ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ (ಜುಲೈ 21) ಗದ್ದಲದೊಂದಿಗೆ ಆರಂಭಗೊಂಡಿತು. ಉಭಯ ಸದನಗಳಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆ ‘ಪಹಲ್ಗಾಮ್ ಭಯೋತ್ಪಾದಕ ದಾಳಿ’ ಮತ್ತು ‘ಅಪರೇಷನ್ ಸಿಂಧೂರ’ ಕುರಿತು ಚರ್ಚಿಸಲು ಪ್ರತಿಪಕ್ಷಗಳು ಪಟ್ಟು ಹಿಡಿದವು.
ಗದ್ದಲ ಹೆಚ್ಚಾಗುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಲೋಕಸಭೆ ಕಲಾಪವನ್ನು 12 ಗಂಟೆಗೆ ಮುಂದೂಡಿದರು. 12 ಗಂಟೆಗೆ ಕಲಾಪ ಪುನರಾರಂಭಗೊಳ್ಳುತ್ತಿದ್ದಂತೆ ಗದ್ದಲ ಮುಂದುವರಿಯಿತು. ಹಾಗಾಗಿ, 2 ಗಂಟೆಗೆ ಸದನವನ್ನು ಮುಂದೂಡಿದರು.
ರಾಜ್ಯಸಭೆಯಲ್ಲೂ ಗದ್ದಲದೊಂದಿಗೆ ಕಲಾಪ ಆರಂಭಗೊಂಡಿತು. ಆಪರೇಷನ್ ಸಿಂಧೂರ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದಂತೆ ಸ್ಪೀಕರ್ ಜಗದೀಪ್ ಧನ್ಕರ್ ಕಲಾಪವನ್ನು ಮುಂದೂಡಿದರು. ಮತ್ತೆ ಸಭೆ ಸೇರಿದಾಗ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರು ಅಹಮದಾಬಾದ್ ವಿಮಾನ ಅಪಘಾತದ ಕುರಿತು ಮಾತು ಶುರು ಮಾಡಿದರು.
ಈ ಬಾರಿಯ ಅಧಿವೇಶನದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ, ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಬಿಗಿಪಟ್ಟು ಹಿಡಿಯುವ ಸಾಧ್ಯತೆ ಇದೆ.
ಕಳೆದ ಮೇ ತಿಂಗಳಲ್ಲಿ ನಡೆದ ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗಳ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಒತ್ತಾಯಿಸಬಹುದು. ಏಕೆಂದರೆ, ಟ್ರಂಪ್ ಪದೇ ಪದೇ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಮೋದಿ ಸ್ಪಷ್ಟನೆ ಕೊಡುವಂತೆ ಕಾಂಗ್ರೆಸ್ ಈಗಾಗಲೇ ಆಗ್ರಹಿಸಿದೆ.
ಜುಲೈ 21ರಿಂದ ಆಗಸ್ಟ್ 21 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ. ಈ ನಡುವೆ ಆಗಸ್ಟ್ 12 ರಿಂದ 18ರವರೆಗೆ ವಿರಾಮ ಇರಲಿದೆ.
ಫೆಬ್ರವರಿಯಲ್ಲಿ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾದ ಆದಾಯ ತೆರಿಗೆ ಮಸೂದೆ, ಕರಾವಳಿ ಸಾಗಣೆ ಮಸೂದೆ, 2024, ಸರಕು ಸಾಗಣೆ ಮಸೂದೆಗಳು, ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ ಮತ್ತು ಭಾರತೀಯ ನಿರ್ವಹಣಾ ಸಂಸ್ಥೆಗಳ (ತಿದ್ದುಪಡಿ) ಮಸೂದೆಗಳು ಸೇರಿದಂತೆ ಬಹು ಮಸೂದೆಗಳ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
2006ರ ಮುಂಬೈ ರೈಲು ಸ್ಫೋಟ ಪ್ರಕರಣ: ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್


