Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕನಾಯಕನಹಳ್ಳಿ: ಜೆ.ಸಿ ಮಾಧುಸ್ವಾಮಿಯವರಿಗೆ ನಡುಕ ಹುಟ್ಟಿಸಿರುವ ಎದುರಾಳಿಗಳು

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕನಾಯಕನಹಳ್ಳಿ: ಜೆ.ಸಿ ಮಾಧುಸ್ವಾಮಿಯವರಿಗೆ ನಡುಕ ಹುಟ್ಟಿಸಿರುವ ಎದುರಾಳಿಗಳು

- Advertisement -
- Advertisement -

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿಯವರು ಐದನೇ ಬಾರಿಗೆ ಶಾಸಕರಾಗಲು ತೀವ್ರ ಕಸರತ್ತು ನಡೆಸಿದ್ದಾರೆ. ಆದರೆ ಇಷ್ಟು ದಿನ ಆರ್‌ಎಸ್‌ಎಸ್, ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಕಿರಣ್ ಕುಮಾರ್ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿರುವುದು ಮತ್ತು ಜೆಡಿಎಸ್ ಮಾಜಿ ಶಾಸಕ ಸುರೇಶ್‌ಬಾಬುರವರ ಅಬ್ಬರದ ಪ್ರಚಾರ ಜೆ.ಸಿ ಮಾಧುಸ್ವಾಮಿಯವರ ನಿದ್ದೆಗೆಡಿಸಿದೆ. 70 ವರ್ಷ ವಯಸ್ಸಿನ ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳ ಜೊತೆಗೆ ಈ ಬಿರು ಬೇಸಿಗೆಯಲ್ಲಿ ಮತ ಬೇಟೆಗೆ ಮನೆಮನೆ ಸುತ್ತುವುದು ತ್ರಾಸವಾಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಸುತ್ತ ಒಂದು ಸುತ್ತು.

ರಾಜಕೀಯ ಇತಿಹಾಸ

ಆರಂಭದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಮತ್ತು ಪ್ರಜಾ ಸೋಷಿಯಲಿಸ್ಟ್ ಪಕ್ಷದ ನಡುವೆ ಹಣಾಹಣಿ ನಡೆಯುತ್ತಿತ್ತು. 1952 ಮತ್ತು 1962ರಲ್ಲಿ ಕಾಂಗ್ರೆಸ್ ಪಕ್ಷದ ಸಿ.ಎಚ್ ಲಿಂಗದೇವರುರವರು ಆಯ್ಕೆಯಾದರೆ 1957 ಮತ್ತು 1967ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಸಿ.ಕೆ ರಾಜಶೆಟ್ಟಿ ಗೆಲುವು ಸಾಧಿಸಿದ್ದರು. 1972 ಮತ್ತು 1978ರಲ್ಲಿ ಎನ್.ಬಸವಯ್ಯನವರು ಸಂಸ್ಥಾ ಕಾಂಗ್ರೆಸ್ ಮತ್ತು ಇಂದಿರಾ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಜಯ ಕಂಡಿದ್ದರು.

ಬಿ. ಲಕ್ಕಪ್ಪ

1983ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಎಸ್.ಜಿ ರಾಮಲಿಂಗಯ್ಯನವರು ಕಾಂಗ್ರೆಸ್‌ನ ಎನ್.ಬಸವಯ್ಯನವರನ್ನು ಸೋಲಿಸಿ ಶಾಸಕರಾಗಿದ್ದರು. 1985ರಲ್ಲಿ ಕಾಂಗ್ರೆಸ್ ಬಿ.ಲಕ್ಕಪ್ಪನವರಿಗೆ ಟಿಕೆಟ್ ನೀಡಿತು. ಆಗ ಬಸವಯ್ಯನವರು ಸ್ವತಂತ್ರ ಅಭ್ಯರ್ಥಿಯಾದರೂ ಗೆಲುವು ಸಾಧಿಸಲಾಗಲಿಲ್ಲ. ಆ ಚುನಾವಣೆಯೇ ಕಾಂಗ್ರೆಸ್ ಪಾಲಿಗೆ ಜಯ ತಂದುಕೊಟ್ಟ ಕೊನೆಯ ಚುನಾವಣೆಯಾಯಿತು. ಆನಂತರ ಜನತಾ ಪರಿವಾರ ಮತ್ತು ಬಿಜೆಪಿಯವರೇ ಇಲ್ಲಿ ಶಾಸಕರಾಗುತ್ತ ಬಂದಿದ್ದಾರೆ.

ಮಾಧುಸ್ವಾಮಿ ಎಂಟ್ರಿ

1989ರ ಚುನಾವಣೆಗೆ ಲಿಂಗಾಯತ ಸಮುದಾಯದ ಜೆ.ಸಿ ಮಾಧುಸ್ವಾಮಿ ಜನತಾದಳ ಪಕ್ಷದಿಂದ ಕಣಕ್ಕಿಳಿದರು. ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಲಕ್ಕಪ್ಪನವರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾದರು. 1994ರಲ್ಲಿ ಮಾಧುಸ್ವಾಮಿಯವರನ್ನು ಬಂಗಾರಪ್ಪನವರ ಕೆಸಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಎನ್.ಬಸವಯ್ಯನವರು ಮಣಿಸಿ ಮೂರನೇ ಬಾರಿಗೆ ಶಾಸಕರೆನಿಸಿಕೊಂಡರು. ಆದರೆ ಎನ್.ಬಸವಯ್ಯನವರ ನಿಧನದಿಂದ 1997ರಲ್ಲಿ ಉಪಚುನಾವಣೆ ಎದುರಾಯಿತು. ಆಗ ಜನತಾದಳದ ಟಿಕೆಟ್ ಕುರುಬ ಸಮುದಾಯದ ಸಿ.ಬಿ ಸುರೇಶ್ ಬಾಬು ಪಾಲಾಯಿತು. ಆಗ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಮಾಧುಸ್ವಾಮಿ ಗೆದ್ದು ಎರಡನೇ ಬಾರಿಗೆ ಶಾಸಕರಾದರು.

1999 ರಲ್ಲಿ ಸಿ.ಬಿ ಸುರೇಶ್ ಬಾಬು ಜೆಡಿಎಸ್‌ನಿಂದ ಕಣಕ್ಕಿಳಿದರು. ಜೆ.ಸಿ ಮಾಧುಸ್ವಾಮಿ ಜೆಡಿಯುನಿಂದ ಸ್ಪರ್ಧಿಸಿದರು. ಆಗ ಸುರೇಶ್‌ಬಾಬುರವರು 14,943 ಮತಗಳಿಂದ ಮಾಧುಸ್ವಾಮಿಯವರನ್ನು ಮಣಿಸಿ ಮೊದಲ ಬಾರಿಗೆ ಶಾಸಕರಾದರು. 2004ರಲ್ಲಿ ಇವರಿಬ್ಬರ ನಡುವೆಯೇ ಪೈಪೋಟಿ ನಡೆಯಿತು. ಆಗ ಮಾಧುಸ್ವಾಮಿಯವರು ಕೇವಲ 1,628 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.

2008ರ ಚುನಾವಣೆ ವೇಳೆಗೆ ಕಳ್ಳಂಬಳ್ಳ ವಿಧಾನಸಭಾ ಕ್ಷೇತ್ರ ರದ್ದಾಗಿತ್ತು. 2004ರಲ್ಲಿ ಬಿಜೆಪಿಯಿಂದ ಅಲ್ಲಿ ಶಾಸಕರಾಗಿದ್ದ ಕೆ.ಎಸ್ ಕಿರಣ್‌ಕುಮಾರ್‌ರವರು ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿದರು. ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಶಿರಾ ತಾಲ್ಲೂಕಿನ ಬುಕ್ಕಪಟ್ಟಣ ಹೋಬಳಿ, ಚಿಕ್ಕನಾಯಕನಹಳ್ಳಿಯ ಕಸಬ, ಹುಳಿಯಾರು, ಶೆಟ್ಟಿಕೆರೆ, ಅಂಗನಕೆರೆ, ತೆಂಬಿಕೆರೆ ಸೇರಿ ಆರು ಹೋಬಳಿಗಳು ಸೇರಿದವು. ಆ ಚುನಾವಣೆಯಲ್ಲಿ ಹಾಲಿ ಶಾಸಕ ಮಾಧುಸ್ವಾಮಿಯವರು ಜೆಡಿಯುನಿಂದ ಕಣಕ್ಕಿಳಿದರೆ, ಜೆಡಿಎಸ್‌ನಿಂದ ಸುರೇಶ್ ಬಾಬು ಸ್ಪರ್ಧಿಸಿ ಗೆಲುವು ಸಾಧಿಸಿದರು. ಅವರು 67,046 ಮತಗಳನ್ನು ಪಡೆದರೆ ಕಿರಣ್ ಕುಮಾರ್ 38,002 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರೆ, ಮಾಧುಸ್ವಾಮಿಯವರು 24,308 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದರು.

2013ರಲ್ಲಿ ಮತ್ತೆ ಈ ಮೂವರ ನಡುವೆ ಹಣಾಹಣಿ ನಡೆಯಿತು. ಸುರೇಶ್ ಬಾಬುರವರು ಜೆಡಿಎಸ್‌ನಿಂದ ಸ್ಪರ್ಧಿಸಿದರೆ, ಮಾಧುಸ್ವಾಮಿಯವರು ಕೆಜೆಪಿ ಸೇರಿ ಕಣಕ್ಕಿಳಿದಿದ್ದರು. ಕಿರಣ್ ಕುಮಾರ್ ಬಿಜೆಪಿ ಟಿಕೆಟ್‌ನಡಿ ಸ್ಪರ್ಧಿಸಿದ್ದರು. ಮೂವರ ಹಣಾಹಣಿಯಲ್ಲಿ ಮತ್ತೆ ಜೆಡಿಎಸ್‌ನ ಸುರೇಶ್ ಬಾಬು (60,759) ಗೆದ್ದುಬಂದರು. ಆಗ ಮಾಧುಸ್ವಾಮಿಯವರು 49,620 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರೆ 29,150 ಮತಗಳನ್ನು ಪಡೆದ ಬಿಜೆಪಿಯ ಕಿರಣ್ ಕುಮಾರ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಯಾದವ ಸಮುದಾಯದ ಸಾಸಲು ಸತೀಶ್‌ರವರು 10,344 ಮತಗಳಿಗೆ ಸೀಮಿತಗೊಂಡರು.

ಸಂತೋಷ್ ಜಯಚಂದ್ರ

2018ರ ಚುನಾವಣೆ ವೇಳೆಗೆ ಸಿ.ಬಿ ಸುರೇಶ್ ಬಾಬು ಹ್ಯಾಟ್ರಿಕ್ ಜೊತೆಗೆ ನಾಲ್ಕನೇ ಬಾರಿ ಶಾಸಕರಾಗುವ ಬಯಕೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದರು. ಈ ಬಾರಿ ಮಾಧುಸ್ವಾಮಿಯವರು ಬಿಜೆಪಿ ಸೇರಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲದೆ ಯಡಿಯೂರಪ್ಪನವರ ಮೂಲಕ ಕಿರಣ್ ಕುಮಾರ್‌ರವರು ಸ್ಪರ್ಧಿಸದಂತೆ ತಡೆಯುವ ಕೆಲಸವನ್ನು ಮಾಡಲಾಯಿತು. ಹಾಗಾಗಿ ಮತ ವಿಭಜನೆಯಾಗದ ಕಾರಣದಿಂದ ಜೆ.ಸಿ ಮಾಧುಸ್ವಾಮಿಯವರು 10,227 ಮತಗಳ ಅಂತರದಿಂದ ಗೆದ್ದು ನಾಲ್ಕನೇ ಬಾರಿಗೆ ಶಾಸಕರಾದರು. ಅವರು 69,612 ಮತಗಳನ್ನು ಪಡೆದರೆ, ಸಿ.ಬಿ ಸುರೇಶ್ ಬಾಬು 59,335 ಮತಗಳನ್ನು ಪಡೆದು ಹೋರಾಡಿ ಸೋತರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಟಿ.ಬಿ ಜಯಚಂದ್ರರವರ ಮಗ ಸಂತೋಷ್ ಜಯಚಂದ್ರರವರು 45,893 ಮತಗಳನ್ನು ಪಡೆದರು.

ಅಂದಾಜು ಜಾತಿವಾರು ಮತಗಳು

ಚಿಕ್ಕನಾಯಕನಹಳ್ಳಿಯಲ್ಲಿ ಲಿಂಗಾಯಿತ ವರ್ಸಸ್ ಕುರುಬ ರಾಜಕಾರಣ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಹುತೇಕ ಆ ಎರಡು ಸಮುದಾಯದವರೇ ಇದುವರೆಗೂ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2,20,000ದಷ್ಟು ಮತಗಳಿದ್ದು, ಲಿಂಗಾಯಿತ ಸಮುದಾಯದ 46,000ದಷ್ಟು ಮತಗಳಿದ್ದರೆ, ಕುರುಬ ಸಮುದಾಯದ 42,000ದಷ್ಟು ಮತಗಳಿವೆ. ಪರಿಶಿಷ್ಟ ಜಾತಿ ಸಮುದಾಯ 40,000 ಮತಗಳಿದ್ದು, ಒಕ್ಕಲಿಗ ಸಮುದಾಯದ 35,000ದಷ್ಟು ಮತಗಳಿವೆ. 20,000ದಷ್ಟು ಪರಿಶಿಷ್ಟ ಪಂಗಡ ಸಮುದಾಯದ ಮತಗಳಿದ್ದರೆ, 16,000ದಷ್ಟು ಮುಸ್ಲಿಂ ಮತಗಳಿವೆ. ಇತರೆ ಸಮುದಾಯಗಳ 25,000ದಷ್ಟು ಮತಗಳಿವೆ ಎನ್ನಲಾಗಿದೆ.

ಹಾಲಿ ಪರಿಸ್ಥಿತಿ

2019ರಿಂದ ಕಾನೂನು ಮತ್ತು ಸಂಸದೀಯ ಇಲಾಖೆಯ ಸಚಿವರಾಗಿರುವ ಮಾಧುಸ್ವಾಮಿಯವರು ಸದನದಲ್ಲಿ ಬಿಜೆಪಿ ಪಕ್ಷದ ವಕ್ತಾರರಂತೆ ಮಾತನಾಡಿ ಗಮನ ಸೆಳೆದಿದ್ದರು. ಇನ್ನು ಚಿಕ್ಕನಾಯಕನಹಳ್ಳಿಯಲ್ಲಿ ಒಂದಷ್ಟು ರಸ್ತೆಗಳ ಅಭಿವೃದ್ಧಿ, ನೀರಾವರಿ ಕೆಲಸಗಳನ್ನು ಮಾಡಿದ್ದಾರೆ. ಆದರೂ ಆಡಳಿತ ವಿರೋಧಿ ಅಲೆ ಅವರನ್ನು ಕಾಡುತ್ತಿದೆ. ಜನರಿಗೆ ಸ್ಪಂದಿಸುವುದಿಲ್ಲ, ಒರಟಾಗಿ ಮಾತನಾಡುತ್ತಾರೆ ಎಂಬ ಆರೋಪಗಳು ಮಾಧುಸ್ವಾಮಿಯವರ ಮೇಲಿವೆ. ಜೊತೆಗೆ ಇತರ ಸಮುದಾಯಗಳ ಕುರಿತು ಅವರಾಡಿದ ಮಾತುಗಳು ಸದ್ಯ ಅವರಿಗೆ ಮುಳುವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗುಬ್ಬಿ: ಸೋಲಿಲ್ಲದ ಸರದಾರ ವಾಸಣ್ಣನವರ ಐದನೇ ಗೆಲುವು ಸುಲಭವೆ?

2019ರ ಲೋಕಸಭಾ ಚುನಾವಣೆಯ ಮತಯಾಚನೆ ವೇಳೆ ಗೊಲ್ಲ ಸಮುದಾಯದ ಯುವಕನೊಬ್ಬ ಪ್ರಶ್ನಿಸಿದ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದರು. ಅದು ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಲದೇ ಹುಳಿಯಾರು ವೃತ್ತಕ್ಕೆ ಕನಕ ವೃತ್ತ ಎಂದು ಹೆಸರಿಡುವುದನ್ನು ವಿರೋಧಿಸಿ, ರಾತ್ರೋರಾತ್ರಿ ಬಸವ ವೃತ್ತ ಎಂದು ಹೆಸರಿಡುವುದರಲ್ಲಿ ಮಾಧುಸ್ವಾಮಿಯವರ ಪಾತ್ರವಿದೆ ಎಂದು ಆರೋಪಿಸಿ ಹುಳಿಯಾರು ಬಂದ್ ಮಾಡಿ ಹೋರಾಟ ನಡೆಸಲಾಗಿತ್ತು. ಆ ಸಮಯದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಕುರುಬ ಸಮುದಾಯದ ಈಶ್ವರಾನಂದಸ್ವಾಮಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆಗ ಸ್ವತಃ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕ್ಷಮೆ ಕೇಳಿದ್ದರು ಮತ್ತು ಮಾಧುಸ್ವಾಮಿ ಕೂಡ ಕ್ಷಮೆ ಕೇಳುವಂತೆ ಮಾಡಿದ್ದರು.

ತಾಲೂಕಿನಲ್ಲಿ ವ್ಯಾಪಕವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ, ಸಚಿವರು ಹಿಂದಿನಿಂದಲೂ ಅದರ ಬಗ್ಗೆ ಸೊಲ್ಲೆತ್ತದೆ ಮೌನ ವಹಿಸಿದ್ದಾರೆ. ಗಣಿಬಾಧಿತ ಪ್ರದೇಶಗಳಿಗೆ ಪರಿಹಾರದ ಹಣ ತಲುಪುತ್ತಿಲ್ಲ ಎನ್ನುವ ದೂರುಗಳಿವೆ. ಇಷ್ಟರ ನಡುವೆಯೂ ಅವರಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್ ಸೇರಿದ ಕಿರಣ್ ಕುಮಾರ್

ಆರ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಂಡಿದ್ದ, ಮಾಜಿ ಶಾಸಕ ಕಿರಣ್ ಕುಮಾರ್ 2018ರಲ್ಲಿ ಯಡಿಯೂರಪ್ಪನವರ ಕಾರಣದಿಂದ ಸ್ಪರ್ಧೆ ಮಾಡಲಿಲ್ಲ. ಹಾಗಾಗಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರು ಕಿರಣ್ ಕುಮಾರ್‌ರವರನ್ನು ಜೈವಿಕ ಇಂಧನ ಅಭಿವೃದ್ದಿ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿದ್ದರು. ಆದರೆ 2023ರ ಚುನಾವಣೆಗೂ ಬಿಜೆಪಿ ಟಿಕೆಟ್ ಸಿಗುವುದು ಅನುಮಾನ ಎಂದು ಅರಿತ ಕಿರಣ್ ಕುಮಾರ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಟಿಕೆಟ್ ಪಕ್ಕಾ ಆಗುತ್ತಲೇ ಭರ್ಜರಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಟಿ.ಬಿ ಜಯಚಂದ್ರ

ಕ್ಷೇತ್ರದ ಕಾಂಗ್ರೆಸ್ ಮುಖಂಡರಾಗಿದ್ದ ಯಾದವ ಸಮುದಾಯದ ಸಾಸಲು ಸತೀಶ್ ಕಳೆದ ಚುನಾವಣೆಯ ಸಮಯದಿಂದ ಶಿರಾದಲ್ಲಿ ಠಿಕಾಣಿ ಹೂಡಿದ್ದು, ಅಲ್ಲಿನ ಕಾಂಗ್ರೆಸ್ ಟಿಕೆಟ್ ಬೇಕು ಎಂದು ಪಟ್ಟುಹಿಡಿದಿದ್ದಾರೆ. ಆದರೆ ಅಲ್ಲಿ ಟಿ.ಬಿ ಜಯಚಂದ್ರರವರಿಗೆ ಟಿಕೆಟ್ ಸಿಕ್ಕಿದೆ. ಅದು ಬಿಟ್ಟರೆ ಬೇರೆ ಯಾರೂ ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಟಿಕೆಟ್ ಕೇಳುತ್ತಿಲ್ಲ. ಹಾಗಾಗಿ ಚಿಕ್ಕನಾಯಕನಹಳ್ಳಿ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ – ಬಂಡಾಯ ಪರಿಸ್ಥಿತಿ ಇಲ್ಲ.

ಜೆಡಿಎಸ್

ಮೂರು ಬಾರಿ ಶಾಸಕರಾಗಿರುವ ಮೃದು ಸ್ವಭಾವದ ಸುರೇಶ್ ಬಾಬುರವರಿಗೆ ಜೆಡಿಎಸ್ ಟಿಕೆಟ್ ಘೋಷಿಸಿದೆ. ಅವರು ಚುನಾವಣಾ ತಯಾರಿ ಆರಂಭಿಸಿದ್ದು, ನಾಲ್ಕನೇ ಬಾರಿಗೆ ಶಾಸಕರಾಗುವ ಕನಸಿನಲ್ಲಿದ್ದಾರೆ.

2023ರ ಸಾಧ್ಯತೆಗಳು

ಚಿಕ್ಕನಾಯಕನಹಳ್ಳಿಯಲ್ಲಿ ಈ ಬಾರಿಯೂ ತ್ರಿಕೋನ ಸ್ಪರ್ಧೆ ಏರ್ಪಡುತ್ತಿದೆ. ಮೂರು ಪಕ್ಷದಿಂದ ಪ್ರಬಲ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದಾರೆ. ಮಾಧುಸ್ವಾಮಿಯವರು ಹೆಚ್ಚಿನ ದುಡ್ಡು ಖರ್ಚು ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಅವರಿಗೆ ಪ್ಲಸ್ ಪಾಯಿಂಟ್. ಆದರೆ ಬಿಜೆಪಿಯಿಂದ ಕಿರಣ್ ಕುಮಾರ್ ಹೊರನಡೆದಿರುವುದು ಅವರಿಗೆ ಬಲವಾದ ಪೆಟ್ಟುಕೊಟ್ಟಂತಿದೆ. ಆಡಳಿತ ವಿರೋಧಿ ಅಲೆ, ಹಲವು ಸಮುದಾಯಗಳನ್ನು ಎದುರು ಹಾಕಿಕೊಂಡಿರುವುದು ಅವರಿಗೆ ಮುಳುವಾಗುವ ಸೂಚನೆ ನೀಡುತ್ತಿವೆ. ಇನ್ನು ಸಂಪುಟ ಸಮಿತಿಯ ಅಧ್ಯಕ್ಷರಾಗಿ ಅವರು ಒಳಮೀಸಲಾತಿಗೆ ಶಿಫಾರಸ್ಸು ಮಾಡಿರುವುದರಿಂದ ಪರಿಶಿಷ್ಟ ಜಾತಿಯಲ್ಲಿನ ಲಂಬಾಣಿ ಸಮುದಾಯ ಬಿಜೆಪಿ ವಿರುದ್ಧ ಕಿಡಿಕಾರುತ್ತಿದೆ. ಕಳೆದ ಬಾರಿ ಅವರ ಕೈ ಹಿಡಿದಿದ್ದ, ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಂಬಾಣಿ ಸಮುದಾಯ ಈ ಬಾರಿ ಚುನಾವಣಾ ಬಹಿಷ್ಕಾರ ಹಾಕುವುದಾಗಿ ಬೆದರಿಕೆಯೊಡ್ಡಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಧುಗಿರಿ: ಕೆ.ಎನ್. ರಾಜಣ್ಣ, ವೀರಭದ್ರಯ್ಯ ನಡುವಿನ ಹಣಾಹಣಿಗೆ ಬಿಜೆಪಿ ಎಂಟ್ರಿ

ಇನ್ನು ಕಿರಣ್ ಕುಮಾರ್ ಕಾಂಗ್ರೆಸ್ ಸೇರಿರುವುದು ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಯಾವುದೇ ಬಂಡಾಯವಿಲ್ಲದಿರುವುದು ಮತ್ತು ಕ್ಷೇತ್ರಕ್ಕೆ ಹೊಸಮುಖ ಎನ್ನುವುದು ಅವರ ಪ್ಲಸ್ ಪಾಯಿಂಟ್. ಹಾಗಾಗಿ ಕ್ಷೇತ್ರದಲ್ಲಿ ದಶಕಗಳ ನಂತರ ಕಾಂಗ್ರೆಸ್ ಬಾವುಟ ಹಾರಿಸಲು ಸಕಲ ಸಿದ್ದತೆ ನಡೆಸಿದ್ದಾರೆ. ಒಂದಷ್ಟು ಲಿಂಗಾಯಿತ ಮತಗಳ ಜೊತೆಗೆ ದಲಿತ ಮತ್ತು ಅಹಿಂದ ಮತಗಳು ಅವರಿಗೆ ಬೀಳುವ ಸಾಧ್ಯತೆಯಿದೆ. ಇನ್ನು ಹಲವು ಬಿಜೆಪಿ ಕಾರ್ಯಕರ್ತರು ಅವರೊಟ್ಟಿಗೆ ಬಂದಿರುವುದರಿಂದ ಎಲ್ಲಾ ಸಮುದಾಯದ ಮತಗಳನ್ನು ಒಟ್ಟುಗೂಡಿಸಿ ಗೆಲುವಿನ ದಡ ತಲುಪುವ ತವಕ ಕಿರಣ್ ಕುಮಾರ್‌ರವರದು.

ಜೆಡಿಎಸ್ ಕೂಡ ಸಿ.ಬಿ ಸುರೇಶ್ ಬಾಬುರವರ ಗೆಲುವಿಗೆ ಸರ್ವಪ್ರಯತ್ನ ನಡೆಸುತ್ತಿದೆ. ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರದಲ್ಲಿದೆ. ಎದುರಾಳಿ ಪಕ್ಷಗಳಲ್ಲಿ ಲಿಂಗಾಯಿತ ಅಭ್ಯರ್ಥಿಗಳಿರುವುದರಿಂದ ಮತ ವಿಭಜನೆಗೊಂಡು ಕುರುಬ ಮತ್ತು ಒಕ್ಕಲಿಗ ಸಮುದಾಯದ ಮತಗಳ ಇಡುಗಂಟು ತನಗೆ ಬೀಳಲಿದೆ ಎಂಬ ಲೆಕ್ಕಾಚಾರ ಅವರದು. ಲಂಬಾಣಿ ಸಮುದಾಯದ ಮತಗಳು ಕಳೆದ ಚುನಾವಣೆ ಸಮಯದಲ್ಲಿ ಚದುರಿ ಹೋಗಿದ್ದವು. ಈಗ ಅವು ಮತ್ತೆ ಕೈಹಿಡಿಯುತ್ತವೆ ಎಂದು ಸುರೇಶ್ ಬಾಬುರವರು ನಂಬಿದ್ದಾರೆ.

ಒಟ್ಟಿನಲ್ಲಿ ಮೂರು ಪಕ್ಷದ ನಡುವೆ ನೇರಾನೇರ ಪೈಪೋಟಿ ನಡೆಯಲಿದ್ದು, ಮಾಧುಸ್ವಾಮಿಯವರು 2008ರಂತೆ ಮೂರನೇ ಸ್ಥಾನಕ್ಕೆ ಹೋದರೂ ಅಚ್ಚರಿಯಿಲ್ಲ ಎಂದು ಜನ ಹೇಳುತ್ತಾರೆ. ಇನ್ನು ಯಾರೇ ಗೆದ್ದರೂ ಗೆಲುವಿನ ಅಂತರ ಮಾತ್ರ ಕಡಿಮೆ ಇರುತ್ತದೆ ಎಂಬಷ್ಟು ಪೈಪೋಟಿ ಕಂಡುಬರುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...