Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿರಾ: ಜಾತಿ ಮತ್ತು ಹಣಬಲವೇ ಇಲ್ಲಿ ನಿರ್ಣಾಯಕ

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿರಾ: ಜಾತಿ ಮತ್ತು ಹಣಬಲವೇ ಇಲ್ಲಿ ನಿರ್ಣಾಯಕ

- Advertisement -
- Advertisement -

ಮಳೆ ಆಶ್ರಿತ ಬಯಲು ಸೀಮೆಯ ಶಿರಾ ವಿಧಾನಸಭಾ ಕ್ಷೇತವು ಕಡಲೇಕಾಯಿ ಬೆಳೆಗೆ ಚಿರಪರಿಚಿತ. ಸಮರ್ಪಕ ನೀರಾವರಿ ಯೋಜನೆಗಳಿಲ್ಲದೆ ಸೊರಗಿರುವ ಶಿರಾದಲ್ಲಿ ರಾಜಕೀಯ ಜಿದ್ದಾಜಿದ್ದಿ ಮಾತ್ರ ಹೆಚ್ಚು ತೀವ್ರವಾಗಿರುತ್ತದೆ. ತುಮಕೂರು ಜಿಲ್ಲೆಯ ಶಿರಾ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 1957ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ದ್ವಿಸದಸ್ಯ ಸ್ಥಾನ ಹೊಂದಿತ್ತು. 1962ರಿಂದ ಸಾಮಾನ್ಯ ವಿಧಾನಸಭಾ ಕ್ಷೇತ್ರವಾಗಿದೆ.

ಶಿರಾದಲ್ಲಿ ಒಂದು ಉಪಚುನಾವಣೆ ಸೇರಿದಂತೆ ಒಟ್ಟು 16 ಚುನಾವಣೆಗಳು ನಡೆದಿವೆ. 17 ಶಾಸಕರು ಆಯ್ಕೆಯಾಗಿದ್ದು ಅದರಲ್ಲಿ 10 ಶಾಸಕರು ಕಾಂಗ್ರೆಸ್‌ನವರೇ ಆಗಿದ್ದಾರೆ. ಆ ಮಟ್ಟಿಗೆ ಕಾಂಗ್ರೆಸ್ ಅಲ್ಲಿ ಪ್ರಾಬಲ್ಯ ಸಾಧಿಸಿತ್ತು. ಮೂರು ಬಾರಿ ಸ್ವತಂತ್ರ ಅಭ್ಯರ್ಥಿಗಳು, ಎರಡು ಬಾರಿ ಜೆಡಿಎಸ್, ಒಮ್ಮೆ ಜನತಾದಳದ ಅಭ್ಯರ್ಥಿಗಳು ವಿಜಯ ಸಾಧಿಸಿದರೆ, ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ.

ರಾಜಕೀಯ ಇತಿಹಾಸ

1951ರಲ್ಲಿ ಬಿ.ಎನ್ ರಾಮೇಗೌಡರವರು ಸ್ವತಂತ್ರ ಅಭ್ಯರ್ಥಿಯಾಗಿ ಜಯಗಳಿಸಿದ್ದರು. 1957ರಲ್ಲಿ ಒಂದು ಸ್ಥಾನಕ್ಕೆ ಟಿ ತಾರೇಗೌಡ, ಮತ್ತೊಂದು ಸ್ಥಾನಕ್ಕೆ ಪಿ.ಆಂಜನಪ್ಪ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಜಯ ಗಳಿಸಿದ್ದರು. 1962ರಲ್ಲಿ ಸಾಮಾನ್ಯ ಕ್ಷೇತ್ರವಾದಾಗ ಸ್ವತಂತ್ರ ಅಭ್ಯರ್ಥಿ ಸಿ.ಜೆ ಮುಕ್ಕಣ್ಣಪ್ಪ ಗೆಲುವು ಸಾಧಿಸಿದರು.

1967ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಬಿ.ಎನ್ ರಾಮೇಗೌಡ ಗೆದ್ದು ಎರಡನೇ ಬಾರಿಗೆ ಶಾಸಕರಾದರು. 1972ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ.ಪುಟ್ಟಕಾಮಯ್ಯ ಆಯ್ಕೆಯಾದರು. 1978ರಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದ ಎಸ್.ಲಿಂಗಯ್ಯ ಶಾಸಕರಾದರು.

ಬಿ.ಸತ್ಯನಾರಾಯಣ

1983ರಲ್ಲಿ ಸ್ವತಂತ್ರ ಅಭ್ಯರ್ಥಿ ಮೂಡಲೇಗೌಡ ಗೆದ್ದರೆ 1985ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿ.ಪಿ ಮೂಡಲಗಿರಿಯಪ್ಪ ಆಯ್ಕೆಯಾದರು. 1989ರಲ್ಲಿ ಎಸ್.ಕೆ ದಾಸಪ್ಪ ಕಾಂಗ್ರೆಸ್ ಪಕ್ಷದಿಂದ ಜಯಗಳಿಸಿದರು. 1994ರಲ್ಲಿ ಜನತಾದಳದಿಂದ ಬಿ.ಸತ್ಯನಾರಾಯಣರವರು ಗೆದ್ದು ವಿಧಾನಸಭೆ ಪ್ರವೇಶಿಸಿದರು. 1999ರಲ್ಲಿ ಶಿರಾ ಮತ್ತೆ ಕಾಂಗ್ರೆಸ್ ವಶವಾಯಿತು. ಪಿ.ಎಂ ರಂಗನಾಥ್ ಜಯಗಳಿಸಿದರು. 2004ರಲ್ಲಿ ಮತ್ತೆ ಬಿ.ಸತ್ಯಾನಾರಾಯಣರವರು ಜೆಡಿಎಸ್‌ನಿಂದ ಶಾಸಕರಾದರು.

ಟಿ.ಬಿ ಜಯಚಂದ್ರ ಆಗಮನ

1978ರಲ್ಲಿ ರಾಜಕೀಯ ಪ್ರವೇಶಿಸಿ ಕಳ್ಳಂಬೆಳ್ಳ ಕ್ಷೇತ್ರದಿಂದ ಇಂದಿರಾ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಟಿ.ಬಿ ಜಯಚಂದ್ರ ಆನಂತರ ಸ್ವತಂತ್ರ ಅಭ್ಯರ್ಥಿಯಾಗಿ 1989ರಲ್ಲಿ ಗೆಲುವು ಸಾಧಿಸಿದ್ದರು. 1994 ಮತ್ತು 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಕಂಡು ಹ್ಯಾಟ್ರಿಕ್ ಸಾಧನೆ ಮಾಡಿದ್ದರು; ಆದರೆ 2004ರಲ್ಲಿ ಸೋಲು ಕಂಡಿದ್ದರು. ಕಳ್ಳಂಬೆಳ್ಳ ವಿಧಾನಸಭಾ ಕ್ಷೇತ್ರ ರದ್ದಾದ್ದರಿಂದ 2008ರಲ್ಲಿ ಅವರು ಶಿರಾದಲ್ಲಿ ಸ್ಪರ್ಧಿಸಿ ಜೆಡಿಎಸ್‌ನ ಬಿ. ಸತ್ಯನಾರಾಯಣರವರ ಎದುರು ಗೆಲುವು ಕಂಡರು.

2013ರಲ್ಲಿಯೂ ಸಹ ಟಿ.ಬಿ ಜಯಚಂದ್ರ ಬಿ.ಸತ್ಯನಾರಾಯಣರವರನ್ನು ಸೋಲಿಸಿ, ಶಿರಾದಲ್ಲಿ ಸತತ ಎರಡನೇ ಬಾರಿಗೆ ಶಾಸಕರಾದ ದಾಖಲೆಗೆ ಪಾತ್ರರಾದರು. ಜಯಚಂದ್ರರವರು 74,089 ಮತಗಳನ್ನು ಪಡೆದರೆ, ಜೆಡಿಎಸ್‌ನ ಬಿ.ಸತ್ಯನಾರಾಯಣ್ 59,408 ಮತಗಳನ್ನು ಪಡೆದರು. ಬಿಜೆಪಿಯ ಬಿ.ಕೆ ಮಂಜುನಾಥ್ 18,884 ಮತಗಳಿಗೆ ಸೀಮಿತರಾಗಿದ್ದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ 5 ವರ್ಷಗಳ ಕಾಲ ಟಿ.ಬಿ ಜಯಚಂದ್ರ ಕಾನೂನು ಸಚಿವರಾಗಿದ್ದರು.

2018ರಲ್ಲಿಯೂ ಟಿ.ಬಿ ಜಯಚಂದ್ರ ಮತ್ತು ಬಿ.ಸತ್ಯನಾರಾಯಣ ನಡುವೆ ಹಣಾಹಣಿ ನಡೆಯಿತು. ಆದರೆ ಈ ಬಾರಿ ಜೆಡಿಎಸ್‌ನ ಸತ್ಯನಾರಾಯಣ ಗೆದ್ದು ಬಂದರು. ಅವರು 74,338 ಮತಗಳನ್ನು ಪಡೆದರೆ, ಜಯಚಂದ್ರ 63,973 ಮತಗಳನ್ನು ಪಡೆದರು. ಬಿಜೆಪಿಯ ಎಸ್.ಆರ್ ಗೌಡ 16,959 ಮತಗಳನ್ನಷ್ಟೇ ಪಡೆದಿದ್ದರು.

2020ರ ಉಪಚುನಾವಣೆ

ಎರಡನೇ ಬಾರಿಗೆ ಶಾಸಕರಾಗಿದ್ದ ಬಿ.ಸತ್ಯನಾರಾಯಣರವರು ಅಕಾಲಿಕ ಮರಣವೊಂದಿದ್ದರಿಂದ 2020ರ ನವೆಂಬರ್‌ನಲ್ಲಿ ಶಿರಾ ಉಪಚುನಾವಣೆ ನಡೆಯಿತು. ಜೆಡಿಎಸ್ ಪಕ್ಷವು ಅವರ ಪತ್ನಿ ಅಮ್ಮಾಜಮ್ಮನವರಿಗೆ ಟಿಕೆಟ್ ನೀಡಿತು. ಕಾಂಗ್ರೆಸ್‌ನಿಂದ ಟಿ.ಬಿ ಜಯಚಂದ್ರ ಕಣಕ್ಕಿಳಿದರೆ, ಬಿಜೆಪಿ ಪಕ್ಷವು ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ, ಚಿತ್ರದುರ್ಗದಿಂದ ಮೂರು ಬಾರಿ ಸಂಸದರಾಗಿದ್ದ ಸಿ.ಪಿ ಮೂಡಲಗಿರಿಯಪ್ಪನವರ ಪುತ್ರ ಡಾ. ರಾಜೇಶ್‌ಗೌಡರವರಿಗೆ ಟಿಕೆಟ್ ನೀಡಿತು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗುಬ್ಬಿ: ಸೋಲಿಲ್ಲದ ಸರದಾರ ವಾಸಣ್ಣನವರ ಐದನೇ ಗೆಲುವು ಸುಲಭವೆ?

ಬಿಜೆಪಿಯು ಅಧಿಕಾರದಲ್ಲಿದ್ದುದ್ದು, ಚುನಾವಣೆಗೂ ಮುನ್ನ ಕಾಡುಗೊಲ್ಲ ಅಭಿವೃದ್ದಿ ಮಂಡಳಿ ಸ್ಥಾಪಿಸಿದ್ದು ಮತ್ತು ಹಣದ ಹೊಳೆಯನ್ನೇ ಹರಿಸಿದ ಪರಿಣಾಮ ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಲು ಸಾಧ್ಯವಾಯಿತು. ಬಿಜೆಪಿಯ ಡಾ. ರಾಜೇಶ್‌ಗೌಡ 74,522 ಮತಗಳನ್ನು ಪಡೆದು 12,949 ಮತಗಳ ಅಂತರದಿಂದ ಜಯ ಕಂಡರು. ಕಾಂಗ್ರೆಸ್‌ನ ಜಯಚಂದ್ರರವರು 61,573 ಮತಗಳನ್ನು ಪಡೆದರು. ಜೆಡಿಎಸ್‌ನ ಅಮ್ಮಾಜಮ್ಮನವರು 35,982 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದರು.

ಅಂದಾಜು ಜಾತಿವಾರು ಮತಗಳು

ಒಟ್ಟು ಮತಗಳು: 2,30,000; ಒಕ್ಕಲಿಗ: 58,000; ಪರಿಶಿಷ್ಟ ಜಾತಿ: 48,000; ಮುಸ್ಲಿಂ: 29,000; ಯಾದವ (ಗೊಲ್ಲ): 25,000; ಪರಿಶಿಷ್ಟ ಪಂಗಡ: 17,000; ಕುರುಬ: 12,000; ಲಿಂಗಾಯಿತ: 6,000; ಇತರೆ: 35,000

ಹಾಲಿ ಪರಿಸ್ಥಿತಿ

ಯಾವುದೇ ರಾಜಕೀಯ ಅನುಭವವಿಲ್ಲದೆ ಎರಡೂವರೆ ವರ್ಷದ ಹಿಂದೆ ಶಾಸಕರಾಗಿರುವ ಡಾ. ರಾಜೇಶ್ ಗೌಡರವರು ಯಥಾಪ್ರಕಾರ ವಿಪಕ್ಷಗಳನ್ನು ಟೀಕಿಸುವುದರಲ್ಲಿ ನಿರತರಾಗಿದ್ದಾರೆ. 2010ರಲ್ಲಿ ಮದಲೂರು ಕೆರೆಗೆ ನೀರು ಹರಿಸುವುದನ್ನು ಬಿಜೆಪಿಯವರೇ ವಿರೋಧಿಸಿ ಅಂದಿನ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ಈಗ ಮಳೆಯಿಂದಾಗಿ ನೀರು ತುಂಬಿದ ಕೆರೆಗೆ ನೀರು ಹರಿಸಿದ್ದು ನಾವೇ ಎಂದು ಹಾಲಿ ಶಾಸಕರು ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಈ ಬಾರಿಯೂ ಬಿಜೆಪಿ ಟಿಕೆಟ್ ನೀಡಿದೆ.

ಇನ್ನು 2008 ಮತ್ತು 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಬಿ.ಕೆ ಮಂಜುನಾಥ್ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮತ್ತೆ ಕಣಕ್ಕೆ ಟಿ.ಬಿ ಜಯಚಂದ್ರ

ಮಾಜಿ ಸಚಿವರಾದ ಟಿ.ಬಿ ಜಯಚಂದ್ರರವರು ಮತ್ತೊಮ್ಮೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅವರಿಗೆ ಟಿಕೆಟ್ ಘೋಷಿಸಿದೆ. ತಾನು ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ.

ಸಾಸಲು ಸತೀಶ್

ಇನ್ನು ಕಾಂಗ್ರೆಸ್‌ನಿಂದ ಸಾಸಲು ಸತೀಶ್ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮೂಲತಃ ಚಿಕ್ಕನಾಯಕನಹಳ್ಳಿಯ ಕಾಂಗ್ರೆಸ್ ಮುಖಂಡರಾದ ಅವರು 2018ರಲ್ಲಿ ಟಿ.ಬಿ ಜಯಚಂದ್ರರವರ ಪುತ್ರ ಸಂತೋಷ್ ಪರವಾಗಿ ಅಲ್ಲಿ ಕೆಲಸ ಮಾಡಿದ್ದರು. ಆನಂತರ ಶಿರಾದಲ್ಲಿ ನೆಲೆಸಿ ಪಕ್ಷ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ತುಮಕೂರು ಜಿಲ್ಲೆಯಲ್ಲಿ ಗೊಲ್ಲ ಸಮುದಾಯದ ಮತಗಳು ಹೆಚ್ಚಿದ್ದು, ಅದರ ಪ್ರತಿನಿಧಿಯಾಗಿ ತನಗೆ ಶಿರಾದಲ್ಲಿ ಕಾಂಗ್ರೆಸ್ ಟಿಕೆಟ್ ಬೇಕೆಂದು ಕೇಳಿದ್ದರು. ಆದರೆ ಅಲ್ಲಿ ಜಯಚಂದ್ರರವರಿಗೆ ಟಿಕೆಟ್ ನೀಡಲಾಗಿದೆ. ಹಾಗಾಗಿ ಸಾಸಲು ಸತೀಶ್ ಬಂಡಾಯದ ಸುಳಿವು ನೀಡಿದ್ದಾರೆ.

ಜೆಡಿಎಸ್ ಅಭ್ಯರ್ಥಿಯಾಗಿ ಆರ್.ಉಗ್ರೇಶ್

ಜೆಡಿಎಸ್ ಪಕ್ಷವು ತಾಲ್ಲೂಕು ಅಧ್ಯಕ್ಷ ಆರ್.ಉಗ್ರೇಶ್‌ರವರಿಗೆ ಟಿಕೆಟ್ ಘೋಷಿಸಿದೆ. ಬಿ.ಸತ್ಯಪ್ರಕಾಶ್ ಹಾಗೂ ಸಿ.ಆರ್.ಉಮೇಶ್ ಸಹ ಟಿಕೆಟ್‌ಗಾಗಿ ಯತ್ನಿಸಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕನಾಯಕನಹಳ್ಳಿ: ಜೆ.ಸಿ ಮಾಧುಸ್ವಾಮಿಯವರಿಗೆ ನಡುಕ ಹುಟ್ಟಿಸಿರುವ ಎದುರಾಳಿಗಳು

ಸಿಪಿಐ ಪಕ್ಷವು ರಾಜ್ಯದ 7 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದ್ದು, ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದೆ. ಶಿರಾ ಕ್ಷೇತ್ರದಿಂದ ಗಿರೀಶ್‌ರವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

2023ರ ಸಾಧ್ಯತೆಗಳು

ಮೂರು ಪ್ರಮುಖ ಪಕ್ಷಗಳಿಂದಲೂ ಕುಂಚಟಿಗ ಒಕ್ಕಲಿಗ ಸಮುದಾಯದವರೆ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ ಒಕ್ಕಲಿಗ ಮತಗಳು ಹಂಚಿಹೋಗಲಿದ್ದು, ಉಳಿದ ಸಮುದಾಯಗಳ ಮನವೊಲಿಸುವ ಕಸರತ್ತನ್ನು ಮೂರು ಪಕ್ಷಗಳು ಮಾಡುತ್ತಿವೆ. ಅದಕ್ಕಾಗಿ ಹತ್ತಾರು ಕೋಟಿ ರೂ ಖರ್ಚು ಮಾಡಲು ಸಹ ತಯಾರಾಗಿದ್ದಾರೆ.

ಬಿಜೆಪಿ ಪರಿಸ್ಥಿತಿ

ಬಿಜೆಪಿಯು ಶಿರಾದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ಸರ್ವ ಪ್ರಯತ್ನ ನಡೆಸುತ್ತಿದೆ. ಆದರೆ ಉಪಚುನಾವಣೆಯ ಸಂದರ್ಭದಲ್ಲಿ ಇಡೀ ಮಂತ್ರಿಮಂಡಲವೇ ಶಿರಾದಲ್ಲಿ ಬೀಡುಬಿಟ್ಟಿತ್ತು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಿದ್ದು, ಆಗ ತಾನೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಹಾಗಾಗಿ ಸ್ವಂತ ಬಲದಲ್ಲಿ ರಾಜೇಶ್‌ಗೌಡ ಚುನಾವಣೆ ಎದುರಿಸಬೇಕಾಗಿದೆ. ಅಲ್ಲದೇ ಟಿಕೆಟ್ ಕೈತಪ್ಪಿದವರ ಬಂಡಾಯವು ಬಿಜೆಪಿಗೆ ಕಾಡುತ್ತಿದೆ.

ಕಾಂಗ್ರೆಸ್

ಟಿ.ಬಿ ಜಯಚಂದ್ರರವರು 2018 ಮತ್ತು 2020ರ ಉಪಚುನಾವಣೆಯಲ್ಲಿ ಸೋತಿದ್ದು, ಆ ಅನುಕಂಪದ ಆಧಾರದಲ್ಲಿ ಗೆಲುವು ಸಾಧಿಸುವ ಬಯಕೆ ಹೊಂದಿದ್ದಾರೆ. ಭರ್ಜರಿ ಪ್ರಚಾರವನ್ನು ಸಹ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಟಿಕೆಟ್ ವಂಚಿತ ಸಾಸಲು ಸತೀಶ್‌ರವರ ಬಂಡಾಯ ಶಮನವಾಗುತ್ತದೆಯೇ ಅಥವಾ ಮುಂದುವರಿಯುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರು ಬಂಡಾಯ ಮರೆತು ಕೆಲಸ ಮಾಡಿದ್ದಲ್ಲಿ ಕಾಡುಗೊಲ್ಲ ಸಮುದಾಯದ ಮತಗಳು ಕಾಂಗ್ರೆಸ್ ಕಡೆ ಬರುವ ಸಾಧ್ಯತೆಯಿದ್ದು, ಅದು ಕಾಂಗ್ರೆಸ್‌ಗೆ ವರದಾನವಾಗಲಿದೆ.

ಜೆಡಿಎಸ್

ಶಿರಾದಲ್ಲಿ ಪ್ರಬಲ ನೆಲೆ ಹೊಂದಿದ್ದ ಜೆಡಿಎಸ್ ಉಪಚುನಾವಣೆ ಸೋಲಿನ ನಂತರ ಕಳೆಗುಂದಿದೆ. ಈ ಚುನಾವಣೆಯಲ್ಲಿ ಗೆದ್ದು ಹಿಂದಿನ ಹಾದಿಗೆ ಮರಳಲು ಪ್ರಯತ್ನಿಸುತ್ತಿದೆ. ಬಿ.ಸತ್ಯನಾರಾಯಣರವರ ಮರಣ ನಂತರ ಸಮರ್ಥ ನಾಯಕತ್ವ ಇಲ್ಲದಿರುವುದು ಜೆಡಿಎಸ್‌ನ ಕೊರತೆಯಾಗಿದೆ. ಆರ್ ಉಗ್ರೇಶ್ ಅವರಿಗೆ ಇದು ಕಷ್ಟದ ಚುನಾವಣೆಯಾಗಿದೆ.

ಒಟ್ಟಿನಲ್ಲಿ ಶಿರಾದಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಮೂರು ಪಕ್ಷಗಳ ನಡುವೆ ತ್ರಿಕೋನ ಹಣಾಹಣಿ ಕಂಡುಬರುತ್ತಿದೆ. ಇತರ ಜಾತಿ ಮತಗಳನ್ನು ಸೆಳೆಯಲು ತಂತ್ರ ಮತ್ತು ಹಣದ ಹರಿಸುವಿಕೆಯು ಈ ಕ್ಷೇತ್ರದ ಫಲಿತಾಂಶ ನಿರ್ಧಾರ ಮಾಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...