ನಟ ಪರೇಶ್ ರಾವಲ್ ಅವರ ಮುಂದಿನ ಚಿತ್ರ ‘ದಿ ತಾಜ್ ಸ್ಟೋರಿ’ಯ ಮೋಷನ್ ಪೋಸ್ಟರ್ ವಿವಾದದ ಕಿಡಿ ಹೊತ್ತಿಸಿದೆ. ತಾಜ್ ಮಹಲ್‌ನ ಗುಮ್ಮಟ ತೆಗೆಯುತ್ತಿರುವಂತೆ ಹಾಗೂ ಅಲ್ಲಿಂದ ಶಿವನ ಪ್ರತಿಮೆ ಹೊರಹೊಮ್ಮುತ್ತಿರುವಂತೆ ಪೋಸ್ಟರ್‌ನಲ್ಲಿ ತೋರಿಸಲಾಗಿದೆ.
ಪರೇಶ್ ರಾವಲ್ ಸೋಮವಾರ (ಸೆ.29) ಸಾಮಾಜಿಕ ಜಾಲತಾಣಗಳಲ್ಲಿ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಐದು ದಿನಗಳ ಹಿಂದೆ ಇದೇ ರೀತಿಯ ಮತ್ತೊಂದು ಮೋಷನ್ ಪೋಸ್ಟರ್ ಹಂಚಿಕೊಂಡಿದ್ದರು. ಅದರಲ್ಲಿ ತಾಜ್‌ಮಹಲನ್ನು ಕಟಕಟೆಯಲ್ಲಿ ನಿಲ್ಲಿಸಿ ‘ತಾಜ್ ಮಹಲ್ ಅನ್ನು ಷಜಹಾನ್ ಕಟ್ಟಿಸಿದ್ರಾ?’ ಎಂದು ಪ್ರಶ್ನಿಸಲಾಗಿದೆ.
‘ದಿ ತಾಜ್ ಸ್ಟೋರಿ’ ಮತ್ತೊಂದು ಪ್ರೊಪಗಂಡ ಚಿತ್ರವೇ? ಎಂಬ ಪ್ರಶ್ನೆ ಮೂಡಿದೆ. ಚಿತ್ರದ ಪೋಸ್ಟರ್‌ಗಳು ಅದನ್ನು ಪುಷ್ಠೀಕರಿಸುತ್ತಿವೆ.
ಕೆಲ ವರ್ಷಗಳಿಂದ ಸಂಘಪರಿವಾರ, ಹಿಂದುತ್ವವಾದಿಗಳು ತಾಜ್ ಮಹಲ್ ಅನ್ನು ‘ತೇಜೋಮಹಲ್’ ಶಿವಮಂದಿರ ಎಂದು ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. ಮಂದಿರ ಕೆಡವಿ ತಾಜ್ ಮಹಲ್ ನಿರ್ಮಿಸಲಾಗಿದೆ ಎಂಬ ಎಂದಿನ ವಾದವನ್ನು ಮುಂದಿಡುತ್ತಿದ್ದಾರೆ. ಆದರೆ, ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ, ಪಾರಂಪರಿಕ ತಾಣ ತಾಜ್‌ಮಹಲ್ ಮೇಲಿನ ಈ ಆರೋಪಗಳು ಇದುವರೆಗೆ ರುಜುವಾತಾಗಿಲ್ಲ. ತಾಜ್ ಮಹಲ್ ಸಂರಕ್ಷಿತ ಸ್ಮಾರಕವಾಗಿದೆ.
ಇದೀಗ ‘ದಿ ತಾಜ್ ಸ್ಟೋರಿ’ ಚಿತ್ರ ಸಂಘ ಪರಿವಾರದ ಪ್ರೊಪಗಂಡವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಕಳೆದ ಕೆಲ ವರ್ಷಗಳಿಂದ ‘ದಿ ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ, ದಿ ಬೆಂಗಾಲ್ ಫೈಲ್ಸ್’ನಂತಹ ಪ್ರೊಪಗಂಡ ಚಿತ್ರಗಳು ದೇಶದಲ್ಲಿ ಬಂದಿವೆ. ಅವುಗಳ ಪಟ್ಟಿಗೆ ‘ದಿ ತಾಜ್ ಸ್ಟೋರಿ’ ಸೇರ್ಪಡೆಯಾಗುವ ಲಕ್ಷಣ ಕಾಣುತ್ತಿದೆ.
ಪೋಸ್ಟರ್ ವಿವಾದದ ಸ್ವರೂಪರ ಪಡೆಯುತ್ತಿದ್ದಂತೆ “ಚಿತ್ರವು ಯಾವುದೇ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿಲ್ಲ ಅಥವಾ ತಾಜ್‌ಮಹಲ್‌ನ ಒಳಗೆ ಶಿವ ದೇವಾಲಯವಿದೆ ಎಂದು ಅದು ಹೇಳಿಕೊಳ್ಳುವುದಿಲ್ಲ. ಅದು ಕೇವಲ ಐತಿಹಾಸಿಕ ಸಂಗತಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ದಯವಿಟ್ಟು ಚಿತ್ರವನ್ನು ವೀಕ್ಷಿಸಿ ಮತ್ತು ನಿಮ್ಮ ಸ್ವಂತ ಅಭಿಪ್ರಾಯವನ್ನು ರೂಪಿಸಿಕೊಳ್ಳಿ ಎಂದು ನಾವು ವಿನಂತಿಸಿಕೊಳ್ಳುತ್ತೇವೆ” ಎಂದು ಸ್ವರ್ಣಿಮ್ ಗ್ಲೋಬಲ್ ಸರ್ವಿಸಿಸ್ ಪ್ರೈ.ಲಿ.ಹೇಳಿಕೆಯಲ್ಲಿ ತಿಳಿಸಿದೆ.
ಎಕ್ಸ್ ನಲ್ಲಿ ತನ್ನ ಫಾಲೋಅಪ್ ಸಂದೇಶದಲ್ಲಿ ಪರೇಶ್ ರಾವಲ್ ಅವರೂ ಚಿತ್ರ ನಿರ್ಮಾಪಕರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ ಹಾಗೂ ಚಿತ್ರವು ಯಾವುದೇ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿಲ್ಲ ಮತ್ತು ಐತಿಹಾಸಿಕ ಅಂಶಗಳನ್ನು ಆಧರಿಸಿದೆ ಎಂಬ ನಿರ್ಮಾಪಕರ ನಿಲುವನ್ನು ಪುನರುಚ್ಚರಿಸಿದ್ದಾರೆ.
ಸ್ವರ್ಣಿಮ್ ಗ್ಲೋಬಲ್ ಸರ್ವಿಸಿಸ್ ಪ್ರೈ.ಲಿ. ಮತ್ತು ಸಿಎ ಸುರೇಶ್ ಝಾ ನಿರ್ಮಿಸಿರುವ ‘ದಿ ತಾಜ್ ಸ್ಟೋರಿ’ಯನ್ನು ತುಷಾರ್ ಅಮರೀಶ್ ಗೋಯಲ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರವು ಅ.31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.


