ಅಕ್ಟೋಬರ್ 26,2024ರಂದು ಕೋಝೀಕ್ಕೋಡ್‌ನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಡುಗಡೆ ಮಾಡಿರುವ ಸಿಪಿಐ(ಎಂ) ನಾಯಕ ಪಿ ಜಯರಾಜನ್ ಅವರ ಪುಸ್ತಕ, ‘ಕೇರಳಂ: ಮುಸ್ಲಿಂ ರಾಷ್ಟ್ರಿಯಂ, ರಾಷ್ಟ್ರೀಯ ಇಸ್ಲಾಂ’ ಎಂಬ ಪುಸ್ತಕ ವಿವಾದದ ಕಿಡಿ ಹೊತ್ತಿಸಿದೆ.
ವಿಶೇಷವಾಗಿ ಪುಸ್ತಕದ ವಿರುದ್ದ ನಾಸಿರ್ ಮದನಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಸಿಡಿದೆದ್ದಿದೆ. ವರದಿಗಳ ಪ್ರಕಾರ, ಪುಸ್ತಕವು ಅಬ್ದುಲ್ ನಾಸಿರ್ ಮದನಿ ಅವರನ್ನು ವಿಮರ್ಶೆ ಮಾಡಿದ್ದು, ಮದನಿ ಕೇರಳದ ಮುಸ್ಲಿಂ ಯುವಕರನ್ನು ಮೂಲಭೂತವಾದದ ಕಡೆಗೆ ಪ್ರಭಾವಿಸಿದ ವ್ಯಕ್ತಿ ಎಂದು ವಿವರಿಸಿದೆ.
ಮದನಿಯ ಭಾಷಣಗಳು ಉಗ್ರವಾದಿ ಚಿಂತನೆಗಳನ್ನು ಬೆಳೆಸುವಲ್ಲಿ ಪ್ರಮುಖವಾಗಿದೆ ಎಂದು ಪುಸ್ತಕವು ಆರೋಪಿಸಿದೆ. ಆದರೂ, ಅವರು ಕೊಯಮತ್ತೂರು ಸ್ಫೋಟ ಪ್ರಕರಣದಲ್ಲಿ ಬಂಧನ ಮತ್ತು ನಂತರದ ಜೈಲುವಾಸದ ಬಳಿಕ ವಿಭಿನ್ನ ವಿಧಾನವನ್ನು ಅಳವಡಿಸಿಕೊಂಡರು ಎಂದಿದೆ.
ಜಯರಾಜನ್ ವಿರುದ್ದ ಪಿಡಿಪಿ ಕಾರ್ಯಕರ್ತರು ಕೋಝಿಕ್ಕೋಡ್‌ನಲ್ಲಿ ಪ್ರತಿಭಟನೆ ನಡೆಸಿದ್ದು, ಪುಸ್ತಕದ ಪ್ರತಿಗಳನ್ನು ಸುಟ್ಟು ಹಾಕಿದ್ದಾರೆ. ಪಿಡಿಪಿ ನಾಯಕರು ಪುಸ್ತಕದಲ್ಲಿನ ಆರೋಪಗಳನ್ನು ತಳ್ಳಿ ಹಾಕಿದ್ದು, “ಮದನಿ ಯಾರನ್ನೂ ಮೂಲಭೂತವಾದಿಗಳನ್ನಾಗಿಸಿಲ್ಲ ಎಂದು ಸ್ವತಃ ಸಿಪಿಐ(ಎಂ) ಈ ಹಿಂದೆ ಸಮರ್ಥಿಸಿಕೊಂಡಿದೆ. ಪಿಣರಾಯಿ ವಿಜಯನ್ ಸೇರಿದಂತೆ ಸಿಪಿಐ(ಎಂ) ನಾಯಕರು ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಮತ್ತು 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಪಿಡಿಪಿ ಎಡ ಪ್ರಜಾಸತ್ತಾತ್ಮಕ ರಂಗವನ್ನು (ಎಲ್‌ಡಿಎಫ್) ಬೆಂಬಲಿಸಿದೆ” ಎಂದಿದ್ದಾರೆ.
ಜಯರಾಜನ್ ಅವರನ್ನು ಸಮರ್ಥಿಸಿಕೊಂಡಿರುವ ಸಿಎಂ ಪಿಣರಾಯಿ ವಿಜಯನ್, ಲೇಖಕರ ಅಭಿಪ್ರಾಯಗಳನ್ನು ಪಕ್ಷದ ನಿಲುವಿನಿಂದ ಸ್ವತಂತ್ರವಾಗಿ ನೋಡಬೇಕು ಎಂದು ಒತ್ತಿ ಹೇಳಿದ್ದಾರೆ. “ಲೇಖಕನಿಗೆ ತನ್ನದೇ ಆದ ದೃಷ್ಟಿಕೋನವಿದೆ, ಅದು ಚಳವಳಿಯ ರಾಜಕೀಯ ಸಿದ್ಧಾಂತದಿಂದ ಭಿನ್ನವಾಗಿರಬಹುದು. ಪುಸ್ತಕ ಬಿಡುಗಡೆ ಮಾಡಲು ವೈಯಕ್ತಿಕ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುವ ಅಗತ್ಯವಿಲ್ಲ. ಅಭಿಪ್ರಾಯವು ವ್ಯಕ್ತಿಯ ದೃಷ್ಟಿಕೋನವಾಗಿದೆ ಮತ್ತು ಅದನ್ನು ಹಾಗೆ ನೋಡಬೇಕು” ಎಂದಿದ್ದಾರೆ.
ಇದೇ ವೇಳೆ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ಜಮಾಅತೇ ಇಸ್ಲಾಮಿ ಬಗ್ಗೆ ಮಾತನಾಡಿದ ಪಿಣರಾಯಿ ವಿಜಯನ್, “ಲೀಗ್ ಮತ್ತು ಜಮಾಅತೇ ಇಸ್ಲಾಮಿಯನ್ನು ಒಂದೇ ಲೆನ್ಸ್ ಮೂಲಕ ನೋಡಲು ಸಾಧ್ಯವಿಲ್ಲ. ಜಮಾತ್‌ನ ಗುರಿ ಇಸ್ಲಾಮಿಕ್ ರಾಜ್ಯವಾಗಿದೆ, ಆದರೆ ಲೀಗ್ ಭಾರತದ ಹೊರಗೆ ಮೈತ್ರಿಗಳಿಲ್ಲದ ಸುಧಾರಣಾವಾದಿ ಚಳುವಳಿಯಾಗಿದೆ. ಜಮಾತ್ ವಿದೇಶದಲ್ಲಿ ಉಗ್ರಗಾಮಿ ಗುಂಪುಗಳೊಂದಿಗೆ ಸಂಪರ್ಕವನ್ನು ಹೊಂದಿದೆ ಮತ್ತು ಲೀಗ್‌ಗಿಂತ ಭಿನ್ನವಾಗಿ ಇಸ್ಲಾಮಿಕ್ ಸಾರ್ವತ್ರಿಕತೆಯ ಗುರಿಯನ್ನು ಹೊಂದಿದೆ. ಆರ್‌ಎಸ್‌ಎಸ್ ಮತ್ತು ಜಮಾತ್ ಒಂದೇ ಗರಿಗಳ ಪಕ್ಷಿಗಳು. ಲೀಗ್ ತನ್ನ ಕಮ್ಯುನಿಸ್ಟ್ ವಿರೋಧಿ ಕಾರ್ಯಸೂಚಿಯಲ್ಲಿ ಮಾತ್ರ ಈ ಕೋಮು ಗುಂಪುಗಳೊಂದಿಗೆ ಸಹಕರಿಸುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಮಾನತೆ-ಸಾಮಾಜಿಕ ನ್ಯಾಯಕ್ಕೆ ಒತ್ತು, ಜಾತಿಗಣತಿ ಭರವಸೆ : ಸಂಚಲನ ಸೃಷ್ಟಿಸಿದ ಹೊಸ ಪಕ್ಷ ಟಿವಿಕೆ


