Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನರಸಿಂಹರಾಜ: ಸೋಲಿಲ್ಲದ ಸರದಾರ ತನ್ವೀರ್‌ಗೆ ಎಸ್‌ಡಿಪಿಐ ಸವಾಲು

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನರಸಿಂಹರಾಜ: ಸೋಲಿಲ್ಲದ ಸರದಾರ ತನ್ವೀರ್‌ಗೆ ಎಸ್‌ಡಿಪಿಐ ಸವಾಲು

- Advertisement -
- Advertisement -

2019ರ ನವೆಂಬರ್ 17ರಂದು ವಿವಾಹ ಕಾರ್ಯಕ್ರಮವೊಂದರಲ್ಲಿ ಹಾಜರಿದ್ದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಬದುಕುಳಿದಿದ್ದೇ ಹೆಚ್ಚು. ಫರ್ಹಾನ್ ಪಾಷಾ ಎಂಬಾತ ಏಕಾಏಕಿ ಬಂದು, ತನ್ವೀರ್ ಅವರ ಕುತ್ತಿಗೆಗೆ ಮಚ್ಚು ಝಳಪಿಸಿದ್ದ. ತೀವ್ರವಾಗಿ ಗಾಯಗೊಂಡ ತನ್ವೀರ್ ಆನಂತರದಲ್ಲಿ ಗಂಭೀರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡರು. ಫರ್ಹಾನ್ ಪಾಷಾ ಏಕೆ ಕೊಲೆ ಮಾಡಲು ಯತ್ನಿಸಿದ, ಆತನ ಹಿಂದೆ ರಾಜಕೀಯ ಉದ್ದೇಶಗಳಿದ್ದವೇ?- ಇತ್ಯಾದಿ ಪ್ರಶ್ನೆಗಳಿಗೆ ಈಗಲೂ ಉತ್ತರಗಳು ಸಿಕ್ಕಿಲ್ಲ. ಎಲ್ಲ ಪಕ್ಷಗಳ ಮುಖಂಡರೊಂದಿಗೂ ಈತ ಗುರುತಿಸಿಕೊಂಡಿದ್ದ ಎಂಬ ಚರ್ಚೆಗಳು ಶುರುವಾಗಿದ್ದವು. ಸಾರ್ವಜನಿಕ ಬದುಕಿನಲ್ಲಿ ಇಂತಹದ್ದೊಂದು ಘಳಿಗೆಯನ್ನು ಎದುರಿಸಿದ, ಆದರೆ ರಾಜಕೀಯವಾಗಿ ಸಾಮಾನ್ಯವಾಗಿ ಯಾರನ್ನೂ ಕಟುವಾಗಿ ಟೀಕಿಸದ ತನ್ವೀರ್ ಮೈಸೂರು ರಾಜಕಾರಣದಲ್ಲಿ ಸದ್ಯಕ್ಕೆ ಸುದ್ದಿಯಲ್ಲಿದ್ದಾರೆ.

ಮುಸ್ಲಿಮರೇ ಅತಿಹೆಚ್ಚು ಸಂಖ್ಯೆಯಲ್ಲಿರುವ ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಸತತ ಐದು ಬಾರಿ ಆಯ್ಕೆಯಾಗಿರುವ ತನ್ವೀರ್ ಇತ್ತೀಚೆಗೆ “ನನ್ನ ಆರೋಗ್ಯ ಸುಧಾರಿಸಿಲ್ಲ, ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುತ್ತೇನೆ” ಎಂದು ಹೇಳಿಕೆ ನೀಡಿದ್ದರು. ತನ್ವೀರ್ ಬೆಂಬಲಿಗರು, “ನೀವು ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು. ನಿಮಗೆ ಟಿಕೆಟ್ ನೀಡಲೇಬೇಕು ಇಲ್ಲವಾದರೆ ಸಾಯುತ್ತೇವೆ” ಎಂದು ರಾದ್ಧಾಂತ ಮಾಡಿದರು. ಆದಾಗ್ಯೂ ಕಾಂಗ್ರೆಸ್ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯಲ್ಲಿ ತನ್ವೀರ್ ಹೆಸರಿದೆ. ಪಕ್ಷದ ನಿರ್ಧಾರಕ್ಕೆ ತಲೆಬಾಗಿರುವುದಾಗಿ ಅವರೀಗ ಹೇಳುತ್ತಿದ್ದಾರೆ.

ಮೈಸೂರು ನಗರದ ಬನ್ನಿಮಂಟಪ, ಎನ್.ಆರ್.ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಉದಯಗಿರಿ ಬಡಾವಣೆ, ರಾಜೀವ್‌ನಗರ ಬಡಾವಣೆ, ಗಾಯತ್ರಿಪುರಂ, ಯರಗನಹಳ್ಳಿ ಮೊದಲಾದ ಪ್ರದೇಶಗಳನ್ನು ಹೊಂದಿರುವ ಎನ್.ಆರ್. ಕ್ಷೇತ್ರವು ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಈವರೆಗೆ ನಡೆದ 16 ಚುನಾವಣೆಗಳಲ್ಲಿ 13 ಬಾರಿ ಮುಸ್ಲಿಮರು ಆಯ್ಕೆಯಾಗಿದ್ದಾರೆ. ಅವರ ಪೈಕಿ ಅಜೀಜ್ ಸೇಠ್ ಹಾಗೂ ಅವರ ಪುತ್ರ ತನ್ವೀರ್‌ಸೇಠ್ ಅವರೇ ಒಟ್ಟು 11 ಬಾರಿ ಗೆಲುವು ಸಾಧಿಸಿರುವುದು ವಿಶೇಷ.

ಮಾರುತಿರಾವ್ ಪವಾರ್

ಈ ಕ್ಷೇತ್ರದಲ್ಲಿ 1.15 ಲಕ್ಷ ಮುಸ್ಲಿಂ ಮತದಾರರಿದ್ದರೆ, ಪರಿಶಿಷ್ಟ ಜಾತಿ 25 ಸಾವಿರ, ಒಕ್ಕಲಿಗರು 15 ಸಾವಿರ, ನಾಯಕರು 14 ಸಾವಿರ, ಲಿಂಗಾಯತರು 12 ಸಾವಿರ, ಕ್ರಿಶ್ಚಿಯನ್ನರು 12 ಸಾವಿರ, ಕುರುಬರು 9 ಸಾವಿರ, ಮರಾಠರು 9 ಸಾವಿರ, ಬ್ರಾಹ್ಮಣರು 5 ಸಾವಿರ ಇದ್ದಾರೆಂದು ಅಂದಾಜಿಸಲಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳ ನಡುವೆಯೇ ಸದಾ ಪೈಪೋಟಿ ಏರ್ಪಡುತ್ತದೆ.

ಒಮ್ಮೆ ಬಿಜೆಪಿ ಈ ಕ್ಷೇತ್ರದಲ್ಲಿ ಖಾತೆ ತೆರೆದಿದ್ದು ಉಂಟು. ಅದಕ್ಕೆ ಕಾರಣವಿತ್ತು. 1994ರ ಚುನಾವಣೆಯಲ್ಲಿ ಅಜೀಜ್ ಸೇಠ್ ಅವರಿಗೆ ಕಾಂಗ್ರೆಸ್ ಪಕ್ಷದ ಬಿ ಫಾರಂ ಸಿಗಲಿಲ್ಲ. ಅಂತಿಮವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಅಜೀಜ್ ಸ್ಪರ್ಧಿಸಿದರು. ಸಾಂಪ್ರದಾಯಿಕವಾಗಿ ಹಸ್ತದ ಗುರುತಿಗೆ ಮತ ಹಾಕುವವರು ಗೊಂದಲಕ್ಕೆ ಬಿದ್ದರು. ಜೊತೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾರುತಿರಾವ್ ಪವಾರ್ ಕೂಡ ಕ್ಷೇತ್ರದಲ್ಲಿ ಜನಸಂಪರ್ಕ ಹೊಂದಿದ್ದರು. ಮೃದು ಸ್ವಭಾವದ, ಎಲ್ಲರನ್ನೂ ಆತ್ಮೀಯವಾಗಿ ಕಾಣುವ ವ್ಯಕ್ತಿತ್ವ ಅವರದ್ದಾಗಿತ್ತು. ಇಂದು ರಾರಾಜಿಸುತ್ತಿರುವಷ್ಟು ಕೋಮು ಕಲಹ, ದ್ವೇಷ ವೈಷಮ್ಯದ ಪರಿಸ್ಥಿತಿಗಳು ಅಂದು ಇರಲಿಲ್ಲ. ಜಾತ್ಯತೀತವಾಗಿ ಮಾರುತಿರಾವ್ ಅವರನ್ನು ಕ್ಷೇತ್ರದ ಜನರು ಬೆಂಬಲಿಸಿದ್ದರಿಂದ ಕೇವಲ 1,451 ಮತಗಳ ಅಂತರದಲ್ಲಿ ಅಜೀಜ್ ಅವರನ್ನು ಮಣಿಸಿದ್ದರು.

ಕ್ಷೇತ್ರದ ಚುನಾವಣಾ ಇತಿಹಾಸ

1952ರಲ್ಲಿ ನಡೆದ ಮೊದಲ ಚುನಾವಣೆಯಿಂದಲೂ ಮೈಸೂರು ನಗರ ಉತ್ತರ ಕ್ಷೇತ್ರಕ್ಕೆ ಸೇರಿದ್ದ ಕೆಲವು ಪ್ರದೇಶಗಳನ್ನು 1967ರಲ್ಲಿ ಪ್ರತ್ಯೇಕಗೊಳಿಸಿ ನರಸಿಂಹರಾಜ ವಿಧಾನಸಭಾ ಕ್ಷೇತ್ರವನ್ನು ರಚಿಸಲಾಯಿತು. 1952ರಲ್ಲಿ ಟಿ.ಮರಿಯಪ್ಪ, 1957ರಲ್ಲಿ ಮಹಮ್ಮದ್ ಸೇಠ್, 1962ರಲ್ಲಿ ಬಿ.ಕೆ.ಪುಟ್ಟಯ್ಯ, 1985-ರಲ್ಲಿ ಮುಕ್ತರುನ್ನೀಸಾ ಬೇಗಂ, 1994ರಲ್ಲಿ ಇ.ಮಾರುತಿರಾವ್ ಪವಾರ್ ಬಿಟ್ಟರೆ ಉಳಿದಷ್ಟು ಅವಧಿಯಲ್ಲಿ ಅಜೀಜ್ ಸೇಠ್ ಹಾಗೂ ಅವರ ಪುತ್ರ ತನ್ವೀರ್‌ಸೇಠ್ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ತನ್ವೀರ್ ಗೆಲುವಿನ ನಾಗಾಲೋಟ ನಿಂತಿಲ್ಲ.

ತಂದೆ ನಿಧನದ ಬಳಿಕ ಪುತ್ರನ ಪ್ರವೇಶ

ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದ ಅಜೀಜ್ ಸೇಠ್ ಅವರು ನಿಧನರಾದ್ದರಿಂದ 2002ರಲ್ಲಿ ಉಪಚುನಾವಣೆ ಘೋಷಣೆಯಾಯಿತು. ಹೀಗಾಗಿ ಅಜೀಜ್ ಪುತ್ರರಾದ ತನ್ವೀರ್ ಸೇಠ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಅಜೀಜ್ ಅವರ ಕುಟುಂಬದ ಮೇಲೆ ಈ ಕ್ಷೇತ್ರದ ಜನತೆಗಿದ್ದ ಪ್ರೀತಿ ಮತ್ತು ಅನುಕಂಪದ ಅಲೆಯ ಕಾರಣ ಮೊದಲ ಚುನಾವಣೆಯಲ್ಲಿಯೇ ತನ್ವೀರ್ ಗೆಲುವು ಪಡೆದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾರುತಿರಾವ್ ಪವಾರ್ 29744 ಮತಗಳನ್ನು ಪಡೆದರೆ, ತನ್ವೀರ್ 41453 ಮತಗಳನ್ನು ಗಳಿಸಿ 11,709 ಮತದಂತರದಲ್ಲಿ ಗೆಲುವು ಪಡೆದರು.

ಅಜೀಜ್ ಸೇಠ್

2004ರ ಚುನಾವಣೆಯಲ್ಲಿ ಮತ್ತೆ ಮಾರುತಿರಾವ್ ಪವಾರ್ ಅವರ ವಿರುದ್ಧ ಸ್ಪರ್ಧಿಸಿ 24,609 ಮತಗಳ ಬೃಹತ್ ಅಂತರದಲ್ಲಿ ಗೆಲುವು ಪಡೆದರು. ಪವಾರ್ 29853 ಮತಗಳನ್ನು ಗಳಿಸಿದರೆ, ತನ್ವೀರ್ 54462 ಮತಗಳನ್ನು ಗಳಿಸಿದರು. 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸಂದೇಶ್ ನಾಗರಾಜ್ ಒಂದಿಷ್ಟು ಪೈಪೋಟಿಯನ್ನು ನೀಡಿದರು. ಆದರೆ 6,685 ಮತದಂತರದಲ್ಲಿ ಸೋಲು ಕಂಡರು.

ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವ ಎಸ್‌ಡಿಪಿಐ

ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷವು ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಎನ್.ಆರ್.ಕ್ಷೇತ್ರವನ್ನೇ ತಮ್ಮ ರಾಜಕೀಯ ಕಾರ್ಯಕ್ಷೇತ್ರವಾಗಿ ಕಂಡುಕೊಂಡಿದ್ದಾರೆ. ಹೀಗಾಗಿಯೇ 2013ರ ಚುನಾವಣೆಯ ವೇಳೆಗೆ ಎಸ್‌ಡಿಪಿಐ ಕ್ಷೇತ್ರದಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊಮ್ಮಿತು. ತನ್ವೀರ್ ಸೇಠ್ ವಿರುದ್ಧ ಸ್ಪರ್ಧಿಸಿದ ಮಜೀದ್ 29667 ಮತಗಳನ್ನು ಪಡೆದು ಗಮನ ಸೆಳೆದರೂ 8,370 ಮತಗಳ ಅಂತರದಲ್ಲಿ ಸೋತರು. ಆದರೆ ಕ್ಷೇತ್ರದ ಮೇಲಿನ ಎಸ್‌ಡಿಪಿಐ ಹಿಡಿತವನ್ನು ಸಾಬೀತು ಮಾಡಿದರು. ಆದರೆ 2018ರ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಎಸ್‌ಡಿಪಿಐ ಕುಸಿದರೂ ಮಜೀದ್ 33,284 ಮತಗಳನ್ನು ಪಡೆದಿದ್ದರು. 44,141 ಮತಗಳನ್ನು ಪಡೆದ ಬಿಜೆಪಿಯ ಎಸ್.ಸತೀಶ್ (ಸಂದೇಶ್ ಸ್ವಾಮಿ) ಅವರು ತನ್ವೀರ್ ವಿರುದ್ಧ 18,127 ಮತದಂತರದಲ್ಲಿ ಸೋಲು ಕಂಡರು. ತನ್ವೀರ್ 62,268 ಮತಗಳನ್ನು ಗಳಿಸಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮರಾಜ: ಪುತ್ರರಿಬ್ಬರು ಬಿಜೆಪಿ ಸೇರಿದ್ದರಿಂದ ಪೇಚಿಗೆ ಸಿಲುಕಿದರೆ ವಾಸು?

ಯಾವುದೇ ಜಾತಿ, ಮತದ ವಿರೋಧ ಕಟ್ಟಿಕೊಳ್ಳದೆ ಇರುವ, ಮೃದು ಸ್ವಭಾವದ ತನ್ವೀರ್ ತಾವಾಯ್ತು ತಮ್ಮ ಕೆಲಸವಾಯ್ತು ಎಂಬಂತೆ ಇರುವವರು. ಸ್ಥಳೀಯ ಪತ್ರಕರ್ತರ ಪ್ರಕಾರ, ತನ್ವೀರ್ ಅವರಿಗೆ ಪ್ರಚಾರದ ಹಪಾಹಪಿಯೂ ಇಲ್ಲ. ಆದರೆ ಚುನಾವಣಾ ರಾಜಕಾರಣದಲ್ಲಿ ಸಕ್ರಿಯವಾಗಿರುವ ಮನಸ್ಥಿತಿಯಂತೂ ಅವರಿಗಿದೆ. “ಹೆಚ್ಚು ಕೂಲಿ ಕಾರ್ಮಿಕರನ್ನೇ ಒಳಗೊಂಡಿರುವ ಎನ್.ಆರ್. ಕ್ಷೇತ್ರ ಈಗಲೂ ಅಭಿವೃದ್ಧಿಯಲ್ಲಿ ಹಿಂದಿದೆ. ತನ್ವೀರ್ ಸೇಠ್ ಕೋಮು ರಾಜಕಾರಣ ಮಾಡುವವರಲ್ಲ. ಆದರೆ ಅಭಿವೃದ್ಧಿಯ ರಾಜಕಾರಣವನ್ನಾದರೂ ಗಟ್ಟಿಯಾಗಿ ಮಾಡಲಿ ಎಂದು ಜನ ಬಯಸುತ್ತಿದ್ದಾರೆ. ಬಹಳಷ್ಟು ಕಡೆ ರಸ್ತೆಗಳೇ ಸರಿಯಿಲ್ಲ. ಇಕ್ಕಟ್ಟಾದ ರಸ್ತೆಗಳನ್ನು ಅಗಲೀಕರಣ ಮಾಡಿದರೂ ಪೂರ್ಣಗೊಂಡಿಲ್ಲ. ಕುಡಿಯುವ ನೀರಿನ ಸಮಸ್ಯೆಯೂ ಕೆಲ ಬಡಾವಣೆಗಳಲ್ಲಿದೆ. ಉದ್ಯೋಗ ನೀಡುವ ಗುಡಿ ಕೈಗಾರಿಕೆಗೆ ಇನ್ನಷ್ಟು ಒತ್ತು ಸಿಗಬೇಕಿದೆ. ಕಾಲೇಜುಗಳ ಕೊರತೆಯೂ ಕ್ಷೇತ್ರದಲ್ಲಿದೆ” ಎಂಬ ಬೇಸರದ ನಡುವೆಯೂ ಜನರು ಇವರನ್ನು ಮತ್ತೆಮತ್ತೆ ಆಯ್ಕೆ ಮಾಡುತ್ತಾ ಬಂದಿದ್ದಾರೆ.

ತನ್ವೀರ್ ಅವರ ನಿರಂತರ ಗೆಲುವಿನ ಹಿಂದೆ ’ಇಸ್ಲಾಮಾಫೋಬಿಯಾ’ ಕೂಡ ಕೆಲಸ ಮಾಡುತ್ತಿದೆ ಎಂದು ಕ್ಷೇತ್ರವನ್ನು ಬಲ್ಲವರು ಹೇಳುತ್ತಾರೆ. ತನ್ವೀರ್‌ಗೆ ಮತ ಹಾಕದಿದ್ದರೆ ಎಸ್‌ಡಿಪಿಐ ಗೆದ್ದುಬಿಡುತ್ತದೆ ಎಂದು ಮೇಲ್ಜಾತಿ ಹಿಂದೂಗಳೂ ತನ್ವೀರ್‌ಗೆ ಮತ ಚಲಾಯಿಸುತ್ತಾರೆಂದು ಕೆಲವರು ಹೇಳುತ್ತಾರೆ. ಸದ್ಯದ ಸ್ಥಿತಿಯಲ್ಲಿ, ಪ್ರಮುಖವಾಗಿ ತನ್ವೀರ್ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ. ಅಧಿಕಾರ ವಿರೋಧಿ ಅಲೆಯೂ ಕಾಣುತ್ತಿಲ್ಲ.

ಮುಸ್ಲಿಂ ನಾಯಕತ್ವ; ಕಾಂಗ್ರೆಸ್‌ಗೆ ವರದಾನ

ಚುನಾವಣೆ ಕೊನೆಕ್ಷಣದಲ್ಲಿ ಎನ್‌ಆರ್ ಕ್ಷೇತ್ರದಲ್ಲಿ ನಡೆಯುವ ರಾಜಕಾರಣಗಳೇ ಬೇರೆ ಎಂದು ರಾಜಕೀಯ ವಿಶ್ಲೇಷಕರೊಬ್ಬರು ವಿವರಿಸಿದರು. “ಪ್ರತಿ ಶುಕ್ರವಾರ ಮುಸ್ಲಿಮರು ಮಸೀದಿಯಲ್ಲಿ ಪ್ರಾರ್ಥನೆಗೆ ಸೇರುವುದು ಸಾಮಾನ್ಯ. ರಾಜಕೀಯವಾಗಿ ಕೆಲವೊಮ್ಮೆ ಮಸೀದಿಗಳಲ್ಲಿ ಚರ್ಚೆಗಳಾಗುತ್ತವೆ. ಭಾವನಾತ್ಮಕವಾಗಿ ಜನರನ್ನು ಮನವೊಲಿಸಲಾಗುತ್ತದೆ. ಇದಕ್ಕೆ ಕಾಂಗ್ರೆಸ್‌ಗೆ ಹೆಚ್ಚು ಅವಕಾಶಗಳಿವೆ. ಯಾಕೆಂದರೆ ಬಹುತೇಕ ಮಸೀದಿಗಳು ವಕ್ಫ್‌ಬೋರ್ಡ್ ಅಧೀನದಲ್ಲಿವೆ. ವಕ್ಫ್‌ಬೋರ್ಡ್‌ಗೆ ನಾಮನಿರ್ದೇಶನಗೊಳ್ಳುವವರೆಲ್ಲ ಬಹುತೇಕ ತನ್ವೀರ್ ಬೆಂಬಲಿಗರೇ ಆಗಿರುತ್ತಾರೆ. ಹೀಗಾಗಿ ಮಂಡಳಿಯ ನಿರ್ವಹಣೆ ತನ್ವೀರ್ ಹಿಡಿತದಲ್ಲಿರುತ್ತದೆ. ಜನರಿಗೆ ಒಂದಿಷ್ಟು ಮೊಟಿವೇಟ್ ಮಾಡ್ತಾರೆ. ’ಎಸ್‌ಡಿಪಿಐಗೆ ಮತ ನೀಡಿದೆವು ಎಂದುಕೊಳ್ಳಿ. ಅರ್ಧ ವೋಟ್ ಅಲ್ಲಿಗೆ, ಅರ್ಧ ವೋಟ್ ಇಲ್ಲಿ ಬಿದ್ದು, ಬಿಜೆಪಿಯವರ ಮತಗಳೆಲ್ಲ ಒಂದೆಡೆ ಬಿದ್ದು ಮುಸ್ಲಿಂ ಅಭ್ಯರ್ಥಿಗೆ ಸೋಲಾಗುತ್ತದೆ. ಮಜೀದ್ ಬೇರೆಯಲ್ಲ, ತನ್ವೀರ್ ಬೇರೆಯಲ್ಲ. ಒಬ್ಬ ಮುಸ್ಲಿಂ ನಾಯಕ ಗೆಲ್ಲಬೇಕು ಎಂಬುದು ನಮ್ಮ ಉದ್ದೇಶ. ಹೀಗಿರುವಾಗ ಮತಗಳು ವಿಭಜನೆಯಾದರೆ ಕಷ್ಟ ಎಂಬ ಕಾರ್ಡ್ ಪ್ಲೇ ಕೊನೆಕ್ಷಣದಲ್ಲಿ ಕೆಲಸ ಮಾಡುತ್ತದೆ” ಎಂದು ತಿಳಿಸಿದರು.

ಅಯೂಬ್ ಖಾನ್

ಕಾಂಗ್ರೆಸ್ ಮುಖಂಡ, ಮಾಜಿ ಮೇಯರ್ ಅಯೂಬ್ ಖಾನ್ ಕೂಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ತನ್ವೀರ್ ಅವರು ಡಿ.ಕೆ.ಶಿವಕುಮಾರ್ ಅವರೊಂದಿಗೆ ಹೆಚ್ಚು ಗುರುತಿಸಿಕೊಂಡರೆ, ಅಯೂಬ್ ಖಾನ್ ಸಿದ್ದರಾಮಯ್ಯನವರೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಾರೆ.

ಹೀಗಾಗಿ ಒಂದು ರೀತಿಯ ಮುಸುಕಿನ ಗುದ್ದಾಟ ಕಾಂಗ್ರೆಸ್‌ನೊಳಗಿದೆ. ತನ್ವೀರ್ ನಂತರದಲ್ಲಿ ನಾಯಕತ್ವವನ್ನು ಕೈಗೆತ್ತಿಕೊಳ್ಳಲು ಅಯೂಬ್ ಹವಣಿಸುತ್ತಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಸಚಿವರೂ ಆಗಿದ್ದ ತನ್ವೀರ್ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಆಪ್ತರು. ಸಿದ್ದರಾಮಯ್ಯನವರ ಜೊತೆ ಅಷ್ಟಕ್ಕಷ್ಟೇ ಎಂಬಂತೆ ಇದ್ದರು. ಆದರೆ ಈ ಬಿರುಕನ್ನೂ ಮುಚ್ಚಿಕೊಳ್ಳುವ ಪ್ರಯತ್ನವನ್ನು ತನ್ವೀರ್ ಮಾಡಿದ್ದಾರೆ. “ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಬಂದರೆ ನಾನೇ ಗೆಲ್ಲಿಸಿಕೊಡುತ್ತೇನೆ” ಎನ್ನುವ ಮೂಲಕ ಬಿಕ್ಕಟ್ಟು ಶಮನ ಮಾಡಲು ಯತ್ನಿಸಿದ್ದಾರೆ.

ತನ್ವೀರ್ ಐದು ಬಾರಿ ಗೆದ್ದರೂ ದುಡ್ಡು ಮಾಡಿಕೊಂಡವರಲ್ಲ, ಸೈಟ್‌ಗಳನ್ನು ಕಬಳಿಸಿದವರಲ್ಲ. ಚುನಾವಣಾ ಆಯೋಗಕ್ಕೆ ತನ್ವೀರ್ ಸಲ್ಲಿಸಿರುವ ಆಸ್ತಿ ವಿವರ ಹತ್ತು ಕೋಟಿ ರೂಪಾಯಿ. ಅಜೀಜ್ ಸೇಠ್ ಅವರು ಮೂರು ಸಲ ಸಚಿವರಾಗಿದ್ದರು, ಸುಮಾರು ಐವತ್ತು ವರ್ಷಗಳ ಎನ್‌ಆರ್ ಕ್ಷೇತ್ರದ ಮೇಲೆ ಸೇಠ್ ಕುಟುಂಬದ ಹಿಡಿತವಿದೆ. ಆದರೂ ಭ್ರಷ್ಟಾಚಾರದ ಕಳಂಕ ತನ್ವೀರ್‌ಗಿಲ್ಲ ಎಂದು ಹೇಳಲಾಗುತ್ತದೆ.

ಅಬ್ದುಲ್ ಮಜೀದ್ ಎಂಬ ಕ್ರಿಯಾಶೀಲ ವ್ಯಕ್ತಿತ್ವ

ಎಸ್‌ಡಿಪಿಐ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಮಜೀದ್ ಹೋರಾಟಗಳ ಮೂಲಕ ಹೆಸರಾಗಿದ್ದಾರೆ. ದಲಿತರು, ಅಲ್ಪಸಂಖ್ಯಾತರ ಪರವಾಗಿ ಸಕ್ರಿಯವಾಗಿ ದನಿ ಎತ್ತುತ್ತಿದ್ದಾರೆ. ತಳಮಟ್ಟದಲ್ಲಿ ಜನಸಂಪರ್ಕ ಬೆಳೆಸಿಕೊಳ್ಳುತ್ತಿದ್ದಾರೆ. ಅಧಿಕಾರದಲ್ಲಿ ಇರದಿದ್ದರೂ ಅನೇಕ ಅಭಿವೃದ್ಧಿ ಕೆಲಸಗಳಿಗೆ, ಸೇವಾ ಕೈಂಕರ್ಯಗಳಿಗೆ ಒತ್ತು ನೀಡಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಎಸ್‌ಡಿಪಿಐ ಸ್ವಯಂ ಸೇವಕರು ಮಾಡಿರುವ ಕೆಲಸ ಅವಿಸ್ಮರಣೀಯ. ಯಾವುದೇ ಜಾತಿ ಮತವೆನ್ನದೆ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಶವಸಂಸ್ಕಾರವನ್ನು ಎಸ್‌ಡಿಪಿಐ ಕಾರ್ಯಕರ್ತರು ಮಾಡಿದ್ದಾರೆ. ಇದೆಲ್ಲದರ ಹಿಂದೆ ಮಜೀದ್ ಪ್ರೋತ್ಸಾಹವಿದೆ. “ಎಸ್‌ಡಿಪಿಐ ಮೇಲೆ ಒಂದು ರೀತಿಯ ಅನುಮಾನ ಸಮಾಜದಲ್ಲಿ ಮನೆಮಾಡಿವೆ. ಬೇಕಂತಲೇ ಎಸ್‌ಡಿಪಿಐ ಕುರಿತು ಸುಳ್ಳುಗಳನ್ನು ಹಬ್ಬಿಸಿ ಕೊನೆಗಳಿಗೆಯಲ್ಲಿ ಮತಗಳು ಬೀಳದಂತೆ ನೋಡಿಕೊಳ್ಳಲಾಗುತ್ತಿದೆ. ಎಸ್‌ಡಿಪಿಐ ಕೇವಲ ಮುಸ್ಲಿಮರ ಪಕ್ಷವಲ್ಲ ಎಂದು ತಿಳಿಸಲು ಮಜೀದ್ ಅವರು ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಎಲ್ಲ ಜನರ ಮನೆಗಳತ್ತ ಧಾವಿಸುತ್ತಿದ್ದಾರೆ. ಕೋಮು ಸೂಕ್ಷ್ಮ ಪ್ರದೇಶವೆಂದೇ ಪರಿಗಣಿಸಲಾಗುತ್ತಿರುವ ಈ ಭಾಗದಲ್ಲಿ ಹಿಂದೂ ಮುಸ್ಲಿಂ ಕಲಹಗಳಾಗದಂತೆ ಸೌಹಾರ್ದತೆಯ ಕುರಿತು ಪ್ರಚಾರವನ್ನು ಮಜೀದ್ ಮಾಡುತ್ತಿದ್ದಾರೆ” ಎಂದು ಸ್ಥಳೀಯ ಎಸ್‌ಡಿಪಿಐ ಮುಖಂಡರೊಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು.

ಮಜೀದ್ ತುಂಬಾ ಓದಿಕೊಂಡಿದ್ದಾರೆ. ಬಿಜೆಪಿಯ ಕಾರ್ಯಸೂಚಿಗಳನ್ನು ತನ್ವೀರ್ ವಿರೋಧಿಸದಿದ್ದರೂ ಮಜೀದ್ ಅವರು ಅವರಿಗಿಂತಲೂ ಅಗ್ರೆಸ್ಸಿವ್ ಆಗಿ ಅಟ್ಯಾಕ್ ಮಾಡುತ್ತಾರೆ. ಆದರೆ ಮಜೀದ್ ಅವರ ಮಾತುಗಳು ಇಲ್ಲಿನ ದುಡಿಯುವ ವರ್ಗವನ್ನು ಪ್ರಭಾವಿಸುತ್ತಿವೆಯೇ? ಮತಗಳಾಗಿ ಪರಿವರ್ತನೆ ಆಗುತ್ತಿವೆಯೇ? ಎಂಬ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸಿಕ್ಕುವುದಿಲ್ಲ.

ಎನ್.ಆರ್.ಕ್ಷೇತ್ರದಲ್ಲಿ ಅಭಿವೃದ್ಧಿಗಳು ಆಗಿಲ್ಲ ಎಂಬ ಟೀಕೆಗಳನ್ನು ಎಸ್‌ಡಿಪಿಐ ನಿರಂತರವಾಗಿ ಮಾಡುತ್ತಾ ಬಂದಿದೆ. ಪಕ್ಕದ ಕೆ.ಆರ್.ಕ್ಷೇತ್ರ, ಚಾಮರಾಜ ಕ್ಷೇತ್ರಗಳು ಅಭಿವೃದ್ಧಿಯಾಗಿವೆ. ತನ್ವೀರ್ ಐದು ಬಾರಿ ಶಾಸಕರಾದರೂ ಈ ಕ್ಷೇತ್ರದಲ್ಲಿ ಸುಸಜ್ಜಿತವಾದ ಆಸ್ಪತ್ರೆಗಳಿಲ್ಲ, ರಸ್ತೆಗಳು ಸರಿ ಇಲ್ಲ ಎಂದು ಎಸ್‌ಡಿಪಿಐ ಟೀಕಿಸುತ್ತಿದೆ. ಚುನಾವಣೆಯಲ್ಲಿ ಇದೆಲ್ಲವೂ ಹೇಗೆ ಕೆಲಸ ಮಾಡುತ್ತದೆ ಎಂಬುದು ಸದ್ಯದ ಕುತೂಹಲ.

ಸಂದೇಶ ಸ್ವಾಮಿ ಸ್ಥಿತಿ ಏನು?

ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಂದೇಶ ಸ್ವಾಮಿಯವರಿಗೆ ಕ್ಷೇತ್ರದಲ್ಲಿ ಅಂತಹ ವರ್ಚಸ್ಸು ಕಂಡುಬರುತ್ತಿಲ್ಲ. ಇತ್ತೀಚೆಗೆ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಕ್ಷೇತ್ರದಲ್ಲಿ ಎಲ್ಲಾದರೂ ಬಿಜೆಪಿ ಕಾರ್ಯಕ್ರಮವಿದ್ದರೆ ಮಾತ್ರ ಅವರು ಬರುತ್ತಾರೆ. ಎಂಎಲ್‌ಎ ಆಗಬೇಕು ಎಂದು ಬಯಸಿದರೆ ಎಲ್ಲ ವರ್ಗದ ಜನರೊಂದಿಗೆ ನಿರಂತರ ಸಂಪರ್ಕ ಇರಬೇಕಲ್ಲವೇ? ಕೇವಲ ಹಣದ ಪ್ರಭಾವವಷ್ಟೇ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರೊಬ್ಬರು ತಿಳಿಸಿದರು

ಸಂದೇಶ್ ಸ್ವಾಮಿ

ಮತ್ತೊಂದೆಡೆ ಸಂದೇಶ ಸ್ವಾಮಿಯವರ ಸಹೋದರ ಸಂದೇಶ್ ನಾಗರಾಜ್ ಅವರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸಖ್ಯ ಬೆಳೆಸಿಕೊಂಡಿದ್ದಾರೆ. ಇದು ಸ್ವಾಮಿಯವರಿಗೆ ನಕಾರಾತ್ಮಕವಾಗಿ ಪರಿಣಮಿಸುವ ಸಾಧ್ಯತೆಯಿದೆ. ಹೀಗಾಗಿ ಸಂದೇಶಸ್ವಾಮಿಗೆ ಟಿಕೆಟ್ ಸಿಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ. ಇದರ ಜೊತೆಗೆ ಸಂಸದ ಪ್ರತಾಪ್ ಸಿಂಹ ಅವರ ಹೆಸರು ಕೂಡ ಬಿಜೆಪಿಯಲ್ಲಿ ಓಡಾಡುತ್ತಿದೆ. ಒಂದು ವೇಳೆ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೊಟ್ಟರೆ ತನ್ವೀರ್ ಗೆಲುವು ಸುಲಭವಾಗುತ್ತದೆ ಎನ್ನುವವರಿದ್ದಾರೆ. ಯಾಕೆಂದರೆ ಪ್ರತಾಪ್ ಅವರ ವರ್ತನೆಗಳನ್ನು ಬಿಜೆಪಿಯಲ್ಲೇ ಒಪ್ಪದೆ ಇರುವವರು ಇದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮುಂಡೇಶ್ವರಿಯಲ್ಲಿ ಜಿಟಿಡಿಯದ್ದೇ ಪಾರಮ್ಯ; ಸಶಕ್ತ ಅಭ್ಯರ್ಥಿಗಳಿಲ್ಲದ ಕಾಂಗ್ರೆಸ್

ಜೆಡಿಎಸ್ ಸ್ಥಿತಿ: ಈ ಹಿಂದೆ ಒಮ್ಮೆ ಕೆಸಿಪಿ, ಕಳೆದ ಬಾರಿ ಜಾ.ಜನತಾದಳದಿಂದ ಸ್ಪರ್ಧಿಸಿ ಸೋತಿರುವ ಅಬ್ದುಲ್ಲಾ (ಅಜೀಜ್) ಈ ಬಾರಿಯೂ ಜಾ.ಜನತಾದಳದ ಆಕಾಂಕ್ಷಿಯಾಗಿದ್ದಾರೆ. ಆದರೆ, ಇವರು ಕ್ಷೇತ್ರದಲ್ಲಿ ಅಷ್ಟೇನೂ ಪ್ರಾಬಲ್ಯ ಸಾಧಿಸಿಲ್ಲ ಮತ್ತು ಅವರಿಗಿಂತಲೂ ಪ್ರಬಲ ಅಭ್ಯರ್ಥಿ ಜೆಡಿಎಸ್‌ಗೆ ಸದ್ಯಕ್ಕೆ ಕಾಣುತ್ತಿಲ್ಲ.

ಹೈಡ್ರಾಮಾವೋ ಕೌಟುಂಬಿಕ ಒತ್ತಡವೋ?

“ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ” ಎಂದು ತನ್ವೀರ್ ಹೇಳಿದ್ದು ಹೈಡ್ರಾಮಾವೋ, ಕೌಟುಂಬಿಕ ಒತ್ತಡವೋ ಎಂಬ ಪ್ರಶ್ನೆಗಳು ಕ್ಷೇತ್ರದಲ್ಲಿವೆ. ತನ್ವೀರ್ ನಂತರದಲ್ಲಿ ಚುನಾವಣೆ ನಿಲ್ಲುವಂತಹ ಕುಟುಂಬದ ಉತ್ತರಾಧಿಕಾರಿಗಳು ಯಾರೂ ಇಲ್ಲ. ತನ್ವೀರ್ ಪುತ್ರ ಜಾವಿದ್ ಸೇಠ್ ರಾಜಕಾರಣದಿಂದ ಅಷ್ಟೇ ಅಲ್ಲ, ತಂದೆಯ ಹೆಸರನ್ನೂ ಬಳಸಿಕೊಳ್ಳಲು ಇಷ್ಟಪಡುವುದಿಲ್ಲ. ಜಾವಿದ್‌ಗೆ ಚುನಾವಣೆ ಕುರಿತು ಆಸಕ್ತಿ ಇದ್ದಿದ್ದರೆ ಅಪ್ಪನ ಜೊತೆ ಓಡಾಡಿಕೊಂಡು ಇರುತ್ತಿದ್ದರು. ಕೆಲವು ದಿನಗಳ ಹಿಂದೆ ನಡೆದ ಘಟನೆ: ಜೊಮೊಟೊ ಡೆಲಿವರಿ ಹುಡುಗನ ಬೈಕಿಗೂ ಜಾವಿದ್ ಕಾರಿಗೂ ಢಿಕ್ಕಿಯಾಗಿತ್ತು. ಜಾವಿದ್ ಅವರನ್ನು ಸ್ಟೇಷನ್‌ಗೆ ಕರೆದುಕೊಂಡು ಹೋಗಿ ಕೂರಿಸಿಕೊಳ್ಳಲಾಯಿತು. ತನ್ವೀರ್ ಮಗನೆಂದು ಅವರು ಹೇಳಿಕೊಳ್ಳಲೇ ಇಲ್ಲ. ಬೇರೆ ಯಾರೋ ಒಬ್ಬರು ಸುಮಾರು ಮೂರ್ನಾಲ್ಕು ಗಂಟೆಯಾದ ಮೇಲೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆ ಮಟ್ಟದಲ್ಲಿ ಜಾವಿದ್ ಇದ್ದಾರೆ. ತಂದೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳದಂತೆ ನಡೆದುಕೊಳ್ಳುತ್ತಿದ್ದಾರೆ. ತನ್ವೀರ್ ಅವರ ಮೇಲೆ ಕೊಲೆ ಯತ್ನ ನಡೆದಿದ್ದು ಕುಟುಂಬದೊಳಗೆ ಆತಂಕವನ್ನು ತಂದಿದೆ ಎಂದು ತನ್ವೀರ್ ಕುಟುಂಬವನ್ನು ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ.

ಎಸ್‌ಡಿಪಿಐನ ಪ್ರಬಲ ಪೈಪೋಟಿ, ಸ್ಪರ್ಧಿಗಳೊಂದಿಗೆ ತಿಕ್ಕಾಟ, ಚುನಾವಣಾ ರಾಜಕಾರಣದ ಸುದೀರ್ಘ ಪಯಣ ಇವೆಲ್ಲವೂ ತನ್ವೀರ್ ಮೇಲೆ ಒತ್ತಡ ಸೃಷ್ಟಿಸಿವೆ ಎನ್ನಲಾಗುತ್ತಿದೆ. ಬೇರೆಬೇರೆ ರೀತಿಯಲ್ಲಿಯೂ ಬೆದರಿಕೆಗಳು ಬರಬಹುದು, ಹಿಂದೊಮ್ಮೆ ಆಗಿರುವಂತೆ ಹಲ್ಲೆಗಳು ನಡೆಯಬಹುದು ಎಂಬ ಕೌಟುಂಬಿಕ ಕಾಳಜಿಗಳ ಹಿನ್ನೆಲೆಯಲ್ಲಿ ತನ್ವೀರ್ ಚುನಾವಣೆಯಿಂದ ಹಿಂದೆ ಸರಿಯುವ ಮಾತನಾಡಿದ್ದರು ಎಂದೂ ಹೇಳಲಾಗುತ್ತಿದೆ. ಅಂತೂ ಕೊನೆಗಳಿಗೆಯಲ್ಲಿ ಚುನಾವಣಾ ಕಣಕ್ಕೆ ಧುಮುಕುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...