ದೇಶದ “ಭದ್ರತೆ ಮತ್ತು ಸಾರ್ವಭೌಮತ್ವ”ಕ್ಕೆ ಸಂಬಂಧಿಸಿದ ಯಾವುದೇ ವರದಿಯನ್ನು ಸಾರ್ವಜನಿಕಗೊಳಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಏ.29) ಹೇಳಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟಿಶ್ವರ್ ಸಿಂಗ್ ಅವರ ಪೀಠವು ಗೌಪ್ಯತೆಯ ಉಲ್ಲಂಘನೆಯ ವೈಯಕ್ತಿಕ ಆತಂಕಗಳನ್ನು ಪರಿಹರಿಸಬಹುದು. ಆದರೆ,ತಾಂತ್ರಿಕ ಸಮಿತಿಯ ವರದಿಯ ಕುರಿತು ಬೀದಿಯಲ್ಲಿ ಚರ್ಚಿಸಲು ಅದು ಯಾವುದೇ ದಾಖಲೆಯಲ್ಲ ಎಂದು ಹೇಳಿದೆ.
“ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಯಾವುದೇ ವರದಿಯನ್ನು ಸಾರ್ವಜನಿಕಗೊಳಿಸುವುದಿಲ್ಲ.ಆದರೆ, ನಾವು ಕೂಡ ಸೇರಿದ್ದೇವೆಯೇ ಎಂದು ತಿಳಿಯ ಬಯಸುವ ವ್ಯಕ್ತಿಗಳಿಗೆ ಅದನ್ನು ತಿಳಿಸಬಹುದು. ಹೌದು, ವೈಯಕ್ತಿಕ ಆತಂಕವನ್ನು ಪರಿಹರಿಸಬೇಕು, ಆದರೆ ವರದಿಯ ಕುರಿತ ಬೀದಿ ಚರ್ಚೆಗೆ ಅದನ್ನು ದಾಖಲೆಯನ್ನಾಗಿ ಮಾಡಲು ಸಾಧ್ಯವಿಲ್ಲ” ಎಂದು ಪೀಠ ಪುನರುಚ್ಚರಿಸಿದೆ.
ತಾಂತ್ರಿಕ ಸಮಿತಿಯ ವರದಿಯನ್ನು ಸಾರ್ವಜನಿಕವಾಗಿ ಎಷ್ಟರ ಮಟ್ಟಿಗೆ ಹಂಚಿಕೊಳ್ಳಬಹುದು ಎಂಬುದನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಅರ್ಜಿದಾರರಲ್ಲಿ ಒಬ್ಬರ ಪರವಾಗಿ ಹಾಜರಾದ ವಕೀಲ ದಿನೇಶ್ ದ್ವಿವೇದಿ, ಸರ್ಕಾರವು ಸ್ಪೈವೇರ್ ಅನ್ನು ಹೊಂದಿದ್ದು, ಅದನ್ನು ಬಳಸಿದೆಯೇ ಎಂಬುದು ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ ,”ಅವರು ಅದನ್ನು ಹೊಂದಿದ್ದರೆ, ಇಂದಿಗೂ ಅದನ್ನು ನಿರಂತರವಾಗಿ ಬಳಸುವುದನ್ನು ತಡೆಯಲು ಏನೂ ಇಲ್ಲ” ಎಂದು ಹೇಳಿದ್ದಾರೆ.
“ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿ ಬೇಕಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ. ಇತ್ತೀಚಿನ ದಿನಗಳಲ್ಲಿ ನಾವು ಎದುರಿಸುತ್ತಿರುವ ಸನ್ನಿವೇಶದಲ್ಲಿ, ನಾವು ಸ್ವಲ್ಪ ಜವಾಬ್ದಾರಿಯುತವಾಗಿರೋಣ… ವರದಿಯನ್ನು ಎಷ್ಟರ ಮಟ್ಟಿಗೆ ಹಂಚಿಕೊಳ್ಳಬಹುದು ಎಂಬುದನ್ನು ನಾವು ನೋಡುತ್ತೇವೆ” ಎಂದು ಪೀಠ ಪ್ರತಿಕ್ರಿಯಿಸಿದೆ.
“ದೇಶವು ಭಯೋತ್ಪಾದಕರ ವಿರುದ್ಧ ಸ್ಪೈವೇರ್ ಬಳಸುತ್ತಿದ್ದರೆ ಏನು ತಪ್ಪು? ಸ್ಪೈವೇರ್ ಹೊಂದಿರುವುದು ತಪ್ಪಲ್ಲ, ನೀವು ಯಾರ ವಿರುದ್ಧ ಅದನ್ನು ಬಳಸುತ್ತಿದ್ದೀರಿ ಎಂಬುದು ಪ್ರಶ್ನೆ. ರಾಷ್ಟ್ರದ ಭದ್ರತೆಯೊಂದಿಗೆ ನೀವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾಗರಿಕರ ಗೌಪ್ಯತೆಯ ಹಕ್ಕನ್ನುಸಂವಿಧಾನದ ಅಡಿಯಲ್ಲಿ ರಕ್ಷಿಸಲಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪತ್ರಕರ್ತ ಪರಂಜಯ್ ಗುಹಾ ತಕುರ್ತಾ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಅಮೆರಿಕದ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದ್ದಾರೆ. ಹ್ಯಾಕಿಂಗ್ ಆಗಿದೆ ಎಂದು ವಾಟ್ಸಾಪ್ ಸ್ವತಃ ಒಪ್ಪಿಕೊಂಡಿದೆ. ವಾಟ್ಸಾಪ್ ಮೂಲಕ ಅದಕ್ಕೆ ಪುರಾವೆಗಳಿವೆ ಎಂದಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಭಯೋತ್ಪಾದಕರ ವಿರುದ್ದ ಸ್ಪೈವೇರ್ ಬಳಸುವುದು ತಪ್ಪಲ್ಲ ಮತ್ತು ಅವರಿಗೆ ಗೌಪ್ಯತೆಯ ಹಕ್ಕಿಲ್ಲ ಎಂದು ವಾದಿಸಿದ್ದಾರೆ.
ಅರ್ಜಿದಾರರಲ್ಲಿ ಒಬ್ಬರ ಪರ ಹಿರಿಯ ವಕೀಲ ಶ್ಯಾಮ್ ದಿವಾನ್, ತಾಂತ್ರಿಕ ಸಮಿತಿಯ ವರದಿಯನ್ನು ಯಾವುದೇ ಪರಿಷ್ಕರಣೆ ಮಾಡದೆ ಬಹಿರಂಗಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಜುಲೈ 30ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಅಲಿಘಢ| ಪಾಕ್ ಧ್ವಜದ ಮೇಲೆ ಮೂತ್ರ ವಿಸರ್ಜಿಸುವಂತೆ ಬಾಲಕನಿಗೆ ಬಲಪಂಥೀಯ ಗುಂಪಿನಿಂದ ಒತ್ತಾಯ


