ಪೆಗಾಸಸ್ ಎಂಬುದು ಕೇವಲ ಸಾಫ್ಟ್‌ವೇರ್ ಅಲ್ಲ. ಅದೊಂದು ಆಯುಧವಾಗಿದೆ. ಅದನ್ನು ಭಯೋತ್ಪಾದಕರು, ಕ್ರಿಮಿನಲ್‌ಗಳ ವಿರುದ್ಧ ಬಳಸುವುದು ಬಿಟ್ಟು ಈ ದೇಶದ ಪ್ರಜಾತಂತ್ರವನ್ನು ಹಾಳು ಮಾಡಲು ಬಳಸಲಾಗುತ್ತಿದೆ. ದೇಶದ ಜನರ ಜನರ ದನಿ ಅಡಗಿಸಲು ದುರಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪೆಗಾಸಸ್ ಅನ್ನು ಕರ್ನಾಟಕದ ಸರ್ಕಾರ ಕೆಡವಲು ಬಳಸಿಕೊಳ್ಳಲಾಯಿತು. ರಾಫೇಲ್ ಹಗರಣವನ್ನು ಮುಚ್ಚಿಹಾಕಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಅದನ್ನು ಬಳಸಲಾಯಿತು. ಪತ್ರಕರ್ತರು, ವಿರೋಧ ಪಕ್ಷದವರ ಮೇಲೆ ಬಳಸಿ ಮೋದಿ ಮತ್ತು ಅಮಿತ್ ಶಾ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
ನನ್ನ ಫೋನ್ ಕೇವಲ ಗುರಿಯಾಗಿರಲಿಲ್ಲ, ಬದಲಿಗೆ ಖಂಡಿತಾ ಟ್ಯಾಪ್ ಮಾಡಲಾಗಿದೆ. ಕೇವಲ ರಾಹುಲ್ ಗಾಂಧಿಯ ಫೋನ್ ಟ್ಯಾಪ್ ಮಾಡಿದರೆ ಅದು ದೊಡ್ಡ ವಿಷಯವಲ್ಲ. ಆದರೆ ನಾನು ವಿರೋಧ ಪಕ್ಷದ ನಾಯಕ. ಜನರ ದನಿಯಾಗಿ ಕೆಲಸ ಮಾಡುತ್ತಿರುವವನು. ನನ್ನ ಫೋನ್ ಟ್ಯಾಪ್ ಮಾಡುವ ಮೂಲಕ ಜನರ ದನಿ ಅಡಗಿಸಲು ಈ ಸರ್ಕಾರ ಮುಂದಾಗಿದೆ. ಇಡೀ ದೇಶದ ಮೇಲಿನ ದಾಳಿ ಇದಾಗಿದೆ ಎಂದು ಕಿಡಿಕಾರಿದರು.
ಪೆಗಾಸಸ್ ಅನ್ನು ಸರ್ಕಾರಗಳಿಗೆ ಬಿಟ್ಟರೆ ಬೇರೆಯವರಿಗೆ ಮಾರಲು ಸಾಧ್ಯವಿಲ್ಲ. ಹಾಗಾಗಿ ಈ ಪ್ರಕರಣದಲ್ಲಿ ತಪ್ಪಿತಸ್ಥರಾದ ಗೃಹ ಮಂತ್ರಿ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಕೂಡಲೇ ರಾಜೀನಾಮೆ ನೀಡಬೇಕು. ಸುಪ್ರೀಂ ಕೋರ್ಟ್ ಮೇಲ್ವೀಚಾರಣೆಯಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕೆಂದು ರಾಹುಲ್ ಆಗ್ರಹಿಸಿದ್ದಾರೆ.
ಪೆಗಾಸಸ್ ಕಣ್ಗಾವಲಿನಲ್ಲಿ ಉದ್ಯಮಿ ಅನಿಲ್ ಅಂಬಾನಿಯ ಹೆಸರು ಕೇಳಿಬಂದಿರುವ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ರಾಫೇಲ್ ಹಗರಣದ ಬಗ್ಗೆ ನಾನು ದನಿಯೆತ್ತಿದೆ. ನೀವು ಸೇರಿದಂತೆ ಯಾವ ಮಾಧ್ಯಮಗಳು ನನ್ನನ್ನು ಬೆಂಬಲಿಸಲಿಲ್ಲ. ಇದು ನಿಜ. ಆದರೆ ನಿಧಾನವಾಗಿ ರಾಫೇಲ್ ಹಗರಣ ಹೊರಬರುತ್ತಿದೆ. ಪ್ರಧಾನ ಮಂತ್ರಿಗಳು ಈ ಹಗರಣದಲ್ಲಿ ನೇರ ಭಾಗಿಯಾಗಿದ್ದಾರೆ. ನೀವು ಏಕೆ ಮಾಜಿ ಸಿಬಿಐ ಡೈರೆಕ್ಟರ್ ಪೆಗಾಸಸ್ ಕಣ್ಗಾವಲಿಗೆ ಒಳಗಾಗಿದ್ದಾರೆ ಎಂಬ ಪ್ರಶ್ನೆ ಕೇಳಲಿಲ್ಲ? ಅವರು ತಮ್ಮದೆ ಇಲಾಖೆಯ ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಅವರ ನಂಬರ್ ಅನ್ನು ಟ್ಯಾಪ್ ಮಾಡುವ ಪಟ್ಟಿಗೆ ಸೇರಿಸಲಾಯಿತು? ಏಕೆ ಅವರನ್ನು ಬ್ಲಾಕ್‌ಮೇಲ್ ಮಾಡಲಾಯಿತು? ಇದನ್ನು ಯಾರು ಮಾಡಿದರು ಎಂಬುದು ನಿಜವಾದ ಪ್ರಶ್ನೆಯಲ್ಲವೇ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಸರ್ಕಾರವೇ ಇದನ್ನು ಮಾಡಿಸಿದೆ ಎಂದು ಹೇಗೆ ಹೇಳುತ್ತೀರಿ ಎಂಬ ಪ್ರಶ್ನೆಗೆ, “ಪೆಗಾಸಸ್ ಅನ್ನು ಸರ್ಕಾರಗಳಿಗೆ ಮಾತ್ರ ಮಾರಲಾಗುತ್ತದೆ. ಮೋದಿ ಸರ್ಕಾರ ಇದನ್ನು ಮಾಡಿಲ್ಲ ಎಂದಾದರೆ ಜಪಾನ್, ಇಸ್ರೇಲ್, ಉಗಾಂಡ ಸರ್ಕಾರ ಮಾಡಿರಬಹುದಲ್ಲವೇ? ಪೋನ್‌ಗಳು ಟ್ಯಾಪ್ ಆಗುತ್ತಿರುವುದು ನಿಜವಾದರೆ ಅದರ ಬಗ್ಗೆ ಸರ್ಕಾರ ಏಕೆ ತನಿಖೆ ನಡೆಸುತ್ತಿಲ್ಲ? ನಾವು ಇದನ್ನು ಮಾಡಿಲ್ಲ ಎಂದು ಏಕೆ ಮೋದಿ ಇದುವರೆಗೂ ಹೇಳಿಲ್ಲ? ಎಂದರು.
ನಾನು ಇದರಿಂದ ಹೆದರುವುದಿಲ್ಲ. ಭ್ರಷ್ಟಾಚಾರ ಮತ್ತು ಕಳ್ಳತನ ಮಾಡಿದವರು ತಮ್ಮ ಫೋನ್ ಟ್ಯಾಪ್ ಆದರೆ ಹೆದರಬೇಕು. ಈ ಎರಡು ಭಯ ನನಗಿಲ್ಲ. ಹಾಗಾಗಿ ನರೇಂದ್ರ ಮೋದಿಯವರ ಕದ್ದಾಲಿಕೆಗೆ ಹೆದರುವ ಮಾತೇ ಇಲ್ಲ ಎಂದಿದ್ದಾರೆ. ಇಂಟೆಲಿಜೆನ್ಸ್ ನವರು ಸಹ ನನ್ನ ಫೋನ್ ಟ್ಯಾಪ್ ಮಾಡುತ್ತಿದ್ದಾರೆ.
ರಾಹುಲ್ ಗಾಂಧಿ ಆರೋಪಗಳನ್ನು ಅಲ್ಲಗೆಳೆದಿರುವ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್, “ನಾವು ಎಲ್ಲಾ ವಿಷಯಗಳಿಗೆ ಸ್ಪಷ್ಟೀಕರಣ ನೀಡಿದ್ದೇವೆ. ಇದರಲ್ಲಿ ತನಿಖೆ ಮಾಡುವ ಅಗತ್ಯವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಪೆಗಾಸಸ್ ಫೋನ್ ಹ್ಯಾಕ್‌ಗೆ ಒಳಗಾದವರು ಯಾರು ಯಾರು? ಪ್ರಮುಖ 30 ಜನರ ಪಟ್ಟಿ ಇಲ್ಲಿದೆ


