Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮರಾಜ: ಪುತ್ರರಿಬ್ಬರು ಬಿಜೆಪಿ ಸೇರಿದ್ದರಿಂದ ಪೇಚಿಗೆ ಸಿಲುಕಿದರೆ ವಾಸು?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮರಾಜ: ಪುತ್ರರಿಬ್ಬರು ಬಿಜೆಪಿ ಸೇರಿದ್ದರಿಂದ ಪೇಚಿಗೆ ಸಿಲುಕಿದರೆ ವಾಸು?

- Advertisement -
- Advertisement -

ಇದು ನೀವು ಪ್ರಜಾಪ್ರಭುತ್ವದ ಸೌಂದರ್ಯವೆಂದು ಬಣ್ಣಿಸುವುದಕ್ಕೆ ಚೆಂದವಷ್ಟೇ. ಆದರೆ ಜನರು ಈ ಬೆಳವಣಿಗೆಯನ್ನು ಹೇಗೆ ನೋಡುತ್ತಾರೆ? ಹೌದು- ಅಪ್ಪ ಒಂದು ಪಕ್ಷ, ಮಕ್ಕಳು ಒಂದು ಪಕ್ಷ ಎಂದಾದಾಗ ಜನರಿಗೆ ಯಾವ ಸಂದೇಶ ರವಾನೆಯಾಗುತ್ತದೆ? ಮತದಾರರು ಯಾವ ವೈಚಾರಿಕ ತಳಹದಿಯ ಮೇಲೆ ಮತ ಚಲಾಯಿಸಬಲ್ಲರು? ಇಂತಹ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಮೈಸೂರು ನಗರದ ’ಚಾಮರಾಜ ವಿಧಾನಸಭಾ ಕ್ಷೇತ್ರ. ಕಾರಣ ಇಲ್ಲಿನ ಮಾಜಿ ಶಾಸಕ ವಾಸು ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರೆ, ಇವರ ಇಬ್ಬರು ಪುತ್ರರು ಬಿಜೆಪಿ ಸೇರಿಕೊಂಡಿದ್ದಾರೆ.

ಸದ್ಯಕ್ಕೆ ಬಿಜೆಪಿ ಶಾಸಕ ಎಲ್.ನಾಗೇಂದ್ರ ಪ್ರತಿನಿಧಿಸುತ್ತಿರುವ ಈ ಕ್ಷೇತ್ರದಲ್ಲಿ ಹೆಚ್ಚಿನ ಬಾರಿ ಬಿಜೆಪಿಯೇ ಮೇಲುಗೈ ಸಾಧಿಸುತ್ತಾ ಬಂದಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ವಾಸು ಅವರು ಕ್ಷೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಆದರೀಗ ತ್ರಿಶಂಕು ಸ್ಥಿತಿ ತಲುಪಿದಂತೆ ಕಾಣುತ್ತಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ಅವರಿಗೆ ದೊರಕುತ್ತದೆಯೇ? ದೊರಕಿದರೂ ಕ್ಷೇತ್ರದ ಜನತೆ ವಾಸು ಅವರನ್ನು ಹೇಗೆ ಸ್ವೀಕರಿಸುತ್ತಾರೆಂಬುದು ಸದ್ಯದ ಕುತೂಹಲ.

ಮೈಸೂರು ನಗರ ಹಾಗೂ ಮೈಸೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹಂಚಿಹೋಗಿದ್ದ ಪ್ರದೇಶಗಳನ್ನು ಒಟ್ಟುಗೂಡಿಸಿ 1978ರಲ್ಲಿ ’ಚಾಮರಾಜ ವಿಧಾನಸಭಾ ಕ್ಷೇತ್ರ’ವನ್ನು ರಚಿಸಲಾಯಿತು. ಕಾಂಗ್ರೆಸ್, ಜನತಾ ಪರಿವಾರ, ಬಿಜೆಪಿ- ಮೂರು ಪಕ್ಷದ ಅಭ್ಯರ್ಥಿಗಳು ಇಲ್ಲಿ ಗೆದ್ದುಬಂದಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಸಿಎಫ್‌ಟಿಆರ್, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ರೈಲ್ವೆ ನಿಲ್ದಾಣ, ಕೆ.ಆರ್.ಆಸ್ಪತ್ರೆ, ಮಹಾರಾಜ, ಯುವರಾಜ, ಮಹಾರಾಣಿ ಕಾಲೇಜು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಬಡವರು, ಶ್ರೀಮಂತರು, ಮಧ್ಯಮವರ್ಗದವರು, ಸಾಹಿತಿಗಳು, ಪ್ರಭಾವಿ ವ್ಯಕ್ತಿಗಳು- ಹೀಗೆ ವೈವಿಧ್ಯಮಯ ಜನಸಮೂಹವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗರೇ ನಿರ್ಣಾಯಕ ಮತದಾರರು. ಇಲ್ಲಿ ಸ್ಪರ್ಧಿಸುವ ಬಹುತೇಕ ಅಭ್ಯರ್ಥಿಗಳೆಲ್ಲ ಒಕ್ಕಲಿಗರೇ ಆಗಿರುತ್ತಾರೆ. ದಲಿತರು, ಬ್ರಾಹ್ಮಣರು, ವೀರಶೈವ-ಲಿಂಗಾಯತರು, ಕುರುಬರು, ಮುಸ್ಲಿಮರು ಕೂಡ ಗಣನೀಯವಾಗಿದ್ದಾರೆ. 13ಕ್ಕೂ ಹೆಚ್ಚು ಸ್ಲಮ್‌ಗಳು ಈ ವ್ಯಾಪ್ತಿಯಲ್ಲಿವೆ.

ಕೆ.ಪುಟ್ಟಸ್ವಾಮಿ

ಒಕ್ಕಲಿಗ ಅಭ್ಯರ್ಥಿಗಳೇ ಹೆಚ್ಚು ಆಯ್ಕೆಯಾಗುವ ಈ ಕ್ಷೇತ್ರದಲ್ಲಿ ದಿವಂಗತ ಶಂಕರಲಿಂಗೇಗೌಡ ಅವರು ನಾಲ್ಕು ಬಾರಿ ಬಿಜೆಪಿಯಿಂದ ಗೆದ್ದಿದ್ದರು. 2013ರ ಚುನಾವಣೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ನಾಲ್ಕು ಬಾರಿ ಗೆದ್ದರೂ ಸಚಿವರಾಗುವ ಯೋಗ ಅವರಿಗೆ ಕೂಡಿಬರಲಿಲ್ಲ.

1978ರಿಂದ ಈವರೆಗೆ ನಡೆದಿರುವ 12 ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರ ಕಂಡಿರುವ ರಾಜಕಾರಣವನ್ನು ಸ್ಥೂಲವಾಗಿ ನೋಡುವುದಾದರೆ- 1978ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಕೆಂಗೇಗೌಡ (20234) ಅವರು ಜನತಾಪಾರ್ಟಿಯ ಎಚ್.ಕೆಂಪೇಗೌಡ ಅವರನ್ನು 401 ಮತಗಳ ಅಲ್ಪ ಅಂತರದಲ್ಲಿ ಮಣಿಸಿದ್ದರು. 1978ರ ಚುನಾವಣೆಯ ಬಳಿಕ ಈ ಕ್ಷೇತ್ರದ ಮೇಲೆ ಜನತಾ ಪಾರ್ಟಿ ಹಿಡಿತ ಸಾಧಿಸಿತು. ಜನತಾ ಪಾರ್ಟಿಯ ಕೆ.ಪುಟ್ಟಸ್ವಾಮಿ (24524) 1978ರಲ್ಲಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿ ಕೆಂಗೇಗೌಡರನ್ನು 6,421 ಮತದಂತರದಲ್ಲಿ ಮಣಿಸಿದರು. 1983ರಲ್ಲಿ ಜನತಾಪಾರ್ಟಿಯಿಂದ ಸ್ಪರ್ಧಿಸಿದ್ದ ಎಚ್.ಕೆಂಪೇಗೌಡ (23967) ಅವರು ಬಿಜೆಪಿ ಅಭ್ಯರ್ಥಿ ಪುಟ್ಟೇಗೌಡ ಅವರನ್ನು 12,035 ಮತದಂತರದಲ್ಲಿ ಸೋಲಿಸಿದರು. 1985ರ ಚುನಾವಣೆಯಲ್ಲಿಯೂ ಈ ಕ್ಷೇತ್ರವು ಜನತಾ ಪಾರ್ಟಿಯ ವಶವಾಯಿತು. ಕೆ.ಕೆಂಪೀರೆಗೌಡ (32077) ಅವರು ಕಾಂಗ್ರೆಸ್ ಅಭ್ಯರ್ಥಿ ಕೆ.ಹರ್ಷಕುಮಾರ್ ಅವರನ್ನು 15,812 ಮತಗಳ ಬೃಹತ್ ಅಂತರದಲ್ಲಿ ಮಣಿಸಿದರು. 1986ರಲ್ಲಿಯೂ ಮತ್ತೆ ಜನತಾ ಪಾರ್ಟಿ ಗೆದ್ದಿತು. ಚಿಕ್ಕಬೋರಯ್ಯ (25583) ಅವರು ಕಾಂಗ್ರೆಸ್‌ನ ಬಿಎನ್‌ಕೆ ಗೌಡ ಅವರನ್ನು 6,859 ಮತಗಳ ಅಂತರದಲ್ಲಿ ಸೋಲಿಸಿ ಅಧಿಕಾರ ಹಿಡಿದರು. ಆದರೆ ಜನತಾ ಪರಿವಾರದೊಳಗಿನ ಆಂತರಿಕ ಕಲಹಗಳಿಂದಾಗಿ 1989ರಲ್ಲಿ ಕ್ಷೇತ್ರವು ಕಾಂಗ್ರೆಸ್ ವಶವಾಯಿತು. ಕೆ.ಹರ್ಷ ಕುಮಾರ್ ಗೌಡ (31514) ಅವರು ಜನತಾ ದಳದ ಸಿ.ಬಸವೇಗೌಡ ವಿರುದ್ಧ 11,106 ಮತಗಳ ಅಂತರದಲ್ಲಿ ಗೆದ್ದರು.ಅತ್ಯುತ್ತಮ ವಾಗ್ಮಿ, ನಗರ ಪಾಲಿಕೆಗೆ ಹಲವು ಬಾರಿ ಆಯ್ಕೆಯಾಗಿ, ಮೇಯರ್ ಸ್ಥಾನವನ್ನೂ ಅಲಂಕರಿಸಿದ್ದ ಎಚ್.ಎಸ್.ಶಂಕರಲಿಂಗೇಗೌಡರು, 1989ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಜನತಾದಳದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಆದರೆ 1994ರಲ್ಲಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದರು. ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರು. 1994ರಲ್ಲಿ 32,620 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ವಾಸು ಅವರನ್ನು 22,321 ಮತಗಳ ಬೃಹತ್ ಮತಗಳ ಅಂತರದಲ್ಲಿ ಸೋಲಿಸಿದ್ದರು. 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಂದೇಶ ನಾಗರಾಜ್ ಅವರನ್ನು 14,777 ಮತಗಳ ಅಂತರದಲ್ಲಿ ಸೋಲಿಸಿದರು. 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಸು ಮತ್ತೆ ಎದುರಾಳಿಯಾದರು. ಆಗಲೂ 9,399 ಮತಗಳ ಅಂತರದಲ್ಲಿ ಶಂಕರಲಿಂಗೇಗೌಡರು ಗೆದ್ದರು. ನಂತರದಲ್ಲಿ ಬಿಜೆಪಿ ತೊರೆದ ಶಂಕರಲಿಂಗೇಗೌಡರು ಜೆಡಿಎಸ್ ಸೇರಿಕೊಂಡು 2013ರಲ್ಲಿ ಸ್ಪರ್ಧಿಸಿದ್ದರು. ಈಗಾಗಲೇ ಎರಡು ಬಾರಿ ಸೋತಿದ್ದ ವಾಸು (41930) ಅವರಿಗೆ ಈ ಚುನಾವಣೆ ಮರುಜೀವ ನೀಡಿತು. 12,915 ಮತದಂತರದಲ್ಲಿ ಶಂಕರಲಿಂಗೇಗೌಡರು ಸೋಲೊಪ್ಪಿಕೊಂಡರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮುಂಡೇಶ್ವರಿಯಲ್ಲಿ ಜಿಟಿಡಿಯದ್ದೇ ಪಾರಮ್ಯ; ಸಶಕ್ತ ಅಭ್ಯರ್ಥಿಗಳಿಲ್ಲದ ಕಾಂಗ್ರೆಸ್

ತ್ರಿಕೋನ ಸ್ಪರ್ಧೆ, ಬಂಡಾಯದ ಬಿಸಿಯನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರ ಕಂಡಿತು. ಸಿಟ್ಟಿಂಗ್ ಎಂಎಲ್‌ಎ ಆಗಿದ್ದ ವಾಸು ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಂಬಂಧಿಕರಾದ ಪ್ರೊ.ಕೆ.ಎಸ್.ರಂಗಪ್ಪ ಅವರು ಜೆಡಿಎಸ್ ಟಿಕೆಟ್‌ನಿಂದ ಕಣಕ್ಕಿಳಿದಿದ್ದರು. ಪ್ರೊ.ರಂಗಪ್ಪ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮೈಸೂರು ನಗರ ಜೆಡಿಎಸ್ ಅಧ್ಯಕ್ಷ ಕೆ.ಹರೀಶ್‌ಗೌಡ ಬಂಡಾಯವೆದ್ದರು. ಇದರಿಂದಾಗಿ ಜೆಡಿಎಸ್ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿಯಬೇಕಾಯಿತು. ವಾಸು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಸುಕಿನ ಸಮರದಲ್ಲಿ ಕಾಂಗ್ರೆಸ್‌ನ ಒಂದಿಷ್ಟು ಮತಗಳು ಚದುರಿಹೋಗಿರುವ ಸಾಧ್ಯತೆಗಳಿವೆ ಎನ್ನಲಾಗುತ್ತದೆ. 21,282 ಮತಗಳನ್ನು ಪಡೆದ ಕೆ.ಹರೀಶ್‌ಗೌಡ ಅವರು ಕ್ಷೇತ್ರದಲ್ಲಿ ತಮ್ಮ ಹಿಡಿತವಿದೆ ಎಂಬುದನ್ನು ಸಾಬೀತು ಮಾಡಿದರು.

ಶಂಕರಲಿಂಗೇಗೌಡ

ಸುಮಾರು 30 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದ, ಮೂರು ಬಾರಿ ಪಾಲಿಕೆ ಸದಸ್ಯರಾಗಿದ್ದ ಎಲ್.ನಾಗೇಂದ್ರ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಈ ಚುನಾವಣೆಯಲ್ಲಿ 36747 ಮತಗಳನ್ನು ಪಡೆದ ವಾಸು ಅವರು ಎಲ್.ನಾಗೇಂದ್ರ (51683) ವಿರುದ್ಧ 14,936 ಮತಗಳ ಅಂತರದಲ್ಲಿ ಸೋಲುಂಡರು. ಕೆ.ಎಸ್.ರಂಗಪ್ಪ ಮೂರನೇ ಸ್ಥಾನ (27,284) ಪಡೆದರು. ಶೈಕ್ಷಣಿಕ ರಾಜಕಾರಣದಲ್ಲಿ ಎತ್ತಿದ ಕೈ ಎನಿಸಿದ್ದ ರಂಗಪ್ಪನವರು, ಚುನಾವಣಾ ರಾಜಕಾರಣದಲ್ಲಿ ಮುಗ್ಗರಿಸಿದ್ದರು.

ಅಭಿವೃದ್ಧಿ ಮಾಡಿದರೂ ವಾಸು ಅವರಿಗೆ ಸೋಲು

ಪತ್ರಿಕೋದ್ಯಮಿ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಮಾಲಿಕರಾದ ವಾಸು ಅವರು ಮೈಸೂರು ರಾಜಕೀಯದ ಆಳ ಅಗಲ ಬಲ್ಲವರಲ್ಲಿ ಒಬ್ಬರು. ಸಾಮಾನ್ಯರ ಕರೆಗೂ ತಕ್ಷಣ ಸ್ಪಂದಿಸಬಲ್ಲವರು ಎಂಬ ಮೆಚ್ಚುಗೆಯೂ ಅವರಿಗಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ಆತ್ಯಾಪ್ತರಾದ ವಾಸು ಅವರು ಮೊಯ್ಲಿಯವರಿಗೆ ರಾಜಕೀಯ ಕಾರ್ಯದರ್ಶಿಯೂ ಆಗಿದ್ದರು. ಮೈಸೂರು ಮೇಯರ್ ವಾಸು ಎಂದೇ ಖ್ಯಾತರಾಗಿದ್ದ ಅವರು ಸತತ ಎರಡು ಬಾರಿ ವಿಧಾನಸಭೆಯಲ್ಲಿ ಸೋತ ಬಳಿಕ 2013ರಲ್ಲಿ ಗೆದ್ದಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿ ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ತಂದರು. ಜಿಲ್ಲಾಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ, ಟ್ರಾಮಾ ಸೆಂಟರ್, ವಿವಿಧ ಸೌಕರ್ಯಗಳನ್ನೊಳಗೊಂಡ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು- ಇವರ ಅವಧಿಯಲ್ಲಿ ತಲೆ ಎತ್ತಿದವು. ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೆಚ್ಚಿನ ಸೌಕರ್ಯಗಳನ್ನು ಒದಗಿಸುವಲ್ಲಿ ವಾಸು ಶ್ರಮ ವಹಿಸಿದರು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಾಸು ಅವರ ನಡುವಿನ ಸಂಬಂಧ ಅಷ್ಟಕ್ಕಷ್ಟೇ. ವಾಸು ಕೆಲಸಗಾರರಾದರೂ ಒಂದಿಷ್ಟು ಸ್ವಜಾತಿ ವ್ಯಾಮೋಹಿ ಎಂಬ ಆರೋಪಗಳಿವೆ. ತನ್ನ ಸುತ್ತಲೂ ಒಕ್ಕಲಿಗರ ಕೋಟೆಯನ್ನು ನಿರ್ಮಿಸಿಕೊಳ್ಳಲು ಬಯಸುವ ವಾಸು, ತನ್ನದೇ ಆದ ಮಿತಿಗಳಿಂದಾಗಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎನ್ನಲಾಗುತ್ತದೆ.

ಕಾಂಗ್ರೆಸ್ ಸೇರಿದ ಕೆ.ಹರೀಶ್‌ಗೌಡ

ಜೆಡಿಎಸ್‌ನೊಂದಿಗೆ ರಾಜಕೀಯವಾಗಿ ಗುರುತಿಸಿಕೊಂಡು ಬೆಳೆದ ಕೆ.ಹರೀಶ್‌ಗೌಡ ಅವರು ಎಚ್.ಡಿ.ರೇವಣ್ಣ ಅವರ ಶಿಷ್ಯರಾಗಿದ್ದರು. 2013 ಹಾಗೂ 2018ರ ಚುನಾವಣೆಗಳಲ್ಲೂ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. 2013ರಲ್ಲಿ ಜೆಡಿಎಸ್‌ನಿಂದ ಶಂಕರಲಿಂಗೇಗೌಡರಿಗೆ ಟಿಕೆಟ್ ನೀಡಲಾಯಿತು. ಮುಂದಿನ ಚುನಾವಣೆಗೆ ಟಿಕೆಟ್ ನೀಡುವುದಾಗಿ ಹರೀಶ್‌ಗೌಡರನ್ನು ಸಮಾಧಾನ ಮಾಡಲಾಗಿತ್ತು. ಆದರೆ 2018ರಲ್ಲಿ ಕೆ.ಎಸ್.ರಂಗಪ್ಪನವರಿಗೆ ಟಿಕೆಟ್ ನೀಡಿದ್ದು ಹರೀಶ್‌ಗೌಡರನ್ನು ಕೆರಳಿಸಿತ್ತು. ಹೀಗಾಗಿ ಬಂಡಾಯವೆದ್ದು ಕ್ಷೇತ್ರದಲ್ಲಿ ತನಗೂ ಒಂದಿಷ್ಟು ಮತಗಳಿವೆ ಎಂಬುದನ್ನು ಸಾಬೀತು ಮಾಡಿದ್ದರು. ಬಳಿಕ ಪಾಲಿಕೆ ಚುನಾವಣೆಯಲ್ಲೂ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಇಬ್ಬರು ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದರು. ಹೀಗಿದ್ದ ಹರೀಶ್ ಈಗ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳಲು ಯತ್ನಿಸಿದ್ದಾರೆ. ವಾಸು ವರ್ಸಸ್ ಸಿದ್ದರಾಮಯ್ಯನವರ ನಡುವಿನ ಮುಸುಕಿನ ಗುದ್ದಾಟದಲ್ಲಿ ಹರೀಶ್‌ಗೌಡರಿಗೆ ಲಾಭವಾಗುತ್ತದೆಯೇ ಎಂಬುದು ಸದ್ಯದ ಕುತೂಹಲ.

ಸಿ.ಮಹದೇಶ್

ಇದೆಲ್ಲದರ ನಡುವೆ ವಾಸು ಅವರ ಇಬ್ಬರು ಪುತ್ರರು ಬಿಜೆಪಿ ಸೇರಿಕೊಂಡುಬಿಟ್ಟಿರುವುದು ರಾಜಕೀಯ ಚರ್ಚೆಗಳಿಗೆ ಅವಕಾಶ ನೀಡಿದೆ.

ವಾಸು ಅವರ ಪುತ್ರರಾದ ಕವೀಶ್ ಗೌಡ ಮತ್ತು ಅವೀಶ್ ಗೌಡ ಬಿಜೆಪಿ ಸೇರಿಕೊಂಡಿದ್ದಾರೆ. ಕವೀಶ್‌ಗೌಡರನ್ನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಿಸಬಹುದೆಂಬ ಚರ್ಚೆಗಳು ನಡೆಯುತ್ತಿವೆ. “ಅದು ಅವರ ಭವಿಷ್ಯದ ನಿರ್ಧಾರ. ನಾನು ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ” ಎಂದು ವಾಸು ಹೇಳಿಕೊಂಡಿದ್ದಾರೆ. ’ಮನೆಯೊಂದು ಎರಡು ಬಾಗಿಲು’ ಎಂಬಂತಾದಾಗ ನಿಮಗೆ ಟಿಕೆಟ್ ನೀಡಲು ಸಾಧ್ಯವೆ ಎಂಬ ಪ್ರಶ್ನೆ ವಾಸು ಅವರ ಮುಂದಿದೆ. ಆದರೆ ವೀರಪ್ಪ ಮೊಯ್ಲಿಯವರು ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೂ ಆಗಿರುವುದು ವಾಸು ಅವರಿಗೆ ತಕ್ಕಮಟ್ಟಿಗಿನ ವರದಾನವಾಗಬಹುದು. ವಾಸು ಅವರಿಗೆ ಟಿಕೆಟ್ ನೀಡಲೇಬೇಕು ಎಂದು ಮೊಯ್ಲಿ ಪಟ್ಟು ಹಿಡಿಯುವ ಸಾಧ್ಯತೆಯೂ ಇದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಒಂದು ವೇಳೆ ವಾಸು ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದರೆ ಹರೀಶ್‌ಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಹೀಗಾಗಿಯೇ ಹರೀಶ್‌ಗೌಡ ಅವರು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ಪಾಲಿಕೆ ಸದಸ್ಯನಂತೆ ವರ್ತಿಸುವ ಶಾಸಕ ಎಲ್.ನಾಗೇಂದ್ರ

ಮೈಸೂರು ಮಹಾನಗರ ಪಾಲಿಕೆ ಸದಸ್ಯರಾಗಿ ಕೆಲಸ ಮಾಡಿದ್ದ ಎಲ್.ನಾಗೇಂದ್ರ ಅವರು ಶಾಸಕರೇನೋ ಆಗಿಬಿಟ್ಟರು; ಆದರೆ ವರ್ತನೆಗಳೆಲ್ಲ ಈಗಲೂ ಪಾಲಿಕೆ ಸದಸ್ಯರಂತೆಯೇ ಇವೆ ಎಂಬ ಟೀಕೆಗಳಿವೆ. ಅಧಿಕಾರಿಗಳ ಸ್ಥಾನಮಾನಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಏಕವಚನದಲ್ಲಿ ಮಾತನಾಡಿಸುವುದು, ಅನವಶ್ಯಕವಾಗಿ ಕೂಗಾಡುವುದು ನಾಗೇಂದ್ರ ಅವರನ್ನು ನಗೆಪಾಟಲಿಗೀಡು ಮಾಡುತ್ತಿರುವ ಸಂಗತಿಗಳು. ತನ್ನ ಮಾತು ಕೇಳದ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸುವುದರಲ್ಲೂ ನಾಗೇಂದ್ರ ಎತ್ತಿದ ಕೈ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಕಮಿಷನ್ ಕಾಟವನ್ನೂ ನಾಗೇಂದ್ರ ಕೊಡುತ್ತಾರೆಂಬ ಆರೋಪಗಳಿವೆ. ಆದರೆ ನಾಗೇಂದ್ರ ಅವರೇ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಚುನಾವಣೆ ಹತ್ತಿರವಾದಂತೆ ಜನಪ್ರಿಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.

ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು

ಪಾಲಿಕೆ ಸದಸ್ಯ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್, ನಗರಪಾಲಿಕೆ ಮಾಜಿ ಸದಸ್ಯ ಸಿ.ಮಹದೇಶ್ (ಅವ್ವ ಮಾದೇಶ್) ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆ.ಎಸ್.ರಂಗಪ್ಪ ಅವರು ಯಾವುದೇ ಆಸಕ್ತಿ ತೋರುತ್ತಿಲ್ಲ. ಆಮ್ ಆದ್ಮಿ ಪಕ್ಷದ ಮಾಳವಿಕಾ ಗುಬ್ಬಿವಾಣಿ ಮತ್ತೊಮ್ಮೆ ಸ್ಪರ್ಧಿಸುತ್ತಿದ್ದಾರೆ.

ಶಾಸಕ ಎಲ್.ನಾಗೇಂದ್ರ ಮತ್ತೊಮ್ಮೆ ಬಿಜೆಪಿಯಿಂದ ಟಿಕೆಟ್ ಪಡೆಯುತ್ತಾರೆಂದು ಹೇಳಲಾಗುತ್ತಿದ್ದರೂ ಬಿಜೆಪಿ ಮಾಜಿ ನಗರಾಧ್ಯಕ್ಷ ಡಾ.ಮಂಜುನಾಥ್, ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಪಾಲಿಕೆ ಮಾಜಿ ಸದಸ್ಯ ನಂದೀಶ್ ಪ್ರೀತಂ, ಮುಡಾ (ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ) ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಜಯಪ್ರಕಾಶ್ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಸದ್ಯದಲ್ಲಿ ವಾಸು, ಹರೀಶ್‌ಗೌಡ, ನಾಗೇಂದ್ರ ಅವರಷ್ಟೇ ಕ್ಷೇತ್ರದಲ್ಲಿನ ಪ್ರಮುಖ ರಾಜಕೀಯ ಮುಖಗಳಾಗಿ ಹೊರಹೊಮ್ಮಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...