2016ರಲ್ಲಿ ಕನ್ಹಯ್ಯ ಕುಮಾರ್ ವಿಚಾರದ ಕುರಿತು ರಾಹುಲ್ ಕುನ್ವಾಲ್ (ನಿರ್ವಾಹಕ ಸಂಪಾದಕ, ಟೈಮ್ಸ್ ಆಫ್ ಇಂಡಿಯಾ) ನಡೆಸಿದ ಸಂದರ್ಶನ
ಅನುವಾದ: ನಿಖಿಲ್ ಕೋಲ್ಪೆ
ಜವಾಹರಲಾಲ್ ನೆಹರೂ ಯುನಿವರ್ಸಿಟಿ (ಜೆಎನ್‌ಯು)ಲ್ಲಿ ಕೂಗಲಾದ ಕೆಲವು ಘೋಷಣೆಗಳು ‘ಸಮಸ್ಯಾತ್ಮಕ’ವಾಗಿದ್ದರೂ, ಈ ಘಟನೆ ನಡೆಯುವಾಗ ಸ್ಥಳದಲ್ಲಿದ್ದ ಕನ್ನಯ್ಯ ಕುಮಾರ್ ವಿರುದ್ಧ ಹೊರಿಸಲಾದ ರಾಷ್ಟ್ರದ್ರೋಹದ ಆರೋಪಕ್ಕೆ ಸಮವಲ್ಲ ಎಂದು ಹೇಳಿರುವ ಮಾಜಿ ಸಾಲಿಸಿಟರ್ ಜನರಲ್ ಸೋಲಿ ಸೊರಾಬ್ಜಿ ದೇಶದ್ರೋಹದ ಕಾನೂನನ್ನು ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೆ: ನಿಮ್ಮೆಲ್ಲಾ ಖ್ಯಾತಿ ಮತ್ತು ಅನುಭವದ ಹಿನ್ನೆಲೆಯಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು)ದ ಅಧ್ಯಕ್ಷರಾಗಿದ್ದ ಕನ್ನಯ್ಯ ಕುಮಾರ್ ವಿರುದ್ಧ ರಾಷ್ಟ್ರದ್ರೋಹ ಆರೋಪ ಹೊರಿಸಿದ್ದು ಸರಿಯೋ, ತಪ್ಪೋ ಎಂದು ವಿಶ್ಲೇಷಿಸುವಂತೆ ನಾವು ಕೋರುತ್ತೇವೆ.
ಸೊರಾಬ್ಜಿ: ಅವೆಲ್ಲವೂ ವಾಸ್ತವಾಂಶಗಳ ಮೇಲೆ ಅವಲಂಬಿಸಿವೆ. ಮೊತ್ತಮೊದಲಾಗಿ ರಾಷ್ಟ್ರದ್ರೋಹ ಎಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಸರಕಾರದ ಮೇಲಿನ ಯಾವುದೇ ಟೀಕೆ, ಸರಕಾರ ಕೈಗೊಂಡ ಕಾರ್ಯಗಳ ನಿರಾಕರಣೆ- ಅದೆಷ್ಟೇ ಬಲವಾಗಿ ಅಭಿವ್ಯಕ್ತಗೊಳಿಸಿದರೂ ಅದು ರಾಷ್ಟ್ರದ್ರೋಹವಾಗುವುದಿಲ್ಲ. ಕೇದಾರನಾಥ ಪ್ರಕರಣದಲ್ಲಿ ವಿಧಿ 124ಎಯ ಸಿಂಧುತ್ವವನ್ನು ಪರಿಗಣಿಸಿದಾಗ, ಈ ವಿಧಿಯು ಸಾರ್ವಜನಿಕ ಶಿಸ್ತನ್ನು ಭಂಗಗೊಳಿಸುವ ಅಥವಾ ಹಿಂಸೆಯನ್ನು ಪ್ರಚೋದಿಸುವ ಯಾವುದೇ ಮಾತು, ಶಬ್ದಗಳು ಅಥವಾ ಕೃತಿಗೆ ಸೀಮಿತವಾಗಿದೆ.
ಪ್ರಶ್ನೆ: ನಾವು 1962ರ ಕೇದಾರನಾಥ ಪ್ರಕರಣವನ್ನು ಉದಾಹರಣೆಯಾಗಿ ತೆಗೆದುಕೊಂಡು, ಅದೇ ಮಾನದಂಡವನ್ನು ಜೆಎನ್‌ಯು ಪ್ರಕರಣಕ್ಕೆ ಅನ್ವಯಿಸಿದರೆ, ರಾಷ್ಟ್ರದ್ರೋಹದ ಆರೋಪವನ್ನು ತಪ್ಪಾಗಿ ಅನ್ವಯಿಸಲಾಗಿದೆಯೇ?
ಸೊರಾಬ್ಜಿ: ಅದು ಬೇರೆಬೇರೆ ವಿಷಯಗಳ ಮೇಲೆ ಅವಲಂಬಿಸಿದೆ. ಅವರು ಕೇವಲ ‘ ಪಾಕಿಸ್ತಾನ್ ಜಿಂದಾಬಾದ್’ ಎಂದು ಹೇಳಿದ್ದರೆ, ನನ್ನ ಮಟ್ಟಿಗೆ ಅದು ತೀರಾ ಖಂಡನೀಯ. ಆದರೆ, ಅದು ರಾಷ್ಟ್ರದ್ರೋಹವಲ್ಲ. ಆದರೆ, ಅವರು ಈ ಸರಕಾರವೊಂದು ದಬ್ಬಾಳಿಕೆಯ ಸರಕಾರ, ಜನರಿಗೆ ಅವರ ಮೂಲಭೂತ ಹಕ್ಕುಗಳನ್ನು ತಿಳಿಯುವ ಅವಕಾಶವಿಲ್ಲ, ಅದರ ವಿರುದ್ಧ ಪ್ರತಿಭಟಿಸಿ ಪ್ರಯೋಜನವಿಲ್ಲ, ನಾವದನ್ನು ಕಿತ್ತೆಸೆಯಬೇಕು ಎಂದು ಹೇಳಿದ್ದರೆ, ಅದು ಹಿಂಸೆಗೆ ಪ್ರಚೋದನೆಯಾಗುತ್ತದೆ ಮತ್ತು ರಾಷ್ಟ್ರದ್ರೋಹದ ಪ್ರಕರಣವನ್ನು ಆಕರ್ಷಿಸುತ್ತದೆ. ಆದರೆ, ಎಲ್ಲವೂ ವಾಸ್ತವಾಂಶಗಳ ಮೇಲೆ ಅವಲಂಬಿಸಿದೆ.
ಪ್ರಶ್ನೆ: ವಾಸ್ತವಾಂಶಗಳು. ಜೆಎನ್‌ಯುನಲ್ಲಿ ಕೂಗಲಾದ ಕೆಲವು ಘೋಷಣೆಗಳೆಂದರೆ, ‘ಪಾಕಿಸ್ತಾನ್ ಜಿಂದಾಬಾದ್’, ‘ಭಾರತ್‌ಕೆ ಬರ್ಬಾದಿ ತಕ್ ಜಂಗ್ ರಹೇಗಿ’ (ಭಾರತದ ಸರ್ವನಾಶದ ತನಕ ಯುದ್ಧ), ‘ಕಾಶ್ಮೀರ್ ಕಿ ಆಜಾದಿ ತಕ್ ಜಂಗ್ ರಹೇಗಿ’ (ಕಾಶ್ಮೀರದ ಸ್ವಾತಂತ್ರ್ಯದ ತನಕ ಯುದ್ಧ), ‘ಅಫ್ಜಲ್ ಹಮ್ ಶರ್ಮಿಂದಾ ಹೈ. ತೇರೇ ಕಾತಿಲ್ ಜಿಂದಾ ಹೈ’ ( ಅಫ್ಜಲ್ ನಮಗೆ ನಾಚಿಕೆಯಾಗುತ್ತಿದೆ, ನಿನ್ನ ಹಂತಕರು ಜೀವಂತವಿದ್ದಾರೆ), ‘ತುಮ್ ಕಿತ್ನೇ ಅಫ್ಜಲ್ ಮಾರೋಗೆ, ಹರ್ ಘರ್‌ಮೇ ಅಫ್ಜಲ್ ನಿಕ್ಲೇಗಾ’ ( ನೀನೆಷ್ಟು ಅಫ್ಜಲ್‌ಗಳನ್ನು ಕೊಲ್ಲುವೆ, ಪ್ರತಿ ಮನೆಯಲ್ಲಿ ಅಫ್ಜಲ್ ಹುಟ್ಟುವನು), ‘ಅಫ್ಜಲ್ ತೇರೆ ಖೂನ್ ಸೆ ಇಂಕ್ವಿಲಾಬ್ ಆಯೇಗಾ’ (ಅಫ್ಜಲ್ ನಿನ್ನ ರಕ್ತದಿಂದ ಕ್ರಾಂತಿ ಬರುವುದು)
ಸೊರಾಬ್ಜಿ: ಕೇವಲ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವುದು ರಾಷ್ಟ್ರದ್ರೋಹವಲ್ಲ. ಭಾರತ್ ಕೆ ಬರ್ಬಾದಿ… ಇದು ಸಮಸ್ಯಾತ್ಮಕ. ಆದರೆ, ರಾಷ್ಟ್ರದ್ರೋಹವೆಂದು ನಾನು ಹೇಳಲಾರೆ. ಈ ವಿಧಿ ಅತ್ಯಂತ ಗಂಭೀರವಾದ ದಂಡನಾ ವಿಧಿ. ಅದು ಅತ್ಯಂತ ಸುಸ್ಪಷ್ಟ ಪ್ರಕರಣಗಳಿಗೆ ಅನ್ವಯಿಸುತ್ತದೆ. ಉಳಿದವುಗಳು ಪ್ರಚೋದನೆ. ಆದರೆ, ಅದನ್ನು ಸಾಬೀತುಪಡಿಸಬೇಕಾಗುತ್ತದೆ.
ಪ್ರಶ್ನೆ: ಕನ್ನಯ್ಯ ಕುಮಾರ್ ಈ ಘೋಷಣೆ ಕೂಗಿಲ್ಲ. ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್ ಎಂಬ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳ ಗುಂಪೊಂದು ಈ ಘೋಷಣೆಗಳನ್ನು ಕೂಗಿತ್ತು. ಆದರೆ, ಅವರೆಲ್ಲರೂ ಸದ್ಯಕ್ಕೆ ತಲೆತಪ್ಪಿಸಿಕೊಂಡಿದ್ದಾರೆ. ಆದರೆ, ಈ ಘೋಷಣೆಗಳನ್ನು ಕೂಗದವರ ಮೇಲೆ ರಾಷ್ಟ್ರದ್ರೋಹದ ಆರೋಪ ಹೊರಿಸಲಾಗಿದೆ.
ಸೊರಾಬ್ಜಿ: ನೀವು ಹೇಳುವುದು ಸರಿಯಾಗಿದ್ದಲ್ಲಿ ಖಂಡಿತವಾಗಿಯೂ ಸಂಪೂರ್ಣ ತಪ್ಪಾಗಿ ರಾಷ್ಟ್ರದ್ರೋಹವನ್ನು ಅನ್ವಯಿಸಲಾಗಿದೆ. ಒಂದು ಸಭೆಯಲ್ಲಿ ಕೇವಲ ಹಾಜರಿರುವುದು ರಾಷ್ಟ್ರದ್ರೋಹವಾಗುವುದಿಲ್ಲ. ಆತ ಸಕ್ರಿಯವಾಗಿ ಅವರನ್ನು ಪ್ರಚೋದಿಸದೇ ಇದ್ದರೆ, (ಆತ ಈ ಘೋಷಣೆಗಳನ್ನು ಕೂಗಿಲ್ಲ ಎಂದು ಪೊಲೀಸರು ಒಪ್ಪಿಕೊಂಡಿದ್ದರೆ) ಹೇಗೆ ಆತನ ಮೇಲೆ ರಾಷ್ಟ್ರದ್ರೋಹದ ಆರೋಪ ಹೊರಿಸಲು ಸಾಧ್ಯ? ಅದು ಸಂಪೂರ್ಣ ಅನ್ಯಾಯ. ನೀವು ಹೇಳಿದ ವಾಸ್ತವಾಂಶಗಳು ನಿಜವಾಗಿದ್ದರೆ, ಆ ನಿರ್ಧಾರ ಒಂದು ಗಂಭೀರವಾದ ಪ್ರಮಾದ. ಇದನ್ನೆಲ್ಲಾ ಒಟ್ಟಿನಲ್ಲಿ ನೋಡೋಣ. ವಿದ್ಯಾರ್ಥಿಗಳಿಗೆ ಒಂದು ದೃಷ್ಟಿಕೋನವಿದೆ. ಅವರದನ್ನು ಅಭಿವ್ಯಕ್ತಗೊಳಿಸಲು ಬಯಸುತ್ತಾರೆ. ಹಿಂದೂಸ್ತಾನ್ ಕಿ ಬರ್ಬಾದಿ…ಸೇರಿದಂತೆ ಅವರು ಹಾಗೆ ಮಾಡುವಾಗ ಎಲ್ಲೆ ಮೀರಿ ಅಭಿವ್ಯಕ್ತಗೊಳಿಸಿರಬಹುದು. ಇದು ಬಹುವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಾಗಿದೆ.


