Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನಂಜನಗೂಡು: ಅನುಕಂಪದ ಅಲೆಯಲ್ಲಿ ದರ್ಶನ್ ಧ್ರುವ; ಆಂತರಿಕ ಬಿಕ್ಕಟ್ಟಿನಲ್ಲಿ ಹರ್ಷವರ್ಧನ್

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನಂಜನಗೂಡು: ಅನುಕಂಪದ ಅಲೆಯಲ್ಲಿ ದರ್ಶನ್ ಧ್ರುವ; ಆಂತರಿಕ ಬಿಕ್ಕಟ್ಟಿನಲ್ಲಿ ಹರ್ಷವರ್ಧನ್

- Advertisement -
- Advertisement -

ದಲಿತ ರಾಜಕಾರಣದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿರುವ ನಂಜನಗೂಡು ವಿಧಾನಸಭಾ ಕ್ಷೇತ್ರವು ಮತ್ತೆ ಕುತೂಹಲ ಕೆರಳಿಸಿದೆ. ಚಾಮರಾಜನಗರ ಮತ್ತು ಮೈಸೂರು ಭಾಗದ ಸಕ್ರಿಯ, ಸಜ್ಜನ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಆರ್.ಧ್ರುವನಾರಾಯಣ ಅವರ ಹಠಾತ್ ನಿರ್ಗಮನವು ’ನಂಜನಗೂಡು ವಿಧಾನಸಭಾ’ ಕ್ಷೇತ್ರದಲ್ಲಿ ನಿರ್ವಾತವನ್ನುಂಟು ಮಾಡಿದೆ. ಇದರ ಜೊತೆ ಧ್ರುವ ಅವರ ಪತ್ನಿ ವೀಣಾ ಅವರು ಒಂದು ತಿಂಗಳ ಅಂತರದಲ್ಲೇ ನಿಧನರಾಗಿದ್ದಾರೆ. ಧ್ರುವ ಅವರು ಬದುಕಿದ್ದರೆ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿತ್ತು. ಈಗ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಸೆಯ ಫಲವಾಗಿ ಧ್ರುವ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರಿಗೆ ಟಿಕೆಟ್ ಘೋಷಣೆಯಾಗಿದೆ.  ತಂದೆ ತಾಯಿಯನ್ನು ಕಳೆದುಕೊಂಡಿರುವ ದರ್ಶನ್ ಅವರನ್ನು ಅನುಕಂಪವೇ ಗೆಲ್ಲಿಸಿಬಿಡುತ್ತದೆ? ಎಂಬ ಪ್ರಶ್ನೆ ಉದ್ಭವವಾಗಿದೆ. ಯಾಕೆಂದರೆ ಮೈಸೂರು, ಚಾಮರಾಜನಗರ ಭಾಗದ ಹಿರಿಯ ದಲಿತ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ಅವರು ಏನೆಲ್ಲ ತಂತ್ರಗಳನ್ನು ರೂಪಿಸುತ್ತಾರೆಂದು ಊಹಿಸುವುದು ಕಷ್ಟ. ಪ್ರಸಾದ್ ಅವರ ಅಳಿಯ, ಮಾಜಿ ಸಚಿವ ಬಿ.ಬಸವಲಿಂಗಪ್ಪ ಅವರ ಮೊಮ್ಮಗ ಬಿ.ಹರ್ಷವರ್ಧನ್ ಹಾಲಿ ಶಾಸಕರಾಗಿದ್ದು, ಈ ಚುನಾವಣೆಯಲ್ಲೂ ಬಿಜೆಪಿಯಿಂದ ಸ್ಪರ್ಧಿಸುವುದು ಪಕ್ಕಾ.

ಅಂದಾಜಿನ ಪ್ರಕಾರ ಸುಮಾರು 55,000 ಲಿಂಗಾಯತ, 50,000 (ಎಡ, ಬಲ ಸೇರಿ) ಪರಿಶಿಷ್ಟ ಜಾತಿ, 24,000 ನಾಯಕರು, 20,000 ಉಪ್ಪಾರರು, 8000-10,000 ಮುಸ್ಲಿಮರು, 8000-10,000 ಕುರುಬ ಮತದಾರರು ಕ್ಷೇತ್ರದಲ್ಲಿ ಇದ್ದಾರೆ. ಸಣ್ಣಸಣ್ಣ ಸಮುದಾಯದ 25,000 ಮತದಾರರಿರಬಹುದು ಎಂದು ಊಹಿಸಲಾಗಿದೆ. ಲಿಂಗಾಯತರು ಮತ್ತು ದಲಿತರೇ ಇಲ್ಲಿ ನಿರ್ಣಾಯಕ. ದರ್ಶನ್ ಧ್ರುವ ಅವರಿಗೆ ಅನುಕಂಪದ ಅಲೆ ಇದ್ದರೂ, ಬಿಜೆಪಿಗೆ ಸಾಂಪ್ರದಾಯಿಕ ಮತಗಳಿವೆ. ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಕನಿಷ್ಠ 40,000 ಮತಗಳನ್ನು ಪಡೆಯುತ್ತಾರೆಂಬುದು ಕಳೆದ ಚುನಾವಣೆಗಳಿಂದ ಸ್ಪಷ್ಟವಾಗುತ್ತದೆ.

2008ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಹೊಮ್ಮಿದ ನಂಜನಗೂಡು, ಧಾರ್ಮಿಕ ಹಾಗೂ ಐತಿಹಾಸಿಕವಾಗಿಯೂ ಮಹತ್ವವನ್ನು ಹೊಂದಿದೆ. ಕಪಿಲಾ ನದಿ, ಸುಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯ, ವಿಶಾಲವಾದ ಕೈಗಾರಿಕಾ ಪ್ರದೇಶ, ನಂಜನಗೂಡು ರಸಬಾಳೆ ಮೊದಲಾದ ವೈಶಿಷ್ಟ್ಯಗಳಿಗೆ ನಂಜನಗೂಡು ಹೆಸರುವಾಸಿ. ಎಚ್.ಡಿ.ಕೋಟೆ, ಗುಂಡ್ಲುಪೇಟೆ, ಚಾಮರಾಜನಗರ ತಾಲ್ಲೂಕಿನ ಗಡಿಗಳವರೆಗೂ ಹಬ್ಬಿರುವ ಈ ಕ್ಷೇತ್ರಕ್ಕೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ, ದೊಡ್ಡ ಕವಲಂದೆ (ಶೇ.70ರಷ್ಟು ಭಾಗ), ಕಸಬಾ ಹೋಬಳಿ ಒಳಪಟ್ಟಿವೆ. ಚಿಕ್ಕಯ್ಯಛತ್ರ ಹೋಬಳಿ, ಬಿಳಿಗೆರೆ ವರುಣಕ್ಕೆ ಸೇರಿಕೊಂಡಿವೆ. ಒಂದು ಕಾಲದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ಪ್ರಬಲ ಸ್ಪರ್ಧೆಗೆ ನೆಲೆಯಾಗಿದ್ದ ಕ್ಷೇತ್ರವೀಗ ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿಯ ಕಣವಾಗಿದೆ. ಈ ಭಾಗದ ಪ್ರಬಲ ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿದ್ದು ಮತ್ತು ಜೆಡಿಎಸ್‌ನಲ್ಲಿ ಸಕ್ರಿಯವಾಗಿದ್ದ ಕಳಲೆ ಕೇಶವಮೂರ್ತಿ ಕಾಂಗ್ರೆಸ್‌ಗೆ ಸೇರಿಕೊಂಡಿದ್ದು- ಈ ಪಲ್ಲಟಗಳಿಗೆ ಕಾರಣವೆಂದು ಹೇಳಬಹುದು.

ವಿ.ಶ್ರೀನಿವಾಸ ಪ್ರಸಾದ್

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ 15 ಚುನಾವಣೆಯಲ್ಲಿ ಮಾಜಿ ಸಚಿವರಾದ ಕೆ.ಬಿ.ಶಿವಯ್ಯ, ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಹೊರತುಪಡಿಸಿದರೆ ಸತತ ಎರಡು ಬಾರಿ ಆಯ್ಕೆಯಾದವರು ಯಾರೂ ಇಲ್ಲ. ಇನ್ನುಳಿದಂತೆ ಮೀಸಲು ಕ್ಷೇತ್ರವಾಗುವುದಕ್ಕಿಂತ ಮುಂಚೆ ಬೆಂಕಿ ಮಹದೇವ್ (ಎಂ.ಮಹದೇವ್) ಮತ್ತು ಡಿ.ಟಿ.ಜಯಕುಮಾರ್ ತಲಾ ಮೂರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ ಒಮ್ಮೆ ಅವರು, ಒಮ್ಮೆ ಇವರು ಆಯ್ಕೆಯಾಗಿದ್ದರು. ಈವರೆಗೆ ನಡೆದಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ 10 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2018ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಇಲ್ಲಿ ಖಾತೆ ತೆರೆದಿದೆ.

ಡಿ.ಟಿ.ಜಯಕುಮಾರ್, ಎಂ.ಮಹದೇವ್ ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದರೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಸಾದ್ ಅವರು ಮೈಸೂರು ಜಿಲ್ಲಾ ಉಸ್ತುವಾರಿಯಾಗಿದ್ದರು.

ಸ್ವಾತಂತ್ರ್ಯಾನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಉದಯವಾದ ನಂಜನಗೂಡು ವಿಧಾನಸಭಾ ಕ್ಷೇತ್ರ ಮೊದಲು ದ್ವಿಸದಸ್ಯ ಕ್ಷೇತ್ರವಾಗಿತ್ತು. 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷ (ಪಿಎಸ್‌ಪಿ)ದಿಂದ ಸ್ಪರ್ಧಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಜ್ಜಿಗೆ ಎಂ. ಲಿಂಗಣ್ಣ ಜಯಗಳಿಸಿ ಕ್ಷೇತ್ರದ ಮೊದಲ ಚುನಾಯಿತ ಸದಸ್ಯರಾಗಿದ್ದರು. ಮತ್ತೊಂದು ಸ್ಥಾನದಿಂದ ನೇರಳೆ ಎಂ.ಮಾದಯ್ಯ ಆಯ್ಕೆಯಾಗಿದ್ದರು.

ಇದನ್ನೂ ಓದಿ: ವರುಣಾ ವಿಧಾನಸಭಾ ಕ್ಷೇತ್ರ ಸಮೀಕ್ಷೆ: ಪುನರಾವರ್ತನೆಯಾದ 2018ರ ಹೈಡ್ರಾಮಾ!

1962ರಲ್ಲಿ ಎನ್. ರಾಚಯ್ಯ (ಕಾಂಗ್ರೆಸ್), 1967 ಎಸ್‌ಎಸ್ ಅರಕೇರಿ (ಆರ್‌ಪಿಐ), 1972, 1978ರಲ್ಲಿ ಕೆ.ಬಿ.ಶಿವಯ್ಯ ಗೆದ್ದುಬಂದಿದ್ದರು. 1985ರಿಂದ 2004ರವರೆಗೂ ಎಂ.ಮಹದೇವ್ ಮತ್ತು ಡಿ.ಟಿ.ಜಯಕುಮಾರ್ ನಡುವೆಯೇ ಸ್ಪರ್ಧೆ ನಡೆಯುತ್ತಾ ಬಂದಿತ್ತು. 2008ರಲ್ಲಿ ಕ್ಷೇತ್ರ ವಿಂಗಡಣೆಯಾಗಿ ನಂಜನಗೂಡು ಮೀಸಲು ಕ್ಷೇತ್ರವಾಯಿತು. ಹೀಗಾಗಿ ಸಂಪ್ರದಾಯಿಕ ಎದುರಾಳಿಗಳಾಗಿದ್ದ ಜಯಕುಮಾರ್, ಬೆಂಕಿ ಮಹದೇವ್ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗಬೇಕಾಯಿತು. ಆ ವೇಳೆಗೆ ಕಾಂಗ್ರೆಸ್ ತೊರೆದಿದ್ದ ಮಹದೇವ್ ಬಿಜೆಪಿ ಅಭ್ಯರ್ಥಿಯಾಗಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ, ಜೆಡಿಎಸ್ ಟಿಕೆಟ್ ವಂಚಿತರಾದ ಡಿ.ಟಿ ಜಯಕುಮಾರ್ ಬಿಎಸ್‌ಪಿಗೆ ಹಾರಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ಇಬ್ಬರೂ ಸೋಲು ಕಂಡರು.

ಕ್ಷೇತ್ರಕ್ಕೆ ಪ್ರಸಾದ್ ಪ್ರವೇಶ

ಮೂಲ ಕಾಂಗ್ರೆಸ್ಸಿಗರಾಗಿ ಸುಮಾರು ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿದ್ದು, 5 ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ 2008ರಲ್ಲಿ ಪ್ರವೇಶ ಮಾಡಿದರು. ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಸೇರಿದ ನಂಜನಗೂಡು ವಿಧಾನಸಭಾ ಕ್ಷೇತ್ರದ ಮೇಲೆ ಪ್ರಸಾದ್ ಅವರಿಗೆ ಸುಮಾರು 40 ವರ್ಷಗಳ ಹಿಡಿತ ಇತ್ತು.

2008ರಲ್ಲಿ ಬಿಜೆಪಿಯಿಂದ ಎಸ್.ಮಹದೇವಯ್ಯ ಸ್ಪರ್ಧಿಸಿದರು. ಜೆಡಿಎಸ್‌ನಿಂದ ಸ್ಥಳೀಯರೇ ಆದ ಕಳಲೆ ಕೇಶವಮೂರ್ತಿಯವರು ಎದುರಾಳಿಯಾದರು. ಕೇಶವಮೂರ್ತಿಯವರು ಕ್ಷೇತ್ರವನ್ನು ಶ್ರೀನಿವಾಸ್ ಪ್ರಸಾದ್ ಅವರಷ್ಟೇ ಅರಿತವರಾಗಿದ್ದರು. ಯಡಿಯೂರಪ್ಪನವರಿಗೆ ಅನ್ಯಾಯವಾಗಿದೆ ಎಂಬ ವಾತಾವರಣ ಈ ಚುನಾವಣೆ ಸಂದರ್ಭದಲ್ಲಿ ಇತ್ತು. ಬಿಜೆಪಿಯ ಅಭ್ಯರ್ಥಿಯತ್ತ ಕ್ಷೇತ್ರದ ಜನತೆ ಮುಖಮಾಡಿದ್ದರು. ಹೀಗಾಗಿ ತ್ರಿಕೋನ ಸ್ಪರ್ಧೆಯಲ್ಲಿ ಪ್ರಸಾದ್, ಕೇವಲ 708 ಮತಗಳ ಅಂತರದಲ್ಲಿ ಗೆದ್ದರು. 42159 ಮತಗಳನ್ನು ಪಡೆದ ಎಸ್. ಮಹದೇವಯ್ಯ ಎರಡನೇ ಸ್ಥಾನದಲ್ಲಿದ್ದರು. ಬೆಂಕಿ ಮಹದೇವಯ್ಯನವರು ಬಿಜೆಪಿಗೆ ಬಂದಿದ್ದು ಕೂಡ ಈ ಸ್ಪರ್ಧೆಗೆ ಪ್ರಭಾವ ಬೀರಿತ್ತು.

ಕಳಲೆ ಕೇಶವಮೂರ್ತಿ

2013ರಲ್ಲಿ ಶ್ರೀನಿವಾಸ ಪ್ರಸಾದ್ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾದರು. ಬಿಜೆಪಿಯಿಂದ ಬಂಡಾಯವೆದ್ದ ಯಡಿಯೂರಪ್ಪನವರು ಕೆಜೆಪಿ ಕಟ್ಟಿದರು. ಬಿಜೆಪಿಯಿಂದ ಶಿವರಾಮ್, ಕೆಜೆಪಿಯಿಂದ ಎಸ್.ಮಹದೇವಯ್ಯ ಅಭ್ಯರ್ಥಿಯಾದರು. ಜೆಡಿಎಸ್‌ನಿಂದ ಕಳಲೆ ಕೇಶವಮೂರ್ತಿಯವರು ಮತ್ತೆ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ 8,941 ಮತಗಳ ಅಂತರದಲ್ಲಿ ಕಳಲೆಯವರನ್ನು ಸೋಲಿಸಿ ಶ್ರೀನಿವಾಸ ಪ್ರಸಾದ್ ಮತ್ತೆ ತಮ್ಮ ಪ್ರಭಾವವನ್ನು ಸಾಬೀತು ಮಾಡಿದರು.

ಸತತ ಎರಡನೇ ಬಾರಿ ನಂಜನಗೂಡು ಶಾಸಕರಾಗಿ ಆಯ್ಕೆಯಾದ ಪ್ರಸಾದ್ ಅವರು, ಸಿದ್ಧರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದರು. ಮೈಸೂರು ಜಿಲ್ಲೆಯ ಉಸ್ತುವಾರಿಯೂ ಆದರು. ಆದರೆ ಸಿದ್ದರಾಮಯ್ಯನವರು ತಮ್ಮನ್ನು ಕಡೆಗಣಿಸಿದ್ದಾರೆಂದು ಸಿಡಿದೆದ್ದ ಪ್ರಸಾದ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದರು.

ಉಪಚುನಾವಣೆ: 2017ರ ಉಪಚುನಾವಣೆ ಮಹತ್ವದ ರಾಜಕೀಯ ಜಿದ್ದಾಜಿದ್ದಿಗೆ ಮುನ್ನುಡಿ ಬರೆಯಿತು. ಧ್ರುವ ನಾರಾಯಣ ಅವರು ಕ್ಷೇತ್ರದಲ್ಲಿ ವಿಪರೀತ ಸುತ್ತಾಟ ನಡೆಸಿದರು. ಅಂದಿನ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ – ಇವರೆಲ್ಲರಿಗೂ ಪ್ರತಿಷ್ಠೆಯ ಕಣವಾಗಿ ನಂಜನಗೂಡು ಮಾರ್ಪಟ್ಟಿತು. ಕಳಲೆ ಕೇಶವಮೂರ್ತಿಯವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾದರು. 21,334 ಮತಗಳ ಅಂತರದಲ್ಲಿ ಶ್ರೀನಿವಾಸ್ ಪ್ರಸಾದ್‌ರವರನ್ನು ಮಣಿಸಿದರು. ಈ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯಿತು ಎನ್ನಲಾಗುತ್ತದೆ. ಈ ಸೋಲಿನಿಂದ ನೊಂದುಕೊಂಡ, ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಎಂದು ಭಾವಿಸಿದ ಪ್ರಸಾದ್, ಸಿದ್ದರಾಮಯ್ಯನವರ ಸೋಲಿಗೆ ಅಂದಿನಿಂದಲೇ ರಣತಂತ್ರವನ್ನು ರೂಪಿಸಲು ಮುಂದಾದರು. ಸತತ ವಾಗ್ದಾಳಿಗಳನ್ನು ನಡೆಸಿದರು. ನಂಜನಗೂಡು ಉಪಚುನಾವಣೆಯ ಕುರಿತು ಪುಸ್ತಕವನ್ನೂ ಬರೆದು ತಮ್ಮ ಸೋಲಿಗೆ ಹಣದ ಹೊಳೆಯೇ ಕಾರಣವೆಂದು ಆರೋಪಿಸಿದರು. ಜೊತೆಗೆ ನಂಜನಗೂಡು ಕ್ಷೇತ್ರದಿಂದ ತಮ್ಮ ಅಳಿಯನಾದ ಬಿ.ಹರ್ಷವರ್ಧನ್ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡರು. 2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಧ್ರುವನಾರಾಯಣ ಅವರನ್ನೂ ಸೋಲಿಸಿ ಕಾಂಗ್ರೆಸ್ ವಿರುದ್ಧ ತಮ್ಮ ಸಿಟ್ಟು ತೀರಿಸಿಕೊಂಡರು.

ಹರ್ಷವರ್ಧನ್ ಪ್ರವೇಶ: ಶ್ರೀನಿವಾಸ್ ಪ್ರಸಾದ್ ಅವರ ಕೃಪಾಕಟಾಕ್ಷದಿಂದಾಗಿ 2018ರ ಚುನಾವಣೆಯಲ್ಲಿ ಬಿ.ಹರ್ಷವರ್ಧನ್ ಅವರಿಗೆ ಟಿಕೆಟ್ ದೊರಕಿತು. ಹರ್ಷ ಅವರು ಬೆಂಗಳೂರಿನಲ್ಲಿ ಇದ್ದವರು. ರಾಜಕೀಯದ ಅನುಭವವೇನೂ ಇರಲಿಲ್ಲ. ಮಾಜಿ ಸಚಿವ ಬಿ.ಬಸವಲಿಂಗಪ್ಪನವರ ಮೊಮ್ಮಗ ಎಂಬುದು ಅವರ ಮತ್ತೊಂದು ಹೆಗ್ಗಳಿಕೆಯಾಗಿತ್ತು. ಉಪಚುನಾವಣೆಯಲ್ಲಿ ಪ್ರಸಾದ್ ಅವರನ್ನು ಸೋಲಿಸಿದ್ದ ಕೇಶವಮೂರ್ತಿ 2018ರಲ್ಲಿ ಹರ್ಷವರ್ಧನ್ ಅವರ ಎದುರಾಳಿಯಾದರು. 12,479 ಮತಗಳ ಅಂತರದಲ್ಲಿ ಹರ್ಷವರ್ಧನ್ ಗೆದ್ದರು.

ಧ್ರುವನಾರಾಯಣ್ ನಿರ್ಗಮನ

ಒಂದು ಕಾಲಕ್ಕೆ ಧ್ರುವನಾರಾಯಣ್ ಮತ್ತು ಶ್ರೀನಿವಾಸ್ ಪ್ರಸಾದ್ ಅವರ ನಡುವಿನ ಬಾಂಧವ್ಯ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆದರ್ಶ ಶಾಲೆಯ ಪ್ರಾರಂಭೋತ್ಸವದಲ್ಲಿ ಮಾತನಾಡಿದ್ದ ಪ್ರಸಾದ್, “ನನ್ನ ಮುಂದಿನ ರಾಜಕೀಯ ಉತ್ತರಾಧಿಕಾರಿ ಧ್ರುವನಾರಾಯಣ” ಎಂದಿದ್ದೂ ಉಂಟು. ಹೀಗಿದ್ದ ಸಂಬಂಧ ಪ್ರಸಾದ್ ಅವರು ಬಿಜೆಪಿ ಸೇರಿದ ಮೇಲೆ ಹಳಸಿತು. ಈ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲೂ ಇಲ್ಲ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರೂ ಪ್ರಬಲ ಸ್ಪರ್ಧೆ ನಡೆಸಿದ್ದು ಈಗ ಇತಿಹಾಸ.

ಆರ್.ಧ್ರುವನಾರಾಯಣ

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಸೋತ ಬಳಿಕ ಧ್ರುವ ಅವರು ಅಂದಿನಿಂದಲೇ ತಮ್ಮ ಸುತ್ತಾಟಗಳನ್ನು ಆರಂಭಿಸಿದರು. ಚಾಮರಾಜನಗರ ಲೋಕಸಭೆಯು ನಂಜನಗೂಡು, ಟಿ.ನರಸೀಪುರ, ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರಗಳನ್ನೂ ಒಳಗೊಂಡಿರುವುದರಿಂದ ಈ ಭಾಗದಲ್ಲಿ ಧ್ರುವ ಅವರಿಗೆ ಹೆಚ್ಚಿನ ಹಿಡಿತವಿತ್ತು.

ಹೀಗಾಗಿ ನಂಜನಗೂಡು ಕ್ಷೇತ್ರದ ಎಂಎಲ್‌ಎ ಅಭ್ಯರ್ಥಿಯೆಂದೇ ಧ್ರುವ ಗುರುತಿಸಲ್ಪಟ್ಟಿದ್ದರು. ಮತ್ತೊಂದೆಡೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೂ ನಂಜನಗೂಡಿನ ಮೇಲೆ ಕಣ್ಣಿಟ್ಟಿದ್ದರು. ತಮ್ಮ ಪುತ್ರ ಸುನೀಲ್ ಬೋಸ್ ಅವರಿಗೂ ಟಿಕೆಟ್ ದೊರಕಿಸಿಕೊಡುವ ಅಭಿಲಾಷೆ ಅವರದ್ದಾಗಿತ್ತು. ಹೀಗಾಗಿ ಟಿ.ನರಸೀಪುರ, ನಂಜನಗೂಡು ಎರಡು ಕ್ಷೇತ್ರದ ಮೇಲೂ ಅವರ ಆಸಕ್ತಿ ಇತ್ತು. ಮೂಲಗಳ ಪ್ರಕಾರ ನಂಜನಗೂಡು ಟಿಕೆಟ್ ಶತಾಯಗತಾಯ ಧ್ರುವ ಅವರಿಗೆಯೇ ಫಿಕ್ಸ್ ಆಗಲಿತ್ತು. ಹೀಗಾಗಿ ತಮ್ಮ ಸಹೋದರರಾದ ಕಳಲೆ ಕೇಶವಮೂರ್ತಿಯವರೊಂದಿಗೆ ಧ್ರುವನಾರಾಯಣ ಅವರು ಕ್ಷೇತ್ರದಲ್ಲಿ ಮೂರನೇ ಸುತ್ತಿನ ಸುತ್ತಾಟ ನಡೆಸಿದ್ದರು. ಇದರ ಬೆನ್ನಲ್ಲೇ ಮಹದೇವಪ್ಪ ಅವರೂ ಕೊನೆಕ್ಷಣದಲ್ಲಿ ಸುತ್ತಾಟ ಆರಂಭಿಸಿದ್ದರು. ಆದರೆ ಧ್ರುವ ಅವರ ಹಠಾತ್ ನಿರ್ಗಮನದಿಂದಾಗಿ ಮಹದೇವಪ್ಪ ಅವರು ತಮ್ಮ ಆಕಾಂಕ್ಷೆಯನ್ನು ಕೈಬಿಟ್ಟು, ಟಿ.ನರಸೀಪುರದತ್ತ ಗಮನ ಹರಿಸಿದರು. ಧ್ರುವ ಅವರ ಸಾವಿನ ಸಂದರ್ಭದಲ್ಲಿ ಕೇಳಿಬಂದ ಅನಪೇಕ್ಷಿತ ಮಾತುಗಳಿಂದ ಮಹದೇವಪ್ಪ ನೊಂದರು. ಧ್ರುವ ಅವರ ಪುತ್ರ ದರ್ಶನ್ ಅವರು ಸ್ಪರ್ಧಿಸಬೇಕೆಂದು ಹೇಳಿಕೆ ನೀಡಿ, ಪರಿಸ್ಥಿತಿ ಸುಧಾರಿಸುವ ಮುತ್ಸದ್ಧಿತನ ತೋರಿದರು.

ಹರ್ಷವರ್ಧನ್‌ಗೆ ಆಂತರಿಕ ಬಿಕ್ಕಟ್ಟು

ಪ್ರಸಾದ್ ಅವರ ನಾಮಬಲದಿಂದ ಗೆದ್ದುಬಂದ ಹರ್ಷವರ್ಧನ್ ಅವರಿಗೆ ಬಿಜೆಪಿಯೊಳಗೇ ಅಸಮಾಧಾನ ಹುಟ್ಟಿಕೊಂಡಿದೆ ಎಂದು ಕ್ಷೇತ್ರದ ನಾಡಿಮಿಡಿತ ಬಲ್ಲವರು ಹೇಳುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರೊಂದಿಗೂ ಹರ್ಷವರ್ಧನ್ ಸ್ನೇಹ ಅಷ್ಟಕ್ಕಷ್ಟೆ. ಸಂಸದ ಪ್ರತಾಪ್ ಸಿಂಹ ಅವರಿಗೂ ಹರ್ಷವರ್ಧನ್ ಅವರಿಗೂ ಆಗಿಬರುವುದಿಲ್ಲ. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಮಂಗಳಾ ಸೋಮಶೇಖರ್ ಅವರಿಗೆ ’ಹರ್ಷ’ ಕಂಡರೆ ಇರಿಸುಮುರಿಸು. ಹೀಗೆ ಹರ್ಷವರ್ಧನ್ ಅವರಿಗೆ ಪಕ್ಷದೊಳಗೆಯೇ ವಿರೋಧಗಳಿವೆ. “ನಾನು ಇರುವಲ್ಲಿಗೇ ಇತರರು ಬರಲಿ” ಎಂಬ ಧೋರಣೆಯನ್ನು ಹರ್ಷ ಹೊಂದಿದ್ದಾರೆಂಬ ಆರೋಪಗಳಿವೆ. ಈ ವರ್ತನೆಯೇ ಅವರಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನರಸಿಂಹರಾಜ: ಸೋಲಿಲ್ಲದ ಸರದಾರ ತನ್ವೀರ್‌ಗೆ ಎಸ್‌ಡಿಪಿಐ ಸವಾಲು

ಮುಖ್ಯವಾಗಿ ಪ್ರಸಾದ್ ಅವರು ಬಿಜೆಪಿ ಸೇರಿದ್ದ ಸಂದರ್ಭದಲ್ಲಿ ಅನೇಕ ಸ್ಥಳೀಯ ಮುಖಂಡರು ಬಿಜೆಪಿಗೆ ಬಂದರು. ಆದರೆ ಹರ್ಷವರ್ಧನ್ ಆ ಮುಖಂಡರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಆರೋಪಗಳಿವೆ. ಅಸಮಾಧಾನಗೊಂಡ ಮುಖಂಡರೆಲ್ಲ ಈ ಚುನಾವಣೆ ಸಂದರ್ಭದಲ್ಲಿ ಧ್ರುವ ಅವರೊಂದಿಗೆ ಕಾಂಗ್ರೆಸ್‌ನತ್ತ ಜಾರುವ ಸಾಧ್ಯತೆ ಇತ್ತು. ಆದರೆ ಅವರ ನಿಧನದಿಂದಾಗಿ ಇದೆಲ್ಲಕ್ಕೂ ತಡೆಯಾಯಿತು. ಈಗ ಈ ಮುಖಂಡರು ತಮ್ಮ ಬಹಿರಂಗ ಬೆಂಬಲವನ್ನು ದರ್ಶನ್ ಅವರಿಗೆ ನೀಡುವ ಸ್ಥಿತಿಯಲ್ಲಿ ಇಲ್ಲ. ಒಳಗೊಳಗೆ ಹರ್ಷವರ್ಧನ್ ಅವರಿಗೆ ಏಟು ನೀಡುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಸ್ಥಳೀಯ ಮುಖಂಡರ ಬೇಸರಕ್ಕೆ ಕಾರಣವನ್ನು ಶೋಧಿಸುತ್ತಾ ಹೋದರೆ ’ಗೂಬೆ ರವಿ’ ಎಂಬ ಹೆಸರು ಕೇಳಿಬರುತ್ತದೆ. ಸ್ನೇಹ ಬಳಗದಲ್ಲಿ ’ಗೂಬೆ’ ಎಂದೇ ಖ್ಯಾತರಾಗಿರುವ ಇವರನ್ನು ’ಗೂಬೆ ರವಿ’ ಎಂದು ಗುರುತಿಸಲಾಗುತ್ತದೆ. ಜೊತೆಗೆ ಜನರನ್ನು ’ಗೂಬೆ’ಯ ರೀತಿ ಕಾಡುತ್ತಾರೆಂಬ ಆರೋಪಗಳಿವೆ. ಹರ್ಷವರ್ಧನ್ ಅವರಿಗೆ ಆಪ್ತರಾಗಿರುವ ರವಿ, ಶಾಸಕರ ಎಲ್ಲಾ ಕೆಲಸದಲ್ಲೂ ಮೂಗು ತೂರಿಸುತ್ತಾರೆ, ರವಿಯ ಗಮನಕ್ಕೆ ಬಾರದೆ ಯಾವುದೇ ಸಂಗತಿ ನಿರ್ಧಾರವಾಗುವುದಿಲ್ಲ ಎಂಬ ಮಾತುಗಳಿವೆ. ಗೂಬೆ ರವಿಯ ಉಪಟಳವೇ ಸ್ಥಳೀಯ ಮುಖಂಡರ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತದೆ.

ಡಾ.ಎಚ್.ಸಿ.ಮಹದೇವಪ್ಪ

ನಂಜನಗೂಡಿನ ನಾಡಿಮಿಡಿತ ಬಲ್ಲವರಾದ ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ಅಳಿಯನ ಗೆಲುವಿಗಾಗಿ ಯಾವ ತಂತ್ರಗಳನ್ನು ರೂಪಿಸುತ್ತಾರೆಂಬುದು ಸದ್ಯದ ಕುತೂಹಲ. ಮತ್ತೊಂದೆಡೆ ದರ್ಶನ್ ಧ್ರುವ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ದರ್ಶನ್ ಅವರು ವಿಧೇಯತೆಯಿಂದ ಮತವನ್ನು ಯಾಚಿಸುತ್ತಿದ್ದಾರೆ. ತಮ್ಮ ತಂದೆಯಂತೆಯೇ ಮೆಲುದನಿಯಲ್ಲಿ ಮಾತನಾಡುತ್ತಾರೆ. ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅವರು ದಿಢೀರ್ ಚುನಾವಣಾ ರಾಜಕಾರಣಕ್ಕೆ ಧುಮುಕಬೇಕಾಗಿ ಬಂದ ಸಂದಿಗ್ಧತೆಯಲ್ಲಿದ್ದರೂ ಕ್ಷೇತ್ರವನ್ನು ಬಲ್ಲ ಕಳಲೆ ಕೇಶವಮೂರ್ತಿಯವರೇ ಎಲ್ಲಾ ರೀತಿಯ ಮೆಂಟರ್. ತಮ್ಮೆಲ್ಲ ರಾಜಕೀಯ ಪಟ್ಟುಗಳನ್ನು ಕಳಲೆ ಹೇಳಿಕೊಡಲು ಆರಂಭಿಸಿದ್ದಾರೆ. ಅನುಕಂಪದ ಅಲೆಯೂ ದೊಡ್ಡಮಟ್ಟಿಗಿನ ಕೆಲಸ ಮಾಡುವುದು ಖಚಿತ ಎನ್ನಲಾಗುತ್ತಿದೆ.

“ಹರ್ಷವರ್ಧನ್ ಅವರನ್ನು ವಿರೋಧಿಸುವವರನ್ನು ಟಾರ್ಗೆಟ್ ಮಾಡುವ ಒಂದು ಪಟಾಲಂ ಕ್ಷೇತ್ರದಲ್ಲಿ ಬೆಳೆದಿದೆ. ಅದರಿಂದಾಗಿಯೂ ಹರ್ಷವರ್ಧನ್ ಅವರಿಗೆ ಕೆಟ್ಟ ಹೆಸರು ಬರುತ್ತಿದೆ” ಎಂದು ಕ್ಷೇತ್ರ ಸಮೀಕ್ಷೆಯ ಸಂದರ್ಭದಲ್ಲಿ ಸ್ಥಳೀಯರೊಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು.

ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಹುಂಡಿ ಹಣವನ್ನು ಸಮುದಾಯ ಭವನಗಳ ನಿರ್ಮಾಣಕ್ಕೆ ಬಳಸಿಕೊಳ್ಳಲು ಶಾಸಕರು ಮುಂದಾಗಿದ್ದಾರೆಂಬ ಟೀಕೆಗಳು ವ್ಯಕ್ತವಾಗಿವೆ. “ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ 1997ರ ಕಲಂ 36ರ ಅಡಿ, ಆಯಾ ದೇಗುಲದ ಆದಾಯವನ್ನು ಅದೇ ದೇಗುಲದ ಅಭಿವೃದ್ಧಿಗೆ ಮಾತ್ರ ಬಳಸಿಕೊಳ್ಳಬೇಕು. ಹೀಗಾಗಿ, ವಿವಿಧ ಜನಾಂಗದವರ ಸಮುದಾಯ ಭವನಗಳಿಗೆ ದೇವಾಲಯ ನಿಧಿಯ ಬಳಕೆ ಸೂಕ್ತವಲ್ಲ ಎಂದು ಮುಜರಾಯಿ ಇಲಾಖೆ ಸ್ಪಷ್ಟವಾಗಿ ನಮೂದಿಸಿದ್ದರೂ, ಶಾಸಕರ ಮನವಿಗೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ” ಎಂಬುದು ಸುದ್ದಿಯಾಗಿದೆ. ಇದನ್ನು ಧಾರ್ಮಿಕ ದೃಷ್ಟಿಕೋನದಲ್ಲಿ ನೋಡಲಾಗುತ್ತದೆಯೋ ಅಥವಾ ಸಮುದಾಯ ಕೇಂದ್ರಿತವಾಗಿ ನೋಡಲಾಗುತ್ತದೆಯೋ ಎಂಬುದು ಸದ್ಯದ ಕುತೂಹಲ.

ಹರ್ಷವರ್ಧನ್ ಅವರು ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆಂಬ ಮಾತುಗಳಿವೆ. 823 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ, ಈ ಕುರಿತು ಶ್ವೇತಪತ್ರ ಹೊರಡಿಸಿಯೇ ಚುನಾವಣೆಗೆ ಹೋಗುತ್ತೇನೆ ಎಂದು ಹರ್ಷ ಗುಡುಗಿದ್ದಾರೆ. ಆದರೆ ಸಾಕಷ್ಟು ಅನುದಾನ ಬಂದಿದ್ದರೂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಭ್ರಷ್ಟಾಚಾರ ಮಿತಿಮೀರಿದೆ ಎಂಬ ಆರೋಪಗಳಿವೆ.

ಪ್ರವಾಹದಿಂದ ಹಾನಿಯಾದ ಹಿನ್ನೆಲೆಯಲ್ಲಿ 254 ಶಾಲಾ ಕೊಠಡಿಗಳ ನಿರ್ಮಾಣ ಮಾಡುತ್ತೇವೆಂದರು; ಅದು ಪೂರ್ಣಗೊಂಡಿಲ್ಲ. ಕಣೇನೂರು ಕುಡಿಯುವ ನೀರು ಯೋಜನೆಯೂ ಆಗಿಲ್ಲ, ಸಸ್ಯಕಾಶಿ ನಿರ್ಮಾಣ ಆಮೆಗತಿಯಲ್ಲಿ ಸಾಗುತ್ತಿದೆ, ನಂಜನಗೂಡಿಗೆ ಬರುವ ಸಾಮಾನ್ಯ ಯಾತ್ರಾರ್ಥಿಗಳಿಗೆ ಸೂಕ್ತ ವಸತಿ ವ್ಯವಸ್ಥೆ ಆಗಿಲ್ಲ, ನಂಜನಗೂಡು ಕೈಗಾರಿಕಾ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳಿಲ್ಲ- ಈ ರೀತಿಯ ಆರೋಪಗಳನ್ನು ಸ್ಥಳೀಯ ಜನರು ಮಾಡುತ್ತಾರೆ. ಇದಕ್ಕೆ ಹೊರತಾಗಿಯೂ ಅಭಿವೃದ್ಧಿ ಕೆಲಸಗಳು ಆಗಿವೆ ಎಂದು ಹೊಗಳುವವರಿದ್ದಾರೆ. ಶ್ರೀಕಂಠೇಶ್ವರ ದೇವಾಲಯಕ್ಕೆ ಬೆಳ್ಳಿ ರಥ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ದೇವಾಲಯದಲ್ಲಿ ವಸತಿ ನಿಲಯ ನಿರ್ಮಾಣ ಭರದಿಂದ ಸಾಗಿದೆ ಎನ್ನುತ್ತಾರೆ.

ಈ ಚುನಾವಣೆಯಲ್ಲೂ ಹಣದ ಹೊಳೆಯೇ ಹರಿಯುತ್ತದೆ ಎನ್ನಲಾಗುತ್ತದೆ. 2017ರ ಉಪಚುನಾವಣೆ ಬಳಿಕ ಕ್ಷೇತ್ರದಲ್ಲಿ ಹಣದ ಹುಚ್ಚು ಹತ್ತಿಕೊಂಡಿದೆ. ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಈಗ ಅದು ಪುನರಾವರ್ತನೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಮುಖಂಡರೊಬ್ಬರು ತಿಳಿಸಿದರು. ಅಂದಹಾಗೆ ಜೆಡಿಎಸ್‌ನಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಜೆಡಿಎಸ್‌ ಚಿಂತಿಸಿದೆ. ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ದರ್ಶನ್ ಅವರ ಎದುರು ಅಭ್ಯರ್ಥಿಯನ್ನು ಹಾಕಲು ಮನಸ್ಸು ಬರುತ್ತಿಲ್ಲ ಎಂದು ಮೈಸೂರು ಭಾಗದ ಜೆಡಿಎಸ್‌ ನಾಯಕರಾದ ಜಿ.ಟಿ.ದೇವೇಗೌಡ, ಸಾರಾ ಮಹೇಶ್‌ ಇತ್ತೀಚೆಗೆ ಹೇಳಿದ್ದಾರೆ. ಹೀಗಾಗಿ ಜೆಡಿಎಸ್ ಬೆಂಬಲವು ಕಾಂಗ್ರೆಸ್ ಅಭ್ಯರ್ಥಿಗೆ ಸಿಕ್ಕುತ್ತಿರುವುದು ಈ ಕ್ಷೇತ್ರದ ಮತ್ತೊಂದು ವಿಶೇಷ.

ಕೊನೆಯದಾಗಿ ಹೇಳುವುದಾದರೆ- ಈ ಬಾರಿ ಸ್ವಾರಸ್ಯಕರ ಸಂಗತಿಯೊಂದಿದೆ. 2018ರ ಚುನಾವಣೆಯ ಸಂದರ್ಭದಲ್ಲಿ ಹರ್ಷವರ್ಧನ್ ಕ್ಷೇತ್ರಕ್ಕೆ ಹೊಸಬರಾಗಿದ್ದರು. ಈಗ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ದರ್ಶನ್ ಧ್ರುವ ಹೊಸ ಮುಖವಾಗಿದ್ದಾರೆ. ಅನುಕಂಪದ ಅಲೆಯಲ್ಲಿ ದರ್ಶನ್ ಗೆಲ್ಲುತ್ತಾರೋ ಅಥವಾ ಶ್ರೀನಿವಾಸ್ ಪ್ರಸಾದರ ರಾಜಕೀಯ ತಂತ್ರಗಾರಿಕೆಗಳು ದರ್ಶನ್ ಅವರಿಗೆ ಮುಳುವಾಗುತ್ತವೆಯೋ ಸದ್ಯಕ್ಕೆ ತಿಳಿಯದು. ವರುಣಾದಿಂದ ಸಿದ್ದರಾಮಯ್ಯನವರು ಸ್ಪರ್ಧಿಸುವುದು ಖಚಿತವಾಗಿರುವುದರಿಂದ ಅದರ ಪ್ರಭಾವ ನಂಜನಗೂಡು ಕ್ಷೇತ್ರದ ಮೇಲೂ ಬೀರುತ್ತದೆ. ಯಾಕೆಂದರೆ ವರುಣಾ ಕ್ಷೇತ್ರವು ನಂಜನಗೂಡು ತಾಲ್ಲೂಕಿನ ಹಲವು ಭಾಗಗಳನ್ನು ಒಳಗೊಂಡಿದೆ. ಸದ್ಯದ ಸ್ಥಿತಿಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ನೆಕ್ ಟು ನೆಕ್ ಫೈಟ್ ಆಗೋದಂತೂ ಖಚಿತ ಎಂಬುದು ಸ್ಥಳೀಯರ ಮಾತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...