ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದ ಎಂಡಿ ಆಚಾರ್ಯ ಬಾಲಕೃಷ್ಣ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ಮುಕ್ತಾಯಗೊಳಿಸಿದೆ.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರ ದ್ವಿಸದಸ್ಯ ಪೀಠವು ತೀರ್ಪು ನೀಡಿತು. ರಾಮ್‌ದೇವ್ ಮತ್ತು ಬಾಲಕೃಷ್ಣ ಅವರು ಪತಂಜಲಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ತಪ್ಪುದಾರಿಗೆಳೆಯುವ ಜಾಹೀರಾತುಗಳ ಪ್ರಸಾರ ನಿಲ್ಲಿಸುವುದಾಗಿ ಭರವಸೆ ನೀಡಿದ ನಂತರ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿತು.
ಪತಂಜಲಿ ಆಯುರ್ವೇದ್‌ನ ಜಾಹೀರಾತುಗಳು ರಕ್ತದೊತ್ತಡ, ಮಧುಮೇಹ ಮತ್ತು ಅಸ್ತಮಾದಂತಹ ಕಾಯಿಲೆಗಳನ್ನು ಗುಣಪಡಿಸುವ ಕುರಿತು ಅಸಮರ್ಪಕ ಮತ್ತು ತಪ್ಪುದಾರಿಗೆಳೆಯುವ ಮಾಹಿತಿಯನ್ನು ಒದಗಿಸಿವೆ ಎಂದು ಆರೋಪಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
“ಇಂತಹ ಕಾಯಿಲೆಗಳಿಗೆ ಪರಿಹಾರಗಳನ್ನು ಜಾಹೀರಾತು ಮಾಡುವುದು ಸಂಪೂರ್ಣವಾಗಿ ತಪ್ಪು” ಎಂದು ಐಎಂಎ ಹೇಳಿದೆ.
ಪತಂಜಲಿ ಆಯುರ್ವೇದ್, ರಾಮ್‌ದೇವ್ ಮತ್ತು ಬಾಲಕೃಷ್ಣ ಅವರು ಭವಿಷ್ಯದಲ್ಲಿ ಯಾವುದೇ ಕಾನೂನುಗಳನ್ನು ಉಲ್ಲಂಘಿಸುವುದಿಲ್ಲ, ವಿಶೇಷವಾಗಿ ತಮ್ಮ ಉತ್ಪನ್ನಗಳ ಜಾಹೀರಾತು ಅಥವಾ ಬ್ರ್ಯಾಂಡಿಂಗ್‌ಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಮುಂಚಿನ ಆದೇಶದಲ್ಲಿ ಸುಪ್ರೀಂ ಕೋರ್ಟ್, ಮುದ್ರಣ ಮತ್ತು ಟಿವಿಯಲ್ಲಿ ಪತಂಜಲಿ ಔಷಧಿ ಜಾಹೀರಾತುಗಳಿಗೆ ತಾತ್ಕಾಲಿಕ ನಿಷೇಧವನ್ನು ವಿಧಿಸಿತು. ರಕ್ತದೊತ್ತಡ, ಮಧುಮೇಹ ಮತ್ತು ಅಸ್ತಮಾ ಸೇರಿದಂತೆ ರೋಗಗಳಿಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು ನೀಡದಂತೆ ಕಂಪನಿಯನ್ನು ನಿರ್ಬಂಧಿಸಿದೆ.
ನ್ಯಾಯಾಲಯವು 1954 ರ ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆಯನ್ನು ಉಲ್ಲೇಖಿಸಿದೆ ಮತ್ತು ನಿರ್ದಿಷ್ಟ ರೋಗಗಳು ಅಥವಾ ಅಸ್ವಸ್ಥತೆಗಳಿಗೆ ಚಿಕಿತ್ಸೆಯಾಗಿ ಅದರ ಉತ್ಪನ್ನಗಳನ್ನು ಜಾಹೀರಾತು ಮಾಡದಂತೆ ಪತಂಜಲಿಯನ್ನು ನಿರ್ಬಂಧಿಸಿದೆ.
ಇದನ್ನೂ ಓದಿ; ‘ಸರ್ಕಾರ ಪದಚ್ಯುತಗೊಳಿಸುವಲ್ಲಿ ಭಾಗಿಯಾಗಿಲ್ಲ..’; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಆರೋಪ ನಿರಾಕರಿಸಿದ ಅಮೆರಿಕ


