ಉದ್ಯಮಿ ಗೌತಮ್ ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ದಂಪತಿಯ ಪಾಲುದಾರಿಕೆ ಇದೆ ಎಂಬ ಹಿಂಡೆನ್‌ಬರ್ಗ್ ವರದಿ ಸಂಚಲನ ಸೃಷ್ಟಿಸಿರುವ ನಡುವೆ, ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.
ಈ ಹಿಂದೆ, 2023ರಲ್ಲಿ ಅದಾನಿ ಶೇರು ಹಗರಣ ಸಂಬಂಧ ತನಿಖೆ ಕೋರಿ ಅರ್ಜಿ ಸಲ್ಲಿಸಿದವರಲ್ಲಿ ಒಬ್ಬರಾದ ವಕೀಲ ವಿಶಾಲ್ ತಿವಾರಿ ಈ ಬಾರಿಯೂ ಅರ್ಜಿ ಸಲ್ಲಿಸಿದ್ದು, ಅದಾನಿ ಸಮೂಹ ಸಂಸ್ಥೆಗಳ ಕುರಿತ ತನಿಖೆ ಪೂರ್ಣಗೊಳಿಸುವಂತೆ ಸೆಬಿಗೆ ನಿರ್ದೇಶಿಸಲು ಕೋರಿದ್ದಾರೆ.
ಅದಾನಿ ಸಮೂಹದ ಸಂಸ್ಥೆಗಳ ಲೆಕ್ಕಪತ್ರ ವಂಚನೆ ಮತ್ತು ಷೇರು ತಿರುಚುವಿಕೆ ಕುರಿತು ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಲ್ಲಿ ಹೊರಿಸಲಾದ ಆರೋಪಗಳ ಬಗ್ಗೆ ಎಸ್‌ಐಟಿ, ಸಿಬಿಐ ತನಿಖೆಗೆ ಆದೇಶಿಸಲು ವಕೀಲ ವಿಶಾಲ್ ತಿವಾರಿ ನವೆಂಬರ್ 24, 2023ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.
ಸೆಬಿ ಈಗಾಗಲೇ ತನಿಖೆ ನಡೆಸುತ್ತಿದೆ. ಅದರಲ್ಲಿ ಹಸ್ತಕ್ಷೇಪ ಮಾಡಲು ಯಾವುದೆ ಸೂಕ್ತ ಕಾರಣಗಳಿಲ್ಲ ಎಂದು ಕೋರ್ಟ್ ಹೇಳಿತ್ತು.
ಈ ವೇಳೆ ಅದಾನಿ ಸಮೂಹದ ವಿರುದ್ಧದ 24 ಪ್ರಕರಣಗಳ ಪೈಕಿ 22 ಪ್ರಕರಣಗಳ ತನಿಖೆಯನ್ನು ಸೆಬಿ ಪೂರ್ಣಗೊಳಿಸಿದೆ ಎಂದು ಕೋರ್ಟ್ ಗಮನಿಸಿತ್ತು. ಸಾಲಿಸಿಟರ್ ಜನರಲ್ ಅವರ ಭರವಸೆಯನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯವು, ಉಳಿದ 2 ಪ್ರಕರಣಗಳ ತನಿಖೆಯನ್ನು ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೆಬಿಗೆ ಸೂಚಿಸಿತ್ತು.
ಸೆಬಿ ತನಿಖೆಯನ್ನು ಅನುಮಾನಿಸಿ ಅರ್ಜಿದಾರರು ಪತ್ರಿಕೆಯ ವರದಿಗಳು ಮತ್ತು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಮಾಡುವ ಯೋಜನೆಯ (OCCRP)ವರದಿ ತೋರಿಸಿರುವುದನ್ನು ಮಾನ್ಯ ಮಾಡಲು ನ್ಯಾಯಾಲಯ ನಿರಾಕರಿಸಿತ್ತು. ಆಧಾರ ರಹಿತ ಸುದ್ದಿ ವರದಿಗಳು ಮತ್ತು ಮೂರನೇ ಪಕ್ಷದ ಸಂಸ್ಥೆಗಳ ವರದಿಗಳ ಆಧಾರದ ಮೇಲೆ ಶಾಸನಬದ್ಧ ಸಂಸ್ಥೆಯ ತನಿಖೆಯನ್ನು ಅನುಮಾನಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ನಂತರ, ಈ ವರ್ಷದ ಜೂನ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದ್ದ ವಿಶಾಲ್ ತಿವಾರಿ, ಜನವರಿಯಲ್ಲಿ ನೀಡಿದ ಆದೇಶದಂತೆ ಕಾಲಾವಧಿಯ ಒಳಗೆ ತನಿಖೆ ಪೂರ್ಣಗೊಳಿಸಲು ಸೆಬಿಗೆ ನಿರ್ದೇಶಿಸುವಂತೆ ಕೋರಿದ್ದರು. ಆದರೆ, ಈ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ (ಲಿಸ್ಟಿಂಗ್), ನ್ಯಾಯಾಲಯ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಿಲ್ಲ ಎಂದಿದ್ದರು.
ಇದೀಗ ಅದಾನಿ ಸಮೂಹಕ್ಕೆ ಸಂಬಂಧಪಟ್ಟಂತೆ ಸೆಬಿ ಅಧ್ಯಕ್ಷೆಯ ವಿರುದ್ದವೇ ಹಿಂಡನ್‌ಬರ್ಗ್ ಆರೋಪ ಮಾಡಿರುವ ಹಿನ್ನೆಲೆ, ತನಿಖೆ ಪೂರ್ಣಗೊಳಿಸುವಂತೆ ಸೆಬಿಗೆ ನಿರ್ದೇಶಿಸಲು ವಿಶಾಲ್ ತಿವಾರಿ ಮತ್ತೊಮ್ಮೆ ನ್ಯಾಯಾಲಯವನ್ನು ಕೋರಿದ್ದಾರೆ.
ಪ್ರಕರಣದ ಹಿನ್ನೆಲೆ
ಅದಾನಿ ಸಮೂಹ ತನ್ನ ಷೇರು ಬೆಲೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಅವುಗಳನ್ನು ತಿರುಚುತ್ತಿದೆ ಎಂದು ಆರೋಪಿಸಿ ಜನವರಿ 24,2023ರಂದು, ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಪ್ರಕಟಿಸಿತ್ತು. ಇದಕ್ಕೆ ಪ್ರತಿಯಾಗಿ, ಅದಾನಿ ಸಮೂಹವು 413 ಪುಟಗಳ ಸಮಗ್ರ ಉತ್ತರವನ್ನು ಪ್ರಕಟಿಸುವ ಮೂಲಕ ಆರೋಪಗಳನ್ನು ಕಟುವಾಗಿ ನಿರಾಕರಿಸಿತ್ತು.
ಈ ಬೆನ್ನಲ್ಲೇ ವಕೀಲರಾದ ವಿಶಾಲ್ ತಿವಾರಿ, ಎಂ.ಎಲ್ ಶರ್ಮಾ, ಕಾಂಗ್ರೆಸ್ ನಾಯಕ ಡಾ. ಜಯಾ ಠಾಕೂರ್ ಮತ್ತು ಸಾಮಾಜಿಕ ಕಾರ್ಯಕರ್ತೆ ಅನಾಮಿಕಾ ಜೈಸ್ವಾಲ್ ಅವರು ಅದಾನಿ ಸಮೂಹದ ವಂಚನೆಯ ಆರೋಪಗಳ ಕುರಿತು ತನಿಖೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.
ಮಾರ್ಚ್ 2ರಂದು ಈ ವಿಷಯದಲ್ಲಿ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಅದಾನಿ ಸಮೂಹದ ವಿಚಾರವಾಗಿ ಯಾವುದೇ ನಿಯಂತ್ರಕ ವೈಫಲ್ಯವನ್ನು ಹೊಂದಿದ್ದರೆ ತನಿಖೆ ನಡೆಸಲು ಸೆಬಿಯ ತಜ್ಞರ ಸಮಿತಿ ರಚಿಸಿತ್ತು. ತನಿಖಾ ಸಮಿತಿಯು ಒಪಿ ಭಟ್ (ಎಸ್‌ಬಿಐನ ಮಾಜಿ ಅಧ್ಯಕ್ಷ), ನಿವೃತ್ತ ನ್ಯಾಯಮೂರ್ತಿ ಜೆಪಿ ದೇವಧರ್, ಕೆವಿ ಕಾಮತ್, ನಂದನ್ ನಿಲೇಕಣಿ ಮತ್ತು ಸೋಮಶೇಖರನ್ ಸುಂದರೇಶನ್ ಅವರನ್ನು ಒಳಗೊಂಡಿದ್ದು, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎ.ಎಂ ಸಪ್ರೆ ಸಮಿತಿಯ ನೇತೃತ್ವ ವಹಿಸಿದ್ದಾರೆ.
ಮಾರ್ಚ್ 2ರ ಆದೇಶದಂತೆ ಸೆಬಿಗೆ ಸುಪ್ರೀಂ ಕೋರ್ಟ್ ತನಿಖೆ ಪೂರ್ಣಗೊಳಿಸಲು ನೀಡಿದ್ದ ಎರಡು ತಿಂಗಳ ಸಮಯವು ಮೇ 2 ರಂದು ಕೊನೆಗೊಂಡಿತ್ತು. ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸೆಬಿ, ತನಿಖೆಯನ್ನು ಪೂರ್ಣಗೊಳಿಸಲು ಆರು ತಿಂಗಳ ಅವಧಿಯನ್ನು ವಿಸ್ತರಿಸುವಂತೆ ಕೋರಿತ್ತು.
ಪ್ರಕರಣದ ವಹಿವಾಟುಗಳು ಸಂಕೀರ್ಣವಾಗಿವೆ ಮತ್ತು ಪರಿಶೀಲಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಸೆಬಿ ತನ್ನ ಅಫಿಡವಿಟ್‌ನಲ್ಲಿ ಹೇಳಿತ್ತು. ಕನಿಷ್ಠ ಸಾರ್ವಜನಿಕ ಷೇರುದಾರರ (MPS) ನಿಯಮಗಳ ತನಿಖೆಗೆ ಸಂಬಂಧಿಸಿದಂತೆ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಆಫ್ ಸೆಕ್ಯುರಿಟೀಸ್ ಕಮಿಷನ್ಸ್ (IOSCO) ನೊಂದಿಗೆ ಬಹುಪಕ್ಷೀಯ ತಿಳುವಳಿಕೆ (MMOU) ಅಡಿಯಲ್ಲಿ ಈಗಾಗಲೇ ಹನ್ನೊಂದು ಸಾಗರೋತ್ತರ ನಿಯಂತ್ರಕರನ್ನು ಸಂಪರ್ಕಿಸಿದೆ ಎಂದು ಸೆಬಿ ಸುಪ್ರೀಂ ಕೋರ್ಟ್ ಪೀಠಕ್ಕೆ ತಿಳಿಸಿತ್ತು.
ಸೆಬಿ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಆರಂಭದಲ್ಲಿ ಸಂಪೂರ್ಣ ಆರು ತಿಂಗಳ ಅವಧಿ ವಿಸ್ತರಣೆ ಮಾಡಲು ನಿರಾಕರಿಸಿತ್ತು. ಆಗಸ್ಟ್ 14, 2023ರವರೆಗೆ ಗಡುವನ್ನು ವಿಸ್ತರಿಸಿ, ಮೇ 17 ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ, ಆಗಸ್ಟ್ 14ರಂದು ಕೂಡ ತನಿಖಾ ವರದಿ ಸಲ್ಲಿಸಲು ಸೆಬಿ ವಿಫಲವಾಗಿತ್ತು.
ಈ ಹಿನ್ನೆಲೆ ಅರ್ಜಿದಾರರಲ್ಲಿ ಒಬ್ಬರಾದ ವಕೀಲ ವಿಶಾಲ್ ತಿವಾರಿ ಸೆಬಿ ವಿರುದ್ದ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು. ಸೆಬಿಯಿಂದ ತನಿಖೆಯನ್ನು ಎಸ್‌ಐಟಿಗೆ ವರ್ಗಾಯಿಸುವಂತೆ ಕೋರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಕಳೆದ ವರ್ಷ ನವೆಂಬರ್ 24ರಂದು ಆದೇಶ ಕಾಯ್ದಿರಿಸಿತ್ತು.
ಇದನ್ನೂ ಓದಿ : ಪತಂಜಲಿ ದಾರಿತಪ್ಪಿಸುವ ಜಾಹೀರಾತು ಪ್ರಕರಣ: ರಾಮ್‌ದೇವ್, ಎಂಡಿ ಬಾಲಕೃಷ್ಣ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಮುಕ್ತಾಯ