ಕನಿಷ್ಠ ತಿಳಿದಿರಬೇಕು” ಎಂದು ಶಿರಿನ್ ಮಜಾರಿ ಬೆಳಿಗ್ಗೆ ತಿಳಿಸಿದ್ದರು.
ಸಂಜೆ ಟ್ವೀಟ್ ಮಾಡಿ, “ಭಾರತದೊಂದಿಗೆ ಯಾವುದೇ ವ್ಯಾಪಾರವಿಲ್ಲ ಎಂದು ಇಂದು ಕ್ಯಾಬಿನೆಟ್ ಸ್ಪಷ್ಟವಾಗಿ ಹೇಳಿದೆ. 5 ಆಗಸ್ಟ್ 2019 ರಂದು ಜಮ್ಮುಕಾಶ್ಮೀರದಲ್ಲಿ ಹೇರಲ್ಪಟ್ಟ ಕಾನೂನುಬಾಹಿರ ಕ್ರಮಗಳನ್ನು ಹಿಂಪಡೆಯುವರೆಗೆ ಭಾರತದೊಂದಿಗೆ ಯಾವುದೇ ಸಂಬಂಧವನ್ನು ಸಾಮಾನ್ಯೀಕರಿಸಲಾಗುವುದಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ” ಎಂದು ಕಾಶ್ಮೀರದ ಬಗ್ಗೆ ಬಿಗಿ ನಿಲುವಿಗೆ ಹೆಸರುವಾಸಿಯಾದ ಶಿರಿನ್ ಮಜಾರಿ ಟ್ವೀಟ್ ಮಾಡಿದ್ದಾರೆ.
And today Cabinet stated clearly NO trade with India. PM made clear there can be no normalisation of relations with India until they reverse their illegal actions viz IIOJK of 5 Aug 2019. https://t.co/HDWt3kBM3c
— Shireen Mazari (@ShireenMazari1) April 1, 2021
ಇದನ್ನೂ ಓದಿ: ನರಗುಂದ: ದಲಿತ ಬಾಲಕಿಯ ಸುಟ್ಟ ಮೃತದೇಹ ಪತ್ತೆ – ಅತ್ಯಾಚಾರ, ಕೊಲೆ ಆರೋಪ
ಭಾರತದಿಂದ ಹತ್ತಿ ಮತ್ತು ಸಕ್ಕರೆಯನ್ನು ಆಮದು ಮಾಡಿಕೊಳ್ಳುವುದಾಗಿ ಅಜರ್ ಬುಧವಾರ ಪ್ರಕಟಿಸಿದ್ದು, ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳು ಭಾಗಶಃ ಪುನ ಪ್ರಾರಂಭವಾಗುತ್ತದೆ ಎಂಬ ಭರವಸೆಯನ್ನು ಹುಟ್ಟುಹಾಕಿತ್ತು. ಭಾರತವು 2019 ರ ಆಗಸ್ಟ್ 5 ರಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಈ ವ್ಯಾಪಾರ ಸಂಬಂಧವು ಸ್ಥಗಿತಗೊಂಡಿತ್ತು.
ಭಾರತವು ವಿಶ್ವದ ಅತಿದೊಡ್ಡ ಹತ್ತಿ ಉತ್ಪಾದಕ ಮತ್ತು ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ದೇಶವಾಗಿದೆ.
ಕೊರೊನಾ ಸಾಂಕ್ರಾಮಿಕದ ಮಧ್ಯೆ ಭಾರತದಿಂದ ಔಷಧಗಳು ಮತ್ತು ಅಗತ್ಯ ಔಷಧಿಗಳ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವ ನಿಷೇಧವನ್ನು 2020 ರ ಮೇ ತಿಂಗಳಲ್ಲಿ ಪಾಕಿಸ್ತಾನ ತೆಗೆದುಹಾಕಿತ್ತು.
2019 ರ ಆಗಸ್ಟ್‌ನಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಭಾರತದ ಕ್ರಮವು ಪಾಕಿಸ್ತಾನಕ್ಕೆ ಕೋಪವನ್ನುಂಟುಮಾಡಿತ್ತು. ಇದರೊಂದಿಗೆ ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧವು ಕುಸಿದಿದ್ದು, ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನರ್‌ನನ್ನು ವಾಪಾಸ್ ಕಳುಹಿಸಿತ್ತು. ಪಾಕಿಸ್ತಾನವು ಭಾರತದೊಂದಿಗಿನ ಎಲ್ಲಾ ವಾಯು ಮತ್ತು ಭೂ ಸಂಪರ್ಕಗಳನ್ನು ಕಿತ್ತುಹಾಕಿ, ವ್ಯಾಪಾರ ಮತ್ತು ರೈಲ್ವೆ ಸೇವೆಗಳನ್ನು ಸ್ಥಗಿತಗೊಳಿಸಿತ್ತು.
ಇದನ್ನೂ ಓದಿ: ಅವಹೇಳನಕಾರಿ ಹೇಳಿಕೆ: ಪ್ರಚಾರದಿಂದ ಎ ರಾಜಾಗೆ 48 ಗಂಟೆಗಳ ನಿಷೇಧ ಹೇರಿದ ಚುನಾವಣಾ ಆಯೋಗ