ಯೋಗ ಗುರು ಮತ್ತು ಪತಂಜಲಿ ಆಯುರ್ವೇದ ಫಾರ್ಮಾ ಸಂಸ್ಥೆಯ ಸ್ಥಾಪಕ ಬಾಬಾ ರಾಮ್‍ದೇವ್, ಕೊರೊನಾಕ್ಕೆ ಒಂದು ಔಷಧಿ ಕಂಡುಹಿಡಿದಿರುವುದಾಗಿಯೂ, ವೈದ್ಯಕೀಯ ಪ್ರಯೋಗದ ವೇಳೆ ಅದು ಭಾರೀ ಯಶಸ್ಸು ಕಂಡಿರುವುದಾಗಿಯೂ ಹೇಳಿಕೊಂಡು ಮತ್ತೆ ಮುನ್ನಲೆಗೆ ಬಂದಿದ್ದಾರೆ. ಕೋವಿಡ್-19ಗೆ ‘ಕೊರೋನಿಲ್’ ಎಂಬ ಔಷಧಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿರುವ ಪತಂಜಲಿ ಆಯುರ್ವೇದದ ಸ್ಟಂಟ್ ಹಿನ್ನಡೆಯಾಗಿ ಪರಿಣಮಿಸಿದೆ. ಪತಂಜಲಿಯು ಮಾಡಿರುವ ಪ್ರತಿಪಾದನೆಯನ್ನು ಅವಧಿಗೆ ಮುನ್ನ ಅವಸರವಾಗಿ ಬಹಿರಂಗಗೊಳಿಸಲಾಗಿದ್ದು, ಸುರಕ್ಷತೆಯ ಮತ್ತು ಈ ಔಷಧಿ ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ಪ್ರಯೋಗ ಮಾಹಿತಿ, ಆಧಾರಗಳನ್ನು ಎಳ್ಳಷ್ಟೂ ಒದಗಿಸಲಾಗಿಲ್ಲ.
ಈ ಔಷಧಿ ಮತ್ತು ಪ್ರತಿಪಾದನೆಯಯಲ್ಲಿ ತಪ್ಪೇನು? ಆಯುರ್ವೇದವು ಈ ರೋಗ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಲ್ಲವೆ?
ಪತಂಜಲಿ ಬಿಡುಗಡೆ ಮಾಡಿರುವ ಪ್ರಯೋಗ ವರದಿಯನ್ನು ನಾವು ಪರೀಕ್ಷಿಸಿದರೆ, ಅದು 10 ವರ್ಷ ಕೆಳಗಿನವರನ್ನು ಮತ್ತು 59 ವರ್ಷ ಮೇಲ್ಪಟ್ಟವರನ್ನು ಹೊರತುಪಡಿಸಿದೆ. ಅದು ಮಧುಮೇಹ ಅಥವಾ ಡಯಾಬಿಟಿಸ್, ರಕ್ತದೊತ್ತಡ, ತೀವ್ರವಾದ ಉಸಿರಾಟ ಅಥವಾ ಶ್ವಾಸಕೋಶದ ತೊಂದರೆ ಇರುವವರನ್ನು, ಕ್ಯಾನ್ಸರ್ ಮತ್ತು ಅಂತರ್ಗತ ರೋಗ ನಿರೋಧಕ ವ್ಯವಸ್ಥೆ ಹೊಂದಿರದ ಎಲ್ಲರನ್ನೂ ಹೊರತುಪಡಿಸಿದೆ.
ಅನ್ಯರೋಗ ಉಲ್ಬಣಗೊಂಡ ಸ್ಥಿತಿಯಲ್ಲಿರುವ ಎಲ್ಲರಿಗೂ ಪರಿಣಾಮಕಾರಿಯಾದ ಚಿಕಿತ್ಸೆಯ ಅಗತ್ಯವಿದೆ ಆದರೆ ರೋಗಲಕ್ಷಣಗಳು ಕಾಣಿಸಿಕೊಳ್ಳದ ಅಥವಾ ಅಲ್ಪ ಮತ್ತು ಮಧ್ಯಮ ಮಟ್ಟದರೋಗಲಕ್ಷಣಗಳು ಇರುವ ಕೋವಿಡ್ ಸೋಂಕಿತ ರೋಗಿಗಳಿಗೆ ಕಡಿಮೆ ವೈದ್ಯಕೀಯ ಶುಶ್ರೂಷೆಯ ಅಗತ್ಯವಿರುತ್ತದೆ. ಅವರಿಗೆ ಸಾಮಾನ್ಯ ಶೀತ ಜ್ವರದ (ಇನ್ಫ್ಲೂಯೆನ್ಝಾ ಅಥವಾ ಫ್ಲೂ) ಮಾದರಿಯಲ್ಲಿಯೇ ಚಿಕಿತ್ಸೆ ನೀಡಬಹುದು. ಇಂತಹ ರೋಗಿಗಳ ನಡುವೆಯೇ ಪತಂಜಲಿಯು ತನ್ನ ಔಷಧಿ ಪರಿಣಾಮಕಾರಿಯೆಂದು ಸಾರಿರುವುದು. ಈ ರೋಗಿಗಳ ಗುಂಪಿನಲ್ಲಿ ಈಗಾಗಲೇ ಅಲ್ಪ ಪ್ರಮಾಣದಚಿಕಿತ್ಸೆಯಿಂದಲೇ ಗುಣಮುಖರಾಗುತ್ತಿರುವ ಪ್ರಮಾಣ ಶೇಕಡಾ 95-97 ಇದೆ. ಆದುದರಿಂದ ಈ ಆಯುರ್ವೇದ ಔಷಧಿಯಿಂದ ಹೊಸದಾಗಿ ಏನು ಅನುಕೂಲ ಸಿಕ್ಕಿದೆ ಎಂದು ಎಂದು ಎಲ್ಲಾ ವೈದ್ಯಕೀಯ ವೃತ್ತಿಪರರು ಕೇಳುತ್ತಿದ್ದಾರೆ.
ಆಲೋಪಥಿ, ಆಯುರ್ವೇದ, ಮತ್ತು ಹೋಮಿಯೋಪತಿ ವೈದ್ಯಕೀಯ ಪದ್ಧತಿಗಳ ಅನೇಕ ತಜ್ಞರು ಗೊಂದಲಕ್ಕೀಡಾಗಿದ್ದಾರೆ. ಈ ಗೊಂದಲ ಏನೆಂದರೆ, ಪತಂಜಲಿಯು ಒಂದು ಔಷಧಿಯನ್ನು ಆಯುಷ್ ಸಚಿವಾಲಯದ ಪರವಾನಿಗೆ ಇಲ್ಲದೇ ಅಭಿವೃದ್ಧಿಪಡಿಸಿ, ಅದಕ್ಕೊಂದು ಹೆಸರು ನೀಡಿ, ಜಾಹೀರಾತು ನೀಡಿ ಅದನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸುವುದು ಹೇಗೆ ಸಾಧ್ಯವಾಯಿತು ಎಂಬುದು.
ಈ ತಥಾಕಥಿತ ವೈದ್ಯಕೀಯ ಪ್ರಯೋಗವನ್ನು ಜೈಪುರದ ಎನ್ಐಎಂಎಸ್‍ನ ಕೇವಲ 100 ರೋಗಿಗಳ ಮೇಲೆ ಮಾತ್ರ ನಡೆಸಲಾಗಿತ್ತು. ಮತ್ತು ಅವರಲ್ಲಿ 69 ಶೇಕಡಾ ರೋಗಿಗಳು ಮೂರು ದಿನಗಳಲ್ಲಿ ಮತ್ತು 100 ಶೇಕಡಾ ರೋಗಿಗಳು ಏಳು ದಿನಗಳಲ್ಲಿ ಗುಣಮುಖರಾದರು ಎಂದು ವರದಿಯಲ್ಲಿ ಬಣ್ಣಿಸಲಾಗಿದೆ. ಈ ಔಷಧವನ್ನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ನೀಡಲಾಗಿದೆಯೋ ಅಥವಾ ರೋಗಶಮನಕ್ಕಾಗಿ ನೀಡಲಾಗಿದೆಯೋ ಎಂಬುದು ಸ್ಪಷ್ಟವಿಲ್ಲ.
ಪತಂಜಲಿ ಆಯುರ್ವೇದವು ದೀರ್ಘಕಾಲಿಕ ಖಾಯಿಲೆಗಳನ್ನು ಗುಣಪಡಿಸುತ್ತೇವೆ ಎಂದು ಈ ರೀತಿಯ ಅವೈಜ್ಞಾನಿಕ ಪ್ರತಿಪಾದನೆಯನ್ನು ಮಾಡುತ್ತಿರುವುದು ಇದು ಮೊದಲ ಬಾರಿ ಏನಲ್ಲ. ಅವರು ಹಿಂದೆಯೂ ಇಂತವುಗಳನ್ನು ಮಾಡಿದ್ದಾರೆ. ಆದುದರಿಂದ, ಸಂಶೋಧನೆಯ ಪ್ರತಿಯೊಂದು ಹಂತದಲ್ಲೂ ಅವರ ವೈದ್ಯಕೀಯ ಪ್ರಯೋಗ, ವೈದ್ಯಕೀಯ ನೈತಿಕತೆ ಪ್ರಶ್ನಾರ್ಹವಾಗಿದೆ.

ಯಾವುದೇ ಒಂದು ಔಷಧಿ ತಯಾರಿಕಾ ಸಂಸ್ಥೆ ಈ ರೀತಿಯ ಸುಳ್ಳು ಪ್ರತಿಪಾದಗನೆಳನ್ನು ಮಾಡಿದರೆ, ಅದು ಜನರ ಜೀವವನ್ನು ಅಪಾಯಕ್ಕೆ ಗುರಿ ಮಾಡುವುದು ಮಾತ್ರವಲ್ಲ, ಪುರಾತನವಾದ ಆಯುರ್ವೇದ ವೈದ್ಯ ಶಾಸ್ತ್ರವನ್ನೇ ಸಂಶಯದಿಂದ ನೋಡುವಂತೆ ಮಾಡುತ್ತದೆ.
ಆರೋಗ್ಯವನ್ನು ಸಮಗ್ರ ದೃಷ್ಟಿಯಿಂದ ಕಾಣುವ ವಿಜ್ಞಾನ ಆಯುರ್ವೇದ. ಅದು ವ್ಯಕ್ತಿಯ ಸಮಷ್ಟಿಹಿತಕ್ಕಾಗಿ ದೈಹಿಕ, ಮಾನಸಿಕ, ತಾತ್ವಿಕ ಮತ್ತು ಆಧ್ಯಾತ್ಮಿಕ ಅಂಶಗಳ ಮೇಲೆ ಒತ್ತು ನೀಡುವ ಒಂದು ಪರಿಪೂರ್ಣ ವೈದ್ಯಕೀಯ ಪದ್ಧತಿಯಾಗಿದೆ. ಅದು ಹಲವಾರು ದೀರ್ಘಕಾಲಿಕ ರೋಗಗಳಾದ ಮಧುಮೇಹ, ಉಬ್ಬಸ, ಚರ್ಮರೋಗ, ಆರ್ಥರೈಟಿಸ್, ಮುಂತಾದ ತೀವ್ರತರದ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವ ಸಾಮಥ್ರ್ಯ ಹೊಂದಿದೆ. ಇವುಗಳಿಗೆ ಪ್ರಸ್ತುತ ಆಧುನಿಕ ವೈದ್ಯಕೀಯ ಪದ್ಧತಿಗಳಲ್ಲಿ ಪರಿಣಾಮಕಾರಿ ಚಿಕಿತ್ಸೆಗಳಿಲ್ಲ.
ಪ್ರಪಂಚದ ಪ್ರತಿಯೊಂದು ದೇಶವೂ ಸಾವಿರಾರು ವರ್ಷಗಳಿಂದ ಅವರದ್ದೇ ಆದ ಸ್ಥಳೀಯ ಜನಜಾತ ವೈದ್ಯಕೀಯ ಪದ್ಧತಿಗಳನ್ನು ಹೊಂದಿವೆ. ಪಾಶ್ಚಿಮಾತ್ಯರ ವಸಾಹತುಶಾಹೀಕರಣದ ಬಳಿಕ, ಉಂಟಾದ ತೀವ್ರ ಕೈಗಾರಿಕೀಕರಣದ ಬಳಿಕ ನಮಗೆ ರೋಗಗಳಿಂದ ತ್ವರಿತವಾಗಿ ಮುಕ್ತಿ ಬೇಕಾಗಿದೆ. ಆದುದರಿಂದಲೇ ಆಧುನಿಕ ವೈದ್ಯ ಪದ್ಧತಿ ಇಷ್ಟು ಜನಪ್ರಿಯತೆ ಗಳಿಸಿದ್ದು.
ಆಲೋಪಥಿ ಔಷಧಿಗಳ ವಿಷಕಾರಿ ಗುಣ, ಆರೋಗ್ಯ ಸೇವೆಯ ವಿಪರೀತ ಖರ್ಚು, ಜಾಗತಿಕ ಜನ ಸಮುದಾಯದಲ್ಲಿ ಔಷಧಿಗಳಿಗೆ ತಕ್ಕಂತೆ ರೋಗಾಣುಗಳು ಬದಲಾಗುವುದು ಇತ್ಯಾದಿ ಕಾರಣಗಳಿಗೆಇಂದು ಹೆಚ್ಚುಹೆಚ್ಚು ಜನರು ಪುರಾತನವಾದ ಆಯುರ್ವೇದ, ಯೋಗ, ಯುನಾನಿ ಮತ್ತು ಸಿಧ್ಧ ಔಷಧಿ ಪದ್ಧತಿಗಳಿಂದ ಪರಿಹಾರಕಂಡುಕೊಳ್ಳಲು ಮುಂದಾಗುವಂತೆ ಮಾಡಿವೆ.
ಹಾಗಾದರೆ, ಆಯುರ್ವೇದ ಹಿಂದುಳಿದಿರುವುದೇಕೆ?
ನಾವು ಕೆಲವು ಅಂಶಗಳನ್ನು ಗಮನಿಸುವ:
ಆಯುರ್ವೇದದಲ್ಲಿ ಸಂಶೋಧನೆ ಮಾಡಬಲ್ಲ ಕೆಲವೇ ಕೆಲವು ಅನುಭವಿ ಮತ್ತು ಉತ್ತಮ ಮೂಲಸೌಕರ್ಯಗಳುಳ್ಳ ಸಂಸ್ಥೆಗಳಿವೆ.
ಪ್ರತೀ ವರ್ಷ ಉತ್ತೀರ್ಣರಾಗಿ ಹೊರಬರುವ ಆಯುರ್ವೇದ ಪರಿಣಿತರು ಉನ್ನತ ಶಿಕ್ಷಣ ಅಥವಾ ವೈದ್ಯಕೀಯ ಸೇವೆಗೆ ಮುಂದಾಗುತ್ತಾರೆ. ಅವರಲ್ಲಿ ಕೆಲವೇ ಕೆಲವರು ಆಯುರ್ವೇದ ಸಂಶೋಧನೆಗೆ ಮುಂದಾಗುತ್ತಾರೆ.
ಇದಕ್ಕೇನು ಮಾಡಬಹುದು?
ಆಯುರ್ವೇದದಿಂದ ಔಷಧಿಗಳ ಗುಣಶಕ್ತಿಗಾಗಿ ಕ್ಲಿನಿಕಲ್ ಪ್ರಯೋಗಗಳನ್ನು ಪ್ರೋತ್ಸಾಹಿಸಿ ವಿವರಗಳನ್ನು ನಿಖರವಾಗಿ ದಾಖಲಿಸಬೇಕು.
ಸರ್ಕಾರ ಆಯುರ್ವೇದ ಸಂಶೋಧನೆಯನ್ನು ಪ್ರೋತ್ಸಾಹಿಸಬೇಕು. ಸರ್ಕಾರ ಅದನ್ನು ಪರ್ಯಾಯ ಆರೋಗ್ಯ ವ್ಯವಸ್ಥೆ ಎಂದು ತಿಳಿದುಕೊಳ್ಳದೆ, ಮುಖ್ಯವಾಹಿನಿಯ ಆರೋಗ್ಯ ಪದ್ಧತಿ ಎಂದು ಪರಿಗಣಸಿ ಬೆಂಬಲ ನೀಡಬೇಕು.
ಪಾಶ್ಚಾತ್ಯ ವೈದ್ಯಕೀಯ ಪದ್ಧತಿಗಳು ಮತ್ತು ಆಯುರ್ವೇದವನ್ನು ಒಳಗೊಂಡ ಜಂಟಿ ಸಂಶೋಧನೆಗಳು ಮತ್ತು ಕ್ಲಿನಿಕಲ್ ಪ್ರಯೋಗಗಳನ್ನು ಒಂದೇ ಸೂರಿನಡಿ ನಡೆಯುವ ಬಗ್ಗೆ ಯೋಚಿಸಬಹುದು.
ಇಂದು ಆರೋಗ್ಯ ಸೇವೆಗಳ ವೆಚ್ಚ ದಿನೇದಿನೇ ಹೆಚ್ಚುತ್ತಿದ್ದು, ಜನರ ಸಂಪೂರ್ಣ ಆರೋಗ್ಯವನ್ನು ಖಾತರಿಪಡಿಸುವಂತಹ ಸಾಮರ್ಥ್ಯ ಗಣನೀಯವಾಗಿ ಕುಗ್ಗಿದೆ. ಇಲ್ಲಿಯೇ ಹಲವಾರು ರೋಗಗಳಿಗೆ ಸಮಗ್ರದೃಷ್ಟಿಯ ಚಿಕಿತ್ಸೆ ನೀಡಬಹುದಾದ ಆಯುರ್ವೇದ ಔಷಧಿಗಳು ಮತ್ತು ಕಷಾಯಗಳು ಪ್ರಮುಖವಾದ ಪಾತ್ರಗಳನ್ನು ವಹಿಸಲು ಸಾಧ್ಯವಿದೆ.
ಆಯುರ್ವೇದದ ವಿವೇಕವನ್ನು ವಿಶಾಲವಾದ ಕ್ಲಿನಿಕಲ್ ಪ್ರಯೋಗಗಳ ಸಂಶೋಧನೆಯೊಂದಿಗೆ ಪರಿಶೀಲಿಸಿ ಸಾಬೀತುಪಡಿಸಲು ಸಾಧ್ಯವಾದರೆ, ಕೋವಿಡ್-19 ನಂತಹ ರೋಗಗಳನ್ನು ಮುಂದಿನ ದಿನಗಳಲ್ಲಿ ಸಮಗ್ರತೆಯ ದೃಷ್ಟಿಯಿಂದ, ಹಲವು ಸಾಕ್ಷ್ಯಾಧಾರಗಳ ಮೂಲಕ ಮತ್ತು ಧೈರ್ಯದಿಂದ ನಿಭಾಯಿಸಲು ಭರವಸೆಯ ಕಿರಣವಾಗಬಹುದು
ಡಾ. ಸಾಮ್ನಾ, ಆಯುರ್ವೇದ ವೈದ್ಯರು
ಅನುವಾದ: ನಿಖಿಲ್ ಕೋಲ್ಪೆ
ಇದನ್ನೂ ಓದಿ: ಪತಂಜಲಿಯಿಂದ ಕೊರೊನಾ ಗುಣಪಡಿಸಬಹುದೆಂದು ನಾವು ಹೇಳಿಲ್ಲ: ಸಿಇಒ ಆಚಾರ್ಯ ಬಾಲಕೃಷ್ಣ
ವಿಡಿಯೋ ನೋಡಿ:
ಸರೋವರ್ ಬೆಂಕಿಕೆರೆಯವರ ಚಿಲ್ ಮಾಡಿ ವಿಡಿಯೋ.


