ಲಡಾಖ್‌ನ ಶಿಕ್ಷಣ ತಜ್ಞ ಹಾಗೂ ಹೋರಾಟಗಾರ ಸೋನಮ್ ವಾಂಗ್‌ಚುಕ್ ಸ್ಥಾಪಿಸಿರುವ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ (ಹೆಚ್‌ಐಎಎಲ್) ‘ಅನುಕರಣೀಯ’ ಕೆಲಸ ಮಾಡುತ್ತಿದೆ. ಹಾಗಾಗಿ, ಆ ಸಂಸ್ಥೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (ಯುಜಿಸಿ) ಮಾನ್ಯತೆ ನೀಡಬೇಕು ಎಂದು ಸಂಸದೀಯ ಸಮಿತಿ ಹೇಳಿದೆ.
ಈ ವಾರದ ಆರಂಭದಲ್ಲಿ ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ನೇತೃತ್ವದ ಸಮಿತಿಯು ಸಂಸತ್ತಿನಲ್ಲಿ ಮಂಡಿಸಿರುವ ವರದಿಯಲ್ಲಿ ಹೆಚ್‌ಐಎಎಲ್‌ಗೆ ಯುಜಿಸಿಯಿಂದ ಇನ್ನೂ ಮಾನ್ಯತೆ ನೀಡದಿರುವ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿದೆ.
ಕೇಂದ್ರ ಶಿಕ್ಷಣ ಸಚಿವಾಲಯ ಹೆಚ್‌ಐಎಎಲ್ ಮಾದರಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಬೇಕು ಮತ್ತು ಶಿಕ್ಷಣದಲ್ಲಿ ನಾವೀನ್ಯತೆ ಕೇಂದ್ರಗಳು ಅಥವಾ ಇತರ ರೀತಿಯಲ್ಲಿ ಅದನ್ನು ಬೇರೆಡೆ ಹೇಗೆ ಪ್ರಯೋಗಿಸಬಹುದು ಎಂಬುದನ್ನು ಪರಿಗಣಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ವಾಂಗ್ಚುಕ್ ಅವರ ಸಂಸ್ಥೆಯ ಕುರಿತು ಅಧ್ಯಯನಕ್ಕೆ ಲಡಾಖ್‌ಗೆ ಭೇಟಿ ನೀಡಿದ ಸಮಿತಿ, ಹೆಚ್‌ಐಎಎಲ್ ನಡೆಸುತ್ತಿರುವ ಶೈಕ್ಷಣಿಕ, ಸಂಶೋಧನೆ ಮತ್ತು ಉದ್ಯಮಶೀಲತೆಯ ವ್ಯವಸ್ಥೆಗಳಿಂದ ಬಹಳ ಪ್ರಭಾವಿತಗೊಂಡಿದೆ. ವಿಶೇಷವಾಗಿ, ಸ್ಥಳೀಯ ಸಾಮಾಜಿಕ-ಸಾಂಸ್ಕೃತಿಕ ಮತ್ತು ಪರಿಸರ ವ್ಯವಸ್ಥೆಗಳಲ್ಲಿ ಬೇರೂರಿದ ಅನುಭವಾಧಾರಿತ ಶಿಕ್ಷಣ ಮತ್ತು ಕಲಿಕೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವುದು ಸಮಿತಿಯನ್ನು ಆಕರ್ಷಿಸಿದೆ ಎಂದು ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀಡೆಗಳ ಸ್ಥಾಯಿ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.
ಯುಜಿಸಿ ಇನ್ನೂ ಹೆಚ್‌ಐಎಎಲ್‌ಗೆ ಮಾನ್ಯತೆ ನೀಡಿಲ್ಲ. ಈ ವಿಷಯ ಹಲವು ವರ್ಷಗಳಿಂದ ಬಾಕಿ ಇದೆ ಎಂದು ತಿಳಿದು ಸಮಿತಿ ಕಳವಳ ವ್ಯಕ್ತಪಡಿಸಿದೆ. ಹೆಚ್‌ಐಎಎಲ್ ಸ್ಥಳೀಯ ಸಮುದಾಯದ ಮೇಲೆ ಅಗಾಧ ಪರಿಣಾಮ ಬೀರಿದೆ ಮತ್ತು ಅದರ ಐಸ್ ಸ್ತೂಪಗಳು ಮತ್ತು ಇತರ ಸಮುದಾಯ ತೊಡಗಿಸಿಕೊಳ್ಳುವಿಕೆ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದೆ ಎಂದು ವರದಿ ಹೇಳಿದೆ.
ಅನುಭವದ ಮತ್ತು ಯೋಜನೆ ಆಧಾರಿತ ಕಲಿಕೆ, ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಭಾರತೀಯ ಜ್ಞಾನ ವ್ಯವಸ್ಥೆಗಳ ಏಕೀಕರಣಕ್ಕೆ ಕರೆ ನೀಡುವ ಎನ್‌ಇಪಿ 2020ರ ಅನುಷ್ಠಾನದಲ್ಲಿ ಹೆಚ್‌ಐಎಎಲ್ ಅನುಕರಣೀಯವಾಗಿದೆ ಎಂದು ವರದಿ ತಿಳಿಸಿದೆ.
ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು ಮತ್ತು ಆರನೇ ಪರಿಚ್ಚೇದದ ಅಡಿ ಸೇರಿಸಬೇಕು ಎಂದು ಒತ್ತಾಯಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ನಾಲ್ವರು ಸಾವನ್ನಪ್ಪಿ 90 ಜನರು ಗಾಯಗೊಂಡ ಎರಡು ದಿನಗಳ ನಂತರ, ಅಂದರೆ ಸೆಪ್ಟೆಂಬರ್ 26 ರಂದು ವಾಂಗ್ಚುಕ್ ಅವರನ್ನು ಕಠಿಣ ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಗಿದೆ. ಸರ್ಕಾರ ವಾಂಗ್ಚುಕ್ ವಿರುದ್ದ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪ ಹೊರಿಸಿದೆ.
ಲಡಾಖ್ ಆಡಳಿತವು ಹೆಚ್ಐಎಎಲ್‌ಗೆ ಭೂ ಹಂಚಿಕೆಯನ್ನು ರದ್ದುಗೊಳಿಸಿದೆ. ಕೇಂದ್ರ ಗೃಹ ಸಚಿವಾಲಯವು ಕಾನೂನು ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಂಸ್ಥೆಯ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ನೋಂದಣಿಯನ್ನು ರದ್ದುಗೊಳಿಸಿದೆ.


