ಬೆಂಗಳೂರಿನ ಬಳ್ಳಾರಿ ಮತ್ತು ಜಯಮಹಲ್ ರಸ್ತೆಗಳನ್ನು ಅಗಲೀಕರಣಗೊಳಿಸಲು ಸ್ವಾಧೀನಪಡಿಸಿಕೊಂಡಿರುವ ಬೆಂಗಳೂರು ಅರಮನೆ ಮೈದಾನದ 15 ಎಕರೆ 39 ಗುಂಟೆ ಭೂಮಿಗೆ 3,400 ಕೋಟಿ ರೂಪಾಯಿ ಮೌಲ್ಯದ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರಗಳನ್ನು ಮೈಸೂರು ರಾಜಮನೆತನದ ಕಾನೂನುಬದ್ಧ ವಾರಿಸುದಾರರಿಗೆ ನೀಡುವಂತೆ ಸುಪ್ರೀಂ ಕೋರ್ಟ್ ಗುರುವಾರ (ಮೇ 22, 2025) ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಎಂ.ಎಂ ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರ ಪೀಠ ತೀರ್ಪು ಪ್ರಕಟಿಸಿದೆ. ರಾಜ್ಯ ಸರ್ಕಾರದ ಎಲ್ಲ ವಾದಗಳನ್ನು ತಿರಸ್ಕರಿಸಿದ ಪೀಠ, ಕರ್ನಾಟಕ ಸ್ಟ್ಯಾಂಪ್ ಕಾಯ್ದೆ ಹಾಗೂ ಹಿಂದಿನ ತೀರ್ಪುಗಳ ಅಡಿಯಲ್ಲಿ ಕಾನೂನು ಬಾಧ್ಯತೆಗಳನ್ನು ಗೌರವಿಸಬೇಕು ಎಂದು ಸೂಚಿಸಿದೆ.
ತೀರ್ಪು ಬರೆದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು “ಸರ್ಕಾರ ಈಗಾಗಲೇ ಠೇವಣಿ ಇಟ್ಟಿರುವ ಟಿಡಿಆರ್‌ಗಳು/ಡಿಆರ್‌ಸಿಗಳನ್ನು ಆಯಾ ಅರ್ಜಿದಾರರು ಅಥವಾ ಅವರ ಅಧಿಕೃತ ಪ್ರತಿನಿಧಿಗೆ ಅಫಿಡವಿಟ್ ಆಧಾರದಲ್ಲಿ ತಕ್ಷಣವೇ ಹಸ್ತಾಂತರಿಸಲು ರಿಜಿಸ್ಟ್ರಿಗೆ ಆದೇಶಿಸಲಾಗಿದೆ” ಎಂದು ಎಂದು ತಿಳಿಸಿದ್ದಾರೆ.
ಬೆಂಗಳೂರು ಅರಮನೆ (ಭೂಮಿ ಬಳಕೆ ಮತ್ತು ನಿಯಂತ್ರಣ) ಸುಗ್ರೀವಾಜ್ಞೆ-2025 ಅನ್ನು ಉಲ್ಲೇಖಿಸಿದ ನ್ಯಾಯಾಲಯ “ಸುಗ್ರಿವಾಜ್ಞೆ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಥವಾ ಸ್ವಾಧೀನಪಡಿಸಿಕೊಳ್ಳದಿರುವ ಹಕ್ಕನ್ನು ತನ್ನಲ್ಲೇ ಉಳಿಸಿಕೊಂಡಿದೆ. ಅಲ್ಲದೆ, 3,400 ಕೋಟಿ ರೂಪಾಯಿ ಟಿಡಿಆರ್ ಪಾವತಿಸುವ ಬದಲು ರಸ್ತೆ ಅಗಲೀಕರಣ ಯೋಜನೆಯನ್ನೇ ಕೈಬಿಡುವ ಸೂಚನೆ ನೀಡುತ್ತಿದೆ” ಎಂದು ಹೇಳಿದೆ.
ಕರ್ನಾಟಕ ಸ್ಟ್ಯಾಂಪ್ ಕಾಯ್ದೆಯ ಸೆಕ್ಷನ್ 45 ಬಿ ಗೆ ಅನುಗುಣವಾಗಿ ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ರಸ್ತೆ ವಿಸ್ತರಣೆ ಉದ್ದೇಶಕ್ಕಾಗಿ ಅರಮನೆ ಜಾಗವನ್ನು ಮೌಲ್ಯೀಕರಿಸಿ, ವರ್ಗಾವಣೆ ಮಾಡಬಹುದಾದ ಟಿಡಿಆರ್ ನೀಡುವಂತೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಆ ಬಳಿಕ ಸಣ್ಣ ಜಾಗಕ್ಕೆ ದೊಡ್ಡ ಮೊತ್ತ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಸರ್ಕಾರ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಸುಗ್ರಿವಾಜ್ಞೆ ಹೊರಡಿಸಿತ್ತು. ನಂತರ ಸುಗ್ರೀವಾಜ್ಞೆ ರೂಪದಲ್ಲಿದ್ದ ಮಸೂದೆಗೆ ಕೆಲ ಸಣ್ಣ ತಿದ್ದುಪಡಿಗಳನ್ನು ತಂದು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿತ್ತು.
ಅಲ್ಲದೆ, ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯ್ದೆ–1996ಕ್ಕೆ ಸಂಬಂಧಪಟ್ಟ ಸಿವಿಲ್ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆ ಬಳಿಕ, 3,400 ಕೋಟಿ ರೂಪಾಯಿ ಟಿಡಿಆರ್ ಅನ್ನು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಠೇವಣಿ ಇಟ್ಟಿತ್ತು. ಈ ಟಿಡಿಆರ್‌ಗಳನ್ನು ರಾಜವಂಶಸ್ಥರಿಗೆ ಹಸ್ತಾಂತರ ಮಾಡಬಾರದು ಎಂದು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಪೀಠವು ಮೇ 1ರಂದು ತೀರ್ಪು ಕಾಯ್ದಿರಿಸಿತ್ತು.
ಚಿನ್ನ ಕಳ್ಳಸಾಗಣೆ ಪ್ರಕರಣ | ಇಡಿ ಜೊತೆ ಸಹಕರಿಸುತ್ತೇವೆ ಎಂದ ಗೃಹ ಸಚಿವ ಜಿ ಪರಮೇಶ್ವರ


