Homeಅಂಕಣಗಳುವರುಣಾ ವಿಧಾನಸಭಾ ಕ್ಷೇತ್ರ ಸಮೀಕ್ಷೆ: ಪುನರಾವರ್ತನೆಯಾದ 2018ರ ಹೈಡ್ರಾಮಾ!

ವರುಣಾ ವಿಧಾನಸಭಾ ಕ್ಷೇತ್ರ ಸಮೀಕ್ಷೆ: ಪುನರಾವರ್ತನೆಯಾದ 2018ರ ಹೈಡ್ರಾಮಾ!

- Advertisement -
- Advertisement -

ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ನಂತರದಲ್ಲಿ ರಾಜಕೀಯ ನೆಲೆಯನ್ನು ಒದಗಿಸಿದ್ದು ವರುಣಾ. ಕುಲದೀಪ್ ಸಿಂಗ್ ನೇತೃತ್ವದ ಕ್ಷೇತ್ರ ಪುನರ್ ವಿಂಗಡಣಾ ವರದಿಯಂತೆ ವರುಣಾ ಹೋಬಳಿಯನ್ನು ಪ್ರತ್ಯೇಕಿಸಿ, ಟಿ.ನರಸೀಪುರ ಹಾಗೂ ವರುಣಾದ ಭಾಗಶಃ ಪ್ರದೇಶಗಳನ್ನು ಸೇರಿಸಿ ವರುಣಾ ವಿಧಾನಸಭಾ ಕ್ಷೇತ್ರವನ್ನು 2008ರಲ್ಲಿ ರಚಿಸಲಾಯಿತು. ಈವರೆಗೆ ನಡೆದಿರುವ ಮೂರು ವಿಧಾನಸಭಾ ಚುನಾವಣೆಗಳ ಪೈಕಿ ಎರಡು ಬಾರಿ ಸಿದ್ದರಾಮಯ್ಯ, ಒಮ್ಮೆ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಇಲ್ಲಿ ಆಯ್ಕೆಯಾಗಿದ್ದಾರೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ 13 ಚುನಾವಣೆಗಳ ಪೈಕಿ ಐದು ಬಾರಿ ಸಿದ್ದರಾಮಯ್ಯನವರು ಗೆದ್ದಿದ್ದರು. 1983ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಚುನಾವಣಾ ಪ್ರವೇಶವಾಯಿತು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು 26,614 ಮತಗಳನ್ನು ಗಳಿಸಿ, ಕಾಂಗ್ರೆಸ್‌ನ ಜಯದೇವರಾಜೇ ಅರಸು ಅವರನ್ನು 3,504 ಮತಗಳ ಅಂತರದಲ್ಲಿ ಮಣಿಸಿದರು. 1985ರಲ್ಲಿ ಮತ್ತೆ ಚುನಾವಣೆ ಎದುರಾದಾಗ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ 33,725 ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿ ಕೆ.ರಂಗನಿಕಾ ಅವರನ್ನು 8,271 ಮತಗಳಿಂದ ಮಣಿಸಿದರು. 1989ರಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯನವರು ಸೋತರು. 43,892 ಮತಗಳನ್ನು ಗಳಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎಂ.ರಾಜಶೇಖರಮೂರ್ತಿ 6,409 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. 1994ರಲ್ಲಿ ಮತ್ತೆ ಜನತಾ ದಳದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎ.ಎಸ್.ಗುರುಸ್ವಾಮಿ ಅವರನ್ನು 32,155 ಮತಗಳ ಅಂತರದಲ್ಲಿ ಸೋಲಿಸಿದರು. ಈ ವೇಳೆಗೆ ಜನತಾ ದಳ ಇಬ್ಭಾಗವಾಗಿ ಜೆಡಿಎಸ್ ಹುಟ್ಟಿಕೊಂಡಿತ್ತು. 1999ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಸಿದ್ದರಾಮಯ್ಯನವರು 6,200 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಗುರುಸ್ವಾಮಿಯವರ ಎದುರು ಸೋಲು ಕಂಡರು. 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್.ರೇವಣ್ಣ ಸಿದ್ದಯ್ಯ ಅವರನ್ನು 32,345 ಮತಗಳ ಅಂತರದಲ್ಲಿ ಮಣಿಸಿದರು. ಈ ಹೊತ್ತಿಗೆ ಜೆಡಿಎಸ್‌ನಲ್ಲಿ ಪ್ರಬಲ ನಾಯಕರಾಗಿ ಬೆಳೆದರು. ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಗುರುತಿಸಿಕೊಂಡರು. ರಾಜಕೀಯ ಪಲ್ಲಟಗಳಾದಾಗ ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.

ಎಂ.ರಾಜಶೇಖರಮೂರ್ತಿ

2006ರಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ಸಿದ್ದರಾಮಯ್ಯನವರ ರಾಜಕೀಯ ಬದುಕಿಗೆ ತಿರುವು ನೀಡಿತು. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪ್ರತಿಷ್ಠೆಯ ಕಾಳಗ ಏರ್ಪಟ್ಟಿತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯನವರು 1,15,512 ಮತಗಳನ್ನು ಪಡೆದರೆ ಜೆಡಿಎಸ್‌ನ ಶಿವಬಸಪ್ಪ ಅವರು 1,15,255 ಮತಗಳನ್ನು ಪಡೆದು ಕೇವಲ 257 ಮತಗಳ ಅಂತರದಲ್ಲಿ ಸೋಲುಂಡರು. ಅಂದು ಏನಾದರೂ ಸಿದ್ದರಾಮಯ್ಯನವರು ಸೋತಿದ್ದರೆ, ಅವರ ರಾಜಕೀಯ ವರ್ಚಸ್ಸು ಮುಗಿದೇಹೋಗುತ್ತಿತ್ತು ಎನ್ನಲಾಗುತ್ತದೆ. ಆನಂತರ ರಚನೆಯಾದ ವರುಣಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂದರು.

ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿರುವ ಸಿದ್ದರಾಮಯ್ಯನವರನ್ನು ವರುಣಾ ಜನತೆ ಈವರೆಗೆ ಕೈಬಿಟ್ಟಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯಷ್ಟೇ ಇಲ್ಲಿ ಸದಾ ಸ್ಪರ್ಧೆ ಏರ್ಪಡುತ್ತಾ ಬಂದಿದೆ. ಜೆಡಿಎಸ್ ಪಕ್ಷ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಗೆ ಹಾರಿದ್ದ ಎಲ್.ರೇವಣ್ಣಸಿದ್ದಯ್ಯ ಅವರು ಸಿದ್ದರಾಮಯ್ಯನವರ ಪ್ರತಿಸ್ಪರ್ಧಿಯಾಗಿದ್ದರು. ಆಡಳಿತ ವರ್ಗದ ಹಿನ್ನೆಲೆಯ ಎಲ್.ರೇವಣ್ಣ ಸಿದ್ದಯ್ಯನವರನ್ನು ಕ್ಷೇತ್ರದ ಜನತೆ ಕೈಹಿಡಿಯಲಿಲ್ಲ. 18,837 ಮತದಂತರದಲ್ಲಿ ಸಿದ್ದರಾಮಯ್ಯ (71,908) ಗೆದ್ದರು. 2013ರ ಚುನಾವಣೆಯ ವೇಳೆಗೆ ಬಿಜೆಪಿ ಒಡೆದುಹೋಗಿತ್ತು. ಯಡಿಯೂರಪ್ಪನವರು ಕೆಜೆಪಿಯನ್ನು ಕಟ್ಟಿದ್ದು ಬಿಜೆಪಿಯ ಮತಗಳ ವಿಭಜನೆಗೆ ಕಾರಣವಾಯಿತು. ಕೆಜೆಪಿಯಿಂದ ಸ್ಪರ್ಧಿಸಿದ್ದ ಕಾಪು ಸಿದ್ದಲಿಂಗಸ್ವಾಮಿ ಅವರು 54,744 ಮತಗಳನ್ನು ಪಡೆದರಷ್ಟೇ. 84,385 ಮತಗಳನ್ನು ಪಡೆದ ಸಿದ್ದರಾಮಯ್ಯ 29,641 ಮತಗಳ ಬೃಹತ್ ಅಂತರದಲ್ಲಿ ಗೆದ್ದು ರಾಜ್ಯದ ಮುಖ್ಯಮಂತ್ರಿಯೂ ಆದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನರಸಿಂಹರಾಜ: ಸೋಲಿಲ್ಲದ ಸರದಾರ ತನ್ವೀರ್‌ಗೆ ಎಸ್‌ಡಿಪಿಐ ಸವಾಲು

ಈ ನಡುವೆ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಿದ್ದರಾಮಯ್ಯ ತೀರಿಹೋದರು. ರಾಜಕಾರಣದಲ್ಲಿ ಸಕ್ರಿಯವಾಗಿದ್ದ ರಾಕೇಶ್ ಅಕಾಲಿಕ ನಿಧನದ ನಂತರ, ರಾಜಕಾರಣದ ಯಾವುದೇ ಆಳಅಗಲ ತಿಳಿಯದ ಡಾ.ಯತೀಂದ್ರ ಅವರನ್ನು ರಾಜಕಾರಣಕ್ಕೆ ಕರೆತರಲಾಯಿತು. ಪುತ್ರ ವ್ಯಾಮೋಹಕ್ಕೆ ಬಿದ್ದ ಸಿದ್ದರಾಮಯ್ಯ, ತಮ್ಮ ಕ್ಷೇತ್ರವನ್ನು ಯತೀಂದ್ರ ಅವರಿಗೆ ಬಿಟ್ಟು ಮತ್ತೆ ಚಾಮುಂಡೇಶ್ವರಿಯತ್ತ ದೃಷ್ಟಿ ನೆಟ್ಟರು ಎನ್ನುವ ಮಾತು ಇಂದಿಗೂ ಚಾಲ್ತಿಯಲ್ಲಿದೆ. ಆದರೆ ಈ ವೇಳೆಗಾಗಲೇ ಚಾಮುಂಡೇಶ್ವರಿ ಮೇಲಿನ ಹಿಡಿತವನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದರು. ಅವರ ಜೊತೆಗೆ ಒಂದು ರೀತಿಯ ರಾಜಕೀಯ ವೈರತ್ವವನ್ನು ಬೆಳೆಸಿಕೊಂಡಿದ್ದ ಜೆಡಿಎಸ್, ಸಿದ್ದರಾಮಯ್ಯನವರನ್ನು ಸೋಲಿಸಲು ಸಿದ್ಧವಾಗಿತ್ತು. ಸಿದ್ದರಾಮಯ್ಯನವರ ಸೋಲನ್ನು ಬಿಜೆಪಿಯೂ ಬಯಸಿತ್ತು. 2006ರ ಉಪಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಗೆಲುವು ಪಡೆದಿದ್ದ ಸಿದ್ದರಾಮಯ್ಯನವರಿಗೆ ಈಗ ನಿಜಕ್ಕೂ ಸೋಲಿನ ಭೀತಿ ಆರಂಭವಾಗಿತ್ತು. ಅದೃಷ್ಟವಶಾತ್ ಬದಾಮಿ ಕ್ಷೇತ್ರದಲ್ಲಿಯೂ ಸ್ಪರ್ಧಿಸಿ ಗೆಲುವು ಪಡೆದು ಶಾಸಕರಾಗಿ ಉಳಿದರು, ವಿರೋಧ ಪಕ್ಷವನ್ನು ಮುನ್ನಡೆಸಿದರು.

ಸಿದ್ದರಾಮಯ್ಯ ಎಂದರೆ ವರುಣಾ, ವರುಣಾ ಎಂದರೆ ಸಿದ್ದರಾಮಯ್ಯ ಎಂಬುದು ನಿಜವಾದರೂ ಅಲ್ಲಿ ಲಿಂಗಾಯತರ ಮತಗಳೇ ನಿರ್ಣಾಯಕ. ಯಾವುದೇ ಜಾತಿ ಸಂಪೂರ್ಣವಾಗಿ ಒಂದೇ ಪಕ್ಷವನ್ನು ಬೆಂಬಲಿಸುತ್ತದೆ ಎಂದು ಹೇಳಲು ಸಾಧ್ಯವಾಗದಿದ್ದರೂ, ಲಿಂಗಾಯತರ ಮತಗಳು ಸಾಂಪ್ರದಾಯಿಕವಾಗಿ ಬಿಜೆಪಿಯ ತೆಕ್ಕೆಯಲ್ಲಿವೆ. ಹೀಗಾಗಿ ವರುಣಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಗಳು ಚುನಾವಣೆ ಸಂದರ್ಭದಲ್ಲಿ ಗರಿಗೆದರುತ್ತವೆ. ಲಿಂಗಾಯತ ಮತದಾರರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂದಾಜಿನ ಪ್ರಕಾರ 55,000 ಲಿಂಗಾಯತರು, 35,000 ಕುರುಬರು, 43,000 ದಲಿತರು (ಎಡಗೈ-ಬಲಗೈ ಸೇರಿ), 23,000 ನಾಯಕರು, 12,000 ಒಕ್ಕಲಿಗರು ಮತ್ತು ಇತರ ಹಿಂದುಳಿದ ವರ್ಗಗಳ 12,000 ಮತದಾರರಿದ್ದಾರೆ.

ಎಲ್. ರೇವಣ್ಣಸಿದ್ದಯ್ಯ

ಸಿದ್ದರಾಮಯ್ಯನವರು 2023ರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಚರ್ಚೆಗಳು ತೀವ್ರವಾಗುತ್ತಿದ್ದ ಹೊತ್ತಿನಲ್ಲೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಪ್ರಕಟ ಮಾಡಿದೆ. ಯತೀಂದ್ರ ಅವರಿಗೆ ಕೊಕ್ ನೀಡಿ, ಸಿದ್ದರಾಮಯ್ಯನವರೇ ವರುಣಾದಿಂದ ಕಣಕ್ಕಿಳಿಯುವುದು ಖಚಿತವಾಗಿದೆ. ಮತ್ತೊಂದೆಡೆ ಸಿದ್ದರಾಮಯ್ಯ ಬದಾಮಿ/ ಕೋಲಾರದಿಂದಲೂ ಸ್ಪರ್ಧಿಸುತ್ತಾರೆಂಬ ಚರ್ಚೆಗಳು ನಡೆಯುತ್ತಿವೆ. ಹಾಗೊಂದು ವೇಳೆ ಎರಡೂ ಕಡೆಯೂ ಗೆದ್ದರೆ ವರುಣಾವನ್ನು ಯತೀಂದ್ರ ಅವರಿಗೆ ಬಿಟ್ಟುಕೊಟ್ಟು ಮತ್ತೊಂದು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಉಳಿಯಬಹುದು ಎಂಬ ಲೆಕ್ಕಾಚಾರಗಳಿವೆ.

ಮತ್ತೆ ಮುನ್ನಲೆಗೆ ಬಂದ ರಾಜಕೀಯ ಹೈಡ್ರಾಮಾ

ಯಾವಾಗ ಸಿದ್ದರಾಮಯ್ಯನವರು ವರುಣಾದಿಂದ ಕಣಕ್ಕಿಳಿಯುತ್ತಾರೆಂಬುದು ಸ್ಪಷ್ಟವಾಯಿತೋ, ಆಗಿನಿಂದಲೇ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿತು. 2018ರ ಚುನಾವಣೆಯಲ್ಲಿ ನಡೆದ ಹೈಡ್ರಾಮಾ ಮತ್ತೆ ನಡೆಯುವ ಸೂಚನೆಗಳು ದೊರೆತವು.

2018ರ ಚುನಾವಣೆಯಲ್ಲಿ ಯತೀಂದ್ರ ಅವರ ವಿರುದ್ಧವಾಗಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆಂಬುದು ಭಾರೀ ಪ್ರಚಾರ ಪಡೆಯಿತು. ಲಿಂಗಾಯತರು ಅತಿ ಹೆಚ್ಚಿರುವುದರಿಂದ ಹೈವೋಲ್ಟೇಜ್ ಕ್ಷೇತ್ರವಾಗಿ ವರುಣಾ ಮಾರ್ಪಟ್ಟಿತು. ಆದರೆ ಅಂತಿಮ ಕ್ಷಣಗಳಲ್ಲಿ ವಿಜಯೇಂದ್ರ ಅವರನ್ನು ಕಣಕ್ಕೆ ಇಳಿಸುವ ನಿರ್ಧಾರವನ್ನು ಬಿಜೆಪಿ ಕೈಬಿಟ್ಟಿತು. ತೋಟದಪ್ಪ ಬಸವರಾಜು ಎಂಬವರು ಬಿಜೆಪಿಯಿಂದ ಸ್ಪರ್ಧಿಸಿದರು. ಹೀಗಾಗಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಯತೀಂದ್ರ ಅವರ ಗೆಲುವು ನಿರ್ಧಾರವಾಗಿಬಿಟ್ಟಿತ್ತು ಎನ್ನುತ್ತಾರೆ ಚುಣಾವಣಾ ವಿಶ್ಲೇಷಕರು. 96,435 ಮತಗಳನ್ನು ಪಡೆದ ಯತೀಂದ್ರ ಅವರು 58,616 ಅಂತರದಲ್ಲಿ ಭಾರೀ ಗೆಲುವನ್ನು ಪಡೆದರು. ಅಷ್ಟಾಗಿಯೂ ಟಿ.ಬಸವರಾಜು 37,819 ಮತಗಳನ್ನು ಪಡೆದಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮರಾಜ: ಪುತ್ರರಿಬ್ಬರು ಬಿಜೆಪಿ ಸೇರಿದ್ದರಿಂದ ಪೇಚಿಗೆ ಸಿಲುಕಿದರೆ ವಾಸು?

ವಿಜಯೇಂದ್ರ ಅವರಿಗೆ 2018ರಲ್ಲಿ ಟಿಕೆಟ್ ಕೈತಪ್ಪಿದ್ದೇಕೆ? ಎಂದು ಕೇಳಿಕೊಂಡರೆ ತರಹೇವಾರಿ ಉತ್ತರಗಳು ಸಿಗುತ್ತವೆ. ವಿಜಯೇಂದ್ರ ಅವರು ಚುನಾವಣೆಯ ಕೊನೆಯ ಕ್ಷಣದಲ್ಲಿ ಕ್ಷೇತ್ರಕ್ಕೆ ಬಂದಿದ್ದಾದರೂ ಸ್ಥಳೀಯ ಬಿಜೆಪಿ ಮುಖಂಡರಲ್ಲಿ ಒಂದು ರೀತಿಯ ಅಸಮಾಧಾನವಿತ್ತು ಎನ್ನಲಾಗುತ್ತದೆ. ವಿಜಯೇಂದ್ರ ಪ್ರವೇಶದಿಂದಾಗಿ ತಮ್ಮ ಪ್ರಾಬಲ್ಯ ಮೈಸೂರು ಭಾಗದಲ್ಲಿ ಕಡಿಮೆಯಾಗಬಹುದೆಂಬ ಆತಂಕ ಬಿಜೆಪಿ ಮುಖಂಡರಿಗೆ ಕಾಡಲಾರಂಭಿಸಿತು ಎನ್ನಲಾಗುತ್ತದೆ. ಇದಕ್ಕೂ ಹೆಚ್ಚಿನದಾಗಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ನಡುವೆ ಒಳ್ಳೆಯ ಬಾಂಧವ್ಯವಿದೆ; ರಾಜಕೀಯ ಸ್ನೇಹಿತರ ಪುತ್ರರಿಬ್ಬರ ಕದನ ಆರೋಗ್ಯಕರವಾಗಿ ಕಂಡುಬಂದಿರಲಿಲ್ಲ ಎಂಬ ಕಾರಣಗಳೂ ಕೇಳಿಬರುತ್ತವೆ. ಅಲ್ಲದೆ, ಮುಖ್ಯವಾಗಿ ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುತ್ತೂರು ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದರು. ಲಿಂಗಾಯತ ಸಮುದಾಯದ ಸುತ್ತೂರು ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಿದ್ದರಾಮಯ್ಯ ಆದ್ಯತೆ ನೀಡಿದ್ದರು. ಇದೆಲ್ಲದರ ಕಾರಣ ವಿಜಯೇಂದ್ರ ಅವರನ್ನು ಕಣದಿಂದ ಹಿಂದೆ ಸರಿಸಲಾಯಿತು ಎನ್ನಲಾಗುತ್ತದೆ.

ಸಿದ್ದರಾಮಯ್ಯ ವರುಣಾಕ್ಕೆ ವಾಪಸ್ ಆಗುತ್ತೆಂಬುದು ಸ್ಪಷ್ಟವಾದ ಬಳಿಕ ಮತ್ತೊಮ್ಮೆ ವಿಜಯೇಂದ್ರ ಅವರ ಹೆಸರು ಕ್ಷೇತ್ರದಲ್ಲಿ ತೇಲಿಬಂದಿತು. ರಾಜ್ಯ ರಾಜಕಾರಣದಲ್ಲಿನ ನಾಯಕರ ನಡುವೆ ಒಳ್ಳೆಯ ಬಾಂಧವ್ಯವಿದ್ದರೂ ಸಿದ್ದರಾಮಯ್ಯನವರನ್ನು ಡಿಸ್ಟರ್ಬ್ ಮಾಡಬೇಕು ಎಂಬುದು ಬಿಜೆಪಿ ಹೈಕಮಾಂಡ್‌ನ ಆಲೋಚನೆ ಎಂದು ಚರ್ಚೆಗಳಾದವು. ಸಿದ್ದರಾಮಯ್ಯನವರನ್ನು ಒಂದಿಷ್ಟು ವಿಚಲಿತರನ್ನಾಗಿಸಿದರೆ ಅವರು ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವುದು ಕಷ್ಟವಾಗಬಹುದು, ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬಹುದು ಎಂಬೆಲ್ಲ ಲೆಕ್ಕಾಚಾರಗಳು ಅಮಿತ್ ಷಾ ತಲೆಯಲ್ಲಿ ಓಡುತ್ತಿವೆ ಎಂದು ಊಹಿಸಲಾಯಿತು. ಒಟ್ಟಾರೆಯಾಗಿ ಆರ್‌ಎಸ್‌ಎಸ್ ಸಿದ್ಧಾಂತದ ಕಟು ಟೀಕಾಕಾರರಾಗಿರುವ ಸಿದ್ದರಾಮಯ್ಯನವರ ಮೇಲೆ ಷಾ ಕಣ್ಣುಬಿದ್ದಿದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು. “ದಲಿತರ ಮತಗಳನ್ನು ವಿಭಜಿಸಿದರೆ ಸಿದ್ದರಾಮಯ್ಯನವರನ್ನು ಮಣಿಸಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಹೈಕಮಾಂಡ್ ಇದೆ. ಹೀಗಾಗಿ ಹಣದ ಹೊಳೆಯೇ ಕ್ಷೇತ್ರದಲ್ಲಿ ಈ ಬಾರಿ ಹರಿಯುವ ಸಾಧ್ಯತೆಗಳಿವೆ” ಎಂದು ರಾಜಕೀಯ ಚರ್ಚೆಗಳಾದವು.

ಕಾ.ಪು.ಸಿದ್ದಲಿಂಗಸ್ವಾಮಿ

ಈವರೆಗೆ ಸಿದ್ದರಾಮಯ್ಯ ಮತ್ತು ಯತೀಂದ್ರ ಅವರಿಗೆ ಪೈಪೋಟಿ ನೀಡಿರುವ ಅಭ್ಯರ್ಥಿಗಳೆಲ್ಲರೂ ಲಿಂಗಾಯತ ಸಮುದಾಯಕ್ಕೆ ಸೇರಿರುವುದು ವಿಶೇಷ. ಆದರೆ ಯಡಿಯೂರಪ್ಪನವರಿಗಾಗಲೀ, ವಿಜಯೇಂದ್ರ ಅವರಿಗಾಗಲೇ ಸಿದ್ದರಾಮಯ್ಯನವರನ್ನು ಎದುರಾಳಿಯಾಗಿ ನೋಡುವ ಇಷ್ಟವೇನಿಲ್ಲ ಎಂಬುದು ವಾಸ್ತವ. ಇತ್ತೀಚೆಗೆ ಸಿದ್ದರಾಮಯ್ಯನವರು ಪ್ರತಿಕ್ರಿಯಿಸುತ್ತಾ, “ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ಮೇಲಿನ ಪ್ರೀತಿಯಿಂದ ಮುಂದಿನ ಚುನಾವಣೆಯಲ್ಲಿ ಬದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದ್ದಾರೆ. ಅವರ ಸಲಹೆಗೆ ಧನ್ಯವಾದ. ನನ್ನ ಹಿತೈಷಿಯಂತಿರುವ ಯಡಿಯೂರಪ್ಪನವರಿಗೆ ದೇವರು ದೀರ್ಘ ಆಯಸ್ಸು, ಆರೋಗ್ಯ ಕರುಣಿಸಲಿ” ಎಂದಿದ್ದರು. ಪಕ್ಷ ಯಾವುದಾದರೂ ಪ್ರಬಲ ನಾಯಕರ ನಡುವೆ ಒಳ್ಳೆಯ ಬಾಂಧವ್ಯವಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಿಜಯೇಂದ್ರ ಅವರು ಶಿಕಾರಿಪುರದಿಂದಲೇ ಸ್ಪರ್ಧಿಸುತ್ತಾರೆಂದು ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪನವರು ಹೇಳಿರುವುದರಿಂದ 2018ರ ಹೈಡ್ರಾಮಾ ಮತ್ತೆ ಪುನರಾವರ್ತನೆಯಾಗಿದೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯ ತಂತ್ರವಿತ್ತೇ?

ಚುನಾವಣಾ ರಾಜಕೀಯದಿಂದ ಹೊರಗುಳಿಯುವ ಘೋಷಣೆಯನ್ನು ಯಡಿಯೂರಪ್ಪನವರು ಈಗಾಗಲೇ ಮಾಡಿದ್ದಾರೆ. ಹೀಗಾಗಿ ಶಿಕಾರಿಪುರದಲ್ಲಿ ವಿಜಯೇಂದ್ರ ಅವರು ಕಳೆದ ಆರೇಳು ತಿಂಗಳಿಂದ ಸಕ್ರಿಯವಾಗಿ ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ವರುಣಾದತ್ತ ಅವರನ್ನು ಎಳೆದು ತರುವುದು ಸರಿಯಲ್ಲವೆಂದು ಬಿಜೆಪಿಯ ಕಾರ್ಯಕರ್ತರೇ ಅಭಿಪ್ರಾಯಪಟ್ಟಿದ್ದಾರೆ. “ವಿಜಯೇಂದ್ರ ಅವರು ಶಿಕಾರಿಪುರದಿಂದ ಸ್ಪರ್ಧಿಸುವುದು ಎಲ್ಲ ವಿಧದಲ್ಲೂ ಕ್ಷೇಮ. ಆದರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯಲು ಅಮಿತ್ ಷಾ ಹೊರಟಿದ್ದಾರೆಯೇ? ಯಡಿಯೂರಪ್ಪನವರ ಪ್ರಭಾವವನ್ನು ಕುಗ್ಗಿಸಲು ಬಿಎಸ್‌ವೈ ವಿರೋಧಿ ಬಣ ಯೋಚಿಸಿದೆಯೇ?” ಎಂಬೆಲ್ಲ ಚರ್ಚೆಗಳು ಮುನ್ನೆಲೆಗೆ ಬಂದಿವೆ. ವರಣಾ ಕ್ಷೇತ್ರದ ಮತದಾರರು ಈ ಅನುಮಾನವನ್ನು ವ್ಯಕ್ತಪಡಿಸಿದರು.

ಯಡಿಯೂರಪ್ಪನವರನ್ನು ಹೊರಗಿಟ್ಟು ರಾಜ್ಯ ಬಿಜೆಪಿಯನ್ನು ನೋಡಲು ಸಾಧ್ಯವೇ ಇಲ್ಲ. ಬಿಎಸ್‌ವೈ ಉತ್ತರಾಧಿಕಾರಿಯಾಗುವ ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಸ್ಥಾನವನ್ನೂ ನೀಡಲಾಗಿದೆ. ಲಿಂಗಾಯತ ನಾಯಕತ್ವದ ಸ್ಥಾನವನ್ನು ವಿಜಯೇಂದ್ರ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ವಿಜಯೇಂದ್ರ ಅವರು ಶಿಕಾರಿಪುರದಲ್ಲಿ ಗೆದ್ದು ಮುಂದುವರಿಯುವುದು ಸೂಕ್ತ. ಅವರಿಗೆ ಶಿಕಾರಿಪುರದಲ್ಲಿ ಟಿಕೆಟ್ ತಪ್ಪಿಸಿ, ವರುಣಾದಲ್ಲಿ ತಂದು ನಿಲ್ಲಿಸುವ ಆಲೋಚನೆಯನ್ನು ಹೈಕಮಾಂಡ್ ಮಾಡುವುದಾದರೆ ಅಲ್ಲಿ ದುರುದ್ದೇಶ ಕಂಡುಬರುತ್ತದೆ ಎನ್ನುತ್ತಾರೆ ಚುನಾವಣೆಗಳನ್ನು ಹಲವು ವರ್ಷಗಳಿಂದ ಕಾಣುತ್ತಿರುವವರು. ಹೀಗಾಗಿ ಯಡಿಯೂರಪ್ಪನವರೂ ಮುಂದಾಲೋಚನೆ ಮಾಡಿರುವುದು ಇಲ್ಲಿ ಸ್ಪಷ್ಟವಾಗುತ್ತಿದೆ

“ಶಿಕಾರಿಪುರ ಕ್ಷೇತ್ರವನ್ನು ನಮ್ಮ ತಂದೆಯವರು ಬಿಟ್ಟುಕೊಟ್ಟಿದ್ದಾರೆ. ವರುಣಾದಲ್ಲಿ ಯಾರು ಸ್ಪರ್ಧಿಸುತ್ತಾರೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ” ಎಂದು ವಿಜಯೇಂದ್ರ ಈಗಾಗಲೇ ಹೇಳಿದ್ದಾರೆ. ಪ್ರಬಲ ಪೈಪೋಟಿಯಿಂದ ಸಿದ್ದರಾಮಯ್ಯನವರು ಬಹುತೇಕ ತಪ್ಪಿಸಿಕೊಂಡಿದ್ದಾರೆಂದೇ ಹೇಳಲಾಗುತ್ತಿದೆ. ಹೀಗಾಗಿ ಸಿದ್ದರಾಮಯ್ಯನವರಿಗೆ ಗೆಲುವು ಬಹುತೇಕ ಸುಲಭವಾದಂತಾಗಿದೆ.

ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಬಂದರೆ ರಸ್ತೆಗಳು ಸುಸಜ್ಜಿತವಾಗಿ ನಿರ್ಮಾಣವಾಗಿವೆ, ಎತ್ತರದ ಪ್ರದೇಶಗಳಲ್ಲೂ ಕುಡಿಯುವ ನೀರಿನ ಕೊರತೆ ನೀಗಿದೆ, ಕ್ಷೇತ್ರಕ್ಕೆ ಎಲ್ಲ ರೀತಿಯ ಅನುದಾನವನ್ನು ತರಲಾಗಿದೆ, ಸಿದ್ದರಾಮಯ್ಯನವರು ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ಯತೀಂದ್ರ ಸಶಕ್ತವಾಗಿ ಮುಂದುವರಿಸಿದ್ದಾರೆ. ತಮ್ಮ ಐದು ವರ್ಷಗಳ ಅವಧಿಯಲ್ಲಿ ಎಲ್ಲ ಜನವರ್ಗವನ್ನು ಪ್ರೀತಿಯಿಂದ ಯತೀಂದ್ರ ಕಂಡಿದ್ದಾರೆ, ಈಗ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ನಿಂತು ಗೆದ್ದರೂ ಮುಂದೆ ಯತೀಂದ್ರ ಅವರೇ ಕ್ಷೇತ್ರವನ್ನು ನೋಡಿಕೊಳ್ಳುವುದು ಖಚಿತ. ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಬ್ಯುಸಿಯಾಗುತ್ತಾರೆ, ಯತೀಂದ್ರ ಕ್ಷೇತ್ರವನ್ನು ನೋಡಿಕೊಳ್ಳುತ್ತಾರೆ ಎನ್ನುವುದು ಬಹುತೇಕ ಮತದಾರರ ಅಭಿಮತ.

ಇದೆಲ್ಲದರ ಹೊರತಾಗಿ ಬಿಜೆಪಿಯಲ್ಲಿ ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮೈಮುಲ್ (ಮೈಸೂರು ಹಾಲು ಉತ್ಪಾದಕರ ಸಂಘ) ನಿರ್ದೇಶಕ ಮಂಡಳಿ ಸದಸ್ಯ ಬಿ.ಎನ್.ಸದಾನಂದ, ಜಿಪಂ ಮಾಜಿ ಸದಸ್ಯ ಗುರುಸ್ವಾಮಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ನಂದೀಶ್ ಹಂಚೆ, ಮೈಮುಲ್ ನಿರ್ದೇಶಕ ಮಂಡಳಿ ಸದಸ್ಯ ಎಸ್.ಸಿ.ಅಶೋಕ್, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಕೆ.ಎನ್.ಪುಟ್ಟಬುದ್ದಿ, ಪುತ್ರ ಶರತ್ ಪುಟ್ಟಬುದ್ದಿ, ಕಳೆದ ಚುನಾವಣೆಯಲ್ಲಿ ಸೋತಿರುವ ತೋಟದಪ್ಪ ಬಸವರಾಜು ಆಕಾಂಕ್ಷಿಗಳಾಗಿದ್ದಾರೆ. ಜಾ.ದಳದಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಅಭಿಷೇಕ್ ಪುಟ್ಟಸುಬ್ಬಪ್ಪ ಅವರು ಈ ಬಾರಿಯೂ ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದಾರೆ. ಆದರೆ ಸಿದ್ದರಾಮಯ್ಯನವರ ಎದುರು ಈ ಹೆಸರುಗಳು ಅಷ್ಟಕ್ಕಷ್ಟೇ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು: ಸುರ್ಜೇವಾಲ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ...