ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆ (Occupied West Bank)ಯ ತನ್ನ ಪ್ರದೇಶದಲ್ಲಿ ಕತಾರ್ ಮೂಲದ ಪ್ರಸಿದ್ದ ಸುದ್ದಿ ಸಂಸ್ಥೆ ಅಲ್-ಜಝೀರಾದ ಪ್ರಸಾರ ಮತ್ತು ಕಾರ್ಯಾಚರಣೆಯನ್ನು ಪ್ಯಾಲೆಸ್ತೀನ್ ಪ್ರಾಧಿಕಾರ (ಪಿಎ) ನಿಷೇಧಿಸಿದೆ.
ಒಂದು ಕಾಲದಲ್ಲಿ ಪ್ಯಾಲೆಸ್ತೀನ್ ದೇಶದ ಭಾಗವಾಗಿದ್ದ ಪಶ್ಚಿಮ ದಂಡೆಯ ಬಹುತೇಕ ಪ್ರದೇಶಗಳನ್ನು ಪ್ರಸ್ತುತ ಇಸ್ರೇಲ್ ಆಕ್ರಮಿಸಿಕೊಂಡಿದೆ. ಅಳಿದುಳಿದ ಕೆಲ ಪ್ರದೇಶಗಳು ಈಗಲೂ ಕೂಡ ಪ್ಯಾಲೆಸ್ತೀನ್ ಭಾಗವಾಗಿದೆ. ಅದರ ನಿಯಂತ್ರಣ ಪ್ಯಾಲೆಸ್ತೀನ್ ಸರ್ಕಾರದ ಅಧೀನದಲ್ಲಿರುವ ಪ್ಯಾಲೆಸ್ತೀನ್ ಪ್ರಾಧಿಕಾರದ ಕೈಯಲ್ಲಿದೆ.
ಅದೇ ಪ್ಯಾಲೆಸ್ತೀನ್ ಪ್ರಾಧಿಕಾರ ಈಗ ಅಲ್-ಜಝೀರಾ ಸುದ್ದಿ ಸಂಸ್ಥೆಯ ಕಾರ್ಯಾಚರಣೆಗೆ ತಡೆ ಒಡ್ಡಿದೆ.
ಅಲ್ ಜಝೀರಾ ಪ್ರಸಾರ ಮಾಡುವ ಸುದ್ದಿಗಳು ಪ್ರಚೋದನಕಾರಿಯಾಗಿವೆ. ತಪ್ಪು ಮಾಹಿತಿ, ಪ್ರಚೋದಿಸುವಿಕೆ ಹಾಗೂ ದೇಶದ್ರೋಹ ಎಸಗಿದ್ದಕ್ಕಾಗಿ ಮತ್ತು ಪ್ಯಾಲೆಸ್ತೀನ್‌ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಿದ್ದಕ್ಕಾಗಿ ಅಲ್- ಜಝೀರಾದ ಪ್ರಸಾರವನ್ನು ಅಮಾನತಿನಲ್ಲಿರಿಸಲಾಗಿದೆ ಎಂದು ಪ್ಯಾಲೆಸ್ತೀನ್‌ನ ಅಧಿಕೃತ ಸುದ್ದಿ ಸಂಸ್ಥೆ ವಾಫಾ ಬುಧವಾರ (ಜ.1) ಸಂಜೆ ವರದಿ ಮಾಡಿದೆ.
2023ರ ಅಕ್ಟೋಬರ್ 7ರಿಂದ ಹಮಾಸ್ ನಿಯಂತ್ರಣದ ಪ್ಯಾಲೆಸ್ತೀನ್‌ನ ಭಾಗವಾಗಿರುವ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧದ ಕುರಿತು ಅಲ್-ಜಝೀರಾ ನಿರಂತರ ಸುದ್ದಿ ಪ್ರಕಟಿಸುತ್ತಿದೆ. ಯುದ್ಧದಿಂದ ತಮ್ಮದೆಲ್ಲವನ್ನು ಕಳೆದುಕೊಂಡಿರುವ ಅಮಾಯಕ ಜೀವಗಳ ಪರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ವರದಿಗಳು, ಸಾಕ್ಷ್ಯ ಚಿತ್ರಗಳ ಮೂಲ ಗಾಝಾದ ನೈಜ ಚಿತ್ರಣವನ್ನು ಜಗತ್ತಿನ ಮುಂದೆ ತೆರೆದಿಡುವ ಕೆಲಸ ಮಾಡುತ್ತಿದೆ. ಈ ಪ್ರಯತ್ನದಲ್ಲಿ ಹಲವು ಸಿಬ್ಬಂದಿಯನ್ನು ಅಲ್-ಜಝೀರಾ ಕಳೆದುಕೊಂಡಿದೆ.
ಅಲ್-ಜಝೀರಾ ತಮ್ಮ ವಿರುದ್ದ ಸುದ್ದಿ ಪ್ರಕಟಿಸುವುದನ್ನು ಸಹಿಸದ ಇಸ್ರೇಲ್ ಸರ್ಕಾರ 2024ರ ಮೇ ತಿಂಗಳಲ್ಲಿ ಸಂಪೂರ್ಣ ಇಸ್ರೇಲ್ ಪ್ರದೇಶದಲ್ಲಿ ಅಲ್-ಜಝೀರಾವನ್ನು ನಿಷೇಧಿಸಿತ್ತು. ಆ ಬಳಿಕ ಆಕ್ರಮಿತ ಪಶ್ಚಿಮ ದಂಡೆಯ ರಾಮಲ್ಲಾಹ್‌ನಲ್ಲಿ ಅಲ್-ಜಝೀರಾದ ಕಾರ್ಯಾಚರಣೆಗೆ ನಿರ್ಬಂಧ ವಿಧಿಸಿದೆ.
‘ಇಸ್ರೇಲ್ ರೀತಿಯ ನಡೆ’
ಪಶ್ಚಿಮ ದಂಡೆಯಲ್ಲಿ ತಮ್ಮ ಕಾರ್ಯಾಚರಣೆ ಮತ್ತು ಪ್ರಸಾರವನ್ನು ನಿಷೇಧಿಸಿರುವ ಪ್ಯಾಲೆಸ್ತೀನ್ ಪ್ರಾಧಿಕಾರದ ನಡೆಯನ್ನು ಅಲ್-ಜಝೀರಾ ತೀವ್ರವಾಗಿ ಖಂಡಿಸಿದೆ. ಇದು ಇಸ್ರೇಲ್ ರೀತಿಯ ನಡೆಯಾಗಿದೆ. ನಾವು ಸದಾ ಪ್ಯಾಲೆಸ್ತೀನ್ ಜನತೆಯ ಧ್ವನಿಯಾಗಿದ್ದೆವು ಎಂದು ಹೇಳಿದೆ.
‘ಪತ್ರಿಕೋದ್ಯಮದ ವಿರುದ್ಧದ ಅಪರಾಧ’
ಅಲ್-ಜಝೀರಾ ಸುದ್ದಿ ಸಂಸ್ಥೆಗೆ ನಿಷೇಧ ಹೇರಿರುವುದನ್ನು ಗಾಝಾದ ಪತ್ರಕರ್ತರು ಖಂಡಿಸಿದ್ದಾರೆ. ಗುರುವಾರ (ಜ.2) ಗಾಝಾದ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆ ಬಳಿ ಜಮಾಯಿಸಿದ ಪತ್ರಕರ್ತರು, ಇದು ‘ಪತ್ರಿಕೋದ್ಯಮದ ವಿರುದ್ದದ ಅಪರಾಧ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಷೇಧ ಹಿಂಪಡೆಯಲು ಆಗ್ರಹ
ಅಲ್-ಜಝೀರಾ ಸುದ್ದಿ ಸಂಸ್ಥೆಗೆ ನಿಷೇಧ ಹೇರಿರುವ ಪ್ಯಾಲೆಸ್ತೀನ್ ಪ್ರಾಧಿಕಾರದ ನಡೆಯನ್ನು ವಿಶ್ವ ಸಂಸ್ಥೆ ಖಂಡಿಸಿದೆ. ತಕ್ಷಣ ನಿಷೇಧ ಹಿಂಪಡೆಯುವಂತೆ ಒತ್ತಾಯಿಸಿದೆ. ಪತ್ರಿಕಾ ಸ್ವಾತಂತ್ರ್ಯದ ದಮನದ ಕುರಿತು ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಏಷ್ಯಾದ ಅತ್ಯಂತ ಕೆಟ್ಟ ಟ್ರಾಫಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು-ಪುಣೆಗೆ ಅಗ್ರ ಸ್ಥಾನ


