Homeಮುಖಪುಟವಿಪರೀತದ ಬೆಳಗು ಫುಲೆ ಮಾರ್ಗ

ವಿಪರೀತದ ಬೆಳಗು ಫುಲೆ ಮಾರ್ಗ

- Advertisement -
- Advertisement -

ಅಪರಿಮಿತದ ಕತ್ತಲನ್ನು ಕೇಡಿನ ರೂಪದಲ್ಲಿ ತಂದು ಒಟ್ಟುವವರ ನಡುವೆಯೇ ವಿಪರೀತದ ಬೆಳಗನ್ನು ಮೂಡಿಸುವವರ ಸಂಖ್ಯೆ ಕಡಿಮೆಯಿಲ್ಲ. ಭಾರತೀಯ ಸಮಾಜದಲ್ಲಿ ಕೇಡು ಸುರಿಯುವವರಷ್ಟೇ ಬೆಳಕು ಮೂಡಿಸುವವರೂ ಇದ್ದರು, ಇರುತ್ತಾರೆ. ಹಾಗೆ, ಸಮುದಾಯದ ನಡುವಿನಿಂದ ಎದ್ದುಬಂದ ಮಹಾನ್ ಜ್ಯೋತಿಯೊಂದು ತಾನು ಜಾಗೃತಗೊಳ್ಳುತ್ತ ಸಮಾಜವೂ ಜಾಗೃತಿಯತ್ತ ನಡೆಯುವಂತೆ ಮಾಡಿತು. ಅಕ್ಷರದ ಅರಿವೆಂಬ ದೀವಟಿಗೆಯನ್ನು ಪ್ರತಿ ಕೈಯಲ್ಲೂ ಇಟ್ಟಿತು. ತಮ್ಮ ಜೀವಿತಾವಧಿಯ ಒಂದೂಕಾಲು ಶತಮಾನದ ಬಳಿಕ ಭಾರತದಲ್ಲಿ ಮನೆ ಮಾತಾದ, ಜನವರಿ 3ರಂದು ಹುಟ್ಟಿದ ಸಾವಿತ್ರಿಬಾಯಿ ಫುಲೆ ನಿರ್ಲಕ್ಷಿತ ಬದುಕುಗಳನ್ನು ಘನತೆಯವಾಗುವಂತೆ ಮಾಡಿದ ಚೇತನವಾಗಿದ್ದಾರೆ. ಸಾವಿತ್ರಿಬಾಯಿ ಮತ್ತು ಅವರಿಂದ ‘ಸತ್ಯದ ಸಾಕ್ಷಾತ್ ರೂಪವಾದ ನನ್ನ ಸ್ವಾಮಿ’ ಎಂದು ಕರೆಸಿಕೊಂಡ ಪತಿ ಜೋತಿಬಾ ಫುಲೆ ಸಮಾಜಸೇವೆಗೆ ಕ್ರಾಂತಿಕಾರಿ ಹೊಳಹುಗಳನ್ನು ಕೊಟ್ಟವರು. ಅಧಿಕಾರದ ನೆಲೆಯಿಂದ ಯುದ್ಧವೆಂಬ ಸಾಮೂಹಿಕ ಪ್ರಯತ್ನವು ವೈಭವೀಕರಿಸಲ್ಪಟ್ಟ ಕಾಲದಲ್ಲಿ ಅಧಿಕಾರಹೀನರಿಗೆ ಸಂಘಟನೆಯೆಂಬ ಸಾಮೂಹಿಕ ವಿಮೋಚನೆಯ ‘ಫುಲೆ ಮಾರ್ಗ’ ಹಾಕಿಕೊಟ್ಟವರು. ಆಧುನಿಕ ಭಾರತದ ಸೆಕ್ಯುಲರ್ ಚಿಂತನಾಧಾರೆಗಳಿಗೆ ಸಶಕ್ತ ದೇಶೀಕೊಂಡಿಯಾಗಿರುವ ಜೋತಿಬಾ ಫುಲೆಯವರ ಚಿಂತನೆ, ಪ್ರಯತ್ನಗಳಿಗೆ ಹೆಣ್ಣುಸ್ಪರ್ಶ ನೀಡಿದ ಸಾವಿತ್ರಿಬಾಯಿ ಫುಲೆ ನಾವು ಮತ್ತೆಮತ್ತೆ ಪರಿಶೀಲಿಸಬೇಕಾದ ಆದರ್ಶ ಮಾದರಿಯಾಗಿದ್ದಾರೆ.

ಮಹಾರಾಷ್ಟ್ರದ ನಾಯಗಾಂವ್ ಎಂಬ ಕುಗ್ರಾಮದ ರೈತ ಅಶಿಕ್ಷಿತ ಹುಡುಗಿ ಸಾವಿತ್ರಿಯನ್ನು ಬರಿಯ ಕೌಟುಂಬಿಕ ಹೆಣ್ಣಾಗಲು ಬಿಡದೆ ಸಾಮಾಜಿಕ ಮಹಿಳೆಯಾಗಿಸುವಲ್ಲಿ ಅವರ ಸಂಗಾತಿ ಜೋತಿಬಾರ ಪಾತ್ರ ಮಹತ್ತದ್ದಾಗಿದೆ. ಒಬ್ಬರೊಳಗೊಬ್ಬರ ವ್ಯಕ್ತಿತ್ವ ಹಾಸುಹೊಕ್ಕಾದಂತಿರುವ ಜೋಡಿದಾರಿಕೆಯಲ್ಲಿ
ಅವರು ಸಮಾಜ ಸುಧಾರಣೆಯ ಹೊಸಪ್ರಯತ್ನಗಳನ್ನು ಕೈಗೆತ್ತಿಕೊಂಡರು. ಎಲ್ಲಿಯವರೆಗೆ ಶೋಷಣೆಯ ಮೂಲವನ್ನು ಗುರುತಿಸಲಾರೆವೋ ಅಲ್ಲಿಯವರೆಗೆ ಶೋಷಣೆಯನ್ನು ಒಪ್ಪಿಕೊಂಡೇ ಇರಬೇಕಾಗುತ್ತದೆ ಎಂದು ಗುರುತಿಸಿದರು. ಅದುವರೆಗಿನ ಸಮಾಜ ಸುಧಾರಕರು ಭಕ್ತಿ, ಅಧ್ಯಾತ್ಮದ ಭಾಷೆಯಲ್ಲಿ ಮೇಲುಕೀಳುಗಳನ್ನು ಪ್ರಶ್ನಿಸಿದ್ದರೆ ಫುಲೆಗಳು ದಮನದ ಬುಡಕ್ಕೇ ಕೈಹಾಕಿ ನೆಲೆಗಟ್ಟನ್ನು ಅಲುಗಿಸಿದರು. ಎಲ್ಲ ಸಮುದಾಯದವರಿಗೂ ಶಾಲೆಗಳನ್ನು ತೆರೆದರು. ವಿಧವೆಯರು, ಅನಾಥ ಮಕ್ಕಳನ್ನು ಪೊರೆದರು. ಅಸ್ಪೃಶ್ಯತೆಯ ಸಂಕಟಗಳಿಗೆ ಪರಿಹಾರ ಅರಸಿದರು. ಜಾತಿ ಶ್ರೇಣೀಕರಣವನ್ನು ಧಿಕ್ಕರಿಸಿ ಶೂದ್ರಾತಿಶೂದ್ರರಲ್ಲಿ ಆತ್ಮಗೌರವ ಬೆಳೆಸಿದರು. ಸತ್ಯಶೋಧಕ ಸಮಾಜ ಕಟ್ಟಿದರು. ಅವರು ಬರೆದರು, ಮಾತನಾಡಿದರು, ಸಂಚರಿಸಿದರು, ಹೇಳಿದಂತೆ ಬಾಳಿ ತೋರಿಸಿದರು.

1848ರಲ್ಲಿ ಹುಡುಗಿಯರ ಶಾಲೆ ತೆರೆದು ಅಕ್ಷರ ದಾಸೋಹ ಆರಂಭಿಸಿದ ಫುಲೆಗಳ ಪ್ರಯತ್ನಕ್ಕೆ, ಬ್ರಿಟಿಷ್ ಪ್ರಭುತ್ವದ ಅದಕ್ಕೂ ಮುಂಚಿನ ನಡೆಗಳು ಬೆಂಬಲವಾಗಿ ನಿಂತವು. ವಿಮೋಚಕರು ಎಲ್ಲೆಲ್ಲಿಂದ ಬರುವರೆಂದು ಹೇಳಲಾಗುವುದಿಲ್ಲ. ಭಾರತದ ಶೂದ್ರಾತಿಶೂದ್ರರಿಗೆ, ಮಹಿಳೆಯರಿಗೆ ಅಕ್ಷರ ಕಲಿಸುವ, ಆರೋಗ್ಯ ಕಲ್ಪಿಸುವ ಕ್ರೈಸ್ತ ಮಿಷನರಿಗಳು ಮತ್ತು ವಸಾಹತುಶಾಹಿ ಆಡಳಿತಗಾರರು ವಿಮೋಚಕರಂತೆ ಕಂಡಿದ್ದರೆ ಅಚ್ಚರಿಯಿಲ್ಲ. ಯಾಕೆಂದರೆ 1818ರ ವೇಳೆಗಾಗಲೇ ಕ್ರೈಸ್ತ ಮಿಷನರಿಗಳು ಭಾರತದಲ್ಲಿ 111 ಶಾಲೆಗಳನ್ನು ನಡೆಸುತ್ತಿದ್ದರು. 1824ರಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಮುಂಬಯಿಯಲ್ಲಿ, ಬಳಿಕ ಕಲಕತ್ತಾ, ಸತಾರಾ, ಪುಣೆ, ನಾಸಿಕ್, ಅಹ್ಮದ್ ನಗರಗಳಲ್ಲಿ ತೆರೆದಿದ್ದರು. 1824ರಲ್ಲಿ ಗಂಗೂಬಾಯಿ ಎಂಬಾಕೆ ಮುಂಬಯಿಯಲ್ಲಿ ಬಾಲಕಿಯರ ಶಾಲೆ ತೆರೆದರೂ ಅದನ್ನು ಕೆಲವೇ ತಿಂಗಳಲ್ಲಿ ಮುಚ್ಚಿಸಲಾಗಿತ್ತು. ಅಲ್ಲದೆ ಜೋತಿಬಾರಂತಹ, ಸಾವಿತ್ರಿ, ಫಾತಿಮಾ ಶೇಕರಂತಹ ಶಿಕ್ಷಕರನ್ನು ತರಬೇತಿಗೊಳಿಸಿದ ಮಿಸ್ ಫೆರಾರ್ ಫಾರ್ಮಲ್ ಸ್ಕೂಲನ್ನು ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ಆರಂಭಿಸಿದ್ದರು. ಸಾವಿತ್ರಿ, ಫಾತಿಮಾರ ಜೊತೆ, ಅವರಿಗಿಂತ ಮುಂಚೆ ಕೆಲವಾರು ಶಿಕ್ಷಕಿಯರು ತರಬೇತಿ ಪಡೆದಿರುವ ಸಾಧ್ಯತೆಯಿದೆ. ಚರಿತ್ರೆಯ ವಿಸ್ಮೃತಿಯಿಂದ ಅಂತಹ ರತ್ನಗಳೆಷ್ಟನ್ನೋ ಇನ್ನೂ ಹೆಕ್ಕಿ ತೆಗೆಯಬೇಕಿದೆ. ಒಟ್ಟಾರೆಯಾಗಿ ಭಾರತದ ನೆಲ, ಜನ, ಭಾಷೆ, ಇತಿಹಾಸದ ಬಗೆಗೆ ಮಿಷನರಿಗಳಿಗಿದ್ದ ಕುತೂಹಲವು ಕ್ರಮೇಣ ಗೌರವವಾಗಿ ಬದಲಾಗಿ ಅವರ ಆಸಕ್ತಿಗಳು ಮತಾಂತರದ ಆಚೆಗೂ
ವಿಸ್ತರಿಸಿದವು.

ಅಂದು ಮಿಷನರಿ ಶಾಲೆಗಳಿಗೆ ಸಾಮಾನ್ಯವಾಗಿ ಹೋಗುತ್ತಿದ್ದವರು ಕ್ರೈಸ್ತರು ಅಥವಾ ಅನಾಥರು.
ಭಾರತೀಯ ಜನಸಾಮಾನ್ಯರು ಇನ್ನೂ ಶಾಲೆಗೆ ಮಕ್ಕಳನ್ನು ಕಳಿಸುವ ಅವಶ್ಯಕತೆಯನ್ನು ಮನಗಂಡಿರಲಿಲ್ಲ. ದೇಶೀ ಶಿಕ್ಷಕ-ಶಿಕ್ಷಕಿಯರ ಸಂಖ್ಯೆ ಜಾಸ್ತಿಯಾದರೆ ಕಲಿಯಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬಹುದೆಂದು ಜೋತಿಬಾ ಮತ್ತವರ ಗೆಳೆಯರು ಬಲವಾಗಿ ನಂಬಿದ್ದರು. ಹಾಗಾಗಿ ಜೋತಿಬಾ ತನ್ನ ಹದಿವಯಸ್ಸಿನ ಪತ್ನಿಯನ್ನು, ಅವರ ಗೆಳೆಯ ಉಸ್ಮಾನ್ ಶೇಕ್ ತನ್ನ ತಂಗಿ ಫಾತಿಮಾರನ್ನು ಅಹ್ಮದ್ ನಗರಕ್ಕೆ ಶಿಕ್ಷಕರ ತರಬೇತಿ ಶಾಲೆಗೆ ಕಳಿಸಿದರು. ಬೋಧಿಸುವ ಬಳಗದ ಸಂಖ್ಯೆ ಬೆಳೆಯುತ್ತ ಹೋದಂತೆ ಒಂದಾದಮೇಲೊಂದು ಶಾಲೆ ತೆರೆದರು.

ಮಿಷನರಿಗಳು ಭಾರತಕ್ಕಾಗುವಂತೆ ದೇಶೀ ಭಾಷೆಗಳಲ್ಲಿ ಪಠ್ಯ ತಯಾರು ಮಾಡಿದ್ದರೆ, ಇವರು ಸರಳಾತಿಸರಳ ಭಾಷೆಯಲ್ಲಿ ಶೂದ್ರಾತಿಶೂದ್ರ ವರ್ಗಕ್ಕೂ ಹೊಂದಿಕೊಳ್ಳುವಂತಹ ಪಠ್ಯವಸ್ತು, ಭಾಷೆ, ಬೋಧನಾ ಕ್ರಮವನ್ನು ಬಳಸಿದರು.

ವಯಸ್ಕರಿಗೂ, ಕೂಲಿ ಕಾರ್ಮಿಕರಿಗೂ ಜಾತ್ರಾ-ಖೇತ್ರಾ ವಿಧಾನದಿಂದ ಶಿಕ್ಷಣ ನೀಡಿದರು. ಅವರ ಶಾಲೆಯಲ್ಲಿ ಕಲಿತ ಮಕ್ಕಳು ಪಡೆದ ವೈಚಾರಿಕ ಜಾಗೃತಿಗೆ ಮುಕ್ತಾಬಾಯಿ ಎಂಬ ದಲಿತ ಹುಡುಗಿ ಹಾಗೂ ಅವರ ಪ್ರಭಾವಕ್ಕೊಳಗಾದ ತಾರಾಬಾಯಿ ಶಿಂಧೆಯಂತಹ ದಿಟ್ಟೆಯರು ದ್ಯೋತಕವಾಗಿದ್ದಾರೆ.

ಜೀವಮಾನವಿಡೀ ಸ್ಥಾಪಿತ ವ್ಯವಸ್ಥೆಯನ್ನು, ಅದರ ಮುಖ್ಯ ಸ್ಥಾನಗಳಲ್ಲಿರುವವರನ್ನು ಫುಲೆಗಳು ಎದುರು ಹಾಕಿಕೊಂಡಿದ್ದರು. ಅವರಿಗೆ ಎಷ್ಟು ಬೆಂಬಲ ಹರಿದು ಬಂತೋ, ಎಷ್ಟು ಮೆಚ್ಚುಗೆ ವ್ಯಕ್ತವಾಗಿತ್ತೋ ಅಷ್ಟೇ ಅವರ ವಿರುದ್ಧ ಕತ್ತಿ ಮಸೆಯುವವರೂ ಇದ್ದರು. ಮೇಲ್ಜಾತಿಯವರಿಂದ ಹಿಡಿದು ತಮ್ಮದೇ ಬಂಧುಬಳಗ, ಜಾತಿಯವರ ತನಕ ಹಲವರಿಂದ ವಿರೋಧ ಎದುರಿಸಿದರು. ಮೊದಮೊದಲು ಮಿಷನರಿಗಳಿಂದ ತಾತ್ತ್ವಿಕ, ಆರ್ಥಿಕ ಹಾಗೂ ನೈತಿಕ ಬೆಂಬಲವನ್ನು ಪಡೆದಿದ್ದರೂ ನಂತರ ತಮ್ಮದೇ ಆದ ವಿಚಾರಗಳು ಸ್ಪಷ್ಟಗೊಳ್ಳುತ್ತ ಹೋದಂತೆ ಅವರ ಅನುಮಾನಕ್ಕೂ ಒಳಗಾದರು. ಇವೆಲ್ಲ ಕಾರಣಗಳಿಂದ ಫುಲೆಗಳು ಶಾಲೆ ನಡೆಸಿದ್ದು ಹತ್ತು ವರುಷ ಮಾತ್ರ. ಬಳಿಕ ಕೆಲವು ಮುಚ್ಚಿ ಹೋದವು, ಕೆಲವನ್ನು ಮಿಷನರಿಗಳು ಮುಂದುವರೆಸಿದರು.

ಆದರೆ ಅಕ್ಷರ ಹಂಚುವುದಕ್ಕಷ್ಟೇ ಅವರ ಪ್ರಯತ್ನ ನಿಲ್ಲಲಿಲ್ಲ. ವಿರೋಧ, ವಿಫಲತೆಗಳಿಗೆ ಕಂಗೆಡದೆ ಅಸ್ಪೃಶ್ಯತೆ ವಿರೋಧ, ವಿಧವಾ ವಿವಾಹ, ಮೌಢ್ಯ ವಿರೋಧ, ಸರಳ ಮದುವೆ, ದುಡಿಯುವ ವರ್ಗದ ಸಂಘಟನೆ, ರೈತ ಸಂಘಟನೆ, ರಾಜಕೀಯ ಜಾಗೃತಿ, ಪ್ರಭುತ್ವದ ನೀತಿ ನಿರೂಪಣೆ ಬದಲಾಯಿಸಲು ಒತ್ತಡ ಹೇರುವುದೇ ಮೊದಲಾದ ಹೋರಾಟ, ಚಳವಳಿಗಳನ್ನು ಹುಟ್ಟುಹಾಕಿದರು. ತಮ್ಮಂತೆಯೇ ಯೋಚಿಸುವ ಸಮಾನ ಮನಸ್ಕರನ್ನು ಸಂಘಟಿಸಿ ಸತ್ಯಶೋಧಕ ಸಮಾಜ ಕಟ್ಟಿದರು.

ಹೀಗೆ ವ್ಯಕ್ತಿಗತ ಸಮಸ್ಯೆಗಳ ಪರಿಹಾರ ಸಾಮೂಹಿಕ ಹೋರಾಟದಿಂದ ದೊರಕುತ್ತದೆ ಎಂಬ ಸಂಘಟನೆಯ ಪ್ರಾಥಮಿಕ ಪಾಠವನ್ನು ಫುಲೆಗಳು ದಮನಿತ ಸಮುದಾಯಗಳಿಗೆ ತೋರಿಸಿಕೊಟ್ಟರು. ಲೋಕಹಿತದ ದಾರಿ ಎಷ್ಟೇ ದುರ್ಗಮವಾಗಿದ್ದರೂ ಬದ್ಧತೆಯಿಂದ ಮುಂದುವರೆದರೆ ಬದಲಾವಣೆ ತರುವುದು ಸಾಧ್ಯ ಎಂದು ತೋರಿಸಿಕೊಟ್ಟರು. ಇದೇ ಫುಲೆ ಮಾರ್ಗ. ಎಲ್ಲ ಜೀವಪರ ಚಿಂತನೆಗಳ ಉಗಮ ಬಿಂದು, ಸಾಮೂಹಿಕತೆಯ ಧಾರಣ ಶಕ್ತಿಗೆ ಪ್ರತೀಕ. ಅವರ ಕಾಲಾನಂತರ ಭಾರತದಾದ್ಯಂತ ಹರಡಿ ಹಬ್ಬಿದ ಯಾವುದೇ ಮಾನವೀಯ ಚಳವಳಿ, ಚಿಂತನೆಗಳನ್ನು ನೋಡಿದರೂ ಅದರ ಬೇರುಗಳು ಫುಲೆಗಳ ನಿಸ್ವಾರ್ಥ ಪ್ರಯತ್ನದಲ್ಲಿ ಕಂಡುಬರುತ್ತವೆ. ಬಾಬಾಸಾಹೇಬ್ ಅಂಬೇಡ್ಕರರು ಮಹಾತ್ಮಾ ಎಂದೇ ಸಂಬೋಧಿಸುತ್ತಿದ್ದ ಜೋತಿಬಾ ಫುಲೆಯವರಿಗೆ ತಮ್ಮ ಒಂದು ಹೊತ್ತಗೆಯನ್ನು ಅರ್ಪಿಸಿದ್ದಾರೆ.

ಅಂತಹವರನ್ನು ನೆನಪಿಸಿಕೊಳ್ಳುವುದು ಎಂದರೆ ಅನ್ಯಾಯವನ್ನು ವಿರೋಧಿಸುತ್ತಲೇ ಮನುಷ್ಯ ಜೀವಗಳನ್ನು ಮೈತ್ರಿಯಿಂದ ಅಪ್ಪಿಕೊಳ್ಳುವುದು. ಫುಲೆಗಳನ್ನು ಗೌರವಿಸುವುದು ಎಂದರೆ ಕಪಟ, ಕಂದಾಚಾರವಿರದ ಸರಳ ಮೌಲ್ಯಗಳನ್ನು ಒಪ್ಪಿ ಪಾಲಿಸುವುದು. ಸಾವಿತ್ರಿ ಬಾಯಿಯವರನ್ನು ಒಳಗಿಳಿಸಿಕೊಳ್ಳುವುದು ಎಂದರೆ ಇವತ್ತಿಗೂ ತಮ್ಮ ಅಲೆಮಾರಿತನಕ್ಕೆ, ಹಸಿವಿಗೆ, ಮಾರ್ಗದರ್ಶಿಗಳಿರದ ದಿಕ್ಕೇಡಿತನಕ್ಕೆ ಶಾಲೆ ತಲುಪಲಾಗದ ಲಕ್ಷಾಂತರ ಮಕ್ಕಳಿಗೆ ಅರಿವನ್ನು ಹಂಚುವುದು.

ವೇಮುಲತನದ ಸಂಕಟಕ್ಕೆ ಮದ್ದು

ಚರಿತ್ರೆಯಿಂದ ಮಾದರಿಗಳನ್ನು ಆಯ್ದುಕೊಂಡಾಗ ಅವರನ್ನು ಮೂರ್ತೀಕರಿಸದೇ ಬದುಕಾಗಿ ಅನುವಾದಿಸಿಕೊಳ್ಳುವುದು ಮುಖ್ಯ. ಹಾಗೆ 21ನೆಯ ಶತಮಾನದ ದಲಿತ ಹುಡುಗಿಯೊಬ್ಬಳು ಮೀಸಲಾತಿ ಕೀಳರಿಮೆಯಿಂದ ಹೊರಬರಲು ಸಾವಿತ್ರಿಬಾಯಿಯವರ ಬದುಕನ್ನು ತನ್ನ ಸ್ಫೂರ್ತಿಯಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ‘ಸಾವಿತ್ರಿಬಾಯಿ ಅಂಡ್ ಐ’ ಎಂಬ ಕೃತಿ ತಿಳಿಸುತ್ತದೆ. ಮಕ್ಕಳಿಗೆ ಗಂಭೀರ ವಿಷಯಗಳನ್ನು ಸರಳವಾಗಿ ತಿಳಿಸುವ ಹಂಬಲದ ಲೇಖಕಿ ಸಂಗೀತಾ ಮುಳೆ ಬರೆದ ಈ ಹೊತ್ತಗೆಯು ಕೆಸ್ತಾರ-ವಿಕಾಸ ಮೌರ್ಯ ಜೋಡಿಯಿಂದ ‘ಸಾವಿತ್ರಿಬಾಯಿ ಮತ್ತು ನಾನು’ ಎಂದು ಕನ್ನಡಕ್ಕೆ ಅನುವಾದಗೊಂಡಿದೆ.

ಇಲ್ಲಗಳು ಅಷ್ಟೇನೂ ಮುಖ್ಯವಾಗದ ಬಾಲ್ಯವನ್ನು ಹಳ್ಳಿಯ ಸರಳ ಪರಿಸರದಲ್ಲಿ ಕಳೆದು, ಕನ್ನಡ ಮಾಧ್ಯಮದಲ್ಲಿ ಓದಿದ ಶಬರಿ ಎಂಬ ದಲಿತ ಹುಡುಗಿ ಕಾಲೇಜು ಶಿಕ್ಷಣದ ಸಲುವಾಗಿ ಪಟ್ಟಣಕ್ಕೆ ಬರುತ್ತಾಳೆ. ಅಲ್ಲಿಯ ವಿಶಿಷ್ಟ ನಾಗರಿಕ ಶಿಸ್ತು, ಸಿರಿತನದ ಭ್ರಮೆ ಹುಟ್ಟಿಸುವ ರೀತಿನೀತಿ, ಇಂಗ್ಲಿಷ್ ಭಾಷೆಯ ಅಪರಿಚಿತತೆಯಲ್ಲಿ ಹಲಬಗೆಯ ಸವಾಲುಗಳನ್ನು ಎದುರಿಸುತ್ತಾಳೆ.

ತನ್ನ ಇದುವರೆಗಿನ ಬದುಕು ಬದುಕೇ ಅಲ್ಲವೆನಿಸಿಬಿಡುವಂತೆ ಇರುವ ಪರಿಸರದಲ್ಲಿ ದ್ವಂದ್ವ, ಗೊಂದಲ, ಹಿಂಜರಿಕೆ, ಕೀಳರಿಮೆಗಳಲ್ಲಿ ತೊಳಲುತ್ತಾಳೆ. ‘ಕೆಳಜಾತಿ’ಯವಳು, ಮೀಸಲಾತಿ ಪಡೆದು ಆ ಸ್ಥಾನ ತಲುಪಿದವಳೆಂಬ ಸಂಗತಿಗಳು ವೇಮುಲತನದ ಸಂಕಟಗಳಿಗೆ ಕಾರಣವಾಗುತ್ತವೆ. ಮೀಸಲಾತಿ ಕೊಡುವ ಅವಕಾಶ, ಧೈರ್ಯ, ಭರವಸೆಗಳದ್ದು ಒಂದು ತೂಕವಾದರೆ ಅದರ ಜೊತೆಗೆ ಎದುರಾಗುವ ಹಿಂಜರಿಕೆ, ಭಯ, ಅವಮಾನಗಳ ವಜನು ಕುಸಿಯುವಂತೆ ಮಾಡುತ್ತವೆ.

ಹೀಗಿರುತ್ತ ಅವಳಿಗೆ ವಾಡೆಯ ಕೆಳಮಾಳಿಗೆಯಲ್ಲಿ ದಿನಚರಿಯೊಂದು ಸಿಗುತ್ತದೆ. ಅದು ಯಾರದ್ದು? ಸಾವಿತ್ರಿಬಾಯಿ ಫುಲೆಯವರದು! ಆ ಕಾಲ್ಪನಿಕ ದಿನಚರಿಯ ಪುಟಗಳು ಹಿಂಜರಿಕೆಯ ಕೂಪದಿಂದೆದ್ದು ಬಂದು ಸಮೂಹದಲ್ಲಿ ಬೆರೆಯುವ ಸೂಚನೆಯನ್ನು ಅವಳಿಗೆ ಕೊಡುತ್ತವೆ. ಮೈಮೇಲೆ ಸಗಣಿ ಎಸೆವವರಿಂದ ಬಟ್ಟೆ ಕೊಳೆಯಾದರೂ ಸಾವಿತ್ರಿ ಬಾಯಿ ಧೃತಿಗೆಡದೆ ನಡೆದದ್ದು, ಸಂಘಟನೆ, ಶಿಕ್ಷಣ, ಸಮಾಜ ಸೇವೆಗಳಲ್ಲಿ ಸಂಗಾತಿಗಳೊಂದಿಗೆ ತೊಡಗಿಕೊಂಡದ್ದನ್ನು ಓದುತ್ತ, ಓದುತ್ತ ಕಂಬಳಿಹುಳು ಚಿಟ್ಟೆಯಾಗಿ ಮಾರ್ಪಾಡಾದಂತೆ ಸಹಜ ರೂಪಾಂತರ ಹೊಂದುತ್ತಾಳೆ. ಸಾಮೂಹಿಕವಾಗಿ ಹೋರಾಡಬೇಕೆಂಬ ಅರಿವು ಪಡೆಯುತ್ತಾಳೆ.

ಸಾಧಾರಣವಾಗಿ ದಲಿತ ನಿರೂಪಣೆಗಳಲ್ಲಿ ಬ್ರಾಹ್ಮಣರು, ಹೆಣ್ಣು ನಿರೂಪಣೆಗಳಲ್ಲಿ ಗಂಡಸರು ಖಳರಂತಹ, ಖೂಳರಂತಹ ಪಾತ್ರವಾಗಿಯೇ ಕಾಣಿಸುತ್ತಾರೆ. ಅಂತಹ ಏಕರೂಪ ಜಾತಿ-ಲಿಂಗ ವ್ಯಾಖ್ಯಾನವನ್ನು ಸಂಗೀತಾ ಮುರಿದಿದ್ದಾರೆ. ಇಲ್ಲಿ ಒಳ್ಳೆಯ ಹುಡುಗರು ಇದ್ದಾರೆ. ತುಂಬ ಶ್ರದ್ಧೆಯಿಂದ ಅವಳಿಗೆ ಇಂಗ್ಲಿಷ್, ಗಣಿತ ಹೇಳಿಕೊಟ್ಟ ಸಿರಿವಂತ ಹುಡುಗನಿದ್ದಾನೆ. ‘ನಾನು ಶೂದ್ರ’ ಎಂದು ಎದೆಗೆ ಪೋಸ್ಟರು ಹಚ್ಚಿಕೊಂಡು ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಬೇಕೆನ್ನುವ ಬ್ರಾಹ್ಮಣ ಹುಡುಗರು ಕಾಣಿಸುತ್ತಾರೆ. ಲೇಖಕಿ ಭವಿಷ್ಯದ ಬಗೆಗೆ ಇಟ್ಟಿರುವ ಆಶಾವಾದದ ದ್ಯೋತಕ ಇದಾಗಿರಬಹುದು.

ಒಟ್ಟಾರೆಯಾಗಿ ಸಂಕುಚಿತ ಮನಸುಗಳಿರುವಂತೆಯೇ ಮನುಷ್ಯ ಸತ್ವವನ್ನು ಗುರುತಿಸುವ ಉದಾತ್ತರೂ ಇದ್ದಾರೆಂಬ ವಾಸ್ತವವು ಶಬರಿಗೆ ಬದುಕಿನ ಭರವಸೆ ಹೆಚ್ಚಿಸುತ್ತದೆ. ಸಂಘಟಿತ ಪ್ರಯತ್ನದ ಬಗೆಗೆ ವಿಶ್ವಾಸ ಮೂಡಿಸುತ್ತವೆ. ಸತ್ಯದೆಡೆಗೆ ನಿರ್ಭೀತಿಯಿಂದ ನಡೆಯತೊಡಗುತ್ತಾಳೆ. ಶಬರಿಯ ತುಮುಲ, ತಾಕತ್ತುಗಳ ಪಯಣವನ್ನು ಪುಸ್ತಕ ಸಶಕ್ತವಾಗಿ ಕಟ್ಟಿಕೊಟ್ಟಿದೆ.

ಮೀಸಲಾತಿ ಈ ದೇಶಕ್ಕೆ ಹೊಸದಲ್ಲ, ಸಾವಿರಾರು ವರ್ಷಗಳಿಂದ ಇರುವಂಥದ್ದು. ಹೆಣ್ಣುಗಂಡು ಎಂಬ ಮೀಸಲು ಮೊದಲು ಶುರುವಾಯಿತು. ಬರಬರುತ್ತ ಇವರದೀ ಜಾತಿ, ಅವರದು ಆ ಜಾತಿ:
ಇಂಥವರೇ ಜೀತ ಮಾಡಬೇಕು, ಇಂಥವರೇ ಮಸಣ ಕಾಯಬೇಕು, ಇಂತಿಂಥವರೇ ಮಲ ಹೊರಬೇಕು, ಮಡಕೆ ಮಾಡಬೇಕು, ನೇಗಿಲು ಹಿಡಿದು ಉಳಬೇಕು, ಸಿಂಹಾಸನದ ಮೇಲೆ ಕೂರಬೇಕು, ಗುಡಿಯಲ್ಲಿ ಹೂವೇರಿಸಬೇಕು ಎನ್ನುವಂತಹ ಅಸಂಖ್ಯ ಮೀಸಲುಗಳು ಜಾರಿಯಾದವು. ಮತ್ತೆ ಹೇಳಬೇಕಿಲ್ಲ, ಇದು ಅತ್ಯಂತ ಅಸಹಜ, ಅನೈತಿಕ, ಅಧಾರ್ಮಿಕ, ಅನ್ಯಾಯದ, ಇಂದಿಗೂ ಉಸಿರು ಕಟ್ಟಿಸುತ್ತ ಇರುವ ಮೀಸಲಾತಿ. ಅನ್ಯಾಯದ ಈ ಜಾತಿ ಮೀಸಲು ಮುರಿಯಲು ನ್ಯಾಯದ ಮೀಸಲಾತಿ ಬೇಕೇಬೇಕು. ಆದರೆ ನ್ಯಾಯವೆಂಬ ಕಹಿಸತ್ಯವನ್ನು ಗುಳಿಗೆಯಂತೆ ನುಂಗಲೂಬಾರದು. ಅದನ್ನು ಜಗಿದು ರಸಹೀರಿ ಅರಗಿಸಿಕೊಳ್ಳಬೇಕು. ಅದಕ್ಕೆ ಫುಲೆ ಮಾರ್ಗವು ಬೇಕೇ ಬೇಕು.

ಹೀಗೆಂದು ‘ಸಾವಿತ್ರಿಬಾಯಿ ಮತ್ತು ನಾನು’ ಹೊತ್ತಗೆ ತಿಳಿಸುತ್ತದೆ. ಮೀಸಲಾತಿಯಡಿ ಶಿಕ್ಷಣ ಪಡೆಯುತ್ತಿರುವವರ ಸಂಕಟಗಳನ್ನು ಎದೆಗೆ ತುಂಬಿಸುತ್ತದೆ. ಸಾವಿತ್ರಿಬಾಯಿಯವರ ಜೀವನಚರಿತ್ರೆಯನ್ನು ಶಬರಿ ಎಂಬ ಹುಡುಗಿಯ ಬದುಕಿನ ವಿಕಾಸದ ಮೂಲಕ ನಿರೂಪಿಸಿರುವ ಕಥನ ತಂತ್ರ ಹೊಸದಾಗಿದೆ. ಅಂದುಇಂದುಗಳನ್ನು ಜಡೆಯಂತೆ ಹೆಣೆದ ಕೌಶಲ, ಬರಹದ ಪ್ರಾಮಾಣಿಕತೆ, ನಿರೂಪಣೆಗಳು ಓದಿಸುವ ಶಕ್ತಿಯನ್ನು ಹೊತ್ತಗೆಗೆ ಕೊಟ್ಟಿವೆ. ಸಾವಿತ್ರಿಬಾಯಿಯವರ ಬಗೆಗೆ ಹೀಗೂ ಯೋಚಿಸಿ, ಬರೆಯಬಹುದು ಎಂದು ಹೊಸ ಮಾದರಿಯೊಂದನ್ನು ತೋರಿಸಿರುವ ಹೊತ್ತಗೆಯನ್ನು ಸಕಾಲದಲ್ಲಿ ಸಮರ್ಥ ಅನುವಾದ ಮಾಡಿರುವ ಕೆಸ್ತಾರ ಮತ್ತು ವಿಕಾಸ್; ಪ್ರಕಟಿಸಿದ ಅಹರ್ನಿಶಿಯ ಗೆಳತಿ ಅಕ್ಷತಾ ಹುಂಚದಕಟ್ಟೆ ಅಭಿನಂದನಾರ್ಹರಾಗಿದ್ದಾರೆ.

ಎಚ್ ಎಸ್ ಅನುಪಮಾ

ಎಚ್ ಎಸ್ ಅನುಪಮಾ
ಶಿವಮೊಗ್ಗ ಜಿಲ್ಲೆಯ ಎಚ್. ಎಸ್. ಅನುಪಮಾ ವೈದ್ಯೆ ಮತ್ತು ಲೇಖಕಿ. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಕವಲಕ್ಕಿಯಲ್ಲಿ 27 ವರ್ಷಗಳಿಂದ ವೃತ್ತಿ ನಿರತರು. ಕವಿತೆ, ಕತೆ, ಪ್ರವಾಸ ಕಥನ, ವೈದ್ಯಕೀಯ ಬರಹಗಳು ಹಾಗೂ ಸಮಕಾಲೀನ ವಿಚಾರಗಳಿಗೆ ಸಂಬಂಧಿಸಿದಂತೆ 50 ಪುಸ್ತಕಗಳು ಪ್ರಕಟವಾಗಿವೆ.


ಇದನ್ನೂ ಓದಿ: 2021 ರಲ್ಲಿ 31 ಸಾವಿರ ಮಹಿಳಾ ದೌರ್ಜನ್ಯದ ದೂರುಗಳು ದಾಖಲು: ಅರ್ಧದಷ್ಟು ಯುಪಿಯಿಂದ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...