Homeಮುಖಪುಟ'ನಾಡಾ'ದಿಂದ ಕುಸ್ತಿಪಟು ಬಜರಂಗ್ ಪುನಿಯಾ ಅಮಾನತು: ವರದಿ

‘ನಾಡಾ’ದಿಂದ ಕುಸ್ತಿಪಟು ಬಜರಂಗ್ ಪುನಿಯಾ ಅಮಾನತು: ವರದಿ

- Advertisement -
- Advertisement -

ಡೋಪಿಂಗ್ ಪರೀಕ್ಷೆ (ಮಾದಕವಸ್ತು ಪತ್ತೆ ಪರೀಕ್ಷೆ)ಗೆ ಸರಿಯಾದ ಸಮಯಕ್ಕೆ ಮೂತ್ರದ ಮಾದರಿಯನ್ನು ನೀಡದ ಆರೋಪದ ಮೇಲೆ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಪ್ರಾಧಿಕಾರ (ನಾಡಾ) ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಬಜರಂಗ್ ಪುನಿಯಾ “ಮಾದಕ ವಸ್ತು ಪರೀಕ್ಷೆ ಪತ್ತೆಗೆ ಕೇಳಿರುವ ಪ್ರಶ್ನೆಯ ಬಗ್ಗೆ ನಾನು ಸ್ಪಷ್ಟಪಡಿಸುತ್ತೇನೆ. ನಾನು ನಾಡಾ ಅಧಿಕಾರಿಗಳಿಗೆ ನನ್ನ ಮಾದರಿಗಳನ್ನು ನೀಡಲು ತಿರಸ್ಕರಿಸಿಲ್ಲ. ನನ್ನ ಮಾದರಿಗಳನ್ನು ಹಾಗೂ ಮಾದಕ ದ್ರವ್ಯ ಪತ್ತೆ ಪರೀಕ್ಷೆ ನಡೆಸಲು ಅವಧಿ ಮೀರಿದ ಕಿಟ್‌ಗಳನ್ನು ತಂದ ಬಗ್ಗೆ ಕೈಗೊಂಡ ಕ್ರಮಗಳ ಕುರಿತ ನನ್ನ ಪ್ರಶ್ನೆಗೆ ಉತ್ತರಿಸಲು ಅವರಲ್ಲಿ ಮನವಿ ಮಾಡುತ್ತೇನೆ. ಅಮಾನತು ಪತ್ರಕ್ಕೆ ನನ್ನ ವಕೀಲರು ಉತ್ತರ ನೀಡಲಿದ್ದಾರೆ” ಎಂದಿದ್ದಾರೆ.

ಅಮಾನತು ಆದೇಶ ಜುಲೈ 26 ರಿಂದ ಪ್ರಾರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಬಜರಂಗ್ ಪುನಿಯಾ ಅವರಿಗೆ ತಡೆಯೊಡ್ಡುವ ಸಾಧ್ಯತೆ ಇದೆ ವರದಿಗಳು ಹೇಳಿವೆ.

ನಾಡಾ 2021ರ ಆರ್ಟಿಕಲ್ 7.4 ರ ಪ್ರಕಾರ, ಈ ವಿಷಯದಲ್ಲಿ ವಿಚಾರಣೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಯಾವುದೇ ಸ್ಪರ್ಧೆ ಅಥವಾ ಚಟುವಟಿಕೆಯಲ್ಲಿ ಭಾಗವಹಿಸದಂತೆ ಬಜರಂಗ್ ಪುನಿಯಾ ಅವರನ್ನು ತಕ್ಷಣವೇ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಕೆಲ ತಿಂಗಳ ಹಿಂದೆ ಪುನಿಯಾ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಪ್ರಾಧಿಕಾರ (ನಾಡಾ) ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದರು. ಅಥ್ಲೀಟ್‌ಗಳ ಮೇಲೆ ಡೋಪ್ ಪರೀಕ್ಷೆ ನಡೆಸುವಾಗ ಅವಧಿ ಮೀರಿದ ಮತ್ತು ಹಳೆಯ ಉಪಕರಣಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದ್ದರು. ಜೊತೆಗೆ ಸಾಕ್ಷ್ಯ ಸಮೇತವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು.

ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಾಕ್ಷಿ ಮಲ್ಲಿಕ್, ವಿನೇಶ್ ಫೋಗಟ್ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಬೀದಿಗಿಳಿದು ಹೋರಾಟ ನಡೆಸಿದ್ದರು. ಆ ಸಂದರ್ಭದಲ್ಲಿ ಬಜರಂಗ್ ಪುನಿಯಾ ಅವರನ್ನು ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಕುಸ್ತಿಪಟುಗಳ ಹೋರಾಟದ ನಡುವೆಯೇ ನಡೆದ ಕುಸ್ತಿ ಒಕ್ಕೂಟದ ಚುನಾಣೆಯಲ್ಲಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದರಿಂದ ತೀವ್ರ ಬೇಸರಗೊಂಡಿದ್ದ
ಕುಸ್ತಿಪಟು ಸಾಕ್ಷಿ ಮಲಿಕ್​ ಕುಸ್ತಿಗೆ ವಿದಾಯ ಹೇಳಿದ್ದರು. ಅವರ ಬೆನ್ನಲ್ಲೇ ಬಜರಂಗ್ ಪುನಿಯಾ ತಮ್ಮ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ್ದರು.

ಬಜರಂಗ್‌ ಪುನಿಯಾ 2020ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ 65 ಕೆಜಿ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.

ಇದನ್ನೂ ಓದಿ : ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read