ಇಂದು (ಮಾ.10) ಪುನರಾರಂಭಗೊಂಡಿರುವ ಸಂಸತ್ತಿನ ಉಭಯ ಸದನಗಳ ಕಲಾಪಗಳಲ್ಲೂ ಗದ್ದಲ ಉಂಟಾಗಿದೆ.
ಲೋಕಸಭೆಯಲ್ಲಿ ಪ್ರತಿಪಕ್ಷದ ಡಿಎಂಕೆ ಸದಸ್ಯರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ದ ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆ, ಕಲಾಪವನ್ನು 30 ನಿಮಿಷಗಳ ಕಾಲ ಮುಂದೂಡಲಾಯಿತು.
ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನ್ “ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ನಿರ್ವಹಿಸುವ ಶಾಲೆಗಳನ್ನು ಬಲಪಡಿಸುವ ಕೇಂದ್ರ ಪ್ರಾಯೋಜಿತ ಯೋಜನೆಯಾದ ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (ಪಿಎಂ ಶ್ರೀ) ಅನುಷ್ಠಾನಗೊಳಿಸುವ ಸಂಬಂಧ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ತನ್ನ ನಿಲುವನ್ನು ಬದಲಾಯಿಸಿದೆ. ಈ ಮೂಲಕ ಅಪ್ರಾಮಾಣಿಕರಾದ ಅವರು ತಮಿಳುನಾಡಿನ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ರಾಜಕೀಯ ಮಾಡುತ್ತಿದ್ದಾರೆ” ಎಂದು ಹೇಳಿದರು.
“ತಮಿಳುನಾಡು ಸರ್ಕಾರ ಆರಂಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡಿತ್ತು. ಆದರೆ ಈಗ ಅವರು ನಿಲುವನ್ನು ಬದಲಾಯಿಸಿದ್ದಾರೆ. ಕರ್ನಾಟಕ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ಬಿಜೆಪಿ ಆಡಳಿತವಿಲ್ಲದ ರಾಜ್ಯಗಳು ಕೂಡ ಒಪ್ಪಂದಕ್ಕೆ ಸಹಿ ಹಾಕಿವೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೆ ತರುವ ಬಗ್ಗೆ ಸಂಬಂಧಪಟ್ಟ ತಮಿಳುನಾಡು ಕೇಂದ್ರ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಬೇಕು” ಎಂದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಡಿಎಂಕೆ ಸದಸ್ಯರು, “ಸದನದ ಬಾವಿಗಿಳಿದು ಪ್ರತಿಭಟಿಸಿದರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ, ಸಂಸದರು ತಮ್ಮ ಆಸನದಲ್ಲಿ ಕುಳಿತು ಕಲಾಪ ಸುಸೂತ್ರವಾಗಿ ನಡೆಯಲು ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ರಾಜ್ಯಸಭೆಯಿಂದ ಹೊರ ನಡೆದ ಸದಸ್ಯರು
ಮತದಾರರ ಚೀಟಿಯ ಅಕ್ರಮ, ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿರುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸುವಂತೆ ಕೋರಿ ನೀಡಿದ್ದ ನೋಟಿಸ್ ಅನ್ನು ಉಪ ಸಭಾಪತಿ ತಿರಸ್ಕರಿಸಿದ ಹಿನ್ನೆಲೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷ ಸದಸ್ಯರು ರಾಜ್ಯಸಭೆಯಿಂದ ಹೊರ ನಡೆದರು.
ತುರ್ತು ವಿಷಯಗಳ ಕುರಿತು ಚರ್ಚೆ ನಡೆಸಲು ದಿನದ ವ್ಯವಹಾರವನ್ನು ಬದಿಗಿಡುವಂತೆ ಕೋರಿ ನಿಯಮ 267ರ ಅಡಿಯಲ್ಲಿ ನೀಡಿರುವ ನೋಟಿಸ್‌ಗಳನ್ನು ತಿರಸ್ಕರಿಸಲಾಗಿದೆ ಎಂದು ಸದನದ ಉಪ ಸಭಾಪತಿ ಹರಿವಂಶ್ ಹೇಳಿದ ನಂತರ, ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗಿದರು.
ಈ ವೇಳೆ, “ಸರ್ಕಾರ ಎಲ್ಲಾ ವಿಷಯಗಳ ಕುರಿತು ಚರ್ಚೆಗೆ ಸಿದ್ದವಿದೆ” ಎಂದು ಸಚಿವ ಜೆ.ಪಿ ನಡ್ಡಾ ಪ್ರತಿಪಕ್ಷ ಸದಸ್ಯರಿಗೆ ಹೇಳಿದರು.


