Homeಕರ್ನಾಟಕಬಿಜೆಪಿಗೆ ಬಿಗ್ ಶಾಕ್: ಕಮಲ ತೊರೆದು 'ಕೈ' ಸೇರಿದ ಎಂಎಲ್‌ಸಿ ಪುಟ್ಟಣ್ಣ

ಬಿಜೆಪಿಗೆ ಬಿಗ್ ಶಾಕ್: ಕಮಲ ತೊರೆದು ‘ಕೈ’ ಸೇರಿದ ಎಂಎಲ್‌ಸಿ ಪುಟ್ಟಣ್ಣ

- Advertisement -
- Advertisement -

ವಿಧಾನಪರಿಷತ್ ಬಿಜೆಪಿ ಸದಸ್ಯ ಪುಟ್ಟಣ್ಣ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪುಟ್ಟಣ್ಣ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ”ಬಿಜೆಪಿ ಆಡಳಿತದ ವೈಖರಿಯನ್ನು ಗಮನಿಸಿ ಅವರ ಕ್ಷೇತ್ರದಲ್ಲಿ ಶಿಕ್ಷಕರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಪುಟ್ಟಣ್ಣ ಅವರು ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ” ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ”ಪುಟ್ಟಣ್ಣ ನಾಲ್ಕು ಬಾರಿ ಎಂಎಲ್ ಸಿ ಆಗಿದ್ದರು. ನಾಲ್ಕನೇ ಬಾರಿಯ ಅವಧಿ ಮುಗಿಯಲು ಇನ್ನೂ ಸಾಕಷ್ಟು ಅವಧಿ ಇರುವಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಬಿಜೆಪಿ ಭ್ರಷ್ಟಾಚಾರ, ಕೋಮುವಾದ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ತಿಲಾಂಜಲಿ ಇಟ್ಟು ಜನರ ಭಾವನೆಗಳನ್ನು ಹಿಂದುತ್ವದ ಆಧಾರದಲ್ಲಿ ಕೆರಳಿಸುತ್ತಿದ್ದಾರೆ. ಇದರಿಂದ ಬೇಸೆತ್ತು ಬಿಜೆಪಿ ತೊರೆಯುತ್ತಿದ್ದಾರೆ” ಎಂದರು.

”ಸುಮಾರು 20 ವರ್ಷ ವಿಧಾನಪರಿಷತ್ ನಲ್ಲಿ ಸದಸ್ಯರಾಗಿದ್ದರು. ವಿಧಾನಪರಿಷತ್ ಉಪಸಭಾಪತಿಯಾಗಿಯೂ ಕೆಲಸ ಮಾಡಿದ್ದಾರೆ. ಪುಟ್ಟಣ್ಣ ಪಕ್ಷ ಸೇರ್ಪಡೆಯಿಂದ ಪಕ್ಷದ ಶಕ್ತಿ ಹೆಚ್ಚಾಗುತ್ತದೆ. ಇದು ಧೈರ್ಯದ ತೀರ್ಮಾನ” ಎಂದರು.

ಇದನ್ನೂ ಓದಿ: ಕಲಬುರಗಿ: ಪ್ರಧಾನಿ ಮೋದಿ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಹರಿಸಿದ ಬಿಜೆಪಿ ಶಾಸಕ

ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ”ಪುಟ್ಟಣ್ಣ ಯಾವುದೇ ಶರತ್ತು ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಶಿಕ್ಷಕ ಸಮುದಾಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಎಂದು ಹೇಳಿದರು.

2019ರಲ್ಲಿ ಪುಟ್ಟಣ್ಣ ಅವರು ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಿದ್ದರು. ವಿಧಾನಪರಿಷತ್‌ನ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಬಂದಿದ್ದರು. ಗುರುವಾರ ತಮ್ಮ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪುಟ್ಟಣ್ಣ ಮಾತನಾಡಿ, ”ಇವತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನಾಲ್ಕು ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಆಗಿದ್ದೇನೆ. ಶಿಕ್ಷಣ ಕ್ಷೇತ್ರ, ಶಿಕ್ಷಕರ ಪರವಾಗಿ ಸಾಕಷ್ಟು ಹೋರಾಟ ಮಾಡಿದ್ದೇನೆ. ನಾನು ಏನು ಅಂದುಕೊಂಡು ಬಿಜೆಪಿ ಸೇರಿದ್ದೇನೋ ಅದು ಮಾಡಲು ಸಾಧ್ಯವಾಗಲಿಲ್ಲ, ಅಲ್ಲಿ ಸತ್ತಂತ ಪರಿಸ್ಥಿತಿ ಇತ್ತು. ಸರ್ಕಾರ ಶಿಕ್ಷಣ ಕ್ಷೇತ್ರದ ಯಾವ ಸಮಸ್ಯೆಯನ್ನೂ ‌ಬಗೆಹರಿಸುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

ಫ್ರೀಡಂ ಪಾರ್ಕ್ ನಲ್ಲಿ ಶಿಕ್ಷಕರ ಪ್ರತಿಭಟನೆಯ ಸಂದರ್ಭದಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಬಿಜೆಪಿ ಪಕ್ಷ ಸೇರಿ ತಪ್ಪು ಮಾಡಿದೆ ಎಂದು ಆತ್ಮಸಾಕ್ಷಿ ಹೇಳುತ್ತಿತ್ತು. ಇವಾಗ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ ಎಂದರು.

ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ವಿರೋಧ ವ್ಯಕ್ತ:

ರಾಜಾಜಿನಗರ ಕ್ಷೇತ್ರದ ಕೆಲವು ಟಿಕೆಟ್ ಆಕಾಂಕ್ಷಿಗಳು ಮತ್ತು ಕೆಲವು ನಾಯಕರು ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪುಟ್ಟಣ್ಣ ಅವರಿಗೆ ಟಿಕೆಟ್ ನೀಡಬಾರದು ಎಂದು ಗಲಾಟೆ ಮಾಡಿದ್ದಾರೆ. ಟಿಕೆಟ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ, ಮನೋಹರ್ ವಿರೋಧ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಳಿ ಪುಟ್ಟಣ್ಣಗೆ ಟಿಕೆಟ್ ನೀಡದಂತೆ ಮನವಿ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read