Homeಮುಖಪುಟವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

- Advertisement -
- Advertisement -

ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ವರದಿಯು ತಿಳಿಸಿದೆ. ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತವು 159ನೇ ಸ್ಥಾನವನ್ನು ಪಡೆದುಕೊಂಡಿದೆ. ಪತ್ರಕರ್ತರ ಮೇಲಿನ ಹಿಂಸಾಚಾರ, ಕೇಂದ್ರೀಕೃತ ಮಾಧ್ಯಮ ಮಾಲೀಕತ್ವ ಮತ್ತು ರಾಜಕೀಯ ಹೊಂದಾಣಿಕೆಯಿಂದಾಗಿ ಪತ್ರಿಕಾ ಸ್ವಾತಂತ್ರ್ಯವು “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ” ದಲ್ಲಿ ಬಿಕ್ಕಟ್ಟಿನಲ್ಲಿದೆ ಎಂಬುವುದನ್ನು ಬಹಿರಂಗಪಡಿಸಿದೆ.

ಕಳೆದ ವರ್ಷ ಭಾರತವು ಪತ್ರಿಕಾ ಸ್ವಾತಂತ್ರ್ಯದಲ್ಲಿ 161ನೇ ಸ್ಥಾನದಲ್ಲಿತ್ತು. ಭಾರತವನ್ನು 2014ರಿಂದ ಬಿಜೆಪಿ  ಮತ್ತು ಹಿಂದೂ ಬಲಂಪಂಥೀಯ ರಾಷ್ಟ್ರೀಯವಾದಿ ಪ್ರಧಾನಿ ನರೇಂದ್ರ ಮೋದಿ ಆಳುತ್ತಿದ್ದಾರೆ ಎಂದು ಆರ್‌ಎಸ್‌ಎಫ್ ಡೇಟಾವನ್ನು ಬಿಡುಗಡೆ ಮಾಡುವಾಗ ಹೇಳಿದೆ.

‘ಏಷ್ಯಾ-ಪೆಸಿಫಿಕ್: ನಿರಂಕುಶ ಸರ್ಕಾರಗಳ ನೊಗದಡಿಯಲ್ಲಿ ಪತ್ರಿಕಾ ಸ್ವಾತಂತ್ರ್ಯ’ ಎಂಬ ಶೀರ್ಷಿಕೆಯ ವರದಿಯಲ್ಲಿ ಭಾರತವನ್ನೂ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದಲ್ಲಿ 161ನೇ ಸ್ಥಾನದಿಂದ 159ನೇ ಸ್ಥಾನಕ್ಕೆ ತಲುಪಿದೆ. ಈ ಮೊದಲು ಭಾರತಕ್ಕಿಂತ ರ್ಯಾಂಕಿಂಗ್‌ನಲ್ಲಿ ಮೇಲೆ ಇದ್ದ ದೇಶಗಳು ಈ ಸಲ ಕಳಪೆ ನಿರ್ವಹಣೆಯನ್ನು ಪ್ರದರ್ಶಿಸಿರುವುದು ಇದಕ್ಕೆ ಕಾರಣವಾಗಿದೆ. ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ ಇನ್ನಷ್ಟು ಕರಾಳ ಕಾನೂನುಗಳನ್ನು ಜಾರಿಗೊಳಿಸಿದ ಭಾರತವು ಎರಡು ರ್ಯಾಂಕ್ ಮೇಲಕ್ಕೇರಿದೆ. ಆದರೆ ಈ ಸ್ಥಾನವು ಪ್ರಜಾಪ್ರಭುತ್ವಕ್ಕೆ ಯೋಗ್ಯವೆನಿಸುವುದಿಲ್ಲ ಎಂದು ವರದಿ ಉಲ್ಲೇಖಿಸಿದೆ.

2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪತ್ರಿಕಾ ಸ್ವಾತಂತ್ರ್ಯದ ಪರಿಸ್ಥಿತಿಯು  ಹದಗೆಟ್ಟಿದೆ ಎಂದು RSF ತನ್ನ ವರದಿಯಲ್ಲಿ ಹೇಳುತ್ತದೆ. ಪ್ರಧಾನಿಯವರ ವೈಯಕ್ತಿಕ ಸ್ನೇಹಿತ ಮುಖೇಶ್ ಅಂಬಾನಿ 70ಕ್ಕೂ ಹೆಚ್ಚು ಮಾಧ್ಯಮಗಳ ಮಾಲಿಕತ್ವವನ್ನು ಹೊಂದಿದ್ದಾರೆ. 2022ರ ಕೊನೆಯಲ್ಲಿ ಎನ್‌ಡಿಟಿವಿ ಚಾನೆಲ್‌ನ್ನು ಮೋದಿಯ ಇನ್ನೋರ್ವ ಸ್ನೇಹಿತ ಗೌತಮ್ ಅದಾನಿ ಸ್ವಾದೀನಪಡಿಸಿಕೊಂಡಿದ್ದಾರೆ ಮತ್ತು ಮುಖ್ಯವಾಹಿನಿಯ ಮಾಧ್ಯಮದಲ್ಲಿ ಬಹುತ್ವ ಅಂತ್ಯಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಪರ ಪ್ರಚಾರವನ್ನು ನಡೆಸುವ ಗೋದಿ ಮೀಡಿಯಾಗಳು ಹೆಚ್ಚಳವಾಗಿದೆ. ಒತ್ತಡ ಹಾಗೂ ಪ್ರಭಾವದಿಂದಾಗಿ ಭಾರತದ ಹಳೆಯ ಮಾದರಿಯಾದ ಬಹುತ್ವವಾದಿ ಪತ್ರಿಕಾ ಮಾಧ್ಯಮಗಳು ಪ್ರಶ್ನಿಸಲ್ಪಡುತ್ತಿದೆ. ಪ್ರಧಾನಿಯವರು ಪತ್ರಕರ್ತರ ಕಟು ಟೀಕಾಕಾರರಾಗಿದ್ದಾರೆ. ಸರ್ಕಾರವನ್ನು ಟೀಕಿಸುವ ಭಾರತೀಯ ಪತ್ರಕರ್ತರು ಕಿರುಕುಳಕ್ಕೆ ಒಳಗಾಗುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತಕ್ಕಿಂತ ನನರೆಯ ದೇಶಗಳು ಪತ್ರಿಕಾ ಸ್ವಾತಂತ್ರ್ಯದಲ್ಲಿ ಉತ್ತಮವಾದ ಸ್ಥಾನದಲ್ಲಿದೆ. ಪಾಕಿಸ್ತಾನ 152, ಶ್ರೀಲಂಕಾ 15, ನೇಪಾಳ 74 ಮತ್ತು ಮಾಲ್ಡೀವ್ಸ್ 106 ಸ್ಥಾನದಲ್ಲಿದೆ. ಪ್ರಪಂಚದಾದ್ಯಂತ, ಹೆಚ್ಚಿನ ಸರ್ಕಾರಗಳು ಪತ್ರಿಕೋದ್ಯಮಕ್ಕೆ ವಿಶ್ವಾಸಾರ್ಹ, ಸ್ವತಂತ್ರ ಮತ್ತು ವೈವಿಧ್ಯಮಯ ಉತ್ತಮ ವಾತಾವರಣದ ಖಾತರಿದಾರರಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿಲ್ಲ ಎಂದು ವರದಿಯು ಉಲ್ಲೇಖಿಸಿದೆ.

ಇದನ್ನು ಓದಿ: ಕೆನಡಾದ ಸಾರ್ವತ್ರಿಕ ಚುನಾವಣೆಗೆ ಭಾರತದಿಂದ ‘ಆಯ್ಧ ಅಭ್ಯರ್ಥಿಗಳಿಗೆ’ ರಹಸ್ಯವಾಗಿ ಹಣಕಾಸಿನ ನೆರವು: ವರದಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read