Homeಮುಖಪುಟನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

ನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

- Advertisement -
- Advertisement -

ಜನವರಿ 3ರಂದು ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲೆ ಶಿಕ್ಷಣಕ್ಕಾಗಿ ಮಾಡಿದ ಸಾಲದ ಹೊರೆಗೆ ಅಂಜಿ ಮೊನ್ನೆಯಷ್ಟೆ ಜೀವ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ ಸೌರವ್ ಕುಮಾರ್ ಯಾದವ್‌ನ ಹೆಸರು ಮತ್ತೆಮತ್ತೆ ಮನಸ್ಸಿಗೆ ಬರುತ್ತಿದೆ. ಮಗನ ಕೊನೆಯ ದರ್ಶನಕ್ಕೂ ಬರಲಾಗದ ಹೆತ್ತವರ ಆರ್ಥಿಕ ಸ್ಥಿತಿ ನೆನೆದು ಕಣ್ಣು ಹನಿಗೂಡುತ್ತದೆ. ’ಇಲ್ಲಿ ಮಾನವ ಮೌಲ್ಯಗಳಿಗೆ ಬೆಲೆಯಿಲ್ಲ. ವ್ಯಕ್ತಿಯ ಗುರುತು ಮತ್ತು ಸಂಖ್ಯೆಯಿಂದ ಅಳೆಯಲಾಗುತ್ತದೆ. ಬೌದ್ಧಿಕತೆಯಿಂದ ಗುರುತಿಸುವುದಲ್ಲ’ ಎಂದ ರೋಹಿತ್ ವೇಮುಲ ನಮ್ಮನ್ನಗಲಿ 5ವರ್ಷಗಳಾದವು. ನಮ್ಮ ದೇಶದ ಸಾಮಾನ್ಯ ಜನರಿಗೆ ಶಿಕ್ಷಣ ಎಂಬುದು ಇನ್ನೂ ನಿಲುಕದ ಕುಸುಮ, ಒಂದೊಮ್ಮೆ ಪ್ರವೇಶ ಪಡೆದರೂ ಸಾಗುವ ಹಾದಿ ಅವರಲ್ಲಿನ ಸತ್ವವನ್ನೇ ಉಡುಗಿಸುವಂತಿದೆ ಎಂಬುದನ್ನು ಇವು ತೋರಿಸುತ್ತಿವೆ.

ಜೊತೆಗೆ, ನಮ್ಮಲ್ಲಿ ಈಗಾಗಲೇ ಇರುವ ಶ್ರೇಣೀಕರಣದ ಜೊತೆಗೆ ಜಾಗತೀಕರಣದ ಭಾಗವಾಗಿ ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು ಹಿಂದುಳಿದವರನ್ನು ಮತ್ತಷ್ಟು ಅಂಚಿಗೆ ತಳ್ಳುತ್ತಿವೆ. ನಮ್ಮ ಗ್ರಾಮೀಣ ಪರಿಸರದ ಬಹುಪಾಲು ಇಂದು ವಿದ್ಯುತ್, ಅಂತರ್ಜಾಲದ ಕನಿಷ್ಟ ಸೌಲಭ್ಯ ಹೊಂದಿರುವ ಸಂದರ್ಭದಲ್ಲಿ ಡಿಜಿಟಲ್ ಶಿಕ್ಷಣ, ಶಿಕ್ಷಣದ ಖಾಸಗೀಕರಣ ದೊಡ್ಡ ವಿದ್ಯಾರ್ಥಿ ಸಮೂಹವನ್ನೇ ಶಿಕ್ಷಣ ವಂಚಿತರನ್ನಾಗಿಸುತ್ತದೆ. ಯಾವ ದಲಿತ, ಹಿಂದುಳಿದ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಫುಲೆ ದಂಪತಿಗಳು ಶ್ರಮಿಸಿದರೋ ಇಂದು ಅದೇ ಸಮುದಾಯಕ್ಕೆ ದುರ್ಗಮ ಹಾದಿ ಎದುರಾಗಿದೆ. ಈ ಬದಲಾವಣೆಗಳು ಕಂಗೆಡಿಸುವಂತಿವೆ.

ಈ ಸಂದರ್ಭದಲ್ಲಿ ಫುಲೆ ದಂಪತಿಗಳು ಕೈಗೊಂಡ ಬಹುದೊಡ್ಡ ಕೆಲಸವನ್ನು ಮತ್ತೆ ಕಣ್ಣಮುಂದೆ ತಂದುಕೊಂಡು ಇಂದಿನ ಬಿಕ್ಕಟ್ಟನ್ನು ದಾಟಲು ಬೇಕಾದ ಶಕ್ತಿಯನ್ನು ಪಡೆಯಬೇಕಾಗಿದೆ. ಇತ್ತೀಚೆಗೆ ಹೊರಬಂದ ಸಂಗೀತಾ ಮುಳೆಯವರ ’ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಕೃತಿ ಸಾವಿತ್ರಿಬಾಯಿಯವರ ಬದುಕಿನಿಂದ ಶಬರಿ ಎನ್ನುವ ದಲಿತ ಹುಡುಗಿ ಸ್ಫೂರ್ತಿ ಪಡೆದು ತನಗೆದುರಾದ ಸವಾಲುಗಳನ್ನು ದಾಟುವ ಕತೆ ಹೇಳುತ್ತದೆ. ಈ ಬಗೆಯ ಪ್ರೇರಣೆಯನ್ನು ನಾವು ಒಂದು ಸಮುದಾಯವಾಗಿ ಒಟ್ಟು ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಪಲ್ಲಟಕ್ಕೆ ಮುಖಾಮುಖಿಯಾಗುವ ನಿಟ್ಟಿನಲ್ಲಿ ಪಡೆಯಬೇಕಾಗಿದೆ.

ಸಾವಿತ್ರಿಬಾಯಿಫುಲೆಯವರು 1831, ಜನವರಿ 3ರಂದು ಬಾಂಬೆ ಸಂಸ್ಥಾನಕ್ಕೆ ಸೇರಿದ್ದ ಸತಾರಾದ ನಯೀಗಾಂವ್‌ನಲ್ಲಿ ಜನಿಸಿದರು. ಸಣ್ಣವಯಸ್ಸಿನಲ್ಲೇ ಜ್ಯೋತಿಬಾರನ್ನು ಮದುವೆಯಾದ ಸಾವಿತ್ರಿಬಾಯಿಯವರು ಪತಿಯ ಒತ್ತಾಸೆಯಿಂದ ಶಿಕ್ಷಣ ಪಡೆದರು. ಜ್ಯೋತಿಬಾ ಹಾಗೂ ಸಾವಿತ್ರಿಬಾಯಿ ಜೊತೆಯಾಗಿ ಪುಣೆಯಲ್ಲಿ 1848ರಲ್ಲಿ ಮೊತ್ತಮೊದಲ ಹೆಣ್ಣುಮಕ್ಕಳ ಶಾಲೆ ಆರಂಭಿಸುತ್ತಾರೆ. ನಂತರದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹೀಗೆ ಎಲ್ಲ ಶಿಕ್ಷಣವಂಚಿತ ಸಮುದಾಯಗಳಿಗಾಗಿ ಶಾಲೆಗಳನ್ನು ತೆರೆಯುತ್ತಾರೆ. ಸಂಪ್ರದಾಯವಾದಿ ಮನಸ್ಸುಗಳು ಇದನ್ನು ಸಹಿಸದೆ ಇಲ್ಲದ ಉಪಟಳಗಳನ್ನು ಕೊಟ್ಟರೂ ಧೃತಿಗೆಡದೆ ತಾವು ನಂಬಿದ ಮೌಲ್ಯದಿಂದ ದೂರಸರಿಯದೇ ಫುಲೆ ದಂಪತಿಗಳು ಬದುಕು ನಡೆಸಿದವರು.

ಸಾವಿತ್ರಿಬಾಯಿಯವರು ಜ್ಯೋತಿಬಾರೊಂದಿಗೆ ನೊಂದ, ತ್ಯಕ್ತ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು 1854ರಲ್ಲಿ ಬಾಲಹತ್ಯಾ ಪ್ರತಿಬಂಧಕ ಗೃಹ ಆರಂಭಿಸುತ್ತಾರೆ. ಮಹಿಳಾ ಮಂಡಲಗಳಲ್ಲಿ ಜಾತಿಮತಗಳ ಭೇದವಿಲ್ಲದೆ ಎಲ್ಲ ಮಹಿಳೆಯರೂ ಬೆರೆಯುವ ವಾತಾವರಣ ನಿರ್ಮಿಸುತ್ತಾರೆ. ವಿಧವಾ ಕೇಶಮುಂಡನದ ವಿರುದ್ಧ ದನಿಯೆತ್ತುತ್ತಾ ಇಂತಹ ಕೆಲಸ ಮಾಡದಂತೆ ಕ್ಷೌರಿಕರ ಮನವೊಲಿಸುತ್ತಾರೆ. ಸಮಾಜದ ತಳವರ್ಗದ ಜನರಿಗೆ ಬಾವಿಯಿಂದ ನೀರು ಸೇದುವ ಅವಕಾಶವಿಲ್ಲದಿದ್ದಾಗ ತಮ್ಮ ಮನೆಯ ಬಾವಿಯನ್ನು ಎಲ್ಲರಿಗೆ ಮುಕ್ತವಾಗಿರಿಸುತ್ತಾರೆ. ಜ್ಯೋತಿಬಾರ ಜೊತೆಯಲ್ಲಿ ಸತ್ಯಶೋಧಕ ಸಮಾಜ ಆರಂಭಿಸುವಲ್ಲಿ ಪ್ರೇರಕಶಕ್ತಿಯಾಗುತ್ತಾರೆ.

ಸಾವಿತ್ರಿಬಾಯಿ ಫುಲೆಯವರು ಶಿಕ್ಷಣ, ಸಾಮಾಜಿಕ ಜಾಗೃತಿ ಮೂಡಿಸಲು ತಮ್ಮ ಬದುಕನ್ನೇ ತೆತ್ತವರು. 1897ರಲ್ಲಿ ಮಹಾರಾಷ್ಟ್ರದಲ್ಲಿ ಪ್ಲೇಗ್ ಹರಡಿತ್ತು. ಸಾವಿತ್ರಿಬಾಯಿಯವರು ತಮ್ಮ ಜೊತೆಗಾರರೊಂದಿಗೆ ಜನರ ಶುಶ್ರೂಷೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅವರೂ ಸೋಂಕಿಗೆ ತುತ್ತಾಗಿ 1897, ಮಾರ್ಚ್ 10ರಂದು ಮರಣ ಹೊಂದುತ್ತಾರೆ. ಹೀಗೆ ತಮ್ಮ ಬದುಕಿನ ಕೊನೆಯ ಗಳಿಗೆಯಲ್ಲೂ ಅವರ ಮನಸ್ಸು ಮತ್ತು ದೇಹ ನೊಂದ ಜನರಿಗೆ ನೆರವಾಗಲು ತುಡಿಯುತ್ತಿತ್ತು.

ಒಂದು ಕಡೆಯಲ್ಲಿ ಜಾತಿಶ್ರೇಣೀಕರಣ, ಅಸ್ಪೃಶ್ಯತೆ, ಲಿಂಗ ತಾರತಮ್ಯದಿಂದ ಕೂಡಿದ ಸಾಮಾಜಿಕ ವ್ಯವಸ್ಥೆ, ಇನ್ನೊಂದು ಕಡೆಯಲ್ಲಿ ವಸಾಹತುಶಾಹಿಯ ಹಿಡಿತ, ಇವುಗಳ ಮಧ್ಯೆ ನಿಜವಾದ ಬಿಡುಗಡೆ ಶಿಕ್ಷಣದ ಮೂಲಕ ಸಾಧ್ಯ ಎಂದು ದೃಢವಾಗಿ ನಂಬಿ ನಡೆದವರು ಸಾವಿತ್ರಿಬಾಯಿಯವರು. “ಏಳಿ, ಎದ್ದೇಳಿ ಮತ್ತು ಶಿಕ್ಷಿತರಾಗಿ, ಸಂಪ್ರದಾಯದ ಸಂಕಲೆಗಳನ್ನು ಮುರಿಯಿರಿ” ಎಂಬ ಅವರ ಮಾತಿಗೆ ಅವರ ಬದುಕೇ ಒಂದು ನಿದರ್ಶನ. ಫುಲೆ ದಂಪತಿಗಳು ಅನಾಥ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತುಮಗನಾಗಿ ಸ್ವೀಕರಿಸುತ್ತಾರೆ. ಯಶವಂತ ರಾವ್ ಕೂಡಾ ತಂದೆತಾಯಿ ಸಾಗಿದ ದಾರಿಯಲ್ಲೇ ಸಾಗುತ್ತಾರೆ. ತಮ್ಮ ಪತಿ ಜ್ಯೋತಿಬಾ ತೀರಿಕೊಂಡಾಗ ಸಾಂಪ್ರದಾಯಿಕ ರೂಢಿಗೆ ವಿರುದ್ಧವಾಗಿ ಸ್ವತಃ ಸಾವಿತ್ರಿಬಾಯಿ ಅಂತಿಮ ವಿಧಿ ನೆರವೇರಿಸುತ್ತಾರೆ. ಸಾವಿತ್ರಿಬಾಯಿ ಅವರ ಇಂತಹ ನಡೆ, ಎಷ್ಟೋ ವರ್ಷಗಳ ನಂತರ ಕುವೆಂಪು ಅವರು ನುಡಿದ ’ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂಬುದನ್ನು ನೆನಪಿಸುತ್ತದೆ.

ಸಾವಿತ್ರಿಬಾಯಿ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣದ ಹಾದಿ ಹಾಕಿಕೊಟ್ಟವರಲ್ಲಿ ಮೊದಲಿಗರು; ಜನಹಿತವನ್ನು ಮನದಲ್ಲಿರಿಸಿಕೊಂಡು, ಅದನ್ನು ಕಾರ್ಯರೂಪಗೊಳಿಸಿ ವೈಚಾರಿಕತೆಯ ದೀಪ ಬೆಳಗಿದವರು. ಭಾರತದಲ್ಲಿ ಮೊದಲ ಘಟ್ಟದಲ್ಲಿ ಸ್ತ್ರೀವಾದಿ ದನಿಯಾಗಿ ಕಾಣುವವರು ಸಾವಿತ್ರಿಬಾಯಿ. ಏನೂ ಸವಲತ್ತುಗಳಿಲ್ಲದ ಕಾಲದಲ್ಲಿ ನೈಜ ಕಾಳಜಿಯೊಂದನ್ನೇ ಗಟ್ಟಿಯಾಗಿ ಆತುಕೊಂಡು ಮುಂದುವರೆದವರು ಫುಲೆ ದಂಪತಿಗಳು. ಇವರ ಕೊಡುಗೆಯ ಬಗ್ಗೆ ಹೇಳುವಾಗ ಭಾರತದ ಮಹತ್ವದ ಚಿಂತಕ ಜಿ.ಎನ್.ದೇವಿಯವರ ಮಾತು ಇಲ್ಲಿ ಪ್ರಸ್ತುತ, “ಭಾರತದಲ್ಲಿ ಆಧುನಿಕ ಶಿಕ್ಷಣವೆಂಬುದು ಸರ್ಕಾರದಿಂದಲೇ ಸ್ಥಾಪಿತವಾದ ಸಾರ್ವಜನಿಕ ವ್ಯವಸ್ಥೆ ಅಲ್ಲ. ಹಲವಾರು ನಿಸ್ವಾರ್ಥ ವ್ಯಕ್ತಿಗಳು ತಮ್ಮದೆಲ್ಲವನ್ನೂ ತೆತ್ತು ಕಟ್ಟಿದ ಒಂದು ಸಾಂಸ್ಕೃತಿಕ ಉತ್ಪನ್ನ… …ದುರದೃಷ್ಟವಶಾತ್, ಸ್ವಾತಂತ್ರ್ಯಾನಂತರ ಭಾರತೀಯ ಸಮಾಜದ ಆಳ ಸತ್ವವನ್ನು ಪೋಷಿಸುವ ಶಿಕ್ಷಣದ ಶ್ರೇಷ್ಠ ಕಾಣ್ಕೆಗಳನ್ನು ಶಿಕ್ಷಣದೊಂದಿಗೆ ಬೆಸೆಯಲಾಗಲೇ ಇಲ್ಲ.” ಇವು ನಮಗೆ ಸಾವಿತ್ರಿಬಾಯಿಯವರ ಮಹತ್ವ ಮತ್ತು ಇಂದಿನ ಬಿಕ್ಕಟ್ಟಿನ ಮೂಲವನ್ನು ಒಟ್ಟಿಗೆ ಮನದಟ್ಟು ಮಾಡಿಸುತ್ತವೆ.

ಇಂದು ನಮ್ಮ ಮುಂದೆ ಎಲ್ಲರನ್ನೂ ಕಾಯುವ ಸಂವಿಧಾನವಿದೆ, ಶಿಕ್ಷಣ ಮೂಲಭೂತ ಹಕ್ಕಾಗಿ ಬದಲಾಗಿದೆ. ಇಂತಹ ಸಂದರ್ಭದಲ್ಲೂ ಬಾಲ್ಯ ವಿವಾಹಗಳು ನಡೆಯುತ್ತಿವೆ, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಕಲಿಕೆಯ ಮಧ್ಯದಲ್ಲೇ ತೆರಳುವವರೂ ಹೆಚ್ಚಿದ್ದಾರೆ. ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ? ಎಂದು ನಾವು ಪ್ರಶ್ನೆ ಹಾಕಿಕೊಂಡು ನಮ್ಮನ್ನೇ ಅವಲೋಕನ ಮಾಡಿಕೊಳ್ಳದೇ ಹೋದರೆ ಆಶಯ ಕೇವಲ ಕಾಗದಕ್ಕಷ್ಟೆ ಮೀಸಲಾಗಿ, ಅರಳಬೇಕಾದ ಜೀವಗಳು ಕಣ್ಣಮುಂದೆಯೇ ಇಲ್ಲವಾಗುವ ದುರಂತವಷ್ಟೇ ಎದುಗಿರುತ್ತದೆ. ಈ ಸಂಕಷ್ಟಕರ ಸಂದರ್ಭದಲ್ಲಿ ಸಾವಿತ್ರಿಬಾಯಿಯವರ ಬದುಕಿನ ಹೋರಾಟದಿಂದ ನಾವು ಸತ್ವವನ್ನು ಪಡೆದು ಮುನ್ನಡೆಯುವ ದೃಢತೆ ತೋರಬೇಕಿದೆ.

ಡಾ. ಭಾರತೀದೇವಿ.ಪಿ

ಡಾ. ಭಾರತೀದೇವಿ.ಪಿ
ಭಾರತೀದೇವಿ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿದ್ದು ಈಗ ಸದ್ಯ ಹಾಸನದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ: ಸಾವಿರಾರು ದೀಪಗಳನ್ನು ಹಚ್ಚಿದ ಒಂದು ಬುಡ್ಡಿದೀಪವೇ ಸಾವಿತ್ರಿ ಬಾಯಿ ಫುಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಚೆಂದದ ಬರೆಹ ಮೇಡಂ, ಅಕ್ಷರದ ಅವ್ವನ ದಿಟ್ಟತನ ನಮ್ಮಲ್ಲಿ ಇನ್ನಾದರೂ ಗಟ್ಟಿಯಾಗಿ ಎದೆಗಿಳಿಯಬೇಕಿದೆ.

  2. ಪುಲೆ ಯವರ್ ಚಿಂತನೆಗಳನ್ನು ಮನ ಮುಟ್ಟಿಸುವ ಕೆಲಸ ಮಾಡುವ ನಿಮ್ಮ ಬರವಣಿಗೆ ನಿಜವಾಗಿಯೂ ಮೆಚ್ಚಿಕೊಳ್ಳುವುದರಲ್ಲಿ ಯಾವ ಬಗೆಯ ಎರಡು ಮಾತುಗಲ್ಲೂ ಇಲ್ಲ
    ಆದರೂ ಇಂದಿನ ಅಂದ ಭಕ್ತ ಗುಂಪು ಅನೇಕ ಮಹ್ನಿಯರ ಅನ್ನು ಅವೆಳ್ನಕಾರಿ ಮಾಡುತ್ತಿರುವುದು ವಿಷಾದ ಸಂಗತಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...