Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮುಂಡೇಶ್ವರಿಯಲ್ಲಿ ಜಿಟಿಡಿಯದ್ದೇ ಪಾರಮ್ಯ; ಸಶಕ್ತ ಅಭ್ಯರ್ಥಿಗಳಿಲ್ಲದ ಕಾಂಗ್ರೆಸ್

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮುಂಡೇಶ್ವರಿಯಲ್ಲಿ ಜಿಟಿಡಿಯದ್ದೇ ಪಾರಮ್ಯ; ಸಶಕ್ತ ಅಭ್ಯರ್ಥಿಗಳಿಲ್ಲದ ಕಾಂಗ್ರೆಸ್

- Advertisement -
- Advertisement -

ಸಾಂಸ್ಕೃತಿಕ ನಗರಿ ಮೈಸೂರು ನಗರದ ಸುತ್ತ ಹಬ್ಬಿಕೊಂಡಿರುವ, ನಗರ ಹಾಗೂ ಗ್ರಾಮೀಣ ಸೊಗಡು ಎರಡೂ ಬೆರೆತ ವಿಶಿಷ್ಟ ವಿಧಾನಸಭಾ ಕ್ಷೇತ್ರ- ಚಾಮುಂಡೇಶ್ವರಿ. ರಾಜಕೀಯವಾಗಿ ಎಂದಿಗೂ ರಾಜ್ಯದ ಗಮನ ಸೆಳೆಯುವ, ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ಮರುಹುಟ್ಟು ನೀಡಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವು, ಮೊದಲಿನಿಂದಲೂ ಕಾಂಗ್ರೆಸ್- ಜೆಡಿಎಸ್‌ನ ಪ್ರಬಲ ಪೈಪೋಟಿಯ ನೆಲ.

ಮೈಸೂರು ನಗರದೊಳಗೆ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಿದ್ದರೆ ಮೈಸೂರು ಹೊರವಲಯಕ್ಕೆ ಹೊಂದಿಕೊಂಡಂತೆ ನಗರದ ಸುತ್ತಲೂ ಚಾಮುಂಡೇಶ್ವರಿ ಕ್ಷೇತ್ರ ಹಬ್ಬಿದೆ.

ಈ ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಆಸಕ್ತಿದಾಯಕ ಸಂಗತಿಗಳು ಗೋಚರಿಸುತ್ತವೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಇಲ್ಲಿ ಪ್ರಸ್ತುತ ಜೆಡಿಎಸ್ ಪ್ರಾಬಲ್ಯ ಸಾಧಿಸಿದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಬಳಿಕ ಶಾಸಕ ಜಿ.ಟಿ.ದೇವೇಗೌಡ ಅವರ ವರ್ಚಸ್ಸು ಹೆಚ್ಚಿದೆ.

2008ರ ಕ್ಷೇತ್ರ ಪುನರ್ ವಿಂಗಡಣೆಗೂ ಮೊದಲು ಮೈಸೂರು ತಾಲೂಕು ಮತ್ತು ನಗರದ ಕೆಲವು ವಾರ್ಡ್‌ಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. ಕುಲದೀಪ್ ಸಿಂಗ್ ನೇತೃತ್ವದ ಕ್ಷೇತ್ರ ಪುನರ್ ವಿಂಗಡಣಾ ವರದಿಯಂತೆ ವರುಣ ಹೋಬಳಿಯನ್ನು ಪ್ರತ್ಯೇಕಿಸಿ, ಟಿ.ನರಸೀಪರ ಹಾಗೂ ವರುಣದ ಭಾಗಶಃ ಪ್ರದೇಶಗಳನ್ನು ಸೇರಿಸಿ ವರುಣ ವಿಧಾನಸಭಾ ಕ್ಷೇತ್ರವನ್ನು ರಚಿಸಲಾಯಿತು. ಆ ನಂತರದಲ್ಲಿ ವರುಣಾ, ಸಿದ್ದರಾಮಯ್ಯನವರ ಕಾರ್ಯಕ್ಷೇತ್ರವಾಯಿತು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಸುಮಾರು ಮೂರು ಲಕ್ಷದಷ್ಟು ಜನಸಂಖ್ಯೆ ಇರುವ ಈ ಕ್ಷೇತ್ರದಲ್ಲಿ 75 ಸಾವಿರ ಒಕ್ಕಲಿಗ, 48 ಸಾವಿರ ಪರಿಶಿಷ್ಟ ಜಾತಿ, 35 ಸಾವಿರ ಕುರುಬ, 35 ಸಾವಿರ ಲಿಂಗಾಯತ, 30 ಸಾವಿರ ಪರಿಶಿಷ್ಟ ಪಂಗಡ, 14 ಸಾವಿರ ವಿಶ್ವಕರ್ಮ, 13 ಸಾವಿರ ಬ್ರಾಹ್ಮಣ, 12 ಸಾವಿರ ಮುಸ್ಲಿಂ ಹಾಗೂ ಇತರೆ ಸಮುದಾಯಗಳ 40 ಸಾವಿರ ಮತದಾರರಿದ್ದಾರೆಂದು ಅಂದಾಜಿಸಲಾಗಿದೆ. 2018ರ ಚುನಾವಣೆಯ ಮಾಹಿತಿ ಪ್ರಕಾರ ಪುರುಷರು 1,49,999, ಮಹಿಳೆಯರು-1,45,881 ಸೇರಿ ಒಟ್ಟು 2,95,880 ಮತದಾರರಿದ್ದಾರೆ.

ಕೆ. ಪುಟ್ಟಸ್ವಾಮಿ

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ 13 ವಿಧಾನಸಭಾ ಚುನಾವಣೆಗಳಲ್ಲಿ ಐದು ಬಾರಿ ಸಿದ್ದರಾಮಯ್ಯನವರು ಗೆದ್ದಿದ್ದಾರೆ.

1952ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶಿವನಂಜೇಗೌಡ (4883) ಅವರು ಪಕ್ಷೇತರ ಅಭ್ಯರ್ಥಿ ಮಹಾದೇವಸ್ವಾಮಿ (2776) ಅವರನ್ನು 2107 ಮತಗಳ ಅಂತರದಿಂದ ಸೋಲಿಸಿದರು. 1957ರಲ್ಲಿ ಕಾಂಗ್ರೆಸ್‌ನಿಂದ ಹುರಿಯಾಳಾಗಿದ್ದ ಕೆ.ಪುಟ್ಟಸ್ವಾಮಿಯವರು ಸತತ ನಾಲ್ಕು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾದರು. ಪ್ರಜಾ ಸೋಷಿಯಲಿಸ್ಟ್ ಪಾರ್ಟಿ (ಪಿಎಸ್‌ಪಿ) ಪ್ರಬಲ ಪೈಪೋಟಿಯನ್ನು ನೀಡಿತ್ತು. ಪಿಎಸ್‌ಪಿಯ ವಿ.ಶ್ರೀಕಂಠಪ್ಪ ಅವರನ್ನು 1957ರಲ್ಲಿ 5,998 ಮತದಂತರದಿಂದ, ಟಿ.ವಿ.ಶ್ರೀನಿವಾಸ್ ರಾವ್ ಅವರನ್ನು 1962ರಲ್ಲಿ 10,755 ಮತಗಳ ಅಂತರದಿಂದ, 1967ರಲ್ಲಿ ಎಂ.ಎನ್.ತಿಮ್ಮಯ್ಯ ಅವರನ್ನು 6,181 ಮತದಂತರದಲ್ಲಿ ಕೆ.ಪುಟ್ಟಸ್ವಾಮಿ ಸೋಲಿಸಿದ್ದರು. 1972ರಲ್ಲಿ ತನ್ನ ಎದುರಾಳಿ ಜವರೇಗೌಡ ಅವರನ್ನು 10,132 ಮತಗಳ ಅಂತರದಲ್ಲಿ ಮಣಿಸಿದರು.

1978ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ಜಯದೇವರಾಜ ಅರಸು (20529) ಅವರು ಜನತಾ ಪಾರ್ಟಿಯ ಎಂ.ರಾಜಶೇಖರ್ ಮೂರ್ತಿ (19450) ಅವರನ್ನು 1,079 ಮತದಂತರದಲ್ಲಿ ಸೋಲಿಸಿದರು. 1983ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಪ್ರವೇಶವಾಯಿತು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು 26614 ಮತಗಳನ್ನು ಗಳಿಸಿ, ಕಾಂಗ್ರೆಸ್‌ನ ಜಯದೇವರಾಜೇ ಅರಸು ಅವರನ್ನು 3,504 ಮತಗಳ ಅಂತರದಲ್ಲಿ ಮಣಿಸಿದರು. 1985ರಲ್ಲಿ ಮತ್ತೆ ಚುನಾವಣೆ ಎದುರಾದಾಗ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ 33725 ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿ ಕೆ.ರಂಗನಿಕಾ ಅವರನ್ನು 8,271 ಮತಗಳಿಂದ ಮಣಿಸಿದರು. 1989ರಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಸೋತರು. 42892 ಮತಗಳನ್ನು ಗಳಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎಂ.ರಾಜಶೇಖರ ಮೂರ್ತಿ 6,409 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. 1994ರಲ್ಲಿ ಮತ್ತೆ ಜನತಾ ದಳದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎ.ಎಸ್.ಗುರುಸ್ವಾಮಿ ಅವರನ್ನು 32,155 ಮತಗಳ ಅಂತರದಲ್ಲಿ ಸೋಲಿಸಿದರು. ಈ ವೇಳೆಗೆ ಜನತಾ ದಳ ಇಬ್ಬಾಗವಾಗಿ ಜೆಡಿಎಸ್ ಹುಟ್ಟಿಕೊಂಡಿತ್ತು. 1999ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಸಿದ್ದರಾಮಯ್ಯನವರು 6,200 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಗುರುಸ್ವಾಮಿಯವರ ಎದುರು ಸೋಲು ಕಂಡರು. 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ರೇವಣ್ಣ ಸಿದ್ದಯ್ಯ ಎಲ್ ಅವರನ್ನು 32,345 ಮತಗಳ ಅಂತರದಲ್ಲಿ ಮಣಿಸಿದರು. ಈ ಹೊತ್ತಿಗೆ ಜೆಡಿಎಸ್‌ನಲ್ಲಿ ಪ್ರಬಲ ನಾಯಕರಾಗಿ ಬೆಳೆದರು. ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಗುರುತಿಸಿಕೊಂಡರು. ರಾಜಕೀಯ ಪಲ್ಲಟಗಳಾದಾಗ ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.

2006ರಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ಸಿದ್ದರಾಮಯ್ಯನವರ ರಾಜಕೀಯ ಬದುಕಿನ ತಿರುವುಗಳಲ್ಲಿ ಒಂದಾಗಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಪ್ರತಿಷ್ಠೆಯ ಚುನಾವಣೆ ಇದಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯನವರು 115512 ಮತಗಳನ್ನು ಪಡೆದರೆ ಜೆಡಿಎಸ್‌ನ ಶಿವಬಸಪ್ಪ ಅವರು 115255 ಮತಗಳನ್ನು ಪಡೆದು ಕೇವಲ 257 ಮತಗಳ ಅಂತರದಲ್ಲಿ ಸೋಲುಂಡರು. ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಒಂದು ವೇಳೆ ಸೋತಿದ್ದರೆ ಬಹುಶಃ ಅವರ ರಾಜಕೀಯ ವರ್ಚಸ್ಸು ಮುಗಿದುಹೋಗುತ್ತಿತ್ತು ಎಂದೇ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಎಂ.ರಾಜಶೇಖರ ಮೂರ್ತಿ

ಈ ನಡುವೆ ಕ್ಷೇತ್ರ ಪುನರ್ ವಿಂಗಡಣೆಯಾಗಿ ವರುಣಾ ರಚಿಸಿದಾಗ 2008 ಮತ್ತು 2013ರಲ್ಲಿ ಸಿದ್ದರಾಮಯ್ಯ ವರುಣಾದಿಂದ ಗೆದ್ದರು. 2008ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ.ಸತ್ಯನಾರಾಯಣ (55828) ಅವರು ಬಿಜೆಪಿ ಅಭ್ಯರ್ಥಿ ಸಿ.ಎನ್.ಮಂಜೇಗೌಡ (41529) ಅವರನ್ನು 14,299 ಮತಗಳ ಅಂತರದಲ್ಲಿ ಸೋಲಿಸಿದರು.

ಚಾಮುಂಡೇಶ್ವರಿಗೆ ಜಿಟಿಡಿ ಪ್ರವೇಶ

ಮೈಸೂರು ತಾಲ್ಲೂಕಿನ ಗುಂಗ್ರಾಲ್‌ಛತ್ರದ ನಿವಾಸಿಯಾದ ಜಿ.ಟಿ.ದೇವೇಗೌಡ ಅವರು ಮೂಲತಃ ಸಹಕಾರ ಕ್ಷೇತ್ರದ ಧುರೀಣರು. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದವರು. ಜನತಾ ದಳದಲ್ಲಿದ್ದ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರಿಂದ ಜಿ.ಟಿ.ಡಿ. ಹುಣಸೂರು ಕ್ಷೇತ್ರದಲ್ಲಿ ತಮ್ಮ ನೆಲೆ ಕಂಡುಕೊಳ್ಳಬೇಕಾಯಿತು. 2004ರ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜಿಟಿಡಿ (60258), ಕಾಂಗ್ರೆಸ್ ಅಭ್ಯರ್ಥಿ ಎಸ್.ಚಿಕ್ಕಮಾದು (46126) ಅವರನ್ನು 14,132 ಮತಗಳ ಅಂತರದಲ್ಲಿ ಮಣಿಸಿದರು. ಆದರೆ 2008ರ ಚುನಾವಣೆ ವೇಳೆಗೆ ಚಿಕ್ಕಮಾದು ಜೆಡಿಎಸ್ ಸೇರಿ, ಟಿಕೆಟ್ ಪಡೆದರು. ಎಚ್.ಡಿ.ಕುಮಾರಸ್ವಾಮಿಯವರು ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದೆ ಮೋಸ ಮಾಡಿದರು ಎಂಬ ಕಾರಣವೊಡ್ಡಿ ಜೆಡಿಎಸ್ ತೊರೆದ ಜಿ.ಟಿ.ಡಿ. ಬಿಜೆಪಿಯೊಂದಿಗೆ ಸಖ್ಯ ಬೆಳೆಸಿಕೊಂಡರು. ಹುಣಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದರು. 2008ರ ಚುನಾವಣೆಯಲ್ಲಿ ಎಸ್.ಚಿಕ್ಕಮಾದು (42456) ಎರಡನೇ ಸ್ಥಾನ ಪಡೆದರೆ, ಜಿಟಿಡಿ ಮೂರನೇ ಸ್ಥಾನದಲ್ಲಿ ತೃಪ್ತಿಪಟ್ಟರು. ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ (57497) ಅವರು 15,041 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಆ ನಂತರದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ಅಧ್ಯಕ್ಷರೂ ಆದ ಜಿಟಿಡಿ, 2013ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಮರಳಿದರು. ಈ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಸತ್ಯನಾರಾಯಣ (68761) ಅವರನ್ನು ಜಿ.ಟಿ.ಡಿ. (75864) 7,103 ಮತಗಳ ಅಂತರದಲ್ಲಿ ಸೋಲುಣಿಸಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆ.ಆರ್ ಪೇಟೆ: ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸಚಿವ ನಾರಾಯಣಗೌಡ ಪಕ್ಷಾಂತರಕ್ಕೆ ಸಜ್ಜು?

ಜಿ.ಟಿ.ದೇವೇಗೌಡರ ಹೆಸರು ಹೆಚ್ಚು ಚರ್ಚೆಗೆ ಒಳಗಾಗಿದ್ದು 2018ರ ವಿಧಾನಸಭಾ ಚುನಾವಣೆಯಲ್ಲಿ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ವರುಣಾ ಕ್ಷೇತ್ರವನ್ನು ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯನವರಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿಯಿಂದ ಕಣಕ್ಕಿಳಿದರು. ಆದರೆ ಸೋಲಿನ ಭೀತಿಯನ್ನು ಎದುರಿಸುತ್ತಿದ್ದರಿಂದ ಬಾದಾಮಿ ಕ್ಷೇತ್ರದಲ್ಲಿಯೂ ಸ್ಪರ್ಧಿಸಿದರು. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ, ಜನಮುಖಿಯಾದ ಜನಪ್ರಿಯ ಯೋಜನೆಗಳ ಮೂಲಕ ಗಮನ ಸೆಳೆದಿದ್ದ ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ನಕಾರಾತ್ಮಕ ಸಂದೇಶವನ್ನೂ ರವಾನಿಸಿತ್ತು. ಸಿದ್ದರಾಮಯ್ಯ- ಜಿ.ಟಿ.ದೇವೇಗೌಡರ ಸ್ಪರ್ಧೆ ತೀವ್ರ ಕುತೂಹಲ ಕೆರಳಿಸಿತು. ಕ್ಷೇತ್ರ ವಿಂಗಡಣೆಯಾದ ಮೇಲೆ ಬಹುತೇಕ ಚಾಮುಂಡೇಶ್ವರಿಯ ಸಂಪರ್ಕ ಕಳೆದುಕೊಂಡಂತಿದ್ದ ಸಿದ್ದರಾಮಯ್ಯನವರಿಗೆ ಈ ಚುನಾವಣೆ ಭಾರಿ ಪೆಟ್ಟು ನೀಡಿತು. 121325 ಮತಗಳನ್ನು ಪಡೆದ ಜಿಟಿಡಿ, 36,042 ಮತಗಳ ಅಂತರದಲ್ಲಿ ಸಿದ್ದರಾಮಯ್ಯನವರನ್ನು ಮಣಿಸಿದ್ದು ಈಗ ಇತಿಹಾಸ.

ದಲಿತ ನಾಯಕ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಸರಿಯಾದ ಸ್ಥಾನಮಾನಗಳನ್ನು ಸಿದ್ದರಾಮಯ್ಯನವರು ತಮ್ಮ ಸಂಪುಟದಲ್ಲಿ ನೀಡಲಿಲ್ಲ, ಪ್ರಸಾದ್ ಅವರಿಗೆ ಅನ್ಯಾಯವಾಗಿದೆ ಎಂಬ ಬೇಸರ ದಲಿತರಲ್ಲಿ ಇತ್ತು. ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿರ್ಣಾಯಕವಾಗಿದ್ದ ದಲಿತರ ಮತಗಳು ಸಿದ್ದರಾಮಯ್ಯನವರ ವಿರುದ್ಧ ಬಿದ್ದವು ಎಂದು ವಿಶ್ಲೇಷಿಸಲಾಗಿದೆ. ಒಕ್ಕಲಿಗ ಸಮುದಾಯ ಶೇ.100ರಷ್ಟು ಜಿಟಿಡಿಯವರನ್ನು ಬೆಂಬಲಿಸಿತು; ನಾಯಕ ಸಮುದಾಯ ಕೈಹಿಡಿಯಿತು; ಮುಖ್ಯಮಂತ್ರಿ ಅಭ್ಯರ್ಥಿಯನ್ನು ಯಾರು ಸೋಲಿಸುತ್ತಾರೆಂಬ ಉದಾಸೀನತೆಯೂ ಸಿದ್ದರಾಮಯ್ಯನವರಿಗೆ ಇತ್ತು ಎನ್ನುತ್ತಾರೆ ಕ್ಷೇತ್ರದ ಜನತೆ.

ಜೆಡಿಎಸ್‌ನೊಂದಿಗೆ ಜಿಟಿಡಿ ಮುನಿಸು ಮತ್ತೆ ಸಖ್ಯ

2018ರ ಚುನಾವಣೆಯಲ್ಲಿ ರಾಜ್ಯದ ಫಲಿತಾಂಶ ಅತಂತ್ರವಾಗಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಸಿದ್ದರಾಮಯ್ಯನವರನ್ನು ಮಣಿಸಿದ್ದ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆಯನ್ನು ನೀಡಲಾಯಿತು. ಎಚ್.ಡಿ ದೇವೇಗೌಡರ ಕುಟುಂಬದ ಸಂಬಂಧಿ ಹಾಗೂ ಮೈಸೂರು ವಿವಿ ನಿವೃತ್ತ ಕುಲಪತಿ ಕೆ.ಎಸ್.ರಂಗಪ್ಪ (2018ರ ಚುನಾವಣೆಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದವರು) ಅವರನ್ನು ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರನ್ನಾಗಿ ತಂದು ಕೂರಿಸುವ ಪ್ರಯತ್ನವನ್ನು ಮಾಡಲಾಯಿತು. ಮತ್ತೊಂದೆಡೆ ಉನ್ನತ ಶಿಕ್ಷಣ ಇಲಾಖೆಯ ಜವಾಬ್ದಾರಿ ಜಿ.ಟಿ.ಡಿಯವರಿಗೆ ಇಷ್ಟವಿರಲಿಲ್ಲ. ಪಂಚಾಯತ್ ರಾಜ್ ಮತ್ತು ಗ್ರಾಮಾಭಿವೃದ್ಧಿ ಇಲಾಖೆ, ಕಂದಾಯ ಅಥವಾ ಗೃಹ ಇಲಾಖೆ ನೀಡಬೇಕೆಂದು ಜಿಟಿಡಿ ಆಶಿಸಿದ್ದರು. ಇದು ಜೆಡಿಎಸ್‌ನೊಂದಿಗೆ ಮುನಿಸಿಕೊಳ್ಳಲೂ ಕಾರಣವಾಯಿತು.

2018ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಜಿ.ಡಿ.ಹರೀಶ್‌ಗೌಡ ಅವರಿಗೆ ಹುಣಸೂರು ಕ್ಷೇತ್ರದ ಟಿಕೆಟ್ ಕೊಡಿಸಬೇಕೆಂದು ಜಿ.ಟಿ.ಡಿ. ಆಶಿಸಿದ್ದರು. ಆದರೆ ಹುಣಸೂರು ಕ್ಷೇತ್ರದ ಟಿಕೆಟ್ ಅಡಗೂರು ಎಚ್.ವಿಶ್ವನಾಥ್ ಅವರಿಗೆ ಖಾತ್ರಿಯಾಯಿತು. ವಿಶ್ವನಾಥ್ ಗೆದ್ದರು. ಆದರೆ ಆಪರೇಷನ್ ಕಮಲದಲ್ಲಿ ಭಾಗಿಯಾಗಿ ಸರ್ಕಾರ ಉರುಳಲು ಕಾರಣವಾದರು. ನಂತರ ಘೋಷಣೆಯಾದ ಹುಣಸೂರು ಉಪಚುನಾವಣೆಯಲ್ಲಾದರೂ ಹರೀಶ್‌ಗೌಡ ಅವರಿಗೆ ಜೆಡಿಎಸ್ ಟಿಕೆಟ್ ನೀಡಬೇಕೆಂದು ಜಿಟಿಡಿ ಆಶಿಸಿದರು. ಆದರೆ ದೇವರಹಳ್ಳಿ ಸೋಮಶೇಖರ್ ಅವರಿಗೆ ಟಿಕೆಟ್ ದೊರಕಿತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಟಿಡಿಯವರು ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಶುರುಮಾಡಿದರು. ಸುಮಾರು ಮೂರೂವರೆ ವರ್ಷ ಜೆಡಿಎಸ್ ಕಚೇರಿಯತ್ತ ಜಿಟಿಡಿ ಕಾಲಿಡಲಿಲ್ಲ. ಕುಮಾರಸ್ವಾಮಿ, ದೇವೇಗೌಡರೊಂದಿಗೆ ಸಂಬಂಧ ಹಳಸಿತ್ತು. ಆದರೆ ಚುನಾವಣೆ ಹತ್ತಿರವಾದಂತೆ ಜೆಡಿಎಸ್ ಪಕ್ಷಕ್ಕೂ ಜಿಟಿಡಿಯವರ ಅನಿವಾರ್ಯತೆ ಅರ್ಥವಾಗತೊಡಗಿತ್ತು. ಹೀಗಾಗಿ ಹುಣಸೂರು ಕ್ಷೇತ್ರದಲ್ಲಿ ಜಿ.ಡಿ.ಹರೀಶ್ ಗೌಡ ಅವರಿಗೆ ಟಿಕೆಟ್, ಚಾಮುಂಡೇಶ್ವರಿಯಲ್ಲಿ ತಮಗೆ ಟಿಕೆಟ್ ಖಾತ್ರಿ ಮಾಡಿಕೊಂಡ ಬಳಿಕ ಪಕ್ಷದೊಂದಿಗೆ ಜಿಟಿಡಿ ಸಕ್ರಿಯವಾಗಿದ್ದಾರೆ. ಕ್ಷೇತ್ರದಲ್ಲಿ ತಿರುಗಾಟ ಹೆಚ್ಚಿಸಿದ್ದಾರೆ. ಒಂದರ ಹಿಂದೆ ಒಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾರಂಭಿಸಿದ್ದಾರೆ.

ಜೆಡಿಎಸ್‌ನೊಳಗೆ ಅಸಮಾಧಾನ

ಮೂರೂವರೆ ವರ್ಷಗಳಿಂದ ಪಕ್ಷದಿಂದ ದೂರವಿದ್ದು, ಈಗ ಮಗನಿಗೆ ಟಿಕೆಟ್ ಖಾತ್ರಿಯಾದ ಬಳಿಕ ಮತ್ತೆ ಜೆಡಿಎಸ್ ಸಖ್ಯವನ್ನು ಜಿಟಿಡಿ ಬೆಳೆಸಿದ್ದಾರೆಂಬ ಸಿಟ್ಟು ಕೆಲವು ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಹೊಗೆಯಾಡುತ್ತಿದೆ. ಹೀಗಾಗಿಯೇ ಜೆಡಿಎಸ್ ತೊರೆದ ಸ್ಥಳೀಯ ಮುಖಂಡರಾದ ಬೀರಿಹುಂಡಿ ಬಸವಣ್ಣ, ಮಾವಿನಹಳ್ಳಿ ಸಿದ್ದೇಗೌಡ ಮೊದಲಾದವರು ಸೇರಿ ’ಸ್ವಾಭಿಮಾನಿ ಸಮಾವೇಶ’ ಮಾಡಿದ್ದರು. ಇದಕ್ಕೆ ಪರ್ಯಾಯವಾಗಿ ಜೆಡಿಎಸ್ ಯುವ ಮುಖಂಡರಾದ ಜಿ.ಡಿ.ಹರೀಶ್‌ಗೌಡ, ನಿಖಿಲ್ ಕುಮಾರಸ್ವಾಮಿಯವರೆಲ್ಲ ಸೇರಿ ಯುವ ನಾಯಕರ ಸಮಾವೇಶ ನಡೆಸಿದ್ದರು.

ಜಿ.ಡಿ.ಹರೀಶ್‌ಗೌಡ

ಅಪ್ಪ ಮತ್ತು ಮಗ ಇಬ್ಬರೂ ಗೆದ್ದರೆ ಕ್ಷೇತ್ರದ ಮೇಲೆ ಇನ್ಯಾರ ಹಿಡಿತವೂ ಇಲ್ಲದಂತಾಗುತ್ತದೆ ಎಂಬ ಕಾರಣಕ್ಕೆ ಒಕ್ಕಲಿಗರೇನಾದರೂ ಒಳೇಟು ನೀಡಿದರೆ ಜಿಟಿಡಿಯವರಿಗೆ ಒಂದಿಷ್ಟು ಹಿನ್ನಡೆಯಾಗುವ ಸಾಧ್ಯತೆಯೂ ಇದೆ. ಜೆಡಿಎಸ್ ಎಂಎಲ್‌ಸಿ ಮಂಜೇಗೌಡ ಅವರಿಗೂ ಒಳಗೊಳಗೆ ಜಿ.ಟಿ.ಡಿಯವರ ಮೇಲೆ ಬೇಸರವಿದೆ ಎನ್ನಲಾಗುತ್ತಿದೆ. ಇವರು ಕೂಡ ಒಂದಿಷ್ಟು ಒಳೇಟು ಕೊಡಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿವೆ.

ಕಾಂಗ್ರೆಸ್ ಪರಿಸ್ಥಿತಿ ಏನು?

ಜಿ.ಟಿ.ದೇವೇಗೌಡ ಅವರಿಗೆ ಪೈಪೋಟಿ ನೀಡುವಂತಹ ಮುಖಗಳು ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಕಂಡುಬರುತ್ತಿಲ್ಲ. ಇನ್ನು ಬಿಜೆಪಿಗೆ ಈ ಕ್ಷೇತ್ರದಲ್ಲಿ ನೆಲೆ ಇಲ್ಲ. ಕಾಂಗ್ರೆಸ್‌ನಿಂದ ಸುಮಾರು 14 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂಬ ಮಾಹಿತಿ ಇದೆ. ಪ್ರಬಲ ಒಕ್ಕಲಿಗ ಮುಖವನ್ನು ತಂದು ನಿಲ್ಲಿಸಿದರೆ ಬಹುಶಃ ಕ್ಷೇತ್ರದಲ್ಲಿ ಪೈಪೋಟಿ ಉಂಟಾಗಬಹುದು. ಕುರುಬ ಸಮುದಾಯದ ಮರಿಗೌಡ ಅವರಿಗೆ ಟಿಕೆಟ್ ನೀಡಿದರೂ ಅದು ಜಿ.ಟಿ.ಡಿ.ಯವರಿಗೆ ವರದಾನವಾಗಲಿದೆ. ದಲಿತ ಅಭ್ಯರ್ಥಿ ಇಲ್ಲಿ ನಿಂತು ಗೆಲ್ಲುವುದು ಅಸಾಧ್ಯ ಬಿಡಿ ಎನ್ನುತ್ತಾರೆ ಮತದಾರರು.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿರುವ ಮಾವಿನಹಳ್ಳಿ ಸಿದ್ದೇಗೌಡ ಅವರು ಜಯಪುರ ಹೋಬಳಿಗೆ ಸೀಮಿತವಾಗಿದ್ದಾರೆ, ಮಾಜಿ ಶಾಸಕ ಸತ್ಯನಾರಾಯಣ ಅವರ ಪುತ್ರ ಅರುಣ್‌ಕುಮಾರ್ ಇಲವಾಲ ಹೋಬಳಿ ವ್ಯಾಪ್ತಿಯಲ್ಲಿ ಮಾತ್ರ ಪ್ರಾಬಲ್ಯ ಹೊಂದಿದ್ದಾರೆ. ಹೀಗೆ ಇಡೀ ಕ್ಷೇತ್ರವನ್ನು ಸಮಗ್ರವಾಗಿ ಹಿಡಿತಕ್ಕೆ ತೆಗೆದುಕೊಳ್ಳಬಹುದಾದ ಪ್ರಬಲ ವ್ಯಕ್ತಿ ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಕಾಣುತ್ತಿಲ್ಲ. ಕೂರ್ಗಳ್ಳಿ ಮಹದೇವ್, ಕೆ.ಮರಿಗೌಡ, ಬೀರಿಹುಂಡಿ ಬಸವಣ್ಣ ಮೊದಲಾದವರು ಪ್ರಬಲ ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದಾರೆ.

ಜಿಟಿಡಿ ಸೋಲಿಸುವಂತಹ ಪ್ರಬಲ ಅಭ್ಯರ್ಥಿಗಳು ಸದ್ಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಕಾಣುತ್ತಿಲ್ಲ. ವೈಯಕ್ತಿಕ ವರ್ಚಸ್ಸು, ಜನಬೆಂಬಲ ಹೊಂದಿರುವ ಆಕಾಂಕ್ಷಿಗಳು ಸಹ ಇಲ್ಲಿಲ್ಲ. ಗೆಲ್ಲುವ ಕುದುರೆಗಾಗಿ ಹುಡುಕಾಟ ನಡೆದಿದೆ. ಅವರು ಯಾರು ಎಂಬುದು ಸದ್ಯಕ್ಕೆ ಕೌತುಕ.

ಸಿದ್ದರಾಮಯ್ಯ

ಕಳೆದ ಚುನಾವಣೆಯಲ್ಲಿ ಪ್ರಾಮುಖ್ಯತೆ ಪಡೆದಿದ್ದ ವಿಚಾರಗಳು ಈಗಾಗಲೇ ಹಳಸಲಾಗತೊಡಗಿವೆ. ಶ್ರೀನಿವಾಸ ಪ್ರಸಾದ್ ಫ್ಯಾಕ್ಟರ್ ಇಳಿಮುಖವಾಗಿದೆ. ದಲಿತರಿಗೆ ಮೀಸಲಾದ ಅನುದಾನ ದಿನೇದಿನೇ ಕಡಿತವಾಗುತ್ತಿದೆ. ಬಿಜೆಪಿ ದಲಿತ ವಿರೋಧಿ ಆಡಳಿತ ನಡೆಸುತ್ತಿದೆ ಎಂಬ ಅಸಮಾಧಾನವಿದ್ದು, ಕಾಂಗ್ರೆಸ್‌ನತ್ತ ಮತ್ತೆ ದಲಿತರು ವಾಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಅಧ್ಯಕ್ಷರಾಗಿರುವುದರಿಂದ ದಲಿತರ ಮತಗಳು ಕಾಂಗ್ರೆಸ್ ತೆಕ್ಕೆಗೆ ಮರಳುವ ಸಾಧ್ಯತೆ ಇದೆ.

ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು

ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ಸಂಬಂಧಿ ವಾಸು ಅವರು ಕಾಂಗ್ರೆಸ್‌ನಲ್ಲಿದ್ದರೆ, ಅವರ ಮಕ್ಕಳು ಬಿಜೆಪಿ ಸೇರಿಕೊಂಡಿದ್ದಾರೆ. ವಾಸು ಅವರ ಪುತ್ರ ಕವೀಶ್‌ಗೌಡ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂಬ ಊಹಾಪೋಹಗಳಿವೆ. ಆದರೆ ಜಿಟಿಡಿಯವರ ಮುಂದೆ ಕವೀಶ್ ಸ್ಪರ್ಧೆ ನೆಪಮಾತ್ರವಾಗುತ್ತದೆ ಎಂಬುದು ಸುಳ್ಳಲ್ಲ. ಇದರ ಜೊತೆಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯ ರಾಜ್ಯ ಮಟ್ಟದ ನಾಯಕರು ಯಾರಾದರೂ ಸ್ಪರ್ಧಿಸಿದರೆ ಮಾತ್ರ ಕ್ಷೇತ್ರದಲ್ಲಿ ಪೈಪೋಟಿ ಉಂಟಾಗಬಹುದು, ಇಲ್ಲವಾದರೆ ಜಿಟಿಡಿಯೊಂದಿಗೆ ಹೊಂದಾಣಿಕೆಯ ರಾಜಕಾರಣವಷ್ಟೇ ಇಲ್ಲಿ ನಡೆಯುತ್ತದೆ ಎನ್ನುತ್ತಾರೆ ಕ್ಷೇತ್ರದ ನಾಡಿಮಿಡಿತ ಬಲ್ಲವರು.

ಕವೀಶ್‌ಗೌಡ

ಸದ್ಯದ ಸ್ಥಿತಿಯಲ್ಲಿ ಜಿ.ಟಿ.ಡಿಯವರದ್ದೇ ಪಾರಮ್ಯ. ಹರೀಶ್‌ಗೌಡ ಅವರು ಪಕ್ಷ ಸಂಘಟನೆಯಲ್ಲಿ, ಅಪ್ಪನಂತೆಯೇ ರಾಜಕಾರಣದ ದೇಸಿ ಪಟ್ಟುಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. ಹುಣಸೂರು ಮತ್ತು ಚಾಮುಂಡೇಶ್ವರಿ ಎರಡೂ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದಾರೆ. ಸಹಕಾರಿ ಕ್ಷೇತ್ರದ ಹಿಡಿತವೆಲ್ಲ ಜಿಟಿಡಿ- ಜಿಡಿಎಚ್ ಕೈಯಲ್ಲಿ ಇದೆ.

ರಮ್ಯಾ, ಶಶಿಕುಮಾರ್ ಹೆಸರು ಚಾಲ್ತಿಗೆ

ಸಿನಿಮಾ ನಟರನ್ನು ಜಿಟಿಡಿ ವಿರುದ್ಧ ನಿಲ್ಲಿಸುತ್ತಾರೆಂಬ ಗುಸುಗುಸು ಕ್ಷೇತ್ರದಲ್ಲಿ ಹಬ್ಬಿದೆ. ಕಾಂಗ್ರೆಸ್‌ನಿಂದ ನಟಿ ರಮ್ಯಾ ಅವರನ್ನು, ಬಿಜೆಪಿಯಿಂದ ನಟ ಶಶಿಕುಮಾರ್ ಅವರನ್ನು ನಿಲ್ಲಿಸಬಹುದು ಎನ್ನಲಾಗುತ್ತಿದೆ. ಆದರೆ ಇವೆಲ್ಲವೂ ಗಾಳಿ ಸುದ್ದಿಯಾಗಿಯೇ ಉಳಿದಿವೆ.

ಅಭಿವೃದ್ಧಿಯ ಆಚೆ-ಈಚೆ

ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ಒಟ್ಟಿಗೆ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರ ಹಂತಹಂತವಾಗಿ ಕೃಷಿಯಿಂದ ವಿಮುಖವಾಗುತ್ತಿದೆ. ಕೃಷಿ ಭೂಮಿಗಳು ಲೇಔಟ್‌ಗಳಾಗಿ ನಿರ್ಮಾಣವಾಗುತ್ತಿವೆ. ಇದರ ನಡುವೆ ಕೆಲವೊಂದು ಜನಪ್ರಿಯ ಅಭಿವೃದ್ಧಿ ಕೆಲಸಗಳನ್ನೂ ಜಿಟಿಡಿ ಮಾಡಿದ್ದಾರೆ.

“ಹಂಚ್ಯಾ, ಬೋಗಾದಿ, ಕಡಕೊಳ ಮತ್ತು ಶ್ರೀರಾಮಪುರ ಗ್ರಾ.ಪಂ.ಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಕೂರ್ಗಳ್ಳಿಯನ್ನು ನಗರಸಭೆಯನ್ನಾಗಿ ಮಾಡಲಾಯಿತು. ಇದು ಜಿಟಿಡಿಯವರಿಗೆ ಸಲ್ಲುವ ಕ್ರೆಡಿಟ್” ಎನ್ನುತ್ತಾರೆ ಮೈಸೂರಿನ ಪತ್ರಕರ್ತರೊಬ್ಬರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮೇಲುಕೋಟೆಯಲ್ಲಿ ಸಿ.ಎಸ್ ಪುಟ್ಟರಾಜು ವರ್ಸಸ್ ದರ್ಶನ್ ಪುಟ್ಟಣ್ಣಯ್ಯ ನಡುವೆ ಫೈಟ್: ಅದೃಷ್ಟದ ಅದಲುಬದಲು ಸಾಧ್ಯವೇ?

ಕೆಆರ್‌ಎಸ್ ಹಿನ್ನೀರಿನಿಂದ ಸುಮಾರು 250 ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಉಂಡುವಾಡಿ ಕುಡಿಯುವ ನೀರು ಯೋಜನೆಗೆ ಜಿಟಿಡಿ ಕ್ರಮವಹಿಸಿದ್ದಾರೆ. ಇದು ಈ ಭಾಗದಲ್ಲಿ ಪರಿಣಾಮವನ್ನು ಬೀರುತ್ತದೆ. ಅಲ್ಲದೆ ಇತ್ತೀಚೆಗೆ ಸತತವಾಗಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಮತದಾರರೊಂದಿಗೆ ಉತ್ತಮ ಒಡನಾಟ, ಪ್ರತಿಪಕ್ಷಗಳೊಂದಿಗೆ ಉತ್ತಮ ಸಂಬಂಧ, ಪ್ರತಿ ಗ್ರಾಮದೊಂದಿಗೆ ನೇರ ಸಂಪರ್ಕ- ಜಿಟಿಡಿಯವರ ಪ್ಲಸ್ ಪಾಯಿಂಟ್. ರಾಜಕೀಯ ಚದುರಂಗದಾಟದಲ್ಲಿ ದಾಳವನ್ನು ಉರುಳಿಸಿ ಜೆಡಿಎಸ್‌ನಲ್ಲೇ ಜಿಟಿಡಿ ಉಳಿದಿರುವುದರಿಂದ ಒಕ್ಕಲಿಗರ ಮತಗಳು ಬಹುತೇಕ ಜಿಟಿಡಿಯವರಿಗೆ ಬೀಳುವ ಸಾಧ್ಯತೆಯೂ ಇದೆ.

ಅಂದಹಾಗೆ ಚಾಮುಂಡೇಶ್ವರಿಯಲ್ಲಿ ಜಾತಿ ಸಮೀಕರಣವೇ ಅಂತಿಮ ಅಸ್ತ್ರ, ಅಭಿವೃದ್ಧಿ ನಗಣ್ಯ. ’ನ್ಯಾಯಪಥ’ದೊಂದಿಗೆ ಮಾತನಾಡಿದ ಕ್ಷೇತ್ರದ ಮತದಾರರೊಬ್ಬರು, “ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿಗಿಂತ ಜಾತಿಯೇ ಚುನಾವಣಾ ಫಲಿತಾಂಶವನ್ನು ನಿರ್ಣಯಿಸುತ್ತದೆ. ಅಭಿವೃದ್ಧಿಯನ್ನು ಪರಿಗಣಿಸುವಂತಿದ್ದರೆ ಸಿದ್ದರಾಮಯ್ಯನವರನ್ನೇಕೆ ಸೋಲಿಸುತ್ತಿದ್ದರು?” ಎಂದು ಪ್ರಶ್ನಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...