ಕರ್ನಾಟಕದ ಜನರು 40% ಕಮಿಷನ್‌ನಿಂದ ಬೇಸತ್ತಿದ್ದಾರೆ ಮತ್ತು ”ಶೇ 100 ರಷ್ಟು ಬದ್ಧತೆ”ಯನ್ನು ನೀಡುವ ಕಾಂಗ್ರೆಸ್ ಪಕ್ಷವನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲು ಬಯಸುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಭಾನುವಾರ ಹೇಳಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ನಗರ ಮಟ್ಟದ ಆಡಳಿತದಲ್ಲಿನ ”ಗಂಭೀರ ಸಮಸ್ಯಗಳನ್ನು” ನಿಭಾಯಿಸಲು ಕಾಂಗ್ರೆಸ್ ಸಿದ್ಧವಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ತಿರುವನಂತಪುರಂ ಸಂಸದ ತರೂರ್ಅವರು, ”ಈ ರಾಜ್ಯದ ಜನರು ಶೇಕಡಾ 40 ರಷ್ಟು ಕಮಿಷನ್‌ನಿಂದ ಬೇಸತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರಿಗೆ ಬೇಕಾಗಿರುವುದು 100 ಪ್ರತಿಶತ ಬದ್ಧತೆ ಮತ್ತು ಅದನ್ನೇ ನಾವು ನೀಡುತ್ತೇವೆ” ಎಂದು ತಿಳಿಸಿದರು.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳಿರುವಾಗ ಮತ್ತೆ ರಾಜ್ಯ ಬಿಜೆಪಿ ಸರ್ಕಾರದ 40% ಕಮೀಷನ್ ಆರೋಪವನ್ನು ಪುನರುಚ್ಚಿಸಿರುವ ತರೂರ್, ”ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಗುತ್ತಿಗೆದಾರರು, ಅನುದಾನರಹಿತ ಖಾಸಗಿ ಶಾಲೆಗಳು ಮತ್ತು ಕೆಲವು ಧಾರ್ಮಿಕ ಸಂಸ್ಥೆಗಳಿಂದ ಪಡೆದ ಅನುದಾನದಲ್ಲಿ ಶೇಕಡಾ 40 ರಷ್ಟು ಕಮಿಷನ್ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ದುರಾಡಳಿ ನಡೆಯುತ್ತಿದ್ದು, ಮೂಲಸೌಕರ್ಯಗಳ ವಿಚಾರದಲ್ಲಿ ಬೆಂಗಳೂರು ನಗರ ಮುಜುಗರಕ್ಕಿಡಾಗುತ್ತಿದೆ ಎಂದು ತರೂರ್ ಹೇಳಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಔಷಧಗಳ ಬೆಲೆ ಶೇ.12.12ರಷ್ಟು ಹೆಚ್ಚಳ: ಬಿಜೆಪಿ ವಿರುದ್ಧ ಕಿಡಿಕಾರಿದ ವಿಪಕ್ಷಗಳು
”ನಮ್ಮ ಸಂದೇಶವು ತುಂಬಾ ಸರಳವಾಗಿದೆ. ದುರದೃಷ್ಟವಶಾತ್, ನಾಲ್ಕು ವರ್ಷಗಳಿಂದ ನಾವು ಅತ್ಯಂತ ಕೆಟ್ಟ ಆಡಳಿತವನ್ನು ನೋಡಿದ್ದೇವೆ. ಈ ಕೆಟ್ಟ ಆಡಳಿತದಿಂದ ಬೇಸತ್ತಿರುವ ಜನರು ಅನಿವಾರ್ಯವಾಗಿ ಬೇರೆ ಸರ್ಕಾರ ಬೇಕು ಎಂದು ಬಯಸುತ್ತಿದ್ದಾರೆ” ಎಂದು ತರೂರ್ ಹೇಳಿದರು.
ಈ ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನರ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗಿಲ್ಲ ಹಾಗಾಗಿ ಆ ಅಗತ್ಯಗಳನ್ನು ಪೂರೈಸಲು ಕಾಂಗ್ರೆಸ್ ಪಕ್ಷವು ಈಗಾಗಲೇ ಹಲವಾರು ”ಗ್ಯಾರೆಂಟಿ ಭರವಸೆಗಳನ್ನು” ಹೊರತಂದಿದೆ ಎಂದು ಹೇಳಿದರು.
ರಾಜ್ಯದಲ್ಲಿನ ನಿರುದ್ಯೋಗಿ ಪದವೀಧರರು ಮತ್ತು ನಿರುದ್ಯೋಗಿ ಡಿಪ್ಲೊಮಾ-ಹೋಲ್ಡರ್‌ಗಳಿಗೆ ಸ್ವಲ್ಪ ಮಟ್ಟಿನ ಆರ್ಥಿಕ ಬೆಂಬಲ ನೀಡಲು ಕಾಂಗ್ರೆಸ್ ಯುವನಿಧಿ ಎನ್ನುವ ಯೋಜನೆಯನ್ನು ತರುತ್ತಿದೆ ಎಂದು ಅವರು ಹೇಳಿದರು. ಇದರಿಂದಾಗಿ ಅವರು ಹುಡುಕುತ್ತಿರುವ ಸಂದರ್ಭದಲ್ಲಿ ಸ್ವಾಭಿಮಾನದಿಂದ ಬದುಕಬಹುದು. ಇನ್ನು ಮನೆಯ ಹೆಣ್ಣುಮಕ್ಕಳನ್ನು ಗೌರವಿಸಲು ಗೃಹಲಕ್ಷ್ಮೀ ಯೋಜನೆ ತರಲಾಗುತ್ತಿದೆ. ಇದರಿಂದ ವೇತನವಿಲ್ಲದೇ ಮನೆಯಲ್ಲಿ ದುಡಿಯುತ್ತಿರುವ ಗೃಹಿಣಿಯರು ಸ್ವಲ್ಪ ಪರಿಹಾರವನ್ನು ಪಡೆಯಬಹುದು ಎಂದು ಅವರು ಹೇಳಿದರು.
ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ, ”ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಶಾಸಕರು ಮತ್ತು ಎಂಎಲ್‌ಸಿಗಳು ಸಹ ಇತರ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರಿದ್ದಾರೆ” ಎಂದು ತಿಳಿಸಿದರು.
”ಕರ್ನಾಟಕದ ಪರಿಸ್ಥಿತಿಯನ್ನು ಗಮನಿಸಿದರೆ, ಕಳೆದ ಕೆಲವು ತಿಂಗಳುಗಳಲ್ಲಿ ಐವರು ಶಾಸಕರು, ಇಬ್ಬರು ಎಂಎಲ್‌ಸಿಗಳು, 11 ಮಾಜಿ ಶಾಸಕರು, ನಾಲ್ವರು ಮಾಜಿ ಎಂಎಲ್‌ಸಿಗಳು ಮತ್ತು ಒಬ್ಬ ಮಾಜಿ ಸಂಸದರು ಕಾಂಗ್ರೆಸ್‌ಗೆ ಸೇರಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದು ಇತರ ಪಕ್ಷದವರಿಗು ತಿಳಿದಿದೆ ಎಂದು ಅವರು ಹೇಳಿದರು.
ಆದರೆ, ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್ ಸದಸ್ಯರ ಬಗ್ಗೆ ನನಗೆ ನಿರಾಸೆಯಾಗಿದೆ. ಅವರು ಕಾಂಗ್ರೆಸ್ ಬಿಡುವಾಗ ಅದೇ ಮೌಲ್ಯಗಳನ್ನು ಹೊಂದಿರುವ ಬೇರೆ ಯಾವ ಪಕ್ಷಕ್ಕಾದರೂ ಸೇರಬಹುದಿತ್ತು. ಆದರೆ ಕೋಮುವಾದಿ ಬಿಜೆಪಿ ಪಕ್ಷ ಸೇರಿದ್ದಾರೆ. ವಿರುದ್ಧವಾದ ಮೌಲ್ಯಗಳು ಮತ್ತು ತತ್ವಗಳನ್ನು ಹೊಂದಿರುವ ಪಕ್ಷಕ್ಕೆ ಅವರು ಹೇಗೆ ಹೋಗುತ್ತಾರೆ ಎಂದು ಅವರು ಆಶ್ಚರ್ಯಪಟ್ಟರು.


